ನೌಶಾದ್ ಮೂಸಾ ಮಧ್ಯಂತರ ಕೋಚ್ ಆಗಿ ನೇಮಕ.
ಬೆಂಗಳೂರು ಎಫ್‌ಸಿಯ ಮುಖ್ಯ ಕೋಚ್ ಕಾರ್ಲೆಸ್ ಕ್ವಾಡ್ರಾಟ್ ಪರಸ್ಪರ ಒಪ್ಪಿಗೆಯೊಂದಿಗೆ ತಮ್ಮ ಸ್ಥಾನದಿಂದ ನಿರ್ಗಮಿಸಲು ನಿರ್ಧರಿಸಿರುವುದಾಗಿ ಕ್ಲಬ್ ಬುಧವಾರ ಪ್ರಕಟಿಸಿದೆ. ಕ್ಲಬ್‌ನೊಂದಿಗೆ ತನ್ನ ಐದನೇ ಆವೃತ್ತಿಯಲ್ಲಿದ್ದ ಕ್ವಾಡ್ರಾಟ್ – ಹೆಡ್ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಆಲ್ಬರ್ಟ್ ರೊಕಾ ಅವರ ಸಹಾಯಕರಾಗಿ ಎರಡು ಆವೃತ್ತಿ ಕೆಲಸ ನಿರ್ವಹಿಸಿದ್ದರು. ಈಗ ನೌಶಾದ್ ಮೂಸಾ ಅವರನ್ನು ಹೆಡ್ ಕೋಚ್ ಸ್ಥಾನಕ್ಕೆ ನೇಮಕ ಮಾಡಲಾಗಿದ್ದು, ಅವರು ತಕ್ಷಣ ಮಧ್ಯಂತರ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸಲಿರುವುದಾಗಿ ಮಾಹಿತಿ ನೀಡಲಾಗಿದೆ.
“ಆಡಳಿತ ಮಂಡಳಿ ನಡೆಸಿದ ಸುದೀರ್ಘ ಚರ್ಚೆಯ ನಂತರ ಕ್ಲಬ್ ಹೊಸ ದಿಕ್ಕಿನಲ್ಲಿ ಸಾಗಬೇಕಾಗಿರುವುದಾಗಿ ಭಾವಿಸಿದ್ದು, ಬೆಂಗಳೂರು ಎಫ್‌ಸಿಯ ನೈತಿಕತೆ ಮತ್ತು ಉದ್ದೇಶಗಳ ತತ್ವಕ್ರಮದೊಂದಿಗೆ ಮತ್ತೆ ಪ್ರಬಲವಾಗಲು ಇಲ್ಲಿಂದ ಮತ್ತೆ ಪ್ರಾರಂಭಿಸುತ್ತದೆ. ಈ ಹಿಂದೆ ನಾವು ಕಾರ್ಲೆಸ್ ಅವರೊಂದಿಗೆ ಯಶಸ್ಸನ್ನು ಅನುಭವಿಸಿದ್ದರೂ, ಈ ಆವೃತ್ತಿಯಲ್ಲಿ ನಾವು ಬಯಸಿದ್ದ ಉದ್ದೇಶಗಳ ತತ್ವಕ್ರಮದಿಂದ ಅಲ್ಪ ನಿರ್ಗಮನವಾಗಿರುವುದು ಮನಗಂಡು ಈ ನಿರ್ಧಾರಕ್ಕೆ ಬರುವಂತೆ ನಮ್ಮನ್ನು ಪ್ರೇರೇಪಿಸಿದೆ ”ಎಂದು ಬೆಂಗಳೂರು ಎಫ್‌ಸಿ ನಿರ್ದೇಶಕ ಪಾರ್ತ್ ಜಿಂದಾಲ್ ಹೇಳಿದರು.
“ಈ ಅದ್ಭುತ ಫುಟ್ಬಾಲ್ ಕ್ಲಬ್ಗಾಗಿ ಕಾರ್ಲೆಸ್ ಮಾಡಿದ ಎಲ್ಲಕ್ಕೂ ನಾನು ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಅವರು ಕಳೆದ ಐದು ವರ್ಷಗಳಲ್ಲಿ, ಬಿಎಫ್‌ಸಿಯೊಂದಿಗೆ ಎಲ್ಲಾ ಏರಿಳಿತಗಳನ್ನು ಅನುಭವಿಸಿದ್ದಾರೆ. ಮುಂಬೈನಲ್ಲಿ ಐಎಸ್ಎಲ್ ಪ್ರಶಸ್ತಿಗೆ ನಮ್ಮನ್ನು ಕರೆದೊಯ್ಯುವಾಗಲೂ ನಮ್ಮೊಂದಿಗಿದ್ದರು, ಎಎಫ್‌ಸಿ ಕಪ್ ಫೈನಲ್ ಮತ್ತು ನಂತರದಲ್ಲಿ ಐಎಸ್ಎಲ್ ಫೈನಲ್‌ನಲ್ಲಿ ಸೋತಾಗಲೂ ಅವರು ನಮ್ಮೊಂದಿಗೆ ಇದ್ದರು ” ಎಂದು ಬೆಂಗಳೂರು ಎಫ್‌ಸಿ ನಿರ್ದೇಶಕ ಪಾರ್ತ್ ಜಿಂದಾಲ್ ಹೇಳಿದರು.
ಮೂಸಾ ಅವರ ಮೊದಲ ಕೆಲಸ ಎಸ್‌ಸಿ ಈಸ್ಟ್ ಬೆಂಗಾಲ್ ವಿರುದ್ಧ ಶನಿವಾರ ಫತೋರ್ದಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯವನ್ನು ಮುನ್ನಡೆಸುವುದಾಗಿದೆ.
“ನೌಷಾದ್ ಮೂಸಾ ನಾಲ್ಕು ಆವೃತ್ತಿಗಳಲ್ಲಿ ಕ್ಲಬ್‌ನೊಂದಿಗಿದ್ದಾರೆ ಮತ್ತು ನಾವು ನಮ್ಮ ತಂಡದಿಂದ ನಿರೀಕ್ಷಿಸುತ್ತಿರುವ ಯಶಸ್ಸನ್ನು ತರುವಲ್ಲಿ ಪ್ರಭಾವ ಬೀರಲಿದ್ದಾರೆ ಎಂಬ ವಿಶ್ವಾಸವಿದೆ. ಏತನ್ಮಧ್ಯೆ, ಮುಖ್ಯ ಕೋಚ್ ಸ್ಥಾನಕ್ಕೆ ಅರ್ಹರ ಹುಡುಕಾಟವು ಈಗಾಗಲೇ ಪ್ರಾರಂಭವಾಗಿದೆ ಮತ್ತು ಈ ಕ್ಲಬ್‌ನ ಆಸ್ಥೆ ಮತ್ತು ಆಟದ ಶೈಲಿಯನ್ನು ಇನ್ನಷ್ಟು ಹೆಚ್ಚಿಸಬಹುದೆಂದು ನಾವು ನಂಬುವ ವ್ಯಕ್ತಿಯನ್ನು ಕರೆತರಲಿದ್ದೇವೆ. ದೇಶವನ್ನು ಪ್ರತಿನಿಧಿಸುವ ಯುವ ಪ್ರತಿಭೆಗಳನ್ನು ಬೆಳೆಸುವ, ಗೆಲುವುಗಳಿಗಾಗಿ ಸವಾಲು ಹಾಕುವ ತಂಡ ರಚಿಸುವ ನಮ್ಮ ಮಹತ್ವಾಕಾಂಕ್ಷೆಯು ಬದಲಾಗದೆ ಉಳಿಯಲಿದೆ. ನಾವು ಪ್ರಸ್ತುತ ಈ ಆವೃತ್ತಿಯಲ್ಲಿ ಉತ್ತಮ ಸ್ಥಾನದಲ್ಲಿದ್ದೇವೆ ಮತ್ತು ಮುಂಬರುವ ವಾರಗಳಲ್ಲಿ ಅದರ ಬಲದೊಂದಿಗೆ ಇನ್ನಷ್ಟು-ಮತ್ತಷ್ಟು ಸಾಧಿಸಿ ಗೆಲ್ಲಲು, ನಮ್ಮ ಸಿಬ್ಬಂದಿ ಮತ್ತು ಆಟಗಾರರನ್ನು ನಾವು ಬೆಂಬಲಿಸುತ್ತೇವೆ ”ಎಂದು ಪಾರ್ತ್ ವಿವರಿಸಿದರು.
ಕ್ವಾಡ್ರಾಟ್ ನೇತೃತ್ವದಲ್ಲಿ ಬಿ ಎಫ್ ಸಿ, ಇಂಡಿಯನ್ ಸೂಪರ್ ಲೀಗ್ ಇತಿಹಾಸದಲ್ಲಿ ಅಗ್ರಸ್ಥಾನದಲ್ಲಿದ್ದ ಮತ್ತು ಅದೇ ಆವೃತ್ತಿಯಲ್ಲಿ ಪ್ರಶಸ್ತಿಯನ್ನು ಗೆದ್ದ ಮೊದಲ ಹಾಗೂ ಏಕೈಕ ತಂಡವಾಗಿದೆ. ಸ್ಪೇನ್ ಗುರುವಿನ ಅಡಿಯಲ್ಲಿ ಬ್ಲೂಸ್, ಸತತ ಆರು ಗೆಲುವು, ಸತತ ಹನ್ನೊಂದು ಪಂದ್ಯಗಳಿಂದ ಸರಣಿಯಲ್ಲಿ ಅಜೇಯ ಮತ್ತು ಹನ್ನೊಂದು ಕ್ಲೀನ್ ಶೀಟ್‌ಗಳೊಂದಿಗೆ ಲೀಗ್ ದಾಖಲೆಯನ್ನು ಹೊಂದಿದೆ. ಕಾರ್ಲೆಸ್ ಅಡಿಯಲ್ಲಿಯೇ ರಾಹುಲ್ ಭೆಕೆ ಮತ್ತು ನಿಶು ಕುಮಾರ್ ರಾಷ್ಟ್ರೀಯ ತಂಡಕ್ಕೆ ಆಡುವ ಅವಕಾಶ ಪಡೆದಿದ್ದರು. ಅವರು ಬೆಂಗಳೂರು ಎಫ್‌ಸಿ ಬಿ ಯ 10 ಯುವ ಆಟಗಾರರನ್ನು ಪಂದ್ಯದ ಮೊದಲ ನಿಮಿಷಗಳಲ್ಲಿ ಹಿರಿಯ ತಂಡದೊಂದಿಗೆ ಆಡುವಂತೆ ಮಾಡಿದ ಗರಿಮೆ ಹೊಂದಿದ್ದಾರೆ.
ಈ ನಿರ್ಧಾರದ ಕುರಿತು ಮಾತನಾಡಿದ ಕ್ವಾಡ್ರಾಟ್, “ ನನಗೆ ಮುಖ್ಯ ಕೋಚ್ ಆಗಲು ಅವಕಾಶ ನೀಡಿದ್ದಕ್ಕಾಗಿ ನಾನು ಕ್ಲಬ್ ಅನ್ನು ಬಹಳವಾಗಿ ಪ್ರಶಂಸಿಸುತ್ತೇನೆ. ಇಲ್ಲಿ ನಿಜವಾಗಿಯೂ ಉತ್ತಮ ಬಾಂಧವ್ಯವನ್ನು ಅನುಭವಿಸಿದ್ದೇನೆ ಮತ್ತು ನಾನು ಎಂದಿಗೂ ಮರೆಯಲಾಗದ ಪ್ರೀತಿಯ ನೆನಪುಗಳನ್ನು ಕ್ಲಬ್ ನನಗೆ ನೀಡಿದೆ. ಅತ್ಯುತ್ತಮ ದೃಷ್ಟಿಕೋನ ಹೊಂದಿರುವ ಮಾಲೀಕರು ಮತ್ತು ಆಡಳಿತ ಮಂಡಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ, ಯಾವಾಗಲೂ ನನ್ನ ಮಾರ್ಗದರ್ಶನದಲ್ಲಿದ್ದ ಆಟಗಾರರು, ನನ್ನೊಂದಿಗೆ ಕೆಲಸ ಮಾಡಿದ ಸಿಬ್ಬಂದಿ ಮತ್ತು ಐದು ಆವೃತ್ತಿಗಳಲ್ಲಿ ನನ್ನ ಜೊತೆ ನಿಂತಿದ್ದ ಅಭಿಮಾನಿಗಳು ಮತ್ತು ಅವರ ಬೆಂಬಲ ಅಮೋಘ ಮರೆಯಲಸಾಧ್ಯ. ಮಾತ್ರವಲ್ಲದೆ ಈ ಅಭಿಮಾನಿಗಳ ಬೆಂಬಲವಿಲ್ಲದೆ ನಾವು ಕಂಠೀರವದಲ್ಲಿ ಮತ್ತು ಬೇರೆ ಅಂಗಳಗಳಲ್ಲಿ ಹಲವು ಸುಂದರ ಪಂದ್ಯಗಳನ್ನು ಆಕರ್ಷಕವಾಗಿ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲದಕ್ಕೂ ಮಿಗಿಲಾಗಿ ಈ ಆವೃತ್ತಿಯಲ್ಲಿ ಕ್ಲಬ್‌ಗೆ ಎಲ್ಲಾ ವಿಧದಲ್ಲೂ ಒಳಿತನ್ನು-ಅದೃಷ್ಟವನ್ನು, ಶುಭವನ್ನು ಬಯಸುತ್ತೇನೆ. ಈ ಕ್ಲಬ್ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲರೂ ಶಾಶ್ವತವಾಗಿ ನನ್ನ ಹೃದಯದಲ್ಲಿರುತ್ತಾರೆ. ”