ಮಾಲ್ಡೀವ್ಸ್‌ನಲ್ಲಿ ಕ್ಲಬ್ ಈಗಲ್ಸ್ ವಿರುದ್ಧ ಎಎಫ್‌ಸಿ ಕಪ್ ಅರ್ಹತಾ ಪಂದ್ಯ ಆಡಲು ಮತ್ತೆ ಸಜ್ಜಾದ ಬ್ಲೂಸ್

ಧಿವೇಹಿ ಪ್ರೀಮಿಯರ್ ಲೀಗ್ ಬಣವು ಮಾರ್ಕೊ ಪೆಜೈಯುಲಿ ಹುಡುಗರ ಗೆಲುವಿನ ರಹದಾರಿ ಮತ್ತು ಮುಂದಿನ ಹಂತದ ಪಂದ್ಯಗಳ ಅರ್ಹತೆಗೆ ಅಡ್ಡಲಾಗಿದ್ದಾರೆ.

ಭಾನುವಾರದಂದು ಬೆಂಗಳೂರು ಎಫ್‌ಸಿ ತಂಡವು ಮೇಲ್ ನ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಾಲ್ಡೀವಿಯನ್ ಪಡೆಯಾದ ಕ್ಲಬ್ ಈಗಲ್ಸ್ ವಿರುದ್ಧ ಆಡಲಿದ್ದು, 2021ರ ಎಎಫ್‌ಸಿ ಕಪ್‌ನ ಗುಂಪು ಹಂತದ ಪಂದ್ಯಗಳಿಗೆ ಅರ್ಹತೆ ಪಡೆಯಲು ಈ ಪಂದ್ಯದ ಮೂಲಕ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲಿದ್ದಾರೆ. ಈ ಪಂದ್ಯದ ಗೆಲುವು ಮಾರ್ಕೊ ಪೆಜೈಯುಲಿ ನೇತೃತ್ವದ ತಂಡವನ್ನು ಕಾಂಟಿನೆಂಟಲ್ ಸ್ಪರ್ಧೆಯ ಗ್ರೂಪ್ ಡಿ ಗೆ ಕರೆದೊಯ್ಯಲಿದ್ದು, ಅಲ್ಲಿ ಎಟಿಕೆ ಮೋಹನ್ ಬಗಾನ್, ಬಸುಂಧರಾ ಕಿಂಗ್ಸ್ ಮತ್ತು ಮಜಿಯಾ ಎಸ್ & ಆರ್ಸಿ ತಂಡಗಳೊಂದಿಗೆ ಸ್ಥಾನ ಪಡೆಯಲಿದೆ.

ತ್ರಿಭುವನ್ ಆರ್ಮಿ ಎಫ್‌ಸಿ ವಿರುದ್ಧ ಎರಡನೇ ಹಂತದ ಪ್ರಿಲಿಮ್ನರಿ ಪಂದ್ಯದ 5-0 ಅಂತರದ ಗೆಲುವಿನೊಂದಿಗೆ ಪ್ರವೇಶ ಪಡೆದ ಬೆಂಗಳೂರು, ವಾರದ ಹಿಂದೆಯಷ್ಟೇ ಮಾಲ್ಡೀವ್ಸ್‌ ತಲುಪಿತು ಮತ್ತು ಪಂದ್ಯಕ್ಕಾಗಿ ಸಿದ್ಧತೆಗಳನ್ನು ಆರಂಭಿಸಿತ್ತು. ಈ ಪಂದ್ಯದಲ್ಲಿ ಬ್ಲೂಸ್ ತನ್ನ ಎದುರಾಳಿ ಈಗಲ್ಸ್‌ ತಂಡವನ್ನು ಹಿಮ್ಮೆಟ್ಟಿದರೇ, ಆಗಸ್ಟ್ 18ರ ಬುಧವಾರದಂದು ಗ್ರೂಪ್ ಡಿ ಯ ಆರಂಭದ ಪಂದ್ಯದಲ್ಲಿ ಎಟಿಕೆ ಮೋಹನ್ ಬಗಾನ್ ಅನ್ನು ತಂಡವು ಎದುರಿಸಲಿದೆ.

“ಆಡಲು ಇದು ಸುಲಭದ ಪರಿಸ್ಥಿತಿಯಲ್ಲ. ನಾವು ಈ ಪಂದ್ಯಕ್ಕಾಗಿ ಎರಡನೇ ಬಾರಿ ತಯಾರಿ ನಡೆಸುತ್ತಿದ್ದೇವೆ. ಬಳ್ಳಾರಿಯ ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್‌ನಲ್ಲಿ ನಾಲ್ಕು ವಾರಗಳ ಉತ್ತಮ ತಯಾರಿ ನಡೆಸಿದ್ದೇವೆ, ಅಲ್ಲಿ ನಾವು ಬಯೋ ಬಬಲ್ ಅಲ್ಲಿ ಉಳಿದುಕೊಂಡಿದ್ದೆವು. ಅದೊಂದು ಉತ್ತಮ ಸೌಲಭ್ಯಗಳನ್ನೊಳಗೊಂಡ ಅದ್ಭುತವಾದ ಮೈದಾನವಾಗಿತ್ತು ಮತ್ತು ಈಗ ನಾವು ಇನ್ನೊಂದು ಬಯೋ ಬಬಲ್ ಅಲ್ಲಿ ಮಾಲ್ಡೀವ್ಸ್‌ನಲ್ಲಿದ್ದೇವೆ. ” ಎಂದು ಪಂದ್ಯದ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೆಜೈಯುಲಿ ಹೇಳಿದರು.

ಬ್ಲೂಸ್ ತಮ್ಮ ಎಎಫ್‌ಸಿ ಕಪ್‌ ಹಿನ್ನೆಲೆಯಲ್ಲಿ ಡಿಫೆಂಡರ್ ಅಲನ್ ಕೋಸ್ಟಾ ಮತ್ತು ಯೋರಂಡು ಮುಸಾವು-ಕಿಂಗ್ ಸೇರಿದಂತೆ ಏಳು ಆಟಗಾರರೊಂದಿಗೆ ಹೊಸ ಒಪ್ಪಂದಗಳನ್ನು ಮಾಡಿಕೊಂಡಿತ್ತು ಅವರೊಂದಿಗೆ ಕ್ಲಬ್‌ನ ಡೆವೆಲಪ್ಮೆಂಟಲ್ ತಂಡದಿಂದ ನಾಲ್ವರು ಆಟಗಾರರಿಗೂ ಸ್ಥಾನ ದೊರೆತಿದೆ.

“ಕ್ಲಬ್ ಈಗಲ್ಸ್ ವಿರುದ್ಧದ ಪಂದ್ಯಕ್ಕಾಗಿ ಕೆಲವು ಆಟಗಾರರು ಲಭ್ಯವಿರುವುದಿಲ್ಲ. ಪ್ರಿನ್ಸ್ ಇಬಾರಾಗೆ ಇನ್ಫೆಕ್ಷನ್ ಇದೆ ಮತ್ತು ಅವರು ತಂಡವನ್ನು ಸೇರಿಕೊಂಡಿಲ್ಲ, ಎಡ್ಮಂಡ್ ಲಾಲ್ರಿಂಡಿಕಾ ಬೆನ್ನಿನ ಗಾಯದಿಂದಾಗಿ ಹೊರಗೆ ಉಳಿದಿದ್ದಾರೆ, ಹರ್ಮನ್‌ಪ್ರೀತ್ ಸಿಂಗ್‌ ಸ್ನಾಯು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ನನಗೆ 26 ಆಟಗಾರರು ಆಯ್ಕೆಗಾಗಿ ಲಭ್ಯವಿದ್ದಾರೆ ಮತ್ತು ನಾವು ಈ ಸ್ಪರ್ಧೆಯ ಮುಂದಿನ ಹಂತಕ್ಕೆ ಹೋಗಲು ಸಿದ್ಧರಾಗುತ್ತೇವೆ,” ಎಂದು ಅವರು ವಿವರಿಸಿದರು.

ಈಗಲ್ಸ್ ತಮ್ಮ ಮೊದಲ ಎಎಫ್‌ಸಿ ಕಪ್ ಅಭಿಯಾನದಲ್ಲಿ, ಅಬಹಾನಿ ಡಾಕಾ ಹಿಂತೆರಳುವಿಕೆಯಿಂದಾಗಿ ಸ್ಪರ್ಧೆಯ ಪ್ಲೇಆಫ್ ಸುತ್ತಿಗೆ ಪ್ರವೇಶ ಪಡೆದರು. ಮುಖ್ಯ ಕೋಚ್ ಮೊಹಾಮದ್ ಶಾಜ್ಲಿ ನೇತೃತ್ವದ ತಂಡವು ಪ್ರಾಥಮಿಕ ಹಂತ 1 ರ ಪಂದ್ಯದಲ್ಲಿ 2-0 ಗೋಲುಗಳಿಂದ ತಿಮ್ಪು ಸಿಟಿ ವಿರುದ್ಧ ಜಯ ಸಾಧಿಸಿತ್ತು, ಹಾಸನ ಅಹ್ಮದ್ ಮತ್ತು ಮೊಹಮ್ಮದ್ ನಯೀಮ್ ಆ ತಂಡದ ಪರ ಗೋಲ್ ದಾಖಲಿಸಿದ್ದರು. ಇತ್ತೀಚೆಗೆ ಮುಗಿದ ಲೀಗ್ ಸೀಸನ್‌ನಲ್ಲಿ, ಈಗಲ್ಸ್ ನಾಲ್ಕು ಗೆಲುವುಗಳು, ಐದು ಸೋಲುಗಳು ಮತ್ತು ಐದು ಡ್ರಾಗಳೊಂದಿಗೆ ನಾಲ್ಕನೇ ಸ್ಥಾನ ಅಲಂಕರಿಸಿದೆ.

“ನಾವು ಕೊನೆಗೂ ಪಂದ್ಯವನ್ನು ಆಡಲಿರುವುದಕ್ಕಾಗಿ ನಿಜವಾಗಿಯೂ ಕೃತಜ್ಞರಾಗಿದ್ದೇವೆ ಮತ್ತು ನಾವು ಪಂದ್ಯಕ್ಕಾಗಿ ಎದುರು ನೋಡುತ್ತಿದ್ದೇವೆ. ನಾವು ನಮ್ಮ ತಂಡದ ಮೇಲೆ ಗಮನ ಹರಿಸುತ್ತಿದ್ದೇವೆ, ಮತ್ತು ಆಟಗಾರರಾಗಿ ನಾವೆಲ್ಲರೂ ಆಡುವ ಹನ್ನೊಂದು ಆಟಗಾರರ ತಂಡದಲ್ಲಿ ಸ್ಥಾನ ಗಳಿಸಲು ಶ್ರಮಿಸುತ್ತಿದ್ದೇವೆ ಮತ್ತು ಉತ್ಸುಕರಾಗಿದ್ದೇವೆ. ನಮ್ಮ ತರಬೇತುದಾರರಿಗೆ ಆಟಗಾರರ ಆಯ್ಕೆ ತಲೆನೋವಾಗಬಹುದು. ಕಳೆದ ಆವೃತ್ತಿಯಲ್ಲಿ ಮಜಿಯಾ ವಿರುದ್ಧ ಸೋತ ನಂತರ, ಉತ್ತಮ ಪ್ರದರ್ಶನ ನೀಡದ ಕಾರಣ ಅಷ್ಟೇನು ಆರಾಮಾಗಿ ಇರಲು ಆಗಿರಲಿಲ್ಲ. ಆದರೆ ಇದೊಂದು ಹೊಸ ಅಭಿಯಾನವಾಗಿದೆ ಮತ್ತು ನಾವು ನಮ್ಮ ಅತ್ಯುತ್ತಮ ಪ್ರದರ್ಶನ ತೋರಲು ಪ್ರಯತ್ನಿಸುತ್ತೇವೆ “, ಎಂದು ಬ್ಲೂಸ್ ತಂಡದ ನಾಯಕ ಸುನಿಲ್ ಛೇತ್ರಿ ತಿಳಿಸಿದರು.

ಮಾಲ್ಡೀವ್ಸ್‌ನ ನ್ಯಾಷನಲ್ ಸ್ಟೇಡಿಯಂನಲ್ಲಿ ಬ್ಲೂಸ್ ಮತ್ತು ಕ್ಲಬ್ ಈಗಲ್ಸ್ ನಡುವಿನ ಪಂದ್ಯ ರಾತ್ರಿ 8.30 ಕ್ಕೆ ಆರಂಭವಾಗಲಿದೆ.

Malcare WordPress Security