ಮಣಿಪುರದ ಯುವ ಆಟಗಾರ ಬ್ಲೂಸ್ ಪರ ಮೂರು ವರ್ಷಗಳ ಒಪ್ಪಂದದ ಮೇರೆಗೆ ಬಳ್ಳಾರಿಯಲ್ಲಿ ಆವೃತ್ತಿ ಪೂರ್ವ ತರಬೇತಿಗೆ ಸೇರ್ಪಡೆಗೊಂಡರು.
ಬಿದ್ಯಾಶಾಗರ್ ಸಿಂಗ್ ಅವರೊಂದಿಗೆ ಮೂರು ವರ್ಷಗಳ ಒಪ್ಪಂದ ಮಾಡಿಕೊಳ್ಳುವ ಮೂಲಕ ಬೆಂಗಳೂರು ಎಫ್‌ಸಿ ತಮ್ಮ ಅಟ್ಯಾಕ್ ಬಣವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿರುವುದಾಗಿ ಕ್ಲಬ್ ಬುಧವಾರ ಪ್ರಕಟಿಸಿದೆ. 23 ವರ್ಷದ ಮಣಿಪುರದ ಈ ಆಟಗಾರ ತಂಡ ಮಾಡಿಕೊಂಡಿರುವ ಎಂಟನೇ ಒಪ್ಪಂದವಾಗಿದ್ದು, ಈಗಲ್ಸ್ ಎಫ್‌ಸಿ ವಿರುದ್ಧ ಮುಂಬರುವ ಎಎಫ್‌ಸಿ ಕಪ್ ಪ್ಲೇಆಫ್ ಹಂತದ ಪಂದ್ಯಕ್ಕೂ ಮುನ್ನ ಬ್ಲೂಸ್ ತಂಡವನ್ನು ಸೇರಿಕೊಂಡಿದ್ದಾರೆ.
ಟಿಡ್ಡಿಮ್ ರೋಡ್ ಅಥ್ಲೆಟಿಕ್ ಯೂನಿಯನ್ ಎಫ್‌ಸಿ ಯೂತ್ ಸಿಸ್ಟಮ್ ಮೂಲಕ ಬಂದ ಬಿದ್ಯಾಶಾಗರ್, 2016 ರಲ್ಲಿ ಈಸ್ಟ್ ಬೆಂಗಾಲ್ ತಂಡವನ್ನು ಸೇರಿಕೊಂಡರು. ಕೊಲ್ಕತ್ತಾ U18 ತಂಡವನ್ನು 2016-17ರ U18 ಐ-ಲೀಗ್‌ನ ಫೈನಲ್‌ಗೆ ಕರೆದೊಯ್ಯುವಲ್ಲಿ ಆವೃತ್ತಿಯುದ್ದಕ್ಕೂ ಆರು ಗೋಲುಗಳನ್ನು ಗಳಿಸಿ ಗಮನ ಸೆಳೆದರು, ಅದರಲ್ಲಿ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳೂ ಸೇರಿದ್ದವು. ಅಲ್ಲಿಂದ ಅವರು ಹಿರಿಯರ ತಂಡದಲ್ಲಿ ಸ್ಥಾನ ಪಡೆದರು ಮತ್ತು 2019 ರ ಡುರಾಂಡ್ ಕಪ್‌ನಲ್ಲಿ ತಮ್ಮ ಛಾಪು ಮೂಡಿಸಿದರು, ಗುಂಪಿನ ಹಂತದಲ್ಲಿ ಬ್ಲೂಸ್ ವಿರುದ್ಧ ಎರಡು ಬಾರಿ ಅಂಕ ಪಡೆದು 2-1 ಗೋಲುಗಳ ಜಯಕ್ಕೆ ಕಾರಣವಾಗಿದ್ದರು.
“ಬೆಂಗಳೂರು ಎಫ್‌ಸಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ನನಗೆ ಕನಸು ನನಸಾದಂತೆ ಅನಿಸಿದೆ. ನಾನು ಈಗ ಇಲ್ಲಿಗೆ ಬಂದಾಗಿದೆ, ಇನ್ನೇನಿದ್ದರೂ ಕ್ಲಬ್‌ಗಾಗಿ ಮತ್ತು ನನಗಾಗಿ ಹೆಚ್ಚಿನದನ್ನು ಸಾಧಿಸಲು ಇಚ್ಛಿಸುತ್ತೇನೆ. ಈ ತಂಡವು ಈವರೆಗೂ ಸಾಧಿಸಿರುವ ಗೆಲುವಿನ ಪರಂಪರೆಯನ್ನು ಮುಂದುವರಿಸಲು ನನ್ನನ್ನು ಉತ್ತಮವಾಗಿಸಿಕೊಳ್ಳುತ್ತಾ ಪ್ರದರ್ಶನಗಳನ್ನು ನೀಡಲು ಉತ್ಸುಕನಾಗಿದ್ದೇನೆ. ನಾನು ಸುನಿಲ್ ಭಾಯ್ ಮತ್ತು ಗುರ್‌ಪ್ರೀತ್ ಭಾಯ್‌ರಂತಹ ಅನೇಕ ಶ್ರೇಷ್ಠ ಆಟಗಾರರೊಂದಿಗೆ ಇದ್ದೇನೆ ಎಂದು ತಿಳಿದಿದೆ ಮತ್ತು ನಾನು ಅವರಿಂದ ಸಾಕಷ್ಟು ಕಲಿಯಲು ಮತ್ತು ಇನ್ನಷ್ಟು ಅಭಿವೃದ್ಧಿ ಹೊಂದಲು ಬಯಸುತ್ತೇನೆ ”ಎಂದು ಬಿದ್ಯಾಶಾಗರ್ ತಮ್ಮ ಒಪ್ಪಂದಕ್ಕೆ ಸಹಿ ಹಾಕಿದ ನಂತರ ತಿಳಿಸಿದರು.
ಎರಡು ಐ-ಲೀಗ್ ಆವೃತ್ತಿಗಳಲ್ಲಿ ಕೇವಲ 11 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರೂ, ಕಳೆದ ವರ್ಷ TRAU ಗೆ ಹಿಂತಿರುಗಿ ಎರಡು ಹ್ಯಾಟ್ರಿಕ್ ಗೋಲ್ ಸಾಧನೆ ಮಾಡುವುದರೊಂದಿಗೆ 12 ಗೋಲ್ ಗಳನ್ನು ಆ ಸಾಮಾನ್ಯ ತಂಡದ ಪರ ಆಡಿ ಐ-ಲೀಗ್ ಪ್ರಶಸ್ತಿಯ ಸವಾಲಿನ ಅಂತಿಮ ಪಂದ್ಯದವರೆಗೂ ತಂಡವನ್ನು ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದರು ಮತ್ತು ಅಂತಿಮವಾಗಿ ತಂಡ ಮೂರನೇ ಸ್ಥಾನವನ್ನು ಅಲಂಕರಿಸಿತ್ತು.
“ಬೆಂಗಳೂರು ಎಫ್‌ಸಿ ಪರ ಆಡುವ ಅವಕಾಶ ನನಗೆ ಸರಿಯಾದ ಸಮಯಕ್ಕೆ ಬಂದಿದೆ. ಒಳ್ಳೆಯ ಫಾರ್ಮ್ ನಲ್ಲಿ ಇರುವುದು ಒಬ್ಬ ಸ್ಟ್ರೈಕರ್ ಗೆ ತುಂಬಾನೇ ಮುಖ್ಯ ಮತ್ತು ನನ್ನ ಉತ್ತಮ ಓಟವನ್ನು ನಾನು ಇಲ್ಲಿ ಮುಂದುವರಿಸಲು ಬಯಸುತ್ತೇನೆ. ನನ್ನ ಗುರಿಯೂ ಟ್ರೋಫಿಗಳನ್ನು ಗೆಲ್ಲುವುದು ಮತ್ತು ಈ ಕ್ಲಬ್‌ನ ಜರ್ಸಿಯನ್ನು ಹೆಮ್ಮೆಯಿಂದ ಧರಿಸುವುದಾಗಿದೆ. ನಾನು ಇಲ್ಲಿ ಉತ್ತಮ ಪ್ರದರ್ಶನ ನೀಡುವುದು ಅವಶ್ಯವಿದೆ ಮತ್ತು ಇದರಿಂದ ನಾನು ನಮ್ಮ ರಾಷ್ಟ್ರೀಯ ತಂಡಕ್ಕೆ ಸೇರಿಕೊಳ್ಳಬಲ್ಲೆ ”ಎಂದು ಬಿದ್ಯಾಶಾಗರ್ ಹೇಳಿದರು.
ಫ್ಲ್ಯಾಂಕ್ ಗಳಲ್ಲಿ ಆರಾಮದಾಯಕವಾಗಿ ಆಟವಾಡುತ್ತಿರುವ ಬಿದ್ಯಾಶಾಗರ್, ಕಳೆದ ಆವೃತ್ತಿಯ ಐ-ಲೀಗ್ ಗೋಲ್ಡನ್ ಬೂಟ್ ಪಡೆದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಮತ್ತು ಇದರೊಂದಿಗೆ ನ್ಯಾಶಿನಲ್ ಲೀಗ್ನಲ್ಲಿ ಅಂಕ ಗಳಿಕೆಯಲ್ಲಿ ಭಾರತದ ಅಗ್ರ ಆಟಗಾರರಾದ ಭೈಚುಂಗ್ ಭುಟಿಯಾ, ರಾಮನ್ ವಿಜಯನ್ ಮತ್ತು ಬ್ಲೂಸ್ ನಾಯಕ ಸುನಿಲ್ ಛೇತ್ರಿ ಅವರ ನಂತರ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಅವರನ್ನು ‘ಹೀರೋ ಆಫ್ ದಿ ಸೀಸನ್ ’ ಎಂದು ಗೌರವಿಸಲಾಗಿತ್ತು ಮತ್ತು ಐ-ಲೀಗ್ ನ ‘ಟೀಮ್ ಆಫ್ ದಿ ಸೀಸನ್’ ನಲ್ಲಿಯೂ ಸ್ಥಾನ ಪಡೆದಿದ್ದರು.
“ಬಿದ್ಯಾಶಾಗರ್ ಸಾಕಷ್ಟು ಸಾಮರ್ಥ್ಯ ಹೊಂದಿರುವ ಯುವ ಆಟಗಾರನಾಗಿದ್ದಾರೆ. ಅವರು ನಮ್ಮೊಂದಿಗೆ ಸ್ವಲ್ಪ ಸಮಯದಿಂದ ಆಡುತ್ತಿದ್ದರೂ ಮುಂದಿನ ಹಂತಕ್ಕಾಗಿ ಕಲಿಯುವ ಉತ್ಸಾಹವನ್ನು ತೋರಿಸಿದ್ದಾರೆ ಮತ್ತು ಅವರು ತಮ್ಮ ಗೋಲ್ ಗಳಿಸುವ ಸಾಮರ್ಥ್ಯವನ್ನೂ ತೋರಿಸಿದ್ದಾರೆ. ಈಗಿರುವ ಮುಖ್ಯ ವಿಷಯವೆಂದರೆ ನಮ್ಮ ತಂಡಕ್ಕೆ ಅವರ ಗುಣಮಟ್ಟದ ಪ್ರದರ್ಶನವನ್ನು ನೀಡುತ್ತಿದ್ದಾರೆ ಮತ್ತು ಇಂಡಿಯನ್ ಸೂಪರ್ ಲೀಗ್‌ನಲ್ಲಿ ಅದನ್ನು ಪ್ರದರ್ಶಿಸಲಿದ್ದಾರೆ. ಅವರು ಸ್ಟ್ರೈಕರ್ ಆಗಿ, ವಿಂಗರ್ ಆಗಿ ಮತ್ತು ಸ್ಟ್ರೈಕರ್ ಗೆ ಜೊತೆಯಾಗಿಯೂ ಆಡಬಲ್ಲವರಾಗಿದ್ದು, ಇದು ದಾಳಿಯಲ್ಲಿ ಸಾಕಷ್ಟು ಆಯ್ಕೆಗಳನ್ನು ನೀಡಲಿದೆ ”ಎಂದು ಬ್ಲೂಸ್ ನ ಮುಖ್ಯ ಕೋಚ್ ಮಾರ್ಕೊ ಪೆಜೈಯುಲಿ ತಿಳಿಸಿದರು.
ಆಗಸ್ಟ್ 15 ರಂದು ಮಾಲ್ಡೀವ್ಸ್‌ನಲ್ಲಿ ನಡೆಯುವ ಎಎಫ್‌ಸಿ ಕಪ್ ಪ್ಲೇಆಫ್ ಹಣಾಹಣಿಯಲ್ಲಿ ಬ್ಲೂಸ್ ತಂಡವು ಕ್ಲಬ್ ಈಗಲ್ಸ್ ಎಫ್‌ಸಿಯನ್ನು ಎದುರಿಸಲಿದ್ದಾರೆ.