ಮತ್ತೆ ಹೈದರಾಬಾದ್ ಗೆ ಮಣಿದ ಬೆಂಗಳೂರು ಎಫ್ ಸಿ

ಹೈದರಾಬಾದ್ ಎಫ್ ಸಿಗೆ 2-1 ಗೋಲ್ ಗಳ ಅಂತರದ ಜಯ, 9 ಪಂದ್ಯಗಳ ಬ್ಲೂಸ್ ಅಜೇಯದ ಓಟಕ್ಕೆ ತೆರೆ

ಪಂದ್ಯದ ಮೊದಲಾರ್ಧದಲ್ಲಿ ಲಭಿಸಿದ ಹಲವು ಗೋಲ್ ಗಳಿಕೆಯ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಎಡವಿದ ಬೆಂಗಳೂರು ಎಫ್ ಸಿ ಐಎಸ್ಎಲ್ ಟೂರ್ನಿಯ ಶುಕ್ರವಾರದ ಪಂದ್ಯದಲ್ಲಿ ಹೈದರಾಬಾದ್ ಎಫ್ ಸಿ ವಿರುದ್ಧ ಪರಾಭವಗೊಂಡಿತು.
ಇಲ್ಲಿನ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬ್ಲೂಸ್ 1-2 ಗೋಲ್ ಗಳಿಂದ ಹೈದರಾಬಾದ್ ತಂಡಕ್ಕೆ ಶರಣಾಯಿತು. ಇದರೊಂದಿಗೆ ಸತತ 9 ಪಂದ್ಯಗಳಲ್ಲಿ ಬೆಂಗಳೂರು ತಂಡದ ಅಜೇಯದ ಓಟಕ್ಕೆತೆರೆ ಬಿದ್ದಿತು. ಬ್ಲೂಸ್ ಪರ ನಾಯಕ ಸುನೀಲ್ ಛೆಟ್ರಿ (87ನೇ ನಿಮಿಷ) ಒಂದು ಗೋಲ್ ಗಳಿಸಿದರೆ, ನಿಜಾಮರ ಪರ ಸಿವೆರಿಯೋ (16ನೇ ನಿಮಿಷ) ಮತ್ತು ಜೊವೋ (30ನೇ ನಿಮಿಷ) ತಲಾ ಒಂದು ಗೋಲ್ ಬಾರಿಸಿದರು.
ಉಭಯ ತಂಡಗಳ ಹಿಂದಿನ ಮುಖಾಮುಖಿಯಲ್ಲಿ 0-1ರಲ್ಲಿ ಹೈದರಾಬಾದ್ ಗೆ ಶರಣಾಗಿದ್ದ ಬ್ಲೂಸ್ ಈ ಪಂದ್ಯದಲ್ಲಿ ತಿರುಗೇಟು ನೀಡಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಗುರಿಯೊಂದಿಗೆ ಕಣಕ್ಕಿಳಿದಿತ್ತು. ಆದರೆ 87ನೇ ನಿಮಿಷದಲ್ಲಿ ಛೆಟ್ರಿ ಏಕೈಕ ಗೋಲ್ ಬಾರಿಸಿದ ಕಾರಣ ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತಗೊಂಡಿತು.
ದ್ವಿತೀಯಾರ್ಧಲ್ಲಿ ಗೋಲ್ ಗಳಿಕೆಗೆ ಬ್ಲೂಸ್ ನಡೆಸಿದ ಎಲ್ಲ ಯತ್ನಗಳನ್ನು ಎದುರಾಳಿ ತಂಡ ಪ್ರಬಲವಾಗಿ ಹಿಮ್ಮೆಟ್ಟಿಸಿತು.
ಇದಕ್ಕೂ ಮುನ್ನ ಗೋಲ್ ಗಳಿಕೆಯ ಹಲವು ಅವಕಾಶಗಳನ್ನು ಕೈಚೆಲ್ಲಿದ ಪರಿಣಾಮ ಪಂದ್ಯದ ಮೊದಲಾರ್ಧದ ಮುಕ್ತಾಯಕ್ಕೆ ಬೆಂಗಳೂರು ಎಫ್ ಸಿ 0-2 ಅಂತರದ ಗೋಲ್ ಗಳಿಂದ ಹಿನ್ನಡೆ ಅನುಭವಿಸಬೇಕಾಯಿತು.
ಆರಂಭಿಕ ಹಿನ್ನಡೆ ತಗ್ಗಿಸಲು ಬೆಂಗಳೂರು ಆಟಗಾರರು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ಈ ಅವಧಿಯಲ್ಲಿ ಬ್ಲೂಸ್ ತಂಡದ ಪರಾಗ್ ಶ್ರೀವಾಸ್ ರೆಫರಿಯಿಂದ ಯೆಲ್ಲೊ ಕಾರ್ಡ್ ಗೆ ಒಳಗಾದರು. ರೋಹಿತ್ ದಾನು ಅವರಿಗೆ ಅಡ್ಡಿಪಡಿಸಿದ ಕಾರಣ ಪರಾಗೆ ಗೆ ಹಳದಿ ಕಾರ್ಡ್ ನೀಡಲಾಯಿತು.
ಮೊದಲ ಗೋಲಿನ ಮುನ್ನಡೆಯಿಂದ ಆತ್ಮವಿಶ್ವಾಸ ವೃದ್ಧಿಸಿಕೊಂಡ ಹೈದರಾಬಾದ್ 30 ನೇ ನಿಮಿಷದಲ್ಲಿ ಮೊತ್ತೊಂದು ಗೋಲ್ ಬಾರಿ ಬ್ಲೂಸ್ ಮೇಲೆ ಮತ್ತಷ್ಟು ಒತ್ತಡ ಹೇರಿತು. ಸೌವಿಕ್ ಚಕ್ರವರ್ತಿ ಮತ್ತು ಜಾವೊ ವಿಕ್ಟರ್ ಅವರ ಟ್ಯಾಕಲ್ ನಿಂದಾಗಿ ಇದು ಸಾಧ್ಯವಾಯಿತು. ಸೌವಿಕ್ ನೀಡಿದ ಪಾಸನ್ನು ಜಾವೊ ಗೋಲಾಗಿ ಪರಿವರ್ತಿಸಿ ತಂಡದ ಮುನ್ನಡೆಯನ್ನು 2-0 ಗೆ ವಿಸ್ತರಿಸಿತು.
ಇದಕ್ಕೂ ಮುನ್ನ 27ನೇ ನಿಮಿಷದಲ್ಲಿ ಚೆಂಡಿನ ಮೇಲಿನ ನಿಯಂತ್ರಣಕ್ಕಾಗಿ ಜೇವೀಯರ್ ಅವರನ್ನು ಕೆಳಗೆ ಬೀಳಿಸಿದ ಪರಿಣಾಮ ದಾನಿಶ್ ಫರೂಕಿ ರೆಫರಿಯಿಂದ ಹಳದಿ ಕಾರ್ಡ್ ಎಚ್ಚರಿಕೆ ಪಡೆದರು.
ಕಳೆದ 9 ಪಂದ್ಯಗಳಲ್ಲಿ ಅಜೇಯ ದಾಖಲೆ ಹೊಂದಿರುವ ಬ್ಲೂಸ್ ಅದೇ ಲಯವನ್ನು ಮುಂದುವರಿಸುವ ಇರಾದೆಯೊಂದಿಗೆ ಕಣಕ್ಕಿಳಿಯಿತು.ಅಂತೆಯೇ ಮೊದಲ 15 ನಿಮಿಷ ಆಕ್ರಮಣಕಾರಿ ಆಟವಾಡಿದ ಬೆಂಗಳೂರು ತಂಡ ಚೆಂಡಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಆದರೆ ಹೈದರಾಬಾದ್ ಎಫ್ ಸಿ ಡಿಫೆಂಡರ್ ಗಳು ಬ್ಲೂಸ್ ಬಳಗವನ್ನು ಸಮರ್ಥವಾಗಿ ಎದುರಿಸುವಲ್ಲಿ ಯಶಸ್ವಿಯಾದರು.
ಕೊನೆಗೂ 16ನೇ ನಿಮಿಷದಲ್ಲಿ ಜೇವೀರ್ ಸಿವೆರಿಯೊ ಅವರ ಕಾಲ್ಚಳಕದಿಂದ ಹೈದರಾಬಾದ್ ಎಫ್ ಸಿ 1-0 ಅಂತರದ ಮುನ್ನಡೆ ಗಳಿಸಿತು. ಇದು ಸುನೀಲ್ ಛೆಟ್ರಿ ಬಳಗದ ಮೇಲೆ ಒತ್ತಡ ಹೆಚ್ಚಿಸಿತು. ಹೋರಾಟದ ಸಮಬಲಕ್ಕಾಗಿ ಕೋಚ್ ಮಾರ್ಕೊ ಪೆಜ್ಜೈಯುಲಿ ಬಳಗ ಇನ್ನಿಲ್ಲದ ಹರಸಾಹಸ ನಡೆಸಿದರೂ ಯಾವುದೇ ಫಲ ದೊರೆಯಲಿಲ್ಲ. ಇದಕ್ಕೆ ಕಾರಣವಾಗಿದ್ದು ಹೈದರಾಬಾದ್ ಎಫ್ ಸಿಯ ರಕ್ಷಣಾ ಆಟಗಾರರ ಪ್ರಬಲ ಪ್ರತಿರೋಧ.
ಬೆಂಗಳೂರು ಎಫ್ ಸಿ ತನ್ನ ಮುಂದಿನ ಪಂದ್ಯದಲ್ಲಿ ಫೆಬ್ರವರಿ 18ರಂದು ಫಟೋರ್ಡಾದ ಪಿಜೆಎನ್ ಕ್ರೀಡಾಂಗಣದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ಎಫ್ ಸಿ ತಂಡದ ಸವಾಲು ಎದುರಿಸಲಿದೆ.

Malcare WordPress Security