ಸೆರ್ಗಿಯೋ ಲೋಬೆರಾ ನೇತೃತ್ವದ ಗೆಲುವುಗಳ ಸರದಾರರಾದ ಮುಂಬೈ ಸಿಟಿ ಎಫ್ ಸಿ ವಿರುದ್ಧ ಗೆಲುವು ಸಾಧಿಸುವತ್ತ ಕ್ವಾಡ್ರಾಟ್ ಹುಡುಗರ ಚಿತ್ತ.
ಮಾರ್ಗಾವಾ: ಕಾರ್ಲೆಸ್ ಕ್ವಾಡ್ರಾಟ್ ಅವರ ಆತಿಥೇಯ ಬೆಂಗಳೂರು ಎಫ್‌ಸಿ ತಂಡ ಮುಂಬೈ ಸಿಟಿ ಎಫ್‌ಸಿ ವಿರುದ್ಧ ಕ್ಯಾಲೆಂಡರ್ ವರ್ಷದ ಮೊದಲ ಪಂದ್ಯವನ್ನು ಮಂಗಳವಾರದಂದು ಗೋವಾದ ಫತೋರ್ಡಾ ಕ್ರೀಡಾಂಗಣದಲ್ಲಿ ಆಡಲಿದೆ. ಎರಡನೇ ಸ್ಥಾನದಲ್ಲಿರುವ ಮುಂಬೈ ಸಿಟಿ ತಂಡದಿಂದ ಏಳು ಪಾಯಿಂಟ್‌ಗಳ ಅಂತರದಲ್ಲಿರುವ ಬೆಂಗಳೂರು ತಂಡ ಪ್ರಸ್ತುತ ಲೀಗ್ ಟೇಬಲ್‌ನಲ್ಲಿ ಐದನೇ ಸ್ಥಾನದಲ್ಲಿದೆ. ಮತ್ತು ಸೆರ್ಗಿಯೋ ಲೋಬೆರಾ ನೇತೃತ್ವದ ತಂಡದ ವಿರುದ್ಧ ಮತ್ತೊಂದು ಉತ್ತಮ ಮುಖಾಮುಖಿಯನ್ನು ನಿರೀಕ್ಷಿಸುತ್ತಿರುವುದಾಗಿ ಸ್ಪೇನ್ ಗುರು ವಿಮರ್ಶಿಸಿದ್ದಾರೆ.
ಸೋಲುಗಳೊಂದಿಗೆ ಬಂದಿರುವ ಬೆಂಗಳೂರು ಈಗ ಲೋಬೇರಾ ಹುಡುಗರ ವಿರುದ್ಧ ಗೆಲುವಿನ ಅಲೆಯೊಂದಿಗೆ ಆವೃತ್ತಿಯಲ್ಲಿ ಹಿಂತಿರುಗುವ ಎಲ್ಲಾ ಸರಿಯಾದ ಗುಣಲಕ್ಷಣಗಳಿವೆ ಎಂದು ಕ್ವಾಡ್ರಾಟ್ ಸಕಾರಾತ್ಮಕವಾಗಿ ನುಡಿದಿದ್ದಾರೆ. “ನಾವು ಕಳೆದುಕೊಂಡ ಎರಡು ಪಂದ್ಯಗಳನ್ನು ವಿಶ್ಲೇಷಿಸಿದರೆ, ನಾವು ಅವೆರಡರಿಂದಲೂ ಅಂಕಗಳನ್ನು ಪಡೆಯಬಹುದಿತ್ತು. ನಾವು ಹಲವಾರು ಉತ್ತಮ ಅವಕಾಶಗಳನ್ನು ಪಡೆದಿದ್ದೆವು ಮತ್ತು ಅದು ಸಕಾರಾತ್ಮಕ ವಿಷಯ. ಗೋಲು ಪಡೆಯಲು ನಾವು ಹಲವಾರು ಸಾಧ್ಯತೆಗಳನ್ನು ಹೊಂದಿದ್ದೆವು ಮತ್ತು ಕೇವಲ ಒಬ್ಬ ಆಟಗಾರನನ್ನು ಅವಲಂಬಿಸುವುದಕ್ಕಿಂತ ವಿಭಿನ್ನ ಆಟಗಾರರನ್ನು ನಾವು ಹೊಂದಿರುವುದು ವಿಶೇಷ. ಫುಟ್ಬಾಲ್ ಚಲನಶೀಲವಾದ ಆಟವಾಗಿದೆ ಮತ್ತು ನಾಳೆ ಚೈತನ್ಯಯುತವಾಗಿ ಆಟವನ್ನು ಬದಲಾಯಿಸಲು ನಾವು ಪ್ರಯತ್ನಿಸುತ್ತೇವೆ.”
ಶನಿವಾರ ಕೇರಳ ಬ್ಲಾಸ್ಟರ್ಸ್ ವಿರುದ್ಧ 2-0 ಗೋಲುಗಳಿಂದ ಜಯಗಳಿಸಿದ ಮುಂಬೈ ಸಿಟಿ ಎಫ್‌ಸಿ, ಈ ಆವೃತ್ತಿಯಲ್ಲಿ 13 ಬಾರಿ ಸ್ಕೋರ್ ಮಾಡಿದೆ, ಮತ್ತು ಎರಡು ಪಾಯಿಂಟ್‌ಗಳಿಂದ ಅಗ್ರಸ್ಥಾನಕ್ಕೆ ಪೈಪೋಟಿ ನೀಡುವಲ್ಲಿ ಸಕ್ರಿಯವಾಗಿದೆ. ಆದಾಗ್ಯೂ, ಎದುರಾಳಿಯನ್ನು ತಡೆದು ಗೆಲುವಿಗಾಗಿ ಯತ್ನಿಸುವ ಯೋಜನೆಯನ್ನು ಹೊಂದಿರುವುದಾಗಿ ಕ್ವಾಡ್ರಾಟ್ ಉಲ್ಲೇಖಿಸಿದರು. “ಲೋಬೆರಾ ಮತ್ತು ನಾನು ಲೀಗ್ನಲ್ಲಿ ಪರಸ್ಪರ ಸಾಕಷ್ಟು ಬಾರಿ ಆಡಿದ್ದೇವೆ. ಮುಂಬೈ ಪರ ತೆರಳಿದಾಗಿನಿಂದ, ಅವರು ಗೋವಾ ತಂಡಕ್ಕೆ ನೀಡಿದ್ದ ಯಶಸ್ಸನ್ನೇ ತಮ್ಮ ಈಗಿನ ತಂಡಕ್ಕೂ ನೀಡಿದ್ದಾರೆ. ಮುಂಬೈ ಇದೀಗ ಉತ್ತಮ ಸ್ಥಾನದಲ್ಲಿದೆ, ಮತ್ತು ಸ್ಥಿರವಾಗಿ ಅಂಕಗಳನ್ನು ಪಡೆಯಲು ಸಾಧ್ಯವಾಗಿದೆ, ಇದು ಅವರನ್ನು ಪ್ರಬಲ ಎದುರಾಳಿಯನ್ನಾಗಿ ಮಾಡುತ್ತದೆ. ಆದರೆ ನಾವು ನಮ್ಮದೇ ಆದ ಯೋಜನೆಯನ್ನು ಹೊಂದಿದ್ದೇವೆ ಮತ್ತು ಅದನ್ನು ಕಾರ್ಯಗತಗೊಳಿಸಲು ನಾವು ಪ್ರಯತ್ನಿಸುತ್ತೇವೆ. ನಾಳೆ ಎರಡೂ ತಂಡಗಳು ಉತ್ತಮ ಪ್ರದರ್ಶನ ನೀಡಲಿವೆ ಎಂದು ನಾನು ನಿರೀಕ್ಷಿಸುತ್ತಿದ್ದೇನೆ.”
ನಾರ್ತ್‌ಈಸ್ಟ್ ಯುನೈಟೆಡ್ ವಿರುದ್ಧ ತಮ್ಮ ಆರಂಭಿಕ ಪಂದ್ಯವನ್ನು ಕಳೆದುಕೊಂಡ ನಂತರ, ಲೋಬೆರಾ ಹುಡುಗರು ಸರಣಿಯಲ್ಲಿ ಏಳು ಪಂದ್ಯಗಳ ಗೆಲುವಿನೊಂದಿಗೆ ಜಯಶೀಲರಾಗಿಯೇ ಉಳಿದಿದ್ದು, ಅದು ಅವರು ಎರಡನೇ ಸ್ಥಾನದಲ್ಲಿ ಇರಲು ಕಾರಣವಾಗಿದೆ ಮತ್ತು ಅಗ್ರಸ್ಥಾನ ಅಲಂಕರಿಸಿರುವ ಎಟಿಕೆ ಮೋಹನ್ ಬಗಾನ್ ಅವರ ಹಿಂದೆ 2 ಅಂಕಗಳ ವ್ಯತ್ಯಾಸದಲ್ಲಿ ಪ್ರಬಲರಂತೆ ಕಾಣುತ್ತಿದೆ. ಆಡಮ್ ಲೆ ಫೊಂಡ್ರೆ, ಮುಂಬೈ ಪರ ಲೀಗ್‌ನ ಎರಡನೇ ಅತಿ ಹೆಚ್ಚು ಸ್ಕೋರರ್ ಆಗಿದ್ದು, ಬೆಂಗಳೂರಿನ ಬ್ಯಾಕ್‌ಲೈನ್ ಅವರನ್ನು ತಡೆಯುವ ಕೆಲಸದಲ್ಲಿ ಮಗ್ನರಾಗಲಿದ್ದಾರೆ.
ಈ ರೀತಿಯ ಪಂದ್ಯಗಳಲ್ಲಿ ಮೊದಲು ಸ್ಕೋರ್ ಮಾಡುವ ಪ್ರಾಮುಖ್ಯತೆಯನ್ನು ಕ್ವಾಡ್ರಾಟ್ ಒತ್ತಿಹೇಳಿದರು, ಇದು ಬ್ಲೂಸ್‌ರನ್ನು ಎಲ್ಲಾ ಪಾಯಿಂಟ್‌ಗಳನ್ನು ತೆಗೆದುಕೊಳ್ಳುವ ಉತ್ತಮ ಸ್ಥಾನಕ್ಕೆ ತರುತ್ತದೆ ಎಂದರು. “ಮೊದಲ ಗೋಲ್ ಐಎಸ್ಎಲ್ ಅಲ್ಲಿ ಮಾತ್ರವಲ್ಲದೆ ವಿಶ್ವದ ಯಾವುದೇ ಲೀಗ್ನಲ್ಲಿ ಬಹಳ ಮುಖ್ಯವಾಗಿದೆ. ನೀವು ಆಟದಲ್ಲಿ ಮೊದಲು ಸ್ಕೋರ್ ಮಾಡಿದಾಗ, ನೀವು ಇತರ ತಂಡದ ಮೇಲೆ ಒತ್ತಡ ಹೇರುತ್ತೀರಿ. ನಂತರ ಪ್ರತಿದಾಳಿಯಲ್ಲಿ ಸ್ಕೋರ್ ಮಾಡಲು ನೀವು ಜಾಗವನ್ನು ಪಡೆಯುತ್ತೀರಿ. ನೀವು ಮೊದಲು ಗೋಲ್ ಬಿಟ್ಟುಕೊಟ್ಟಾಗ, ಅದು ಕಷ್ಟಕರವಾಗುತ್ತದೆ ಏಕೆಂದರೆ ತಂಡವು ಒತ್ತಡದಲ್ಲಿರುತ್ತದೆ.”
ಡಿಫೆನ್ಸ್ ಬಲಕ್ಕೆ ಹೆಸರಾದ ಬ್ಲೂಸ್, ನಿರೀಕ್ಷೆಗಿಂತ ಹೆಚ್ಚಿನ ಗೋಲುಗಳನ್ನು ಬಿಟ್ಟುಕೊಟ್ಟಿದೆ ಮುಂದೆ ಮತ್ತಷ್ಟು ಬಿಗಿಯಾಗಿರಲು ತನ್ನ ತಂಡವು ಕೆಲಸ ಮಾಡುತ್ತಿದೆ ಎಂದು ಕ್ವಾಡ್ರಾಟ್ ಹೇಳುತ್ತಾರೆ. “ನಮ್ಮ ಆಟಗಳಲ್ಲಿ ನಾವು ಹೆಚ್ಚಿನ ಅವಕಾಶಗಳನ್ನು ನೀಡದಿದ್ದರೂ, ಉತ್ತಮ ರಕ್ಷಣಾತ್ಮಕ ರಚನೆಯನ್ನು ಹೊಂದಿದ್ದರೂ, ದುರದೃಷ್ಟವಶಾತ್ ನಾವು ಈ ಆವೃತ್ತಿಯಲ್ಲಿ ಹೆಚ್ಚಿನದನ್ನು ಬಿಟ್ಟುಕೊಟ್ಟಿದ್ದೇವೆ. ಸುಧಾರಣೆಗೆ ಅವಕಾಶವಿದೆ ಎಂದು ತಂಡಕ್ಕೆ ತಿಳಿದಿದೆ ಮತ್ತು ನಾವು ಅದರ ಮೇಲೆ ಕೆಲಸ ಮಾಡುತ್ತಿದ್ದೇವೆ. ಖಂಡಿತವಾಗಿ, ನಾವು ಲೀಗ್‌ನ ಮುಂದಿನ ಕೆಲವು ಸುತ್ತುಗಳಲ್ಲಿ ಸುಧಾರಿಸಲಿದ್ದೇವೆ.”
ನಾಲ್ಕು ಯೆಲ್ಲೊ ಕಾರ್ಡ್‌ಗಳನ್ನು ಪಡೆದು ಅಮಾನತುಗೊಂಡಿರುವ ಎರಿಕ್ ಪಾರ್ತಲು ಆಟವನ್ನು ತಪ್ಪಿಸಿಕೊಂಡರೆ, ಆಶಿಕ್ ಕುರುನಿಯನ್ ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿರುವುದರಿಂದ ದೀರ್ಘಕಾಲದವರೆಗೆ ವಿಶ್ರಾಂತಿಯಲ್ಲಿರಲಿದ್ದಾರೆ. ಇವರನ್ನು ಹೊರತುಪಡಿಸಿ ತಂಡದ ಮತ್ತೆಲ್ಲಾ ಆಟಗಾರರು ಆಯ್ಕೆಗೆ ಲಭ್ಯವಿರುತ್ತಾರೆ ಎಂದು ಕ್ವಾಡ್ರಾಟ್ ಉಲ್ಲೇಖಿಸಿದ್ದಾರೆ. “ಉದಾಂತ [ಸಿಂಗ್] ಗೆ ಮೊದಲು ಕೆಲವು ಸ್ನಾಯು ಸಮಸ್ಯೆಗಳಿದ್ದವು. ಎಟಿಕೆ ಮೋಹನ್ ಬಗಾನ್ ವಿರುದ್ಧದ ಪಂದ್ಯದಲ್ಲಿ, ಅವರು ಹಾಫ್ ಟೈಮ್ ಗೆ ಪಂದ್ಯದಿಂದ ಹೊರಗೆ ಬರುವಂತಾಯ್ತು. ಅವರು ಫಿಟ್ ಆಗಿದ್ದು ನಾಳೆ ಆಟಕ್ಕೆ ಲಭ್ಯವಿರಲಿದ್ದಾರೆ.”
ಮಂಗಳವಾರ ಸಂಜೆ 7.30 ಕ್ಕೆ ಬ್ಲೂಸ್ ಮತ್ತು ಮುಂಬೈ ಸಿಟಿ ಎಫ್‌ಸಿ ನಡುವಿನ ಪಂದ್ಯ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ಸ್ಟಾರ್ ಮತ್ತು ಜಿಯೋ ಟಿವಿಯಲ್ಲಿ ನೇರ ಪ್ರಸಾರವಾಗಲಿದೆ.