ಅಂತಿಮ ಲೀಗ್ ಪಂದ್ಯದಲ್ಲಿ ಕೋರ್ಚ್ ಮಾರ್ಕೊ ಪೆಜ್ಜೈಯಲಿ ಬಳಗಕ್ಕೆ1-0 ಅಂತರದ ಗೆಲುವು, 29 ಅಂಕಗಳೊಂದಿಗೆ ಹೋರಾಟ ಪೂರ್ಣಗೊಳಿಸಿದ ಬ್ಲೂಸ್
ನಾಯಕ ಸುನೀಲ್ ಛೆಟ್ರಿ ದಾಖಲಿಸಿದ ಏಕೈಕ ಗೋಲಿನ ನೆರವಿನಿಂದ ಬೆಂಗಳೂರು ತಂಡ 2021-22ನೇ ಸಾಲಿನ ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ತನ್ನ ಅಂತಿಮ ಹಾಗೂ 20ನೇ ಪಂದ್ಯದಲ್ಲಿ ಎಸ್ ಸಿ ಈಸ್ಟ್ ಬೆಂಗಾಲ್ ವಿರುದ್ಧ ಗೆದ್ದು ಅಭಿಯಾನ ಕೊನೆಗೊಳಿಸಿತು.
ಇಲ್ಲಿನ ತಿಲಕ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಬ್ಲೂಸ್ ತಂಡ 1-0 ಗೋಲಿನ ಅಂತರದಿಂದ ಈಸ್ಟ್ ಬೆಂಗಾಲ್ ಗೆ ಸೋಲುಣಿಸಿತು. ಮಾರ್ಕೊ ಪೆಜ್ಜೈಯಲಿ ಬಳಗದ ಪರ ಸುನೀಲ್ ಛೆಟ್ರಿ 24ನೇ ನಿಮಿಷದಲ್ಲಿ ಗೆಲುವಿನ ಗೋಲ್ ಗಳಿಸಿದರು.
ಈ ಜಯದೊಂದಿಗೆ 11 ತಂಡಗಳಿದ್ದ ಟೂರ್ನಿಯಲ್ಲಿ 8 ಜಯ, 5 ಡ್ರಾ ಮತ್ತು 7 ಸೋಲಿನೊಂದಿಗೆ ಒಟ್ಟಾರೆ 29 ಅಂಕ ಸಂಪಾದಿಸಿದ ಬೆಂಗಳೂರು ಎಫ್ ಸಿ ಕಳೆದ ಋತುವಿಗಿಂತಲೂ ಉತ್ತಮ ಪ್ರದರ್ಶನ ನೀಡಿತು. ಆದರೆ ಅಲ್ಪದರಲ್ಲಿಪ್ಲೇಆಫ್ ಸ್ಪರ್ಧೆಯಿಂದ ನಿರ್ಗಮಿಸಬೇಕಾಯಿತು.
ಕಳೆದ ಜನವರಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದ ಉಭಯ ತಂಡಗಳು 1-1 ರಲ್ಲಿ ಡ್ರಾ ಸಾಧಿಸಿ ಅಂಕ ಹಂಚಿಕೊಂಡೆದ್ದವು.
ಮೊದಲಾರ್ಧದಲ್ಲಿ ಲಭಿಸಿದ ಮುನ್ನಡೆಯಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಬೆಂಗಳೂರು ತಂಡ ,ದ್ವಿತೀಯಾರ್ಧದಲ್ಲಿ ತನ್ನ ಆಕ್ರಮಣಕಾರಿ ಆಟವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಿತು. ಆದರೆ ಹಾಲಿ ಋತುವಿನಲ್ಲಿ ಆಡಿದ 20 ಪಂದ್ಯಗಳ ಪೈಕಿ ಏಕೈಕ ಜಯ ಗಳಿಸಿರುವ ಈಸ್ಟ್ ಬೆಂಗಾಲ್ ತಂಡ ಪ್ರಬಲ ಪ್ರತಿರೋಧ ಒಡ್ಡಿತಾದರೂ ಸೋಲಿನೊಂದಿಗೆ ಅಭಿಯಾನ ಕೊನೆಗೊಳಿಸಿತು.
ಪ್ರಥಮಾರ್ಧಕ್ಕೆ 1-0 ಅಂತರದ ಮುನ್ನಡೆ ಗಳಿಸಿದ ಬೆಂಗಳೂರು ಎಫ್ ಸಿ ದ್ವಿತೀಯಾರ್ಧಕ್ಕೆ ಆತ್ಮವಿಶ್ವಾಸ ವೃದ್ಧಿಸಿಕೊಂಡಿತು.
ಮೊದಲ ಅವಧಿಯಲ್ಲಿ ಎರಡು ತಂಡಗಳು ಕಠಿಣ ಹೋರಾಟ ನಡೆಸಿದೆವು.ಅದರಲ್ಲೂ ಎಸ್ ಸಿ ಈಸ್ಟ್ ಬೆಂಗಾಲ್ ತಂಡ 22ನೇ ನಿಮಿಷದಲ್ಲಿ ಗೋಲ್ ಗಳಿಸುವ ಸುವರ್ಣಾವಕಾಶ ಹೊಂದಿತ್ತು. ಆದರೆ ಆಂಟೊನಿಯೋ ಪೆರೊಸೆವಿಕ್ ಅವರ ಗೋಲಿನ ಯತ್ನವನ್ನು ಲಾರಾ ಶರ್ಮ ಅಡ್ಡಿಪಡಿಸಿದರು.
ಇದಾದ ಎರಡು ನಿಮಿಷಗಳ ನಂತರ ಅಂದರೆ 22ನೇ ನಿಮಿಷದಲ್ಲಿ ಯಾಯಾ ಬನಾನ ಅವರಿಂದ ಉತ್ತಮ ಪಾಸ್ ಪಡೆದ ನಾಯಕ ಸುನೀಲ್ ಛೆಟ್ರಿ, ಬೆಂಗಳೂರು ಎಫ್ ಸಿಗೆ 1-0 ಅಂತರದ ಮುನ್ನಡೆ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾದರು.
ಈ ಗೋಲಿನಿಂದ ಬೆಂಗಳೂರು ಎಫ್ ಸಿ ಬಳಗದಲ್ಲಿ ಹೊಸ ಹುರುಪು ಬಂದಿತು. ಕೆಲವೇ ಹೊತ್ತಿನಲ್ಲಿ ಉದಾಂತ ಸಿಂಗ್ ಬೆಂಗಳೂರು ತಂಡದ ಮುನ್ನಡೆಯನ್ನು 2-0 ಅಂತರಕ್ಕೆ ವಿಸ್ತರಿಸುವ ಅವಕಾಶ ಪಡೆದರು. ಆದರೆ ಅವರು ಹೊಡೆದ ಚೆಂಡು ಗೋಲ್ ಪೆಟ್ಟಿಗೆಯ ಬಳಿಯೇ ಹಾದು ಹೋಯಿತು.
ಮೊದಲ ಗೋಲ್ ಬಿಟ್ಟುಕೊಟ್ಟ ನಂತರ ಈಸ್ಟ್ ಬೆಂಗಾಲ್ ತಂಡ ರಕ್ಷಣಾತ್ಮಕ ಆಟಕ್ಕೆ ಇನ್ನಷ್ಟು ಆದ್ಯತೆ ನೀಡಿತು. ಹೀಗಾಗಿ ಗೋಲ್ ಗಳಿಸುವ ಬದಲಿಗೆ ಎದುರಾಳಿ ತಂಡ ಗೋಲ್ ಬಾರಿಸಿದಂತೆ ನೋಡಿಕೊಳ್ಳುವುದೇ ಬೆಂಗಾಲ್ ಗೆ ದೊಡ್ಡ ಸವಾಲಾಗಿ ಮಾರ್ಪಟ್ಟಿತು.
ಮೊದಲ ಅವಧಿಯಲ್ಲಿ ಅಂತ್ಯಕ್ಕೆ ಆಂಟೊನಿಯೊ ಗಾಯಗೊಂಡ ಕಾರಣ ದ್ವಿತೀಯಾರ್ಧಕ್ಕೆ ಅವರ ಸೇವೆ ಇಲ್ಲದೆ ಕಣಕ್ಕಿಳಿಯಬೇಕಾದ ಒತ್ತಡಕ್ಕೆ ಈಸ್ಟ್ ಬೆಂಗಾಲ್ ಸಿಲುಕಿತು.