ಡುರಾಂಡ್ ಕಪ್ ಅಭಿಯಾನದ ಆರಂಭದಲ್ಲಿ ಬೆಂಗಳೂರು ತಂಡಕ್ಕೆ ಬ್ಲಾಸ್ಟರ್ಸ್ ಸವಾಲು

ಸಿ ಗುಂಪಿನಲ್ಲಿ ಪರಿಚಿತ ಎದುರಾಳಿಯನ್ನು ಎದುರಿಸಲಿರುವ ನೌಶಾದ್ ಮೂಸಾ ನೇತೃತ್ವದ ಬ್ಲೂಸ್ ನ ಯುವಪಡೆ

ಕೋಲ್ಕತ್ತಾದ ವಿವೇಕಾನಂದ ಯುಬ ಭಾರತಿ ಕ್ರೀರಾಂಗನ್ ಅಲ್ಲಿ ಬುಧವಾರ ನಡೆಯಲಿರುವ ಡುರಾಂಡ್ ಕಪ್ ಪಂದ್ಯಾವಳಿಯ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ FC ಯನ್ನು ಎದುರಿಸಲಿರುವ ಬ್ಲೂಸ್ ತಂಡದ ತರಬೇತುದಾರ ನೌಶಾದ್ ಮೂಸಾ ತಮ್ಮ ಯುವ ತಂಡವು ಪ್ರಭಾವಶಾಲಿಯಾಗಿ ಪ್ರದರ್ಶನ ತೋರಲಿರುವುದು ಖಚಿತ ಎಂದು ಸಮರ್ಥಿಸಿಕೊಂಡಿದ್ದಾರೆ. ಕೇರಳ, ದೆಹಲಿ ಎಫ್‌ಸಿ ಮತ್ತು ಇಂಡಿಯನ್ ನೇವಿ ತಂಡಗಳೊಂದಿಗೆ ಸಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಬೆಂಗಳೂರು, ಗುಂಪಿನ ಎರಡು ತಂಡಗಳೊಂದಿಗೆ ಸೆಣೆಸಿ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆಯಬೇಕಿದೆ.

“ನಾವು ಎಎಫ್‌ಸಿ ಕಪ್‌ ನ ಮುನ್ನ ಸುದೀರ್ಘವಾದ ಆವೃತ್ತಿಪೂರ್ವ ಸಮಯವನ್ನು ಹೊಂದಿದ್ದೆವು, ಈ ಪಂದ್ಯಾವಳಿಯಲ್ಲಿ ನಮ್ಮ ತಂಡವು ಕಳೆದ ಕೆಲವು ತಿಂಗಳುಗಳಿಂದ ಹೆಚ್ಚು ಸ್ಪರ್ಧಾತ್ಮಕ ಆಟಗಳನ್ನು ಆಡದ ಅನೇಕ ಯುವಆಟಗಾರರನ್ನೂ ಹೊಂದಿದೆ. ನಾವು U18 ಪದವೀಧರರು ಮತ್ತು ರಿಸರ್ವ್ ತಂಡದ ಆಟಗಾರರ ಮಿಶ್ರಣವನ್ನು ಹೊಂದಿದ್ದೇವೆ, ಮಾರ್ಕೊ (ಪೆಜೈಯುಲಿ) ಅವರು ಈ ಆಟಗಾರರು ಉತ್ತಮ ಸಾಮರ್ಥ್ಯ ಹೊಂದಿದ್ದಾರೆಂದು ನಂಬುತ್ತಾರೆ. ಡುರಾಂಡ್ ಕಪ್ ಒಂದು ಪ್ರತಿಷ್ಠಿತ ಟೂರ್ನಿಯಾಗಿದ್ದು, ಈ ಆಟಗಾರರು ದೊಡ್ಡ ತಂಡಗಳ ವಿರುದ್ಧ ಒತ್ತಡದಲ್ಲಿ ಹೇಗೆ ಪ್ರದರ್ಶನ ನೀಡಬಹುದು ಎಂಬುದನ್ನು ನಾವು ನೋಡಲಿದ್ದೇವೆ ಎಂದು ಮೂಸಾ ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ತಿಳಿಸಿದರು.

ಬ್ಲೂಸ್‌ನ ಮೊದಲ ಪಂದ್ಯದ ಎದುರಾಳಿಗಳಾದ ಕೇರಳ ಈಗಾಗಲೇ ತಮ್ಮ ಕೋಲ್ಕತ್ತಾದ ಪಂದ್ಯದ ಮೂಲಕ ಅಂಕಪಟ್ಟಿಯಲ್ಲಿ ತಮ್ಮ ಖಾತೆಯನ್ನು ತೆರೆದಿದ್ದಾರೆ, ಸೆಪ್ಟೆಂಬರ್ 11 ರಂದು ನಡೆದ ಇಂಡಿಯನ್ ನೇವಿ ವಿರುದ್ಧದ ಪಂದ್ಯದಲ್ಲಿ ಉರುಗ್ವೆಯ ಮಿಡ್‌ಫೀಲ್ಡರ್ ಆಡ್ರಿಯನ್ ಲೂನಾ ಅವರು ಪೆನಾಲ್ಟಿಯಲ್ಲಿ ಗಳಿಸಿದ ಅಂಕದಿಂದಾಗಿ 1-0 ಅಂತರದ ಜಯ ಸಾಧಿಸಿದೆ.

“ಕೇರಳವು ಸಂಪೂರ್ಣ ಸಾಮರ್ಥ್ಯದ ತಂಡದೊಂದಿಗೆ ಇಲ್ಲಿಗೆ ರಂಗಕ್ಕಿಳಿದಿದ್ದು, ತಮ್ಮ ಮೊದಲ ಪಂದ್ಯದಲ್ಲಿ ಜಯಸಾಧಿಸಿದೆ. ಅದರಂತೆ, ಸ್ಪರ್ಧೆಯಲ್ಲಿ ಆಡುವ ಯಾವುದೇ ತಂಡವಾದರೂ ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವುದು ಅತಿಮುಖ್ಯವಾಗಿದೆ ಮತ್ತು ಅದು ನಮಗೂ ಅನ್ವಯಿಸಲಿದೆ. ನಾವು ಈ ಪಂದ್ಯಾವಳಿಯಲ್ಲಿ ತುಂಬಾ ಗಂಭೀರವಾಗಿರುತ್ತೇವೆ ಮತ್ತು ಆಟಗಾರರಿಗೆ ಇದು ಎಷ್ಟು ಮುಖ್ಯ ಎಂಬುದು ತಿಳಿದಿದೆ. ಅವರು ಅಂಗಳಕ್ಕಿಳಿದು ತಮ್ಮ ಉತ್ತಮ ಪ್ರದರ್ಶನವನ್ನು ನೀಡಲು ಮತ್ತು ಎಲ್ಲರಿಗೂ ತಮ್ಮ ಸಾಮರ್ಥ್ಯ ತೋರಿಸಲು ಎದುರುನೋಡುತ್ತಿದ್ದಾರೆ.” ಎಂದು ಮೂಸಾ ಹೇಳಿದರು.

ಕೇರಳ ತಂಡವು ಈ ವರ್ಷ ಸ್ಪರ್ಧೆಗೆ ಪಾದಾರ್ಪಣೆ ಮಾಡಿದ್ದು, ಬ್ಲೂಸ್ ಈ ಹಿಂದೆ ಎರಡು ಬಾರಿ ಪಾಲ್ಗೊಂಡ ಅನುಭವವನ್ನು ಹೊಂದಿದೆ, ಅವುಗಳಲ್ಲಿ 2014 ರ ತಮ್ಮ ಚೊಚ್ಚಲ ಅಭಿಯಾನದಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿತ್ತು, ಪಂದ್ಯದ ಪೆನಾಲ್ಟಿಯಲ್ಲಿ ಸಲ್ಗಾವಕರ್ ವಿರುದ್ಧ ಸೋಲನುಭವಿಸಿತ್ತು. ನಂತರ 2019ರ ಇತ್ತೀಚಿನ ಟೂರ್ನಮೆಂಟ್ ನಲ್ಲಿ ಮೂಸ ಅವರ ಯುವ ತಂಡವು ಅವರ ಗುಂಪಿನಲ್ಲಿ ಎರಡನೇ ಸ್ಥಾನ ಅಲಂಕರಿಸಿ ನಿರ್ಗಮಿಸಿತ್ತು.

“ತರಬೇತುದಾರನಾಗಿ, ಮಾರ್ಕೊ ಬಯಸಿದರೂ ಕೂಡ ಎಲ್ಲರಿಗೂ ಅವಕಾಶಗಳನ್ನು ನೀಡುವುದು ಅಷ್ಟು ಸುಲಭವಲ್ಲ. ಹಾಗಾಗಿಯೇ ನಾವು ಯುವ ತಂಡವನ್ನು ಇಲ್ಲಿಗೆ ತಂದಿದ್ದೇವೆ ಹಾಗಾಗಿ ಪ್ರತಿಯೊಬ್ಬರೂ ತಮ್ಮನ್ನು ತಾವು ಸಾಬೀತುಪಡಿಸಲು ಅವಕಾಶವನ್ನು ಪಡೆಯುತ್ತಾರೆ. ಒಂದು ಕ್ಲಬ್ ಆಗಿ, ನಾವು ನಮ್ಮ ಯುವಆಟಗಾರರ.

ಕೌಶಲ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಬಹಳ ಹೂಡಿಕೆಮಾಡಿದ್ದೇವೆ ಮತ್ತು ನಮ್ಮ ಉದ್ದೇಶ ಮುಖ್ಯ ತಂಡದಲ್ಲಿ ಅನುಭವಿ ಆಟಗಾರರೊಂದಿಗೆ ಯುವಆಟಗಾರರ ಸಮತೋಲನವನ್ನು ಕಂಡುಕೊಳ್ಳುವಂತಹ ತಂಡವನ್ನು ಬೆಳೆಸಿದ ಹಂತ ತಲುಪಲು ಬಯಸುತ್ತೇವೆ. ಹಾಗಾಗಿ ಇದು ಸಮಯ ತೆಗೆದುಕೊಳ್ಳುತ್ತದೆ, ಆದರೆ ನಾವು ಸರಿಯಾದ ಹಾದಿಯಲ್ಲಿದ್ದೇವೆ. ಕಳೆದ ಕೆಲವು ವರ್ಷಗಳಿಂದ ನಾವು ಪ್ರೋತ್ಸಾಹದಾಯಕ ಕುರುಹುಗಳನ್ನು ಹೊಂದಿದ್ದೇವೆ, ಅವರಲ್ಲಿ ಸುರೇಶ್ (ವಾಂಗ್‌ಜಾಮ್), ಲಿಯಾನ್ (ಅಗಸ್ಟೀನ್) ಮತ್ತು ಪರಾಗ್ (ಶ್ರೀವಾಸ್) ಎಂದು ಹೇಳಬಹುದು. ಈ ವರ್ಷ, ದಮೈತ್‌ಫಾಂಗ್ (ಲಿಂಗ್‌ಡೋ) ಮತ್ತು ಶಿವಶಕ್ತಿ (ನಾರಾಯಣನ್) ಮೊದಲ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ”ಎಂದು 2002ರ ಡುರಾಂಡ್ ಕಪ್ ಜಯಿಸಿದ್ದ ಮಹೀಂದ್ರಾ & ಮಹೀಂದ್ರಾ ತಂಡದ ಆಟಗಾರನಾಗಿದ್ದ ಮೂಸಾ ಹೇಳಿದರು.

ಬೆಂಗಳೂರು ಎಫ್‌ಸಿ ಮತ್ತು ಕೇರಳ ಬ್ಲಾಸ್ಟರ್ಸ್ ನಡುವಿನ ಪಂದ್ಯ ಬುಧವಾರ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದ್ದು, ಪಂದ್ಯವನ್ನು ಅಡ್ಡಟೈಮ್ಸ್ ವೆಬ್‌ಸೈಟ್ ಅಥವಾ ಆ್ಯಪ್‌ನಲ್ಲಿ ನೇರ ಪ್ರಸಾರದಲ್ಲಿ ವೀಕ್ಷಿಸಬಹುದು.

Malcare WordPress Security