ಬೆಂಗಳೂರು ಯುನೈಟೆಡ್ ವಿರುದ್ದದ ಯುದ್ದದಲ್ಲಿ ಜಯ ಗಳಿಸಿದ ಬ್ಲೂ ಕೋಲ್ಟ್ಸ್
ಅಟ್ಯಾಕರ್ ಥಾಯ್ ಸಿಂಗ್ ತೋರಿದ ಅದ್ಭುತ ಪ್ರದರ್ಶನದ ನೆರವಿನಿಂದ ಬೆಂಗಳೂರು ಎಫ್ ಸಿ ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಬಿಡಿಎಫ್ ಎ ಸೂಪರ್ ಡಿವಿಜನ್ ಲೀಗ್ ಪಂದ್ಯದಲ್ಲಿ 4-0 ಅಂತರದ ಗೆಲುವಿನೊಂದಿಗೆ ಜಯದ ಹಳಿಗೆ ಮರಳಿದೆ.
ಬಿಎಫ್ ಸಿ ಪರ ಥಾಯ್ ಎರಡು ಗೋಲ್ ಬಾರಿಸಿದರೆ, ಮೊನಿರುಲ್ ಮೊಲ್ಲಾ ಮತ್ತು ಒಮೆಗಾ ತಲಾ ಒಂದು ಗೋಲ್ ಬಾರಿಸಿ ಬ್ಲೂ ಕೋಲ್ಟ್ಸ್ ಪೂರ್ಣ ಅಂಕ ಪಡೆಯುವಲ್ಲಿ ನೆರವಾದರು.
ಪಂದ್ಯ ಆರಂಭಿಸಿದ ಬ್ಲೂ ಕೋಲ್ಟ್ಸ್ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿತು. ಇದರ ಫಲವಾಗಿ ಆರಂಭದಲ್ಲೇ ಗೋಲ್ ಗಳಿಕೆಯ ಅವಕಾಶಗಳು ಕೂಡ ಲಭಿಸಿದೆವು. ಕೇವಲ 10 ನಿಮಿಷದಲ್ಲಿ ಮೊದಲ ಗೋಲ್ ಬ್ಲೂ ಪರ ದಾಖಲಾಯಿತು. ಥಾಯ್ ಹೊಡೆದ ಚೆಂಡನ್ನು ಹಿಡಿಯುವ ಯತ್ನದಲ್ಲಿ ಬಿಯುಎಫ್ ಸಿ ಕಸ್ಟೋಡಿಯನ್ ನಿಶಿತ್ ನೈರ್ ಪ್ರಮಾದ ಎಸಗಿದರು.ಹೀಗಾಗಿ ಬ್ಲೂ ಕೋಲ್ಟ್ಸ್ ಆರಂಭಿಕ ಮುನ್ನಡೆ ಗಳಿಸಿತು.
ಮೊದಲ ಗೋಲಿನಿಂದ ಹುಮ್ಮಸ್ಸುಗೊಂಡ ಬೆಂಗಳೂರು ಎದಾರಾಳಿ ಮೇಲೆ ಒತ್ತಡ ಹೆಚ್ಚಿಸಿತು. ಹರ್ ಪ್ರೀತ್ ಸಿಂಗ್ ಚೆಂಡನ್ನು ಎದುರಾಳಿ ಗೋಲ್ ಪೆಟ್ಟಿಗೆಯತ್ತ ಕೊಂಡೊಯ್ಯುವ ಮೂಲಕ ಬ್ಲೂ ಮುನ್ನಡೆಯನ್ನು ವಿಸ್ತರಿಸುವ ಅವಕಾಶ ಹೊಂದಿದ್ದರು. ಆದರೆ ಕೂದಳೆಯ ಅಂತರದಲ್ಲಿ ಚೆಂಡು ಗೋಲ್ ಪೆಟ್ಟಿಗೆಯಲ್ಲಿ ಬಳಿ ಹಾದು ಹೋಯಿತು.
ಆದರೆ ಇದಾದ ಕೆಲವೇ ಹೊತ್ತಿನಲ್ಲಿ ಅಪಾಯಕಾರಿ ಜಾಗದಲ್ಲಿದ್ದ ಥಾಯ್, ರಾಕೇಶ್ ಲಿಕ್ಮಾಬಮ್ ನೀಡಿದ ನೆರವನ್ನು 33ನೇ ನಿಮಿಷದಲ್ಲಿ ಗೋಲಾಗಿ ಪರಿವರ್ತಿಸುವ ಮೂಲಕ ಬೆಂಗಳೂರು ತಂಡದ ಮುನ್ನಡೆಯನ್ನು 2-0ಗೆ ಹಿಗ್ಗಿಸಿದರು.
ಥಾಯ್ ಮತ್ತಷ್ಟು ಆಕ್ರಮಣಕ್ಕಾರಿ ಆಟಕ್ಕೆ ಒತ್ತು ನೀಡಿದರು. ಬಿಯುಎಫ್ ಸಿಯ ಡಿಫೆಂಡರ್ ಗಳನ್ನು ಪ್ರಬಲವಾಗಿ ಹಿಮ್ಮೆಟ್ಟಿಸುವ ಮೂಲಕ ಚೆಂಡನ್ನು ಮೊಲ್ಲಾ ಬಳಿ ಸೇರಿಸುವಲ್ಲಿ ಯಶಸ್ವಿಯಾದರು. ಮೊಲ್ಲಾ ಯಾವುದೇ ತಪ್ಪೆಸಗದೆ ತಂಡದ ಮುನ್ನಡೆಯನ್ನು ವಿರಾಮಕ್ಕೂ ಮುನ್ನ 3-0ಗೆ ವಿಸ್ತರಿಸಿದರು.
ವಿರಾಮದ ನಂತರವೂ ಬೆಂಗಳೂರು ತಂಡ ತನ್ನ ಆಕ್ರಮಣಕಾರಿ ಆಟ ಕಾಯ್ದುಕೊಂಡಿತು. ಇದು ಮೊದಲಾರ್ಧವನ್ನೇ ಹೋಲುವಂತಿತ್ತು. ನಿಶಿತ್ ಅವರ ನೆರವು ಪಡೆದ ಒಮೆಗಾ, ಅಸಾಹಯಕರಾದ ನಿಶಿತ್ ಅವರ ಕಣ್ತಪ್ಪಿಸಿ ತಂಡದ ನಾಲ್ಕನೇ ಗೋಲ್ ಗಳಿಸಿದರು.
ಪಂದ್ಯದ ಕೊನೆಯ ಹತ್ತು ನಿಮಿಷಗಳಲ್ಲಿ ಬ್ಲೂ ಕೋಲ್ಟ್ಸ್ ಪರ ಐದು ಗೋಲ್ ಗಳಿಸುವ ಅವಕಾಶವನ್ನು ಸ್ಟ್ರೈಕರ್ ರಾಹುಲ್ ರಾಜು ಸೃಷ್ಟಿಸಿದರು. ಆದರೆ ಒಮ್ಮೆಯೂ ಸಾಕಾರವಾಗಲಿಲ್ಲ. ಹೀಗಾಗಿ ಬ್ಲೂ 4-0 ಅಂತರದಲ್ಲಿ ಪಂದ್ಯ ಮುಗಿಸಿತು.
ಬ್ಲೂ ಕೋಲ್ಟ್ಸ್ ಡಿಸೆಂಬರ್ 23ರಂದು ಗುರುವಾರ ಇದೇ ಮೈದಾನದಲ್ಲಿ ಯಂಗ್ ಚಾಲೆಂಜರ್ಸ್ ಎಫ್ ಸಿ ತಂಡವನ್ನು ಎದುರಿಸಲಿದೆ.