ಇರಾನ್ ಮಿಡ್‌ಫೀಲ್ಡರ್ ಇಮಾನ್ ಬಸಫಾ ಜೊತೆ ಒಪ್ಪಂದ ಮಾಡಿಕೊಂಡ ಬೆಂಗಳೂರು ಎಫ್‌ಸಿ

2021-22ರ ಆವೃತ್ತಿಯ ಅಂತ್ಯದವರೆಗೆ ಮಾರ್ಕೊ ಪೆಜೈಯುಲಿ ನೇತೃತ್ವದ ತಂಡದೊಂದಿಗೆ ಆಡಲು ಒಪ್ಪಂದ ಮಾಡಿಕೊಂಡ ಇಪ್ಪತ್ತೊಂಬತ್ತರ ಹರೆಯದ ಆಟಗಾರ.

2021-22 ರ ಆವೃತ್ತಿಯ ಅಂತ್ಯದವರೆಗೆ ಆಡುವ ಒಪ್ಪಂದಕ್ಕೆ ಇರಾನ್ ಮಿಡ್‌ಫೀಲ್ಡರ್ ಇಮಾನ್ ಬಸಫಾ ಸಹಿ ಹಾಕಿದ್ದಾರೆ ಎಂದು ಬೆಂಗಳೂರು ಎಫ್‌ಸಿ ಮಂಗಳವಾರ ಘೋಷಿಸಿದೆ. ಇತ್ತೀಚೆಗೆ ನಡೆದ ಪರ್ಷಿಯನ್ ಗಲ್ಫ್ ಪ್ರೊ ಲೀಗ್‌ನಲ್ಲಿ ಮೆಷಿನ್ ಸಾಜಿ ಪರ ಆಡಿದ ಬಸಫಾ ಅವರೊಂದಿಗಿನ ಒಪ್ಪಂದವು ತಂಡದ ಪರ ಬ್ಲೂಸ್ ಹೆಡ್ ಕೋಚ್ ಮಾರ್ಕೊ ಪೆಜೈಯುಲಿ ಮಾಡಿಕೊಂಡ ಹತ್ತನೇ ಸಹಿಯಾಗಿದೆ.

ಇರಾನ್‌ನ ಯುವ ತಂಡಗಳ ಸದಸ್ಯನಾಗಿದ್ದ ಬಸಫಾ ತನ್ನ ರಾಷ್ಟ್ರೀಯ ತಂಡವನ್ನು U17, U20 ಮತ್ತು U23 ಹಂತಗಳಲ್ಲಿ ಪ್ರತಿನಿಧಿಸಿದ ಅನುಭವವನ್ನು ಹೊಂದಿದ್ದಾರೆ. ಇರಾನ್‌ ಇಂದ ಹೊರಗೆ ಬೆಂಗಳೂರಿಗೆ ಬರುತ್ತಿರುವುದು ಅವರಿಗೆ ಇದೆ ಮೊದಲ ಅನುಭವವಾಗಿದ್ದು, 29 ವರ್ಷದ ಆಟಗಾರನಿಗೆ ಬಿಎಫ್‌ಸಿ ತಂಡದ ಮುಂದಿನ ಯೋಜನೆಗಳಲ್ಲಿ ಭಾಗವಹಿಸುತ್ತಿರುವುದು ಖುಷಿ ತಂದಿರುವುದಾಗಿ ಅವರು ವ್ಯಕ್ತಪಡಿಸಿದ್ದಾರೆ.

“ಬೆಂಗಳೂರು ಎಫ್‌ಸಿ ಸೇರಲು ಮತ್ತು ಭಾರತದಂತಹ ದೇಶಕ್ಕೆ ಬರಲು ನನಗೆ ತುಂಬಾ ಸಂತೋಷವೆನಿಸುತ್ತದೆ, ಅಲ್ಲಿ ಫುಟ್‌ಬಾಲ್ ಬಹಳ ವೇಗವಾಗಿ ಬೆಳೆಯುತ್ತಿದೆ. ಇಲ್ಲಿಂದೀಚೆಗೆ ವೈಯುಕ್ತಿಕವಾಗಿ ಮತ್ತು ನಮ್ಮ ತಂಡಕ್ಕಾಗಿ ನಾನು ಪ್ರದರ್ಶನ ತೋರಲು ಉತ್ಸುಕನಾಗಿದ್ದೇನೆ ಮತ್ತು ಗೆಲುವಿಗಾಗಿ ನನ್ನ ಪಾತ್ರವಹಿಸಲು ಸಾಧ್ಯವಾಗುತ್ತದೆ ಎಂದು ಭಾವಿಸುತ್ತೇನೆ. ಬಿಎಫ್‌ಸಿ ಉತ್ತಮ ಮನಸ್ಥಿತಿಯ ಚಾಂಪಿಯನ್ ತಂಡವಾಗಿದೆ ಮತ್ತು ನನ್ನ ಹೊಸ ತಂಡದ ಆಟಗಾರರನ್ನು ಭೇಟಿಯಾಗುವುದರೊಂದಿಗೆ ಆವೃತ್ತಿಯಲ್ಲಿ ಶ್ರಮಿಸಲು ಸಿದ್ಧನಾಗಿ ನಾನು ಎದುರು ನೋಡುತ್ತಿದ್ದೇನೆ. ” ಎಂದು ಒಪ್ಪಂದದ ಔಪಚಾರಿಕತೆಗಳು ಪೂರ್ಣಗೊಂಡ ಬಳಿಕ ಬಸಾಫಾ ತಿಳಿಸಿದರು.

ಶಹರ್ದಾರಿ ಬಂದರ್ ಅಬ್ಬಾಸ್‌ನೊಂದಿಗೆ ತನ್ನ ವೃತ್ತಿಜೀವನವನ್ನು ಆರಂಭಿಸಿದ್ದ ಯುವ ಆಟಗಾರ ಬಸಫಾ, 2012 ರಲ್ಲಿ ಶಹರ್ದಾರಿ ಅರಾಕ್‌ನೊಂದಿಗೆ ತಮ್ಮ ಚೊಚ್ಚಲ ಆಟವನ್ನು ಆರಂಭಿಸುವ ಮೊದಲು ಇರಾನ್‌ನ ಅಗ್ರ ವಿಭಾಗಗಳಲ್ಲಿನ ತಂಡಗಳೊಂದಿಗೆ ಹಲವಾರು ಪಂದ್ಯಗಳನ್ನು ಆಡಿದ್ದರು. ಇವರು 2014ರಲ್ಲಿ ಎಸ್ಟಿಘ್ಲಾಲ್ ಎಫ್ ಸಿ ಪರ ಎಎಫ್ ಸಿ ಚಾಂಪಿಯನ್ ಲೀಗ್ ನಲ್ಲಿಯೂ ಆಡಿದ ಅನುಭವ ಪಡೆದಿದ್ದರು ಮತ್ತು ಇದರ ಜೊತೆ ಫಜರ್ ಸಿಪಾಸಿ ಶಿರಾಜ್, ಮಾಲವನ್, ಅಲ್ಯೂಮಿನಿಯಂ ಅರಕ್ ಮತ್ತು ಪಾರ್ಸ್ ಜೊನೌಬಿ ಜಾಮ್‌ ಪರ ಆಡುವ ಮೂಲಕ, ಅಜಡೇಗನ್ ಲೀಗ್‌ನಲ್ಲಿ ಸುಮಾರು 100 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ.

“ಇಮಾನ್ ಮಿಡ್‌ಫೀಲ್ಡ್‌ನಲ್ಲಿನ ವಿವಿಧ ಸ್ಥಾನಗಳಲ್ಲಿ ಆಡಬಲ್ಲ ಸಾಮರ್ಥ್ಯದ ಆಟಗಾರ. ಇವರು ಆಟದಲ್ಲಿ ದೈಹಿಕವಾಗಿ ಗಮನಾರ್ಹ ಪ್ರದರ್ಶನ ನೀಡುವುದರೊಂದಿಗೆ, ಯುಕ್ತಿಯೊಂದಿಗೆ ಅಡುವ ನಿಪುಣತೆಯ ಜೊತೆಗೆ ನಾಯಕತ್ವದ ಲಕ್ಷಣಗಳನ್ನೂ ಹೊಂದಿದ್ದಾರೆ. ಇವರು ಕೂಡ ದೂರದಿಂದ ಶೂಟ್ ಮಾಡುವ ಸಾಮರ್ಥ್ಯ ಹೊಂದಿರುವವರಾಗಿದ್ದು ತಮ್ಮ ಅನುಭವ ಮತ್ತು ಉಪಸ್ಥಿತಿಯೊಂದಿಗೆ, ತಂಡವನ್ನು ಬಲಪಡಿಸುತ್ತಾರೆ ಮತ್ತು ಶೀಘ್ರದಲ್ಲೇ ಅವರನ್ನು ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ,” ಎಂದು ಪೆಜೈಯುಲಿ ಹೇಳಿದರು.

ಬ್ಲೂಸ್ ನವೆಂಬರ್ 20 ರಂದು ಬಾಂಬೋಲಿಮ್‌ನಲ್ಲಿರುವ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ತಮ್ಮ ಇಂಡಿಯನ್ ಸೂಪರ್ ಲೀಗ್ ಆರಂಭಿಕ ಪಂದ್ಯದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ತಂಡವನ್ನು ಎದುರಿಸಲಿದೆ.