ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ಬ್ಲೂಸ್ ಗೆಲ್ಲುವ ವಿಶ್ವಾಸ
ಬೆಂಗಳೂರು ಎಫ್‌ಸಿ ಅದೃಷ್ಟದ ಅನ್ವೇಷಣೆಯಲ್ಲಿ ನೌಶಾದ್ ಮೂಸಾ ಅವರ ಮಾರ್ಗದರ್ಶನದಲ್ಲಿ ಗೆಲುವನ್ನು ಹುಡುಕುತ್ತಾ ತಿಲಕ್ ಮೈದಾನಕ್ಕೆ ಪ್ರವಾಸ ಮಾಡಲಿದೆ. ಇಂಡಿಯನ್ ಸೂಪರ್ ಲೀಗ್‌ನಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಗೆಲುವಿಗಾಗಿ ಹಂಬಲಿಸುತ್ತಿರುವ ನಾರ್ತ್ ಈಸ್ಟ್ ಯುನೈಟೆಡ್, ಬ್ಲೂಸ್ ತಂಡವನ್ನು ಎದುರಿಸಲಿದ್ದಾರೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಬ್ಲೂಸ್ ತಮ್ಮ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸತತ ನಾಲ್ಕು ಪಂದ್ಯಗಳನ್ನು ಕಳೆದುಕೊಂಡಿದ್ದಾರೆ. ಗೆರಾರ್ಡ್ ನು ಅವರ ಹೈಲ್ಯಾಂಡರ್ಸ್, ಈ ನಡುವೆ ಆರು ಪಂದ್ಯಗಳಲ್ಲಿ ಗೆಲುವು ಸಾಧಿಸದೆ ಹೋಗಿದ್ದು, ಇದು ಎರಡೂ ತಂಡಗಳಿಗೆ ಅತಿಮುಖ್ಯ ಪಂದ್ಯವಾಗಿರಲಿದೆ.
ಫಾರ್ಮ್ ಕಳೆದುಕೊಂಡು ನಲುಗುತ್ತಿರುವ ಬ್ಲೂಸ್‌ನ ಪ್ರಸ್ತುತ ಹೋರಾಟಗಳನ್ನು ಗಮನಿಸಿದ ಮುಖ್ಯ ಕೋಚ್ ನೌಶಾದ್ ಮೂಸಾ ಇದು ಕ್ಲಬ್‌ನ ಇತಿಹಾಸದಲ್ಲಿ ಕಠಿಣ ಅವಧಿಯಾಗಿದೆ ಮತ್ತು ಆವೃತ್ತಿಯಲ್ಲಿ ಹಿಡಿತ ಸಾಧಿಸಲು ಪ್ರತಿಯೊಬ್ಬರೂ ತಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು. “ಇದು ಎಲ್ಲರಿಗೂ, ಆಟಗಾರರಿಗೆ ಮತ್ತು ಕ್ಲಬ್‌ನೊಂದಿಗೆ ಭಾಗಿಯಾಗಿರುವ ಎಲ್ಲರಿಗೂ ಕಷ್ಟಕರ ಸಮಯವಾಗಿದೆ. ನಾವು ಈ ಗೆಲ್ಲುವ ಫಾರ್ಮ್ ಅನ್ನು ಮತ್ತೆ ಪಡೆಯಬೇಕು ಮತ್ತು ನಾವು ಅದರ ಮೇಲೆ ಕೆಲಸ ಮಾಡುತ್ತಿದ್ದೇವೆ. ನಾವು ಅಲ್ಪಾವಧಿಯಲ್ಲಿ ಎರಡು ಆಟಗಳನ್ನು ಆಡಲಿದ್ದೇವೆ ಮತ್ತು ಇದು ಸಮಯ ತೆಗೆದುಕೊಳ್ಳುತ್ತದೆ, ನಮಗೆ ವಿಶ್ರಾಂತಿ ಪಡೆಯಲು ಸಾಧ್ಯವಿಲ್ಲ. ಆಟಗಾರರು ಪ್ರೇರೇಪಿತರಾಗಿದ್ದಾರೆ ಮತ್ತು ಈಸ್ಟ್ ಬೆಂಗಾಲ್ ವಿರುದ್ಧ ದ್ವಿತೀಯಾರ್ಧದಲ್ಲಿ ನಾವು ಆಡಿದ ರೀತಿಯನ್ನು ನೀವು ನೋಡಿದ್ದೀರಿ. ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ನಾನು ನಿರೀಕ್ಷಿಸುತ್ತಿದ್ದೇನೆ.”
ಬ್ಲೂಸ್‌ನಂತೆಯೇ, ಹೈಲ್ಯಾಂಡರ್‌ಗಳು ಸಹ ಕಳೆದ ಆರು ಪಂದ್ಯಗಳಲ್ಲಿ ಗೆಲುವು ಸಾಧಿಸದೆ ಇದ್ದಾರೆ, ಈ ಹಿಂದಿನ ಮುಖಾಮುಖಿಯಲ್ಲಿ ತಂಡಗಳು 2-2ರ ಸಮಬಲದೊಂದಿಗೆ ಆವೃತ್ತಿ ಆರಂಭಿಸಿದ್ದರು ಮತ್ತು ಮೂಸಾ ಮಂಗಳವಾರ ಕಠಿಣ ಪಂದ್ಯದ ನಿರೀಕ್ಷೆಯಲ್ಲಿದ್ದಾರೆ. “ನಾರ್ತ್ ಈಸ್ಟ್ ಕೆಟ್ಟ ತಂಡವಲ್ಲ. ಈ ಆವೃತ್ತಿಯ ಆರಂಭದಲ್ಲಿ ನಾವು ಪರಸ್ಪರ ಆಡಿದಾಗ ಅದು 2-2 ಡ್ರಾ ಆಗಿತ್ತು. ಅವರು ಯಾವಾಗಲೂ ತಮ್ಮ ಆಟಗಳಲ್ಲಿ ಪೈಪೋಟಿ ನೀಡುತ್ತಾರೆ. ನಾವು ಎಂದಿಗೂ ವಿಶ್ರಮಿಸಲು ಸಾಧ್ಯವಿಲ್ಲ ಮತ್ತು ಈ ಲೀಗ್‌ನಲ್ಲಿ ತಂಡದ ಸ್ಥಾನವು ಯಾವುದೇ ವಿಧದಲ್ಲೂ ಪಂದ್ಯವನ್ನು ವ್ಯತ್ಯಾಸ ಮಾಡಲಾಗುವುದಿಲ್ಲ. ಆಟಗಾರರು ತಮ್ಮ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ತಿಳಿದಿದ್ದಾರೆ. ನಮಗೆ ಇನ್ನೂ ಹತ್ತು ಪಂದ್ಯಗಳಿವೆ ಮತ್ತು ನಾರ್ತ್ ಈಸ್ಟ್ ವಿರುದ್ಧದ ಆಟದಿಂದ ಪ್ರಾರಂಭಿಸಿ ನಾವು ಮತ್ತೆ ಆವೃತ್ತಿಯಲ್ಲಿ ಮುನ್ನುಗ್ಗಿ ಸೆಣೆಸಲು ಪ್ರಯತ್ನಿಸುತ್ತೇವೆ.”
ತಂಡದ ಸ್ಥೈರ್ಯದ ಬಗ್ಗೆ ಮಾತನಾಡಿದ ಮೂಸಾ, ಆಟಗಾರರು ತಮ್ಮ ಆಲೋಚನೆಗಳನ್ನು ಅವಲೋಕಿಸುತ್ತಿರುವುದಾಗಿ ಮತ್ತು ಮುಂದೆ ಉತ್ತಮ ಪ್ರದರ್ಶನದ ವಿಶ್ವಾಸವಿರುವುದಾಗಿ ಹೇಳಿದರು. “ಈಸ್ಟ್ ಬೆಂಗಾಲ್ ವಿರುದ್ಧದ ಪಂದ್ಯದ ಮೊದಲು, ಆಟಗಾರರಿಗೆ ನನ್ನ ಸಂದೇಶವು ಫಲಿತಾಂಶದ ಬಗ್ಗೆ ಚಿಂತಿಸದೇ 100% ಯತ್ನವನ್ನು ಪಿಚ್‌ನಲ್ಲಿ ನೀಡುವುದು ಆಗಿತ್ತು. ಖಚಿತವಾಗಿ, ಗೆಲ್ಲುವುದು ಮುಖ್ಯ ಆದರೆ ಕಳೆದ ಪಂದ್ಯದಲ್ಲಿ ಆಟಗಾರರು ನಾನು ಬಯಸಿದ ರೀತಿಯಲ್ಲಿ ಆಡುವಲ್ಲಿ ನಂಬಿಕೆ ಇಡುವುದು ಅವಶ್ಯವಾಗಿತ್ತು. ಮತ್ತು ಅದು ಮುಂದಿನ ಪಂದ್ಯಕ್ಕೆ ಹೋಗಲು ನಮಗೆ ಸಹಾಯ ಮಾಡಿದೆ. ಮೊದಲಾರ್ಧದಲ್ಲಿ ಈಸ್ಟ್ ಬೆಂಗಾಲ್ ನಮ್ಮ ಮೇಲೆ ಪ್ರಾಬಲ್ಯ ಸಾಧಿಸಿತು ಆದರೆ ದ್ವಿತೀಯಾರ್ಧದಲ್ಲಿ ಆಟಗಾರರು ಕೇಳಿದ್ದನ್ನು ಮಾಡಿದರು, ಅದು ನಮಗೆ ಆಟದಲ್ಲಿ ಮರಳಲು ಸಹಾಯ ಮಾಡಿತು. ನಾರ್ತ್‌ಈಸ್ಟ್‌ನೊಂದಿಗೆ, ನಾವು ಆಕ್ರಮಣಕಾರಿ ಫುಟ್‌ಬಾಲ್ ಆಡುತ್ತೇವೆ ಮತ್ತು ಮೂರು ಅಂಕಗಳನ್ನು ಪಡೆಯಲು ಪ್ರಯತ್ನಿಸುತ್ತೇವೆ.”
ಮಧ್ಯಂತರ ಹೆಡ್ ಕೋಚ್ ತಮ್ಮ ತಂಡದ ಫಾರ್ವರ್ಡ್ಗಳು ಮತ್ತೆ ತಮ್ಮ ಸ್ಕೋರಿಂಗ್ ಬೂಟುಗಳನ್ನು ಕಂಡುಕೊಳ್ಳುವುದು ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. “ನಾವು ಈಸ್ಟ್ ಬೆಂಗಾಲ್ ವಿರುದ್ಧ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಿದ್ದೆವು. ಆದರೆ ಗೋಲ್ ಗಳಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ, ನಾವು ತರಬೇತಿಯಲ್ಲಿ ಶ್ರಮಿಸುತ್ತಿದ್ದೇವೆ, ನಮ್ಮ ಹೊಡೆತಗಳನ್ನು ಗುರಿಯತ್ತ ಸಾಗಿಸಲು ಪ್ರಯತ್ನಿಸುತ್ತಿರುವುದರೊಂದಿಗೆ ಚೆಂಡನ್ನು ಕದಿಯುವ ತಂತ್ರಗಳತ್ತ ಕೆಲಸಮಾಡುತ್ತಿದ್ದೇವೆ. ನಾವು ಖಂಡಿತವಾಗಿ ಅವಶ್ಯವಾದದ್ದನ್ನು ಸಾಧಿಸುತ್ತೇವೆ.”
ಮೂಸಾ ಅವರ ಮೊದಲ ಪಂದ್ಯದ ಉಸ್ತುವಾರಿಯಲ್ಲಿ ಇಬ್ಬರು ಯುವ ಆಟಗಾರರಿಗೆ ಆವೃತ್ತಿಯಲ್ಲಿ ಪಾದಾರ್ಪಣೆ ಮಾಡುವ ಅವಕಾಶ ಲಭಿಸಿದೆ. ನಂತರ ಇನ್ನೂ ಇಬ್ಬರು ಬೆಂಚ್‌ನಿಂದ ಪರಿಚಯಿಸಲ್ಪಟ್ಟರು. ಮತ್ತು ಆವೃತ್ತಿ ಮುನ್ನಡೆದಂತೆ ಯುವಕರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ ಎಂದು ಕೋಚ್ ಹೇಳಿದರು. “ನಾವು ಹೆಚ್ಚಿನ ಯುವ ಆಟಗಾರರನ್ನು ಕರೆತರಲು ಬಯಸುತ್ತೇವೆ, ಅದೇ ನಮ್ಮ ಯೋಜನೆ. ಗಾಯಗೊಳ್ಳುವವರೆಗೂ ಪರಾಗ್ [ಶ್ರೀವಾಸ್] ಆಡಿದ ರೀತಿ ಉತ್ತಮ ಗುಣಮಟ್ಟದ ಆಟದ ಪ್ರದರ್ಶನಕ್ಕೆ ಸೂಚಕವಾಗಿದೆ. ನಾವು ಅವರಿಗೆ ಹೆಚ್ಚಿನ ಸಮಯವನ್ನು ನೀಡಲು ಪ್ರಯತ್ನಿಸುತ್ತೇವೆ, ಬಹುಶಃ 30 ಅಥವಾ 40 ನಿಮಿಷಗಳು. ಅದೇ ಪ್ರಸ್ತುತ ಯೋಜನೆ.”
ಒಂದು ಆಟದ ಅಮಾನತಿಗೆ ಒಳಪಟ್ಟಿದ್ದ ಹರ್ಮನ್‌ಜೋತ್ ಖಾಬ್ರಾ ಮತ್ತೆ ಆಟಕ್ಕೆ ಲಭ್ಯವಿದ್ದು, ತಂಡದಲ್ಲಿ ಹೊಸ ಗಾಯಾಳುಗಳಿಲ್ಲ ಎಂದು ತಿಳಿಸಿದರು.
ಬ್ಲೂಸ್ ಮತ್ತು ನಾರ್ತ್ ಈಸ್ಟ್ ಯುನೈಟೆಡ್ ಎಫ್‌ಸಿ ನಡುವಿನ ಪಂದ್ಯ ಮಂಗಳವಾರ ಸಂಜೆ 7.30 ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ಸ್ಟಾರ್ ಮತ್ತು ಜಿಯೋ ಟಿವಿಯಲ್ಲಿ ನೇರ ಪ್ರಸಾರವಾಗಲಿದೆ.