ಮಾರ್ಕೊ ಪೆಜಯುಲಿ ಬೆಂಗಳೂರು ಎಫ್‌ಸಿಯ ಹೊಸ ಮುಖ್ಯ ತರಬೇತುದಾರರಾಗಿ ನೇಮಕ

ಇಟಲಿಯ ಅನುಭವಿ ತರಬೇತುದಾರ ಏಪ್ರಿಲ್‌ನಲ್ಲಿ ಆರಂಭವಾಗಲಿರುವ ಎಎಫ್‌ಸಿ ಕಪ್ ಪ್ರಾಥಮಿಕ ಹಂತದ ಪಂದ್ಯಗಳಿಂದ ಬ್ಲೂಸ್‌ನ ಚುಕ್ಕಾಣಿ ಹಿಡಿದು ಮಾರ್ಗದರ್ಶನ ನೀಡಲಿದ್ದಾರೆ.

ಬೆಂಗಳೂರು ಎಫ್‌ಸಿ ಕ್ಲಬ್ ಮುಖ್ಯ ತರಬೇತುದಾರರಾಗಿ ಮಾರ್ಕೊ ಪೆಜಯುಲಿ ಮೂರು ವರ್ಷಗಳ ಕಾರ್ಯಕ್ಷಮತೆ ಆಧಾರಿತ ಒಪ್ಪಂದದ ಮೇಲೆ 2023-24ರ ಆವೃತ್ತಿಯ ಅಂತ್ಯದವರೆಗೆ ನೇಮಕಗೊಂಡಿರುವುದಾಗಿ ಬ್ಲೂಸ್ ಗುರುವಾರ ಪ್ರಕಟಿಸಿದೆ. ಜರ್ಮನ್ ಮೂಲದವರಾದ ಇಟಲಿಯ ಪೆಜಯುಲಿ ಅವರ ಮೊದಲ ಜವಾಬ್ದಾರಿ ಏಪ್ರಿಲ್ 14 ರಂದು ನಡೆಯುವ ಎಎಫ್‌ಸಿ ಕಪ್ನ ಪ್ರಾಥಮಿಕ ಹಂತದ ಎರಡು ಪಂದ್ಯಗಳಲ್ಲಿ ಬೆಂಗಳೂರನ್ನು ಮುನ್ನಡೆಸುವುದಾಗಿದೆ. ಐವತ್ತೆರಡು ವರ್ಷದ ಇವರು ಇತ್ತೀಚಿಗೆ ಬುಂಡೆಸ್ಲಿಗಾ ತಂಡದ ಐನ್ಟ್ರಾಕ್ಟ್ ಫ್ರಾಂಕ್‌ಫರ್ಟ್ ಅವರೊಂದಿಗೆ ತಾಂತ್ರಿಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ನೇಮಕಾತಿಯ ಬಗ್ಗೆ ನಿರ್ದೇಶಕ ಪಾರ್ತ್ ಜಿಂದಾಲ್ ಪ್ರತಿಕ್ರಿಯಿಸಿದರು. “ಮಾರ್ಕೊ ತಮ್ಮೊಂದಿಗೆ ಯುರೋಪ್ ಮತ್ತು ಏಷ್ಯಾದ ಉನ್ನತ ಶ್ರೇಣಿಯ ಕ್ಲಬ್‌ಗಳೊಂದಿಗಿನ ಕೆಲಸ ನಿರ್ವಹಿಸಿದ ಅಪಾರ ಅನುಭವವನ್ನು ತರುತ್ತಾರೆ, ಜೊತೆಗೆ ಜರ್ಮನ್ ರಾಷ್ಟ್ರೀಯ ತಂಡದ ಬೇರೆ ಬೇರೆ ವಯೋಮಾನದೊಂದಿಗಿನ ಗಮನಾರ್ಹ ಅನುಭವ ತರಲಿದ್ದಾರೆ. ಅವರನ್ನು ನೇಮಕ ಮಾಡಲು ನಮ್ಮನ್ನು ಸೆಳೆದ ಅಂಶಗಳೆಂದರೆ ಅವರ ಉದ್ದೇಶ, ಸಂಘಟನ ಶಕ್ತಿ ಮತ್ತು ಬೆಂಗಳೂರು ಎಫ್‌ಸಿಯನ್ನು ನಾವು ಎಲ್ಲಿಗೆ ಹಿಂತಿರುಗಿಸಲು ಬಯಸಿದ್ದೇವೆಯೋ ಅಲ್ಲಿಗೆ ಕೊಂಡೊಯ್ಯಲು ಅವರಿಗೆ ಇರುವ ಚಿಂತನೆಯಲ್ಲಿನ ಸ್ಪಷ್ಟತೆ ಇವು ಕಾರಣವಾಗಿವೆ. ನಮ್ಮ ಮಹತ್ವಾಕಾಂಕ್ಷೆ – ಎಎಫ್‌ಸಿ ಚಾಂಪಿಯನ್ಸ್ ಲೀಗ್ ಅನ್ನು ಆಡುವುದು ಮತ್ತು ಮಾರ್ಕೊ ನಮ್ಮನ್ನು ಅಲ್ಲಿಗೆ ಕರೆದೊಯ್ಯುವ ದೃಷ್ಟಿ ಮತ್ತು ಶೈಲಿಯನ್ನು ಹೊಂದಿದ್ದಾರೆಂದು ನಾನು ನಂಬುತ್ತೇನೆ. ಹಿರಿಯ ತಂಡವನ್ನು ಹೊರತುಪಡಿಸಿ ನೋಡಿದರೆ, ಯುವ ತಂಡಗಳೊಂದಿಗಿನ ಅವರ ಪರಿಣತಿಯು ನಮ್ಮ ಅಕಾಡೆಮಿಯ ಯಶಸ್ಸನ್ನು ಇನ್ನಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಾರ್ಕೊ ಅವರ ನೇಮಕಾತಿಯು ಕ್ಲಬ್‌ನ ಉದ್ದೇಶಗಳಿಗೆ ಹಿಡಿದ ಕನ್ನಡಿಯಂತಿದೆ ಮತ್ತು ಬೆಂಗಳೂರು ಎಫ್‌ಸಿಯನ್ನು ಮತ್ತೆ ಮೇಲಕ್ಕೆ ತರುವ ಬಗ್ಗೆ ನಾವು ಎಷ್ಟು ಗಂಭೀರವಾಗಿರುತ್ತೇವೆ ಎಂಬುದನ್ನು ತೋರಿಸುತ್ತದೆ. ”

ನೇಮಕಾತಿಯ ಕುರಿತು ಪೆಜಯುಲಿ ಹೀಗೆ ಮಾತನಾಡಿದರು, “ನಾನು ಬೆಂಗಳೂರು ಎಫ್‌ಸಿಯ ಭಾಗವಾಗಲು ತುಂಬಾ ಹೆಮ್ಮೆಪಡುತ್ತೇನೆ ಮತ್ತು ತಂಡವನ್ನು ಮತ್ತೆ ಮೇಲಕ್ಕೆ ತರುವ ಸವಾಲಿನ ಬಗ್ಗೆ ಉತ್ಸುಕನಾಗಿದ್ದೇನೆ. ಜೀವನ ಮತ್ತು ಫುಟ್‌ಬಾಲ್‌ನಲ್ಲಿನ ಅನುಭವಗಳನ್ನು ಸಂಗ್ರಹಿಸಲು ಮತ್ತು ನಾನು ಹೋದಲ್ಲೆಲ್ಲಾ ಒಂದು ಬದಲಾವಣೆಯನ್ನು ತರಲು ಇಂದಿಗೂ ಉತ್ಸುಕನಾಗಿಯೇ ಇರುತ್ತೇನೆ. ಭಾರತದಲ್ಲಿ ಫುಟ್ಬಾಲ್ ಬೆಳೆಯಲು ಸಹಾಯ ಮಾಡುವತ್ತ ನನ್ನ ಅನುಭವವನ್ನು ಹಂಚಿಕೊಳ್ಳಲು ನಾನು ಬಯಸುತ್ತಿದ್ದೇನೆ. ನಾನು ಸಾಧ್ಯವಾದಷ್ಟು ಬೇಗ ತಂಡವನ್ನು ಸೇರಿಕೊಳ್ಳಲು ಎದುರು ನೋಡುತ್ತಿದ್ದೇನೆ. ”

ಕ್ಲಬ್ ಸಿಇಒ, ಮಂದಾರ್ ತಮ್ಹಾನೆ ಅವರ ಮಾತುಗಳೆಂದರೆ, “ನಾವು ಪ್ರಸ್ತುತ ಇಂಡಿಯನ್ ಸೂಪರ್ ಲೀಗ್ನ ಮಧ್ಯದಲ್ಲಿ ಕಾರ್ಲೆಸ್ ಕ್ವಾಡ್ರಾಟ್ ಅವರೊಂದಿಗೆ ಒಪ್ಪಂದ ಕಡಿದುಕೊಂಡ ನಂತರ ಯಾವುದೇ ತರಾತುರಿಯಲ್ಲಿ ಇರಲಿಲ್ಲ. ಕಾರಣ ನಾವು ದೀರ್ಘಾವಧಿಯಲ್ಲಿ ತಂಡಕ್ಕೆ ಅನುಕೂಲವಾಗಬಲ್ಲ ಬದಲಿಯನ್ನು ಹುಡುಕುವಲ್ಲಿ ಆಸಕ್ತರಾಗಿದ್ದೆವು. ಯಾವಾಗಲೂ ಹಾಗೆ, ನಾವು ನಮ್ಮ ಕೆಲಸಗಳಲ್ಲಿ ಪಾರದರ್ಶಕವಾಗಿದ್ದೇವೆ ಮತ್ತು ನಮ್ಮ ದೃಷ್ಟಿಯಲ್ಲಿ ತಂಡವನ್ನು ಮುಂದಕ್ಕೆ ಕೊಂಡೊಯ್ಯಬಹುದಾದ ಮನೋಭಾವದ ವ್ಯಕ್ತಿಯ ಹುಡುಕಾಟದಲ್ಲಿ ಯಶಸ್ವಿಯಾಗಿದ್ದೇವೆ. ನಾವು ಆಲೋಚಿಸಿದ್ದ ಪರಿಪೂರ್ಣವಾದ ನೇಮಕಾತಿಯನ್ನು ಹುಡುಕಿ ಕರೆತರಲು ಸಿದ್ಧರಿದ್ದೆ ವು ಮತ್ತು ಮಾರ್ಕೊ ನಮ್ಮ ಆಲೋಚನೆಗೆ ತಕ್ಕವರೆಂದು ಕಂಡುಕೊಂಡಿದ್ದೇವೆ. ”

ಪೆಜಯುಲಿ ತಮ್ಮ ಕೋಚಿಂಗ್ ವೃತ್ತಿಜೀವನವನ್ನು ಕಾರ್ಲ್ಸ್‌ರುಹರ್ ಎಸ್‌ಸಿಯ ಯುವ ನಿರ್ದೇಶಕರಾಗಿ ಪ್ರಾರಂಭಿಸಿದ್ದರು, ಆದರೆ ಜರ್ಮನಿಯನ್ನು ಹೊರತುಪಡಿಸಿ ಅವರ ಮೊದಲ ಜವಾಬ್ದಾರಿಯು ದಕ್ಷಿಣ ಕೊರಿಯಾದ ಸುವಾನ್ ಸ್ಯಾಮ್‌ಸಂಗ್ ಬ್ಲೂವಿಂಗ್ಸ್ ಎಫ್‌ಸಿಯೊಂದಿಗೆ ಇತ್ತು, ಅಲ್ಲಿ ಅವರು 2004 ರಲ್ಲಿ ಕೆ-ಲೀಗ್ ಮತ್ತು ಕೆ-ಲೀಗ್ ಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ಅವರು ನಂತರ ಜರ್ಮನಿಗೆ ಮರಳಿದರು ಮತ್ತು ಜರ್ಮನ್ ಯುವ ತಂಡಗಳ ಉಸ್ತುವಾರಿ ವಹಿಸಿಕೊಂಡರು. ಮಾರಿಯೋ ಗೊಟ್ಜೆ, ಮಾರ್ಕ್ ಆಂಡ್ರೆ ಟೆರ್ ಸ್ಟೆಗೆನ್, ಶೋಕ್ರಾದನ್ ಮುಸ್ತಾಫಿ ಮತ್ತು ಬರ್ನ್ಡ್ ಲೆನೊ ಅವರನ್ನು ಒಳಗೊಂಡ U17 ತಂಡವು 2009 ರಲ್ಲಿ ಯುರೋಪಿಯನ್ ಚಾಂಪಿಯನ್‌ಶಿಪ್ ಅನ್ನು ಗೆದ್ದುಕೊಂಡಿತ್ತು. 2006ರ ಫಿಫಾ ವಿಶ್ವಕಪ್ ಸಲುವಾಗಿ ಮ್ಯಾಥಿಯಾಸ್ ಸ್ಯಾಮರ್ ಜೊತೆಗೂಡಿ ಅವರು ರಾಷ್ಟ್ರೀಯ ತಂಡಕ್ಕೆ ಹೊಸ ಫುಟ್‌ಬಾಲ್ ತತ್ವಶಾಸ್ತ್ರ ಮತ್ತು ತರಬೇತಿಯ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅವರು ಯುರೋ 2008 ರಲ್ಲಿ ಜರ್ಮನಿಯ ರಾಷ್ಟ್ರೀಯ ತಂಡದ ವಿಶ್ಲೇಷಕರಾಗಿ ಕೆಲಸ ಮಾಡಿದರು.

ನಂತರ ಪೆಜಯುಲಿ ಅವರು ರಾಲ್ಫ್ ರಾಂಗ್ನಿಕ್ ಅವರ ಜೊತೆಗೂಡಿದರು ಟಿ ಎಸ್ ಜಿ ಹಾಫೆನ್‌ಹೈಮ್‌ನಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸಿದರು. ರಾಬರ್ಟ್ ಫರ್ಮಿನೊ, ಗಿಲ್ಫಿ ಸಿಗುರ್ಡ್‌ಸನ್ ಮತ್ತು ಡೇವಿಡ್ ಅಲಬಾ ಅವರಂತಹ ಆಟಗಾರರಿಗೆ ತರಬೇತಿ ನೀಡಿದರು. ಅವರು ಹಾಫೆನ್‌ಹೈಮ್‌ನ ಹಂಗಾಮಿ ತರಬೇತುದಾರರಾಗಿಯೂ ಕಾರ್ಯನಿರ್ವಹಿಸಿದರು ಮತ್ತು ಯುವ ತಂಡವು ಬುಂಡೆಸ್ಲಿಗಾದಿಂದ ಹೊರಬೀಳದಂತೆ ತಪ್ಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಏಷ್ಯಾದಲ್ಲಿ ಅವರ ಅನುಭವವು ಸೆರೆಜೊ ಒಸಾಕಾ (ಜಪಾನ್) ಮತ್ತು ಗುವಾಂಗ್‌ಜೌ ಎವರ್‌ಗ್ರಾಂಡೆ ಎಫ್‌ಸಿ (ಚೀನಾ) ಗಳನ್ನೂ ಒಳಗೊಂಡಿದೆ.

Malcare WordPress Security