ಬ್ಲೂಸ್‌ನೊಂದಿಗೆ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ ಇಪ್ಪತ್ತೇಳರ ಹರೆಯ
2022-23ರ ಆವೃತ್ತಿಯ ಅಂತ್ಯದವರೆಗಿನ ಎರಡು ವರ್ಷಗಳ ಒಪ್ಪಂದಕ್ಕೆ ಬ್ರೂನೋ ರಾಮಿರ್ಸ್ ಹೆಸರಿನ ಬ್ರೆಜಿಲಿಯನ್ ಮಿಡ್‌ಫೀಲ್ಡರ್ ಬ್ರೂನೋ ಎಡ್ಗರ್ ಸಿಲ್ವಾ ಅಲ್ಮೇಡಾ ಸಹಿ ಮಾಡಿರುವುದಾಗಿ ಬೆಂಗಳೂರು ಎಫ್‌ಸಿ ತಂಡವು ಶನಿವಾರದಂದು ಖಚಿತಪಡಿಸಿದೆ. ಇತ್ತೀಚೆಗೆ ಪೋರ್ಚುಗೀಸ್ ಪ್ರೈಮಿರಾ ಲಿಗಾ ಸೈಡ್ ಬೆಲೆನ್ಸೆನ್ಸ್ ಎಸ್‌ಎಡಿ ಪರ ಆಡಿದ್ದ ರಾಮಿರ್ಸ್, ಮಾರ್ಕೊ ಪೆಜೈಯುಲಿ ಅವರು ಈವರೆಗೆ ತಂಡಕ್ಕಾಗಿ ಮಾಡಿಕೊಂಡಿರುವ ಒಂಬತ್ತನೇ ಒಪ್ಪಂದವಾಗಿದ್ದಾರೆ.
ಬಹಿಯಾ ಯೂತ್ ಅಕಾಡೆಮಿಯ ಆಟಗಾರನಾದ ರಾಮಿರ್ಸ್, 2014 ರಲ್ಲಿ ತಂಡಕ್ಕೆ ಪಾದಾರ್ಪಣೆ ಮಾಡುವ ಮುನ್ನ ಬ್ರೆಜಿಲ್ ತಂಡಗಳಾದ ವಿಟೋರಿಯಾ ಮತ್ತು ಕ್ರೂಜೈರೊ ಪರ ಅವಕಾಶಗಳನ್ನು ಪಡೆದಿದ್ದರು. 2014ರ ಬ್ರೆಜಿಲಿಯನ್ ಡೊಮೆಸ್ಟಿಕ್ ಅಲ್ಲಿ ಎರಡು ಪ್ರಶಸ್ತಿಗಳನ್ನು ಮುಡಿಗೇರಿಕೊಂಡಿದ್ದ ಕ್ರೂಜೈರೋ ತಂಡದಲ್ಲಿ ಆಡಿದ್ದರು. ಕ್ಯಾಂಪಿಯೊನಾಟೊ ಬ್ರೆಸಿಲಿರೋ ಸೀರೀ ಎ ಮತ್ತು ಕ್ಯಾಂಪಿಯೊನಾಟೊ ಮಿನಿರೋ ಪ್ರಶಸ್ತಿಗಳು ರಾಮಿರ್ಸ್ ಆಡಿದ್ದ ತಂಡವು ಗೆದ್ದಿತ್ತು.
“ಬೆಂಗಳೂರು ಎಫ್‌ಸಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ನನಗೆ ತುಂಬಾ ಸಂತೋಷವಾಗಿದೆ. ಇದು ನನಗೆ ಹೊಸ ಸವಾಲಾಗಿದ್ದು, ನನ್ನ ಹೊಸ ಸಹ ಆಟಗಾರರೊಂದಿಗೆ ಉತ್ತಮ ಆವೃತ್ತಿಗಳ ನಿರೀಕ್ಷೆಯಲ್ಲಿ ನಾನು ಇದ್ದೇನೆ. ಈ ಕ್ಲಬ್‌ನೊಂದಿಗಿನ ನನ್ನ ಮೊದಲ ಗುರಿ ಟ್ರೋಫಿಗಳಿಗಾಗಿ ಹೋರಾಡುವುದಾಗಿದೆ, ಏಕೆಂದರೆ ಈ ತಂಡಕ್ಕೆ ಗೆಲ್ಲುವ ಮನಸ್ಥಿತಿ ಇದೆ ಎಂದು ನನಗೆ ತಿಳಿದಿದೆ. ನಾನು ನನ್ನ ಹೊಸ ಸಹ ಆಟಗಾರರೊಂದಿಗೆ ಕಷ್ಟಪಟ್ಟು ಅಭ್ಯಾಸ ಮಾಡಲು ಬಯಸುತ್ತೇನೆ, ನನ್ನಿಂದ ಸಾಧ್ಯವಾದಷ್ಟು ಆಡಲು ಮತ್ತು ಅತ್ಯುತ್ತಮ ರೀತಿಯಲ್ಲಿ ತಂಡಕ್ಕೆ ಕೊಡುಗೆ ನೀಡಲು ಇಚ್ಚಿಸುತ್ತೇನೆ.” ಎಂದು ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ರಾಮಿರ್ಸ್ ತಿಳಿಸಿದರು.
ಪೋರ್ಚುಗೀಸ್ ಸೈಡ್ ಮೊರೆರೆನ್ಸ್‌ನಲ್ಲಿನ ಪ್ರದರ್ಶನದ ನಂತರ ರಾಮಿರ್ಸ್ ಬ್ರೆಜಿಲ್‌ಗೆ ಮರಳಿ ಸೆಂಟ್ರೊ ಸ್ಪೋರ್ಟಿವೊ ಅಲಗೊನೊ ಜೊತೆಗೆ 2019 ರಲ್ಲಿ ಒಪ್ಪಂದ ಮಾಡಿಕೊಂಡರು. ಒಂದು ವರ್ಷದ ನಂತರ ರಾಮಿರ್ಸ್ ಪೋರ್ಚುಗೀಸ್ ಲಿಗಾಪ್ರೊ ಸೈಡ್ ಫೈರೆನ್ಸ್‌ಗೆ ಸೇರಿಕೊಂಡರು, ನಂತರ ಅಘೋಷಿತ ಶುಲ್ಕಕ್ಕೆ 2020ರಲ್ಲಿ ಪ್ರೈಮಿರಾ ಲಿಗಾದಲ್ಲಿ ಬೆಲೆನ್ಸೆನ್ಸ್‌ಗೆ ವರ್ಗಾವಣೆಗೊಂಡರು. ಬೆಲೆನೆನ್ಸ್‌ನಲ್ಲಿ, ರಾಮಿರ್ಸ್ ಎಲ್ಲಾ ಸ್ಪರ್ಧೆಗಳಲ್ಲಿ 32 ಬಾರಿ ಕಾಣಿಸಿಕೊಂಡಿದ್ದರು, ತಂಡವು ಲೀಗ್‌ನಲ್ಲಿ 10 ನೇ ಸ್ಥಾನವನ್ನು ಅಲಂಕರಿಸಿತ್ತು.
ಒಪ್ಪಂದದ ಕುರಿತು ಮಾತನಾಡಿದ ಬೆಂಗಳೂರು ತಂಡದ ತರಬೇತುದಾರ ಮಾರ್ಕೊ ಪೆಜೈಯುಲಿ “ಬ್ರೂನೋ ಒಬ್ಬ ಯುವ ಆಟಗಾರ, ಪ್ರತಿಭಾಶಾಲಿ ಮತ್ತು ಬಹುಮುಖ ಆಟಗಾರನಾಗಿದ್ದು ಮಿಡ್‌ಫೀಲ್ಡ್‌ನಲ್ಲಿ ಅನೇಕ ಸ್ಥಾನಗಳಲ್ಲಿ ಆಡಬಲ್ಲವರು. ಅವರು ಪಿಚ್‌ನ ಎರಡೂ ತುದಿಗಳಲ್ಲಿ ತಮ್ಮ ಅಸ್ತಿತ್ವವನ್ನು ಅನುಭವಿಸುವಂತೆ ಮಾಡಲು ಶಕ್ತರಾಗಿದ್ದಾರೆ. ಅವರು ಈವರೆಗೆ ಬ್ರೆಜಿಲ್ ಮತ್ತು ಪೋರ್ಚುಗೀಸ್ ನ ಫಸ್ಟ್ ಡಿವಿಷನ್ ಅಲ್ಲಿ ಆಡಿರುವ ಅನುಭವಗಳೊಂದಿಗೆ ತಂಡವು ಸ್ಪರ್ಧಾತ್ಮಕ ಯುವ ಪಡೆಯಾಗಿ ಮಾರ್ಪಡುವಲ್ಲಿ ಸಹಕಾರಿಯಾಗಲಿದ್ದಾರೆ ಎಂದು ನನಗೆ ಖಾತ್ರಿಯಿದೆ. ಇಂಡಿಯನ್ ಸೂಪರ್ ಲೀಗ್ ಸೀಸನ್ ನ ಹಿನ್ನೆಲೆಯಲ್ಲಿ ಈ ಒಪ್ಪಂದವು ಮಹತ್ವದ್ದಾಗಿದ್ದು ತಂಡಕ್ಕೆ ಘನತೆಯನ್ನು ತರಲಿದೆ.” ಎಂದು ವಿವರಿಸಿದರು.
ಮುಂಬರುವ ಇಂಡಿಯನ್ ಸೂಪರ್ ಲೀಗ್ ಅಭಿಯಾನದ ಆವೃತ್ತಿ ಪೂರ್ವ ತರಬೇತಿಗಳಲ್ಲಿ ತಂಡವನ್ನು ರಾಮಿರ್ಸ್ ಸೇರಿಕೊಳ್ಳಲಿದ್ದಾರೆ.