ಯುವ ಭಾರತೀಯ ಮಿಡ್‌ಫೀಲ್ಡರ್ ಮೂರು ವರ್ಷಗಳ ಹೊಸ ಒಪ್ಪಂದಕ್ಕೆ ಸಹಿ; 2023-24ರ ಪಂದ್ಯಾವಳಿಯವರೆಗೆ ಕ್ಲಬ್ ಪರ ಆಡುವ ಯೋಜನೆ.
ಕ್ಲಬ್‌ನೊಂದಿಗಿನ ಪ್ರಸ್ತುತ ಒಪ್ಪಂದವನ್ನು ವಿಸ್ತರಿಸಿದ ಮಿಡ್‌ಫೀಲ್ಡರ್ ಸುರೇಶ್ ವಾಂಗ್ಜಾಮ್ ಮೂರು ವರ್ಷಗಳ ಹೊಸ ಒಪ್ಪಂದಕ್ಕೆ ಸಹಿ ಮಾಡಿರುವುದಾಗಿ ಬೆಂಗಳೂರು ಎಫ್‌ಸಿ ಬುಧವಾರ ಪ್ರಕಟಿಸಿದೆ. 2023-24ರ ಅಭಿಯಾನದ ಅಂತ್ಯದವರೆಗೆ 20ರ ಹರೆಯದ ಈ ಆಟಗಾರ ಕ್ಲಬ್ ಪರ ಹೊಸ ಒಪ್ಪಂದಕ್ಕೆ ಸಹಿಮಾಡಿದ್ದು, ನಾಯಕ ಸುನಿಲ್ ಛೇತ್ರಿ ಅವರ ನಂತರ ತಂಡದೊಂದಿಗೆ ಒಪ್ಪಂದವನ್ನು ನವೀಕರಿಸಿಕೊಂಡ ಎರಡನೇ ಆಟಗಾರ ಎನಿಸಿದ್ದಾರೆ.
2019 ರಲ್ಲಿ ಬ್ಲೂಸ್ ಪರ ಆಡಲು ಆರಂಭಿಸಿದ ಮಣಿಪುರ ಮೂಲದ ವಾಂಗ್ಜಾಮ್, ಅದೇ ವರ್ಷದಲ್ಲಿ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಪಾದಾರ್ಪಣೆ ಮಾಡುವ ಮುನ್ನ ಕ್ಲಬ್‌ನ ರಿಸರ್ವ್ ತಂಡವನ್ನು ಪ್ರತಿನಿಧಿಸಿದ್ದರು. ಅಂದಿನಿಂದ ಮಾಜಿ ಇಂಡಿಯನ್ ಆರೋಸ್ ಆಟಗಾರ ಬೆಂಗಳೂರು ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು, ಎಎಫ್‌ಸಿ ಕಪ್‌ನ ಆರಂಭಿಕ ಪಂದ್ಯಗಳ ಜೊತೆಗೆ ಲೀಗ್‌ನಲ್ಲಿ 30 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.
“ನನ್ನ ಭವಿಷ್ಯವನ್ನು ಬೆಂಗಳೂರು ಎಫ್‌ಸಿ ತಂಡದೊಂದಿಗೆ ಕಂಡುಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ. ನಾನು ಎರಡು ವರ್ಷಗಳ ಹಿಂದೆ ತಂಡವನ್ನು ಸೇರಿಕೊಂಡಿದ್ದೆ ಮತ್ತು ನನ್ನ ತಂಡದ ಸದಸ್ಯರು ಹಾಗೂ ನನ್ನ ಸುತ್ತಲೂ ಇರುವ ಸಿಬ್ಬಂದಿಯಿಂದಾಗಿ ನಾನು ಆಟಗಾರನಾಗಿ ಮಹತ್ತರವಾಗಿ ಸುಧಾರಿಸಿದ್ದೇನೆ. ಕಲಿಯಲು ನನಗೆ ಇಲ್ಲಿ ಬಹಳಷ್ಟಿದೆ ಮತ್ತು ಅದನ್ನು ಮುಂದುವರೆಸಲು ನನಗೆ ಇದು ಅತ್ಯುತ್ತಮ ಸ್ಥಳವಾಗಿದೆ. ನಮ್ಮ ಅಭಿಮಾನಿಗಳಿಂದ ನಾನು ಸಾಕಷ್ಟು ಪ್ರೀತಿ ಮತ್ತು ಮೆಚ್ಚುಗೆಯನ್ನು ಪಡೆದಿದ್ದೇನೆ ಮತ್ತು ನಾನು ಅವರಿಗಾಗಿ ಒಳ್ಳೆಯ ಪ್ರದರ್ಶನ ನೀಡಲು ಬಯಸುತ್ತೇನೆ. ಹಾಗೂ ತಂಡದೊಂದಿಗೆ ಆಡುವ ಒಪ್ಪಂದ ಮಾಡಿಕೊಂಡಿದ್ದು ನನಗೆ ಸುಲಭದ ನಿರ್ಧಾರವಾಗಿತ್ತು” ಎಂದು ವಾಂಗ್ಜಮ್ ಹೇಳಿದರು.
ಮಾರ್ಚ್ ತಿಂಗಳಲ್ಲಿ ರಾಷ್ಟ್ರೀಯ ತಂಡಕ್ಕೆ ಮೊದಲ ಬಾರಿಗೆ ಆಯ್ಕೆಯಾದ ವಾಂಗ್ಜಮ್, ಆ ತಿಂಗಳ ಕೊನೆಯಲ್ಲಿ ಓಮನ್ ವಿರುದ್ಧ ಬ್ಲೂ ಟೈಗರ್ಸ್ ಪರ ಚೊಚ್ಚಲ ಪಂದ್ಯದಲ್ಲಿ ಕಾಣಿಸಿಕೊಂಡರು. 2017 ರಲ್ಲಿ ನಡೆದ ಫಿಫಾ ಯು 17 ವಿಶ್ವಕಪ್‌ನಲ್ಲಿ ಭಾರತೀಯ ಯು 17 ತಂಡವನ್ನು ಪ್ರತಿನಿಧಿಸಿದ ವಾಂಗ್ಜಮ್, ಇಗೊರ್ ಸ್ಟಿಮ್ಯಾಕ್‌ನ 2023 ಎಎಫ್‌ಸಿ ಏಷ್ಯನ್ ಕಪ್ ಅರ್ಹತಾ ಅಭಿಯಾನದಲ್ಲಿ ನಿರಂತರವಾಗಿ ಆಡುವ ಅವಕಾಶ ಪಡೆದಿದ್ದರು, ಅದೇ ತಿಂಗಳ ಆರಂಭದಲ್ಲಿ ದೋಹಾದಲ್ಲಿ ನಡೆದ ಮೂರೂ ಪಂದ್ಯಗಳಲ್ಲಿ ಸ್ಥಾನ ಪಡೆದಿದ್ದರು.
“ನಾವು ಮೊದಲು ಸಹಿ ಮಾಡಿದಾಗಿನಿಂದ ಸುರೇಶ್ ಒಬ್ಬ ಆಟಗಾರನಾಗಿ ಮತ್ತು ವ್ಯಕ್ತಿಯಾಗಿ ಅದ್ಭುತವಾಗಿ ಬೆಳೆದಿದ್ದಾರೆ ಮತ್ತು ನಾವು ಅವರನ್ನು ಈ ಕ್ಲಬ್‌ನಲ್ಲಿ ಉಳಿಸಿಕೊಳ್ಳಲು ಯಾವಾಗಲೂ ಉತ್ಸುಕರಾಗಿದ್ದೆವು. ಉಜ್ವಲ ಭವಿಷ್ಯವನ್ನು ಅವರು ಹೊಂದಿದ್ದಾರೆ ಮತ್ತು ಅವರು ತಮ್ಮ ಮುಂದಿನ ಹಂತದ ಬೆಳವಣಿಗೆಯನ್ನು ನಮ್ಮೊಂದಿಗೆ ಕಾಣಲಿದ್ದಾರೆ ಎಂಬುದು ನಮಗೆ ಸಂತಸ ತಂದಿದೆ. ಹಿರಿಯರ ರಾಷ್ಟ್ರೀಯ ತಂಡದಲ್ಲಿ ಸ್ಥಿರ ಪ್ರದರ್ಶನ ಕಾಯ್ದುಕೊಂಡು ತಂಡದಲ್ಲಿ ಸ್ಥಾನಪಡೆದ, 2017 ರ ಫಿಫಾ U17 ವಿಶ್ವಕಪ್‌ನಲ್ಲಿ U17 ತಂಡದಿಂದ ಹೊರಹೊಮ್ಮಿದ ಕೆಲವೇ ಆಟಗಾರರಲ್ಲಿ ಸುರೇಶ್ ಕೂಡ ಒಬ್ಬರು. ಇದು ಯುವ ಆಟಗಾರನ ಮೇಲಿನ ನಮ್ಮ ನಂಬಿಕೆ ಮತ್ತು ನಮ್ಮ ಆಟಗಾರರ ಅಭಿವೃದ್ಧಿ ಹಾದಿಯ ಕಾರ್ಯಾಗಾರಗಳ ಯಶಸ್ಸನ್ನು ಪುನರುಚ್ಚರಿಸುತ್ತದೆ ಎಂದು ಕ್ಲಬ್ ಸಿಇಒ ಮಂದಾರ್ ತಮ್ಹಾನೆ ಹೇಳಿದರು.