ಚಾಂಪಿಯನ್ ಮುಂಬೈ ಸಿಟಿಗೆ ಮಣಿದ ಬೆಂಗಳೂರು ಎಫ್‍ಸಿ

ಮುಂಬೈ ಸಿಟಿ ವಿರುದ್ಧ 1-3 ಗೋಲ್ ಗಳಿಂದ ಸೋತ ಮಾರ್ಕೊ ಪೆಜ್ಜೈಯಲಿ ಬಳಗಕ್ಕೆ ಎರಡನೇ ಸೋಲು

ಬಂಬೋಲಿಮ್, ಗೋವಾ: ದ್ವಿತೀಯಾರ್ಧದಲ್ಲಿ ರಕ್ಷಣಾ ವೈಫಲ್ಯ ಕಂಡ ಬೆಂಗಳೂರು ಎಫ್‍ಸಿ ಪ್ರಸಕ್ತ ಇಂಡಿಯನ್ ಸೂಪರ್ ಲೀಗ್ ತನ್ನ 4ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಸಿಟಿ ಎಫ್ ಸಿ ವಿರುದ್ಧ ಪರಾಭವಗೊಂಡಿತು. ಹೀಗಾಗಿ ಹಾಲಿ ಟೂರ್ನಿಯಲ್ಲಿ 2ನೇ ಸೋಲಿಗೆ ಬಿಎಫ್‍ಸಿ ಒಳಗಾಯಿತು.
ಇಲ್ಲಿನ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ 1-3 ಗೋಲ್‍ಗಳಿಂದ ಮುಂಬೈ ತಂಡಕ್ಕೆ ಶರಣಾಯಿತು.
ಸೋಲು ತಪ್ಪಿಸಲು ಆಟಗಾರರ ಬದಲಾಣೆ ಸೇರಿದಂತೆ ಅಂತಿಮ ಕ್ಷಣದವರೆಗೂ ಬಿಎಫ್‍ಸಿ ನಡೆಸಿದ ಎಲ್ಲ ಬಗೆಯ ಹೋರಾಟ ಕೈಗೂಡಲಿಲ್ಲ. 77ನೇ ನಿಮಿಷದಲ್ಲಿ ಬಿಎಫ್‍ಸಿ ಆ್ಯಶಿಕ್ ಮತ್ತು ಜಯೇಶ್ ಬದಲಿಗೆ ಸಾರ್ಥಕ್ ಮತ್ತು ಶಿವಶಕ್ತಿ ಅವರನ್ನು ಬದಲಿಸಿತು. ಆದರೆ ಇದರಿಂದ ಹೆಚ್ಚಿನ ಲಾಭವೇನೂ ಆಗಲಿಲ್ಲ.
ಹಿನ್ನಡೆ ತಪ್ಪಿಸಲು ಬೆಂಗಳೂರು ಆಟಗಾರರು ಅವಿರತ ಶ್ರಮಿಸಿದರೂ ಮುಂಬೈ ರಕ್ಷಣಾ ಕೋಟೆಯನ್ನು ಭದ್ರಗೊಳಿಸಿತು. ಹೀಗಾಗಿ ಕೋಚ್ ಮಾರ್ಕೊ ಬಳಗ ನಡೆಸಿದ ಎಲ್ಲ ಗೋಲಿನ ಯತ್ನಗಳು ವಿಫಲಗೊಂಡವು.
54ನೇ ನಿಮಿಷದಲ್ಲಿ ಮೌರ್ಟಡ ಫಾಲ್ ಬಿಎಫ್‍ಸಿಯ ರಕ್ಷಣಾ ಕೋಟೆಯನ್ನು ಭೇದಿಸಿ ಮುಂಬೈ ತಂಡದ ಮುನ್ನಡೆಯನ್ನು 2-1ಕ್ಕೆ ವಿಸ್ತರಿಸಿತು. ಅಹ್ಮದ್ ನೀಡಿದ ಪಾಸನ್ನು ಯಾವುದೇ ಪ್ರಮಾದ ಮಾಡದೆ ಹೇಡರ್ ಮೂಲಕ ಗೋಲಾಗಿಸಿದರು.
ಮೊದಲಾರ್ಧ ಸಮಬಲಗೊಂಡ ಕಾರಣ ಮುನ್ನಡೆಯ ವಿಶ್ವಾಸದಲ್ಲಿ ಇತ್ತಂಡಗಳು ದ್ವಿತೀಯಾರ್ಧ ಆರಂಭಿಸಿದೆವು. ಅದರಲ್ಲೂ ಮುಂಬೈ ತಂಡ ಆಟಗಾರರ ಬದಲಾವಣೆಗೆ ಒತ್ತು ನೀಡಿತು. ಇದೇ ಅವಧಿಯಲ್ಲಿ ಮುಂಬೈ ತಂಡದ ಅಹ್ಮದ್ ಜಹೌ ಯೆಲ್ಲೊ ಕಾರ್ಡ್‍ಗೆ ಒಳಗಾದರು.
ಇದಕ್ಕೂ ಮುನ್ನ ಉಭಯ ತಂಡಗಳು ತಲಾ ಒಂದು ಗೋಲ್ ಗಳಿಸಿ 1-1ರಲ್ಲಿ ಸಮಬಲದ ಹೋರಾಟ ತೋರಿದೆವು. 37ನೇ ನಿಮಿಷದಲ್ಲಿ ಮುನ್ನಡೆ ಪಡೆಯಲು ಬ್ಲೂಸ್ ಪಡೆಗೆ ಉತ್ತಮ ಅವಕಾಶ ಲಭಿಸಿತು. ಏಕೆಂದರೆ ಬ್ರುನೊ ಸಿಲ್ವಾ ಮತ್ತು ಕ್ಲೀಟನ್ ಅವರ ಸಹಕಾರದಿಂದ ಜಯೇಶ್ ರಾಣೆ ನಡೆಸಿದ ಗೋಲಿನ ಯತ್ನ ಕೂದಲೆಳೆಯ ಅಂತರದಲ್ಲಿ ತಪ್ಪಿತು. ಹೀಗಾಗಿ ಉಭಯ ತಂಡಗಳ ಹೋರಾಟ 1-1ರಲ್ಲಿ ಮಂದುವರಿಯಿತು.
31ನೇ ನಿಮಿಷದಲ್ಲಿ ಅಹ್ಮದ್ ಜಹೌ ಮುಂಬೈಗೆ ಮುನ್ನಡೆ ತಂದುಕೊಡಲು ಅತ್ಯುತ್ತಮ ಯತ್ನ ನಡೆಸಿದರು. ಕೂಡಲೇ ಎಚ್ಚೆತ್ತ ಕಸ್ಟೋಡಿಯನ್ ಗುರ್ ಪ್ರಿತ್ ಸಿಂಗ್ ಬೆಂಗಳೂರು ತಂಡಕ್ಕೆ ಎದುರಾಗುತ್ತಿದ್ದ ಹಿನ್ನಡೆಯನ್ನು ತಪ್ಪಿಸುವಲ್ಲಿ ಯಶಸ್ವಿಯಾದರು.
ಅಂತಿಮವಾಗಿ 20ನೇ ನಿಮಿಷದಲ್ಲಿ ಕ್ಲೀಟನ್ ಸಿಲ್ವಾ ಗಳಿಸಿದ ಗೋಲಿನ ಸಾಹಸದಿಂದ ಬೆಂಗಳೂರು ತಂಡ 1-1ರಲ್ಲಿ ಸಮಬಲದ ಹೋರಾಟ ನೀಡಿತು. ಹಿನ್ನಡೆಯಿಂದ ಒತ್ತಡಕ್ಕೆ ಒಳಗಾದ ಬಿಎಫ್‍ಸಿ ಆಟಗಾರರು ಚೆಂಡಿನ ಮೇಲಿನ ನಿಯಂತ್ರಣಕ್ಕೆ ಮುಂದಾದರು. ಈ ಅವಸರದಲ್ಲಿ ಎದುರಾಳಿ ಆಟಗಾರ ಲಾಲೆಂಗ್ ಮಾವೀಯಾ ಅವರಿಗೆ ಅಡಚಣೆಯನ್ನುಂಟು ಮಾಡಿದ ಪರಿಣಾಮ ಸುರೇಶ್ ವಾಂಗ್ಜಾಮ್ ಪಂದ್ಯದಲ್ಲಿ ಮೊದಲ ಬಾರಿ ರೆಫರಿಯಿಂದ ಹಳದಿ ಕಾರ್ಡ್‍ಗೆ ಗುರಿಯಾದರು.
ಹಿನ್ನೆಡೆ ತಗ್ಗಿಸುವ ನಿಟ್ಟಿನಲ್ಲಿ ಬೆಂಗಳೂರು 13ನೇ ನಿಮಿಷದಲ್ಲಿ ಸರ್ವಪ್ರಯತ್ನ ನಡೆಸಿತು. ಎಡ ಬದಿಯಿಂದ ಆ್ಯಶಿಕ್ ಕುರುನಿಯನ್ ಚೆಂಡನ್ನು ಗೋಲ್ ಪೆಟ್ಟಿಗೆಯತ್ತ ಹೊಡೆದರು. ಆದರೆ ಇದರ ಲಾಭ ಪಡೆಯಲು ಬ್ಲೂಸ್‍ಗೆ ಸಾಧ್ಯವಾಗಲಿಲ್ಲ. 8ನೇ ನಿಮಿಷದಲ್ಲಿ ಬಾಕ್ಸ್ ಒಳಗಿದ್ದ ಕೋಸ್ಟಾ ಪ್ರಮಾದ ಎಸಗಿದ ಪರಿಣಾಮ ಕೂಡಲೇ ರೆಫರಿ ಎದುರಾಳಿ ತಂಡಕ್ಕೆ ಪೆನಾಲ್ಟಿ ಅವಕಾಶ ಕಲ್ಪಿಸಿದರು. ಇಗೊರ್ ಅಂಗುಲೊ ಯಾವುದೇ ತಪ್ಪೆಸಗದೆ ಕಳೆದ ಬಾರಿಯ ಚಾಂಪಿಯನ್ ಮುನ್ನಡೆ 1-0 ಅಂತರದ ಮುನ್ನಡೆ ತರುವಲ್ಲಿ ಯಶಸ್ವಿಯಾದರು.
ಬಿಎಫ್‍ಸಿ ಪರ 100ನೇ ಪಂದ್ಯ ಆಡಿದ ಸ್ಟಾರ್ ಗೋಲ್ ಕೀಪರ್ ಗುರ್ ಪ್ರೀತ್ ಸಿಂಗ್ ಅವರ ಕಣ್ತಪ್ಪಿಸಿದ ಇಗೊರ್ 9ನೇ ನಿಮಿಷದಲ್ಲಿ ಮುಂಬೈ ತಂಡದ ಪರ ಗೋಲಿನ ಖಾತೆ ತೆರೆದರು.
ಟಾಸ್ ಗೆದ್ದ ಬಿಎಫ್‍ಸಿ ನಾಯಕ ಸುನೀಲ್ ಛೆಟ್ರಿ ಆಟ ಆರಂಭಿಸಿದರೆ, ಮುಂಬಯಿ ಚೆಂಡಿನ ನಿಯಂತ್ರಣಕ್ಕಾಗಿ ಆರಂಭದಿಂದಲೇ ಮುಂದಾಯಿತು. ಇದಕ್ಕೂ ಮುನ್ನ ಬೆಂಗಳೂರು ತಂಡ 4-3-3ರ ಮಾದರಿಯಲ್ಲಿ ಆಟ ಆರಂಭಿಸಿದರೆ, ಎದುರಾಳಿ ಮುಂಬೈ ತಂಡ 4-2-3-1ರ ಮಾದರಿಯಲ್ಲಿ ಅಖಾಡಕ್ಕಿಳಿಯಿತು.
ಬೆಂಗಳೂರು ಎಫ್‍ಸಿ ಮುಂದಿನ ಪಂದ್ಯದಲ್ಲಿ ಡಿಸೆಂಬರ್ 8ರಂದು ಹೈದರಾಬಾದ್ ತಂಡದ ಸವಾಲು ಎದುರಿಸಲಿದೆ.

Malcare WordPress Security