ಯೊರುಂಡು ಮುಸಾವು ಕಿಂಗ್ ಹೊಸ ಒಪ್ಪಂದಕ್ಕೆ ಸಹಿಹಾಕಿದ್ದಾರೆ

ಮುಂಬರುವ ಆವೃತ್ತಿಗಳ ಹಿನ್ನೆಲೆಯಲ್ಲಿ ಎರಡು ವರ್ಷಗಳ ಬ್ಲೂಸ್‌ನೊಂದಿಗಿನ ಒಪ್ಪಂದಕ್ಕೆ ನೂತನವಾಗಿ ಗ್ಯಾಬೊನೀ ಡಿಫೆಂಡರ್ ಸಹಿ.

ಡಿಫೆಂಡರ್ ಯೊರುಂಡು ಮುಸಾವು-ಕಿಂಗ್ ಎರಡು ವರ್ಷಗಳ ಒಪ್ಪಂದದ ವಿಸ್ತರಣೆಗೆ ಸಹಿ ಹಾಕಿದ್ದಾರೆ ಎಂದು ಬೆಂಗಳೂರು ಎಫ್‌ಸಿ ಶನಿವಾರ ಪ್ರಕಟಿಸಿದೆ. ಎಎಫ್‌ಸಿ ಕಪ್ ಪ್ರಿಲಿಮಿನರಿ ಸ್ಟೇಜ್ 2 ಹಣಾಹಣಿಯಲ್ಲಿ ತ್ರಿಭುವನ್ ಆರ್ಮಿ ಎಫ್‌ಸಿ ವಿರುದ್ಧ 5-0 ಗೋಲುಗಳಿಂದ ಜಯಗಳಿಸಿದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದ 29 ವರ್ಷದ ಆಟಗಾರನನ್ನು ಬ್ಲೂಸ್‌ನ ಮುಖ್ಯ ಕೋಚ್ ಮಾರ್ಕೊ ಪೆಜೈಯುಲಿ ಹೊಸ ಆವೃತ್ತಿಗಳ ಹಿನ್ನೆಲೆಯಲ್ಲಿ ವಿದೇಶಿ ಆಟಗಾರರನಾಗಿ ತಂಡಕ್ಕೆ ಆಯ್ಕೆಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ.

“ಮೊದಲನೆಯದಾಗಿ, ಕ್ಲಬ್ ಸಿಇಒ, ಕೋಚ್, ಎಲ್ಲಾ ಸಿಬ್ಬಂದಿ ಮತ್ತು ನನ್ನ ತಂಡದ ಆಟಗಾರರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ನಾನು ಮೊದಲು ಭಾರತಕ್ಕೆ ಬಂದಾಗ ಅವರು ನನ್ನನ್ನು ಚೆನ್ನಾಗಿ ಸ್ವಾಗತಿಸಿದರು. ಮೊದಲಿನಿಂದಲೂ ಈ ಕ್ಲಬ್ ಬಗ್ಗೆ ನನಗೆ ಒಳ್ಳೆಯ ಭಾವನೆ ಇತ್ತು ಮತ್ತು ನಾನು ಇಲ್ಲಿ ನನ್ನ ಪ್ರದರ್ಶನಗಳನ್ನು ಮುಂದುವರೆಸುವ ನಿರ್ಧಾರ ಕೈಗೊಳ್ಳಲು ಇದು ಒಂದು ಮುಖ್ಯ ಕಾರಣವಾಗಿತ್ತು”ಎಂದು ಮುಸಾವು-ಕಿಂಗ್ ತಮ್ಮ ಹೊಸ ಒಪ್ಪಂದದ ಔಪಚಾರಿಕತೆಗಳ ನಂತರ ಹೇಳಿದರು.

ಮುಸಾವು-ಕಿಂಗ್ ಗ್ಯಾಬೊನ್ ಪರ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾಣಿಸಿಕೊಂಡಿದ್ದು, ಕಾಂಗೋ ವಿರುದ್ಧದ 2014 ರ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದ ಮೂಲಕ ಪಾದಾರ್ಪಣೆ ಮಾಡಿದ್ದರು ಮತ್ತು ಯುರೋಪಿನ ಉನ್ನತ ತಂಡಗಳಾದ ಗ್ರಾನಡಾ, ಉದಿನೀಸ್, ಲೊರಿಯಂಟ್ ಮತ್ತು ಟೌಲೌಸ್‌ಗಳಂತಹ ಕ್ಲಬ್‌ಗಳನ್ನು ಹೊರಗಿಡುವಲ್ಲಿ ಪಾತ್ರವಹಿಸಿದ್ದರು. ಲಿಬ್ರೆವಿಲ್ಲೆ ಮೂಲದ ಸೆಂಟರ್-ಬ್ಯಾಕ್ ಆಟಗಾರ ಉತ್ಸುಕರಾಗಿರುವುದಲ್ಲದೆ ಹೊಸ ಆವೃತ್ತಿಯನ್ನು ಎದುರು ನೋಡುತ್ತಿರುವುದಾಗಿ ವಿವರಿಸಿದ್ದಾರೆ.

“ಈ ತಂಡ ಉತ್ತಮ ಗುಣಮಟ್ಟವನ್ನು ಹೊಂದಿದ್ದು, ತರಬೇತುದಾರರು ತಾವು ಕ್ಲಬ್‌ನಲ್ಲಿ ರೂಪಿಸುತ್ತಿರುವ ಯೋಜನೆಗಳ ಬಗ್ಗೆ ನನಗೆ ಮನವರಿಕೆ ಮಾಡಿಕೊಟ್ಟರು. ಈ ಹೊಸ ಎರಡು ವರ್ಷಗಳ ಒಪ್ಪಂದವು ನನ್ನ ವೃತ್ತಿಪರ ಜೀವನದಲ್ಲಿ ಒಂದು ಹೊಸ ಅಧ್ಯಾಯವಾಗಿರಲಿದೆ ಮತ್ತು ನಾನು ಪೂರ್ಣ ಪರಿಶ್ರಮದೊಂದಿಗೆ ಸಂಪೂರ್ಣವಾಗಿ ಸಹಕಾರಿಯಾಗಲು ಪ್ರಯತ್ನಿಸುವೆ. ಸಾಧ್ಯವಾದಷ್ಟು ಪಂದ್ಯಗಳನ್ನು ತಂಡಕ್ಕಾಗಿ ಗೆಲ್ಲುವುದು ನನ್ನ ಗುರಿ. ಈ ತಂಡವು ಹೊಂದಿರುವ ಮನಸ್ಥಿತಿ ಮತ್ತು ಗುಣಮಟ್ಟವನ್ನು ನಾನು ನೋಡಿದ್ದೇನೆ ಮತ್ತು ಒಟ್ಟಿಗೆ ನಾವು ಅನೇಕ ಸುಂದರವಾದ ಸಂಧರ್ಭಗಳನ್ನು ಸಾಧಿಸುವ ವಿಶ್ವಾಸ ನನಗಿದೆ ”ಎಂದು ಕಿಂಗ್ ಹೇಳಿದರು.

ಈ ಡಿಫೆಂಡರ್‌ನೊಂದಿಗಿನ ವಿಸ್ತರಣೆಯು ಯುವ ಭಾರತೀಯ ಮಿಡ್‌ಫೀಲ್ಡರ್ ರೋಹಿತ್ ಕುಮಾರ್ ಅವರ ಆಗಮನದ ನಂತರದಲ್ಲಿ ತಂಡದೊಂದಿಗೆ ಏರ್ಪಟ್ಟಿದ್ದು, ಫ್ರಾನ್ಸ್‌ನ ಕೇನ್ ಅಕಾಡೆಮಿಯಿಂದ ಬಂದ ಮುಸಾವು-ಕಿಂಗ್‌ ಅವರನ್ನು ಕ್ಲಬ್ ಹಿಡಿದಿಟ್ಟುಕೊಂಡಿದ್ದಕ್ಕೆ ಸಂತೋಷವಾಗಿದೆ ಎಂದು ಮಾರ್ಕೊ ಪೆಜೈಯುಲಿ ಹೇಳಿದರು.

“ನಾವು ಮುಸಾವು-ಕಿಂಗ್ ಅವರೊಂದಿಗೆ ಒಪ್ಪಂದ ವಿಸ್ತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವುದು ನನಗೆ ಸಂತಸ ತಂದಿದೆ. ಅವರು ಇಲ್ಲಿಯವರೆಗೆ ಬೆಂಗಳೂರು ಎಫ್‌ಸಿ ಪರ ಪ್ರದರ್ಶನ ನೀಡಿರುವಂತೆಯೇ ಅಪಾರ ಅನುಭವದ ಗಣಿಯಾಗಿದ್ದು, ವೃತ್ತಿಪರತೆಯನ್ನು ತೋರಿಸಿದ್ದಾರೆ. ಫುಟ್ಬಾಲ್ ಹೊರತಾಗಿ, ಅವರು ಡ್ರೆಸ್ಸಿಂಗ್ ರೂಮ್ನಲ್ಲಿ ಉತ್ತಮ ವ್ಯಕ್ತಿತ್ವದೊಂದಿಗೆ ಭಾಂದವ್ಯ ಬೆಸೆದಿದ್ದಾರೆ ಮತ್ತು ಅವರನ್ನು ಇನ್ನೂ ಎರಡು ಆವೃತ್ತಿಗಳಲ್ಲಿ ಬೆಂಗಳೂರು ತಂಡದ ಪರ ಆಡುವುದನ್ನು ನಾವು ಎದುರು ನೋಡುತ್ತಿದ್ದೇವೆ, ”ಎಂದು ಪೆಜೈಯುಲಿ ಹೇಳಿದರು.

2021 ರ ಎಎಫ್‌ಸಿ ಕಪ್ ಪ್ಲೇಆಫ್ನಲ್ಲಿ ಈಗಲ್ಸ್ ಎಫ್‌ಸಿ ವಿರುದ್ಧ ಬ್ಲೂಸ್ ಮುಂದಿನ ತಿಂಗಳು ಆಡಲಿದ್ದಾರೆ.