ಕೋಲ್ಕತ್ತಾದಲ್ಲಿ ನಡೆಯಲಿರುವ ಅಂತಿಮ ಡುರಾಂಡ್ ಕಪ್ ಗುಂಪು ಹಂತದ ಮುಖಾಮುಖಿಯಲ್ಲಿ ಕಠಿಣ ಸವಾಲನ್ನು ನಿರೀಕ್ಷಿಸುತ್ತಿರುವ ನೌಶಾದ್ ಮೂಸಾ
ಮಂಗಳವಾರದಂದು ವಿವೇಕಾನಂದ ಯುಬಾ ಭಾರತಿ ಕ್ರೀರಾಂಗಣ್ ಅಲ್ಲಿ ನಡೆಯಲಿರುವ ಅಂತಿಮ ಗುಂಪು ಹಂತದ ಪಂದ್ಯದಲ್ಲಿ ಇಂಡಿಯನ್ ನೇವಿ ವಿರುದ್ಧ ಬ್ಲೂಸ್ ಆಡುವಾಗ, 130 ನೇ ಡುರಾಂಡ್ ಕಪ್ನ ಕ್ವಾರ್ಟರ್ ಫೈನಲ್ ತಲುಪಲು ಕೇವಲ ಒಂದು ಪಾಯಿಂಟ್ ಅಗತ್ಯವಿದ್ದರೂ, ತಮ್ಮ ತಂಡವು ರಕ್ಷಣಾತ್ಮಕ ಫುಟ್ಬಾಲ್ ತಂತ್ರ ಬಳಸಿ ಆಡಲಿದೆ ಎಂಬ ಊಹಾಪೋಹಗಳನ್ನು ಬೆಂಗಳೂರು ಎಫ್ಸಿ ಕೋಚ್ ನೌಶಾದ್ ಮೂಸಾ ತಳ್ಳಿಹಾಕಿದರು. ಎರಡು ಪಂದ್ಯಗಳ ಫಲಿತಾಂಶದ ನಂತರ ನಾಲ್ಕು ಅಂಕಗಳೊಂದಿಗೆ, ಬೆಂಗಳೂರು ತಂಡವು ಸಿ ಗುಂಪಿನ ಅಗ್ರಸ್ಥಾನದಲ್ಲಿದೆ. ಈ ಮಧ್ಯೆ ಕೇರಳ ಬ್ಲಾಸ್ಟರ್ಸ್ ಮತ್ತು ಇಂಡಿಯನ್ ನೇವಿ ತಂಡಗಳು ತಲಾ ಮೂರು ಅಂಕಗಳನ್ನು ಪಡೆದಿವೆ.
“ನಾವು ಪಂದ್ಯಗಳನ್ನು ಗೆಲ್ಲಲೆಂದೇ ಆಟಕ್ಕೆ ಹೋಗುತ್ತೇವೆ. ಬೆಂಗಳೂರು ಎಫ್‌ಸಿಯಲ್ಲಿ, ಯಾವಾಗಲೂ ಉತ್ತಮ ಫುಟ್‌ಬಾಲ್ ಆಡಲು ಮತ್ತು ಆಟಗಳನ್ನು ಗೆಲ್ಲಲು ಬಯಸುತ್ತೇವೆ. ಡ್ರಾಗಾಗಿ ಆಡುವುದರಲ್ಲಿ ನಮಗೆ ಇಚ್ಛೆಯಿಲ್ಲ. ಈ ತಂಡವು ಇಲ್ಲಿಯವರೆಗೆ ನೀಡಿರುವ ಪ್ರದರ್ಶನ ನನಗೆ ತುಂಬಾ ಸಂತೋಷ ತಂದಿದೆ. ನಾವು ಮಂಗಳವಾರದಂದು ಪಿಚ್‌ಗೆ ಉತ್ಕೃಷ್ಟ ಪ್ರದರ್ಶನ ನೀಡುವ ನಂಬಿಕೆಯಿಂದಲೇ ಕಾಲಿರುಸಲಿದ್ದೇವೆ”. ಎಂದು ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮೂಸಾ ಹೇಳಿದರು.
ಸಧ್ಯ ಮೂರು ಅಂಕ ಗಳಿಸಿರುವ ಇಂಡಿಯನ್ ನೇವಿ ಈ ಹಿಂದೆ ತನ್ನ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ದೆಹಲಿ ಎಫ್‌ಸಿಯನ್ನು 2-1 ಗೋಲುಗಳಿಂದ ಸೋಲಿಸಿತ್ತು, ನಂತರ ಕೇರಳ ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ 1-0 ಹಿನ್ನಡೆಯನ್ನು ಅನುಭವಿಸಿತ್ತು. ಗುಂಪಿನ ಪ್ರತಿಯೊಂದು ತಂಡವು ಈಗ ಮುಂದಿನ ಹಂತದ ಹಣಾಹಣಿಗೆ ಅವಕಾಶವನ್ನು ಪಡೆಯಬೇಕಾದರೆ ಅಂಕಗಳ ಲೆಕ್ಕಾಚಾರದ ಹಿಂದೆ ಬೀಳಲೇಬೇಕಿದೆ. ಮುಂದಿನ ಹಂತಕ್ಕೆ ತಾವು ಮುನ್ನಡೆಯಲು ಗೆಲುವು ಅತ್ಯಗತ್ಯವಾಗಿರುವ ಸೇನಾ ಪಡೆಯ ವಿರುದ್ಧ ಕಠಿಣ ಪಂದ್ಯವನ್ನು ನಿರೀಕ್ಷಿಸುತ್ತಿರುವುದಾಗಿಯೂ ಮೂಸಾ ಹೇಳಿದರು.
“ಇಂಡಿಯನ್ ನೇವಿಯ ತಂತ್ರಗಳು ಮತ್ತು ದೈಹಿಕ ದೃಢತೆಯನ್ನು ನೋಡಿದಾಗ ಅದೊಂದು ಪ್ರಬಲ ತಂಡವಾಗಿ ಕಾಣುತ್ತದೆ. ಪಿಚ್ ಪರಿಸ್ಥಿತಿಗಳನ್ನು ಗಮನಿಸಿ ನೋಡಿದರೆ ನಮ್ಮ ಹುಡುಗರು ಉತ್ತಮವಾಗಿಯೇ ಆಡಿದ್ದಾರೆ ಮತ್ತು ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಇತರ ತಂಡಗಳು ವಿದೇಶಿಯರನ್ನು ಕಣಕ್ಕಿಳಿಸಿದ್ದರೂ ನಾವು ಉತ್ತಮ ಪ್ರದರ್ಶನವನ್ನೇ ನೀಡಿದ್ದೇವೆ. ನಾವು ತಂಡವಾಗಿ ಹೆಚ್ಚು ಒಗ್ಗಟ್ಟಾಗಿರುವುದು ಅಗತ್ಯವಿದೆ ಮತ್ತು ನಾವು ಆ ಅಂಶದಲ್ಲಿ ಸುಧಾರಣೆ ಕಂಡಿದ್ದೇವೆ. ದಮೈತ್‌ಫಾಂಗ್ [ಲಿಂಗ್‌ಡೋ], ಶಿವಶಕ್ತಿ [ನಾರಾಯಣನ್] ಮತ್ತು ಇತರ ಆಟಗಾರರು ತಮ್ಮ ಸಧ್ಯದ ಸ್ಥಿತಿ ಲೆಕ್ಕಕ್ಕೆ ಬರುವುದಿಲ್ಲ ಆದರೆ ಖಂಡಿತ ಪಿಚ್‌ನಲ್ಲಿದ್ದಾಗ ಉತ್ತಮವಾಗಿಯೇ ಕಾರ್ಯನಿರ್ವಹಿಸಿ ತೋರಿಸುತ್ತೇವೆ ಎಂಬಂತೆ ಪ್ರದರ್ಶನ ನೀಡಿದ್ದಾರೆ ಅಂತ ಹೇಳಬಹುದು.” ಎಂದು ಮೂಸಾ ವಿವರಿಸಿದರು.
ಬ್ಲೂಸ್ ಈ ಟೂರ್ನಿಯಲ್ಲಿ ಅಂಗಳಕ್ಕಿಳಿದ ಅತ್ಯಂತ ಕಿರಿಯ ತಂಡ ಎನಿಸಿದರೂ, ಸಿ ಗುಂಪಿನ ಈವರೆಗಿನ ಪಂದ್ಯಗಳಲ್ಲಿ ಅಜೇಯವಾಗಿರುವ ಏಕೈಕ ತಂಡವಾಗಿಯೂ ಉಳಿದಿದೆ ಎಂದರೆ ತಪ್ಪಾಗಲಾರದು. ಆರಂಭಿಕ ಪಂದ್ಯದಲ್ಲಿ ಕೇರಳ ವಿರುದ್ಧ 2-0 ಅಂತರದ ಗೆಲುವಿನ ನಂತರ ಶನಿವಾರದಂದು ದೆಹಲಿ ಎಫ್‌ಸಿ ವಿರುದ್ಧ 2-2 ಅಂಕಗಳೊಂದಿಗೆ ಡ್ರಾ ಸಾಧಿಸಿದೆ.
“ಈ ಕ್ಲಬ್‌ನಲ್ಲಿ, ಅಕಾಡೆಮಿಯ ಕಲಿಕೆಯೊಂದಿಗೆ ಯುವ ಆಟಗಾರರು ಬರಬೇಕೆಂಬುದು ನಮ್ಮ ಮೂಲಯೋಚನೆಯಾಗಿದೆ ಮತ್ತು ನಾವು ಯುವ ತಂಡಗಳಿಂದ ಮೀಸಲು ತಂಡದವರೆಗೆ ಆಟಗಾರರನ್ನು ಸಿದ್ಧಗೊಳಿಸುವ ಕೆಲಸದಲ್ಲಿ ನಂಬಿಕೆ ಹೊಂದಿದ್ದೇವೆ. ಮ್ಯಾನೇಜ್‌ಮೆಂಟ್, ಕೋಚ್‌ಗಳು ಮತ್ತು ಅಭಿಮಾನಿಗಳು ಕೂಡ ಈ ಆಲೋಚನೆಯನ್ನೇ ನಂಬುತ್ತಾರೆ. ಮುಖ್ಯ ತರಬೇತುದಾರ ಮಾರ್ಕೊ (ಪೆಜೈಯುಲಿ) ಕೂಡ ಕೋಲ್ಕತ್ತಾದಲ್ಲಿ ನಮ್ಮ ಹುಡುಗರು ಪ್ರದರ್ಶನ ನೀಡುತ್ತಿರುವ ರೀತಿಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ ಮತ್ತು ನಾವು ಆಟಗಾರರ ಪ್ರದರ್ಶನಗಳನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದೇವೆ ಎಂದು ಮೂಸಾ ಹೇಳಿದರು.
ಬೆಂಗಳೂರು ಎಫ್‌ಸಿ ಮತ್ತು ಇಂಡಿಯನ್ ನೇವಿ ತಂಡಗಳ ನಡುವಿನ ಪಂದ್ಯ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದ್ದು, ನೇರಪ್ರಸಾರವನ್ನು ಅಡ್ಡಟೈಮ್ಸ್ ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ವೀಕ್ಷಿಸಬಹುದು.