ಗೆಲುವಿನ ಓಟವನ್ನು ಮುಂದುವರಿಸೋ ವಿಶ್ವಾಸದೊಂದಿಗೆ ಒಡಿಶಾ ಎದುರು ಕಣಕ್ಕಿಳಿಯಲಿರುವ ಬೆಂಗಳೂರು

ಅಡೆತಡೆಗಳನ್ನು ಮೀರಿ ಪ್ರದರ್ಶನ ತೋರಿ ವಿಜಯಯಾತ್ರೆಯನ್ನು ಮುಂದುವರಿಸುವತ್ತ ಬ್ಲೂಸ್ ಚಿಂತನೆ; ಗಾಯದಿಂದಾಗಿ ಲಿಯಾನ್ ಪಂದ್ಯಕ್ಕೆ ಅಲಭ್ಯ

ಬೆಂಗಳೂರು: ಬುಧವಾರದಂದು ತಿಲಕ್ ಮೈದಾನದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್‌ನ ಒಡಿಶಾ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಬ್ಲೂಸ್ ತಮ್ಮ ಗೆಲುವಿನ ಓಟವನ್ನು ಮುಂದುವರೆಸಲು ಉತ್ಸುಕರಾಗಿದ್ದಾರೆ ಎಂದು ಬೆಂಗಳೂರು ಎಫ್‌ಸಿ ಯ ಮುಖ್ಯ ಕೋಚ್ ಮಾರ್ಕೊ ಪೆಜೈಯುಲಿ ಹೇಳಿದ್ದಾರೆ. ಶನಿವಾರ ನಡೆದ ನಾರ್ತ್‌ಈಸ್ಟ್ ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ 4-2 ರ ಅಂತರದೊಂದಿಗೆ ಸೀಸನ್‌ ಆರಂಭಿಸಿದ ಬೆಂಗಳೂರು, ಮನೆಯಂಗಳ ಬಿಟ್ಟು ಈ ಆವೃತ್ತಿಯ ತಮ್ಮ ಮೊದಲ ಪಂದ್ಯವನ್ನು ಆಡಲಿದ್ದಾರೆ. ಅಭಿಯಾನದಲ್ಲಿ ಕಳಿಂಗ ವಾರಿಯರ್ಸ್ ಗೆ ಆವೃತ್ತಿಯ ಚೊಚ್ಚಲ ಪಂದ್ಯ ಇದಾಗಿರಲಿದೆ.

“ನಾವು ಗೆಲುವಿನ ಆರಂಭದ ಅನುಕೂಲವನ್ನು ಮುಂದುವರೆಸಲು ಉತ್ಸುಕರಾಗಿದ್ದೇವೆ ಮತ್ತು ಡಿಫೆನ್ಸ್ ಹಾಗು ಮಿಡ್‌ಫೀಲ್ಡ್‌ನಲ್ಲಿ ಮತ್ತಷ್ಟು ತೀಕ್ಷ್ಣವಾಗಿರಬೇಕು; ಇದನ್ನು ನಾವು ತರಬೇತಿಯಲ್ಲಿ ಸತತವಾಗಿ ಅಭ್ಯಸಿಸುತ್ತಾ ಬಂದಿದ್ದೇವೆ. ಇದು ನಮಗೆ ಚಾತುರ್ಯದಿಂದ ಆಡಬೇಕಾದ ಪಂದ್ಯವಾಗಿದೆ. ಏಕೆಂದರೆ ಒಡಿಶಾ ಎಫ್‌ಸಿ ಇನ್ನೂ ಆಡಿಲ್ಲ ಮತ್ತು ಅವರು ಹೇಗೆ ಆಡಬಹುದೆಂಬುದೂ ಗೊತ್ತಿಲ್ಲ. ನಮ್ಮ ಆಟದ ಮೇಲೆ ಗಮನವಹಿಸುವುದು ಮುಖ್ಯ ಎಂದು ಭಾವಿಸುತ್ತೇನೆ. ಒಡಿಶಾ ತಂಡಕ್ಕೆ ತಾವು ಹೇಗೆ ಆಡಲಿದ್ದೇವೆ ಎಂಬುದು ಇನ್ನೂ ಗೊತ್ತಿಲ್ಲ, ಹಾಗಾಗಿ ಅದು ನಮಗೆ ಸ್ವಲ್ಪ ಪ್ರಯೋಜನಕಾರಿಯಾಗಿರಬಲ್ಲದು. ನಾವು ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನದಲ್ಲಿದ್ದೇವೆ, ಅಂಕಗಳನ್ನು ಗಳಿಸಲು ಉತ್ಸುಕರಾಗಿದ್ದೇವೆ.”ಎಂದು ಪೆಜೈಯುಲಿ ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನೂತನ ಮುಖ್ಯ ತರಬೇತುದಾರ ಕಿಕೊ ರಾಮಿರೆಜ್‌ ಅವರ ನೇತೃತ್ವದ ಒಡಿಶಾ ಎಫ್‌ಸಿ ತಂಡವು, ಸ್ಪ್ಯಾನಿಷ್ ಆಟಗಾರರಾದ ಜಾವಿ ಹೆರ್ನಾಂಡೆಜ್, ವಿಕ್ಟರ್ ಮೊಂಗಿಲ್, ಅರಿದೈ ಕ್ಯಾಬ್ರೆರಾ ಮತ್ತು ಹೆಕ್ಟರ್ ರೋಡಾಸ್ ಜೊತೆಗೆ ಬ್ರೆಜಿಲಿಯನ್ ಸ್ಟ್ರೈಕರ್ ಜೊನಾಥಸ್ ಮತ್ತು ಮಲೇಷಿಯಾದ ಮಿಡ್‌ಫೀಲ್ಡರ್ ಲಿರಿಡಾನ್ ಕ್ರಾಸ್ನಿಕಿ ಅವರೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದೆ. ಮತ್ತೊಂದೆಡೆ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧದ ಹಣಾಹಣಿಯಲ್ಲಿ ಪಾದಕ್ಕೆ ಗಾಯ ಮಾಡಿಕೊಂಡ ವಿಂಗರ್ ಲಿಯಾನ್ ಆಗಸ್ಟಿನ್, ಬೆಂಗಳೂರು ಪರ ಮುಂದಿನ ಪಂದ್ಯಕ್ಕೆ ಲಭ್ಯವಿರುವುದಿಲ್ಲ.

“ಲಿಯಾನ್ ಪಂದ್ಯವಾಡಲು ಸಾಧ್ಯವಿಲ್ಲ ಏಕೆಂದರೆ ಅವರ ಪಾದದ ಗಾಯದ ತೀವ್ರತೆ ಇನ್ನೂ ತಿಳಿದಿಲ್ಲ, ನಾವು ಇನ್ನೂ ಕಾಯಬೇಕಾಗುತ್ತದೆ. ಮೂಳೆ ಮುರಿದಿಲ್ಲ ಎಂದು ಖಾತ್ರಿಯಾಗಿದೆ, ಆದರೆ ಅವರ ಎಂ ಆರ್ ಐ ಫಲಿತಾಂಶಗಳು ಇನ್ನೂ ಬರಬೇಕಿದೆ ಮತ್ತು ಅವರು ಮೈದಾನಕ್ಕೆ ಹಿಂದಿರುಗುವ ದಿನಾಂಕ ನಿಗಧಿ ಮಾಡುವ ಮುನ್ನ ನಾವು ಮತ್ತಷ್ಟು ಅವಲೋಕನ ಮಾಡಬೇಕಾಗುತ್ತದೆ.” ಎಂದು ಪೆಜೈಯುಲಿ ವಿವರಿಸಿದರು.

ಕಳೆದ ಆವೃತ್ತಿಯಲ್ಲಿನ ಈ ಎರಡು ತಂಡಗಳ ನೇರ ಹಣಾಹಣಿಯಲ್ಲಿ, ಸುನಿಲ್ ಛೇತ್ರಿ ಮತ್ತು ಕ್ಲೀಟನ್ ಸಿಲ್ವಾ ಬ್ಯಾಂಬೋಲಿಮ್‌ನ ಜಿ ಎಮ್ ಸಿ ಸ್ಟೇಡಿಯಂನಲ್ಲಿ ಬ್ಲೂಸ್‌ ಪರ ಗೋಲ್ ಗಳಿಸಿದರೆ ಎದುರಾಳಿ ತಂಡದ ಪರ ಸ್ಟೀವನ್ ಟೇಲರ್ ಅಂಕಗಳಿಸಿದ್ದರು ಇದರೊಂದಿಗೆ ಬ್ಲೂಸ್ ಪೂರ್ಣ ಮೂರು ಅಂಕಗಳನ್ನು ಪಡೆದಿತ್ತು. ಒಡಿಶಾ ತಂಡದ ವಿರುದ್ಧದ ಈ ಹಿಂದಿನ ನಾಲ್ಕು ಮುಖಾಮುಖಿಗಳಲ್ಲಿ ಸ್ವಲ್ಪ ಅದೃಷ್ಟ ಬ್ಲೂಸ್ ಕೈಹಿಡಿದಿತ್ತು, ಮೂರು ಬಾರಿ ಬ್ಲೂಸ್‌ ಗೆದ್ದರೆ, ಮತ್ತೊಂದು ಪಂದ್ಯದಲ್ಲಿ ಒಡಿಶಾ ಅಂಕ ಗಳಿಸಿತ್ತು.

ಬೆಂಗಳೂರು ಎಫ್‌ಸಿ ಮತ್ತು ಒಡಿಶಾ ಎಫ್‌ಸಿ ನಡುವಿನ ಪಂದ್ಯ ತಿಲಕ್ ಮೈದಾನದಲ್ಲಿ ಬುಧವಾರ ರಾತ್ರಿ 7.30 ಕ್ಕೆ ಆರಂಭವಾಗಲಿದ್ದು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಡಿಸ್ನಿ+ಹಾಟ್‌ಸ್ಟಾರ್ ಮತ್ತು ಜಿಯೋ ಟಿವಿ ಅಪ್ಲಿಕೇಶನ್‌ನಲ್ಲಿ ನೇರ ಪ್ರಸಾರವಾಗಲಿದೆ.

Malcare WordPress Security