ಕೇರಳ ಬ್ಲಾಸ್ಟರ್ಸ್ ವಿರುದ್ಧ ಅಂಕ ಪಡೆಯುವತ್ತ ಬೆಂಗಳೂರು ಗಮನ

ನೌಶಾದ್ ಮೂಸಾ ಬಾಂಬೋಲಿಮ್ನಲ್ಲಿ ಕಠಿಣ ಸ್ಪರ್ಧೆ ನಿರೀಕ್ಷಿಸುತ್ತಿದ್ದು ಡಿಮಾಸ್ ಡೆಲ್ಗಾಡೊ ಪಂದ್ಯಕ್ಕೆ ಲಭ್ಯವಿರುವುದಿಲ್ಲ…

ಬಂಬೋಲಿಮ್‌ನ ಜಿಎಂಸಿ ಕ್ರೀಡಾಂಗಣದಲ್ಲಿ ಬುಧವಾರ ಕೇರಳ ಬ್ಲಾಸ್ಟರ್ಸ್ ವಿರುದ್ಧ ಬೆಂಗಳೂರು ಎಫ್‌ಸಿ ತಂಡವು ಕಠಿಣ ಮುಖಾಮುಖಿಯನ್ನು ಎದುರಿಸಲಿರುವುದಾಗಿ ಹಂಗಾಮಿ ಮುಖ್ಯ ಕೋಚ್ ನೌಶಾದ್ ಮೂಸಾ ಹೇಳಿದ್ದಾರೆ. ಕಳೆದ ವಾರ ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ವಿರುದ್ಧ ಡ್ರಾ ಸಾಧಿಸುವುದರೊಂದಿಗೆ ಬ್ಲೂಸ್ ತಮ್ಮ ಸೋಲಿನ ಓಟವನ್ನು ನಿಲ್ಲಿಸಿತು, ಆದರೆ ಬ್ಲಾಸ್ಟರ್ಸ್ ತಮ್ಮ ಕೊನೆಯ ಐದು ಪ್ರವಾಸ ಪಂದ್ಯಗಳಲ್ಲಿ ಕೇವಲ ಎರಡು ಗೆಲುವುಗಳನ್ನು ಪಡೆದುಕೊಳ್ಳುವುದರೊಂದಿಗೆ, ಮೂಸಾ ತಮ್ಮ ತಂಡವು ಬುಧವಾರ ಅಂಕ ಪಡೆಯಬೇಕಾದರೆ ಅತ್ಯುತ್ತಮ ಪ್ರಯತ್ನ ಮಾಡಬೇಕಾಗಿದೆ ಎಂದು ಭಾವಿಸಿದ್ದಾರೆ.

“ಈ ಆವೃತ್ತಿಯಲ್ಲಿ ನಾವು ಕೇರಳ ಬ್ಲಾಸ್ಟರ್ಸ್ ವಿರುದ್ಧ ಗೆದ್ದ ನಮ್ಮ ಹಿಂದಿನ ಆಟದ ಬಗ್ಗೆ ಆಟಗಾರರು ಯೋಚಿಸಬೇಕೆಂದು ನಾನು ಬಯಸುವುದಿಲ್ಲ. ಅವರು ಈಗ ಹೆಚ್ಚು ಆಕ್ರಮಣಕಾರಿಯಾಗಿದ್ದು ಬಹಳ ಪ್ರೇರೇಪಿತರಾಗಿದ್ದಾರೆ ಮತ್ತು ಹೆಚ್ಚು ಒತ್ತಡದಲ್ಲಿ ಆಡುತ್ತಿದ್ದಾರೆ. ನಾವು ಜಾಗರೂಕರಾಗಿರಬೇಕು ಮತ್ತು ಲಾಭ ಪಡೆಯುವ ಅವಕಾಶಕ್ಕಾಗಿ ಕಾಯಬೇಕು. ಎದುರಾಳಿ ತಂಡ ಆತ್ಮವಿಶ್ವಾಸದೊಂದಿಗೆ ಇರುವುದರಿಂದ ಇದು ಸುಲಭದ ಆಟವಾಗುವುದಿಲ್ಲ. ಆದರೆ, ನಾವು ನಂಬಿಕೆ ಕೈಬಿಟ್ಟಿಲ್ಲ. ಇನ್ನೂ ಹೋರಾಡುತ್ತಿದ್ದೇವೆ ಮತ್ತು ಕೇರಳದ ವಿರುದ್ಧವೂ ನಾವು ಅದೇ ರೀತಿ ಹೋರಾಡುತ್ತೇವೆ.”

ಇದು ಹೈಲ್ಯಾಂಡರ್ಸ್ ವಿರುದ್ಧದ ಡ್ರಾ ಆಗಿದ್ದರೂ, ಶಿಬಿರದಲ್ಲಿನ ಮನಸ್ಥಿತಿ ಹೆಚ್ಚು ಲವಲವಿಕೆಯಿಂದ ಕೂಡಿದೆ ಮತ್ತು ಆಟಗಾರರು ಪಿಚ್‌ನಲ್ಲಿ ಶ್ರಮಿಸುತ್ತಿದ್ದಾರೆ ಎಂದು ಮೂಸಾ ಹೇಳಿದರು.

“ತಂಡದಲ್ಲಿ ಬಹಳಷ್ಟು ಬದಲಾವಣೆಗಳಿವೆ ಮತ್ತು ಶಿಬಿರದಲ್ಲಿ ಸಕಾರಾತ್ಮಕತೆ ಇದೆ. ಸೋಲುಗಳ ಹಾದಿಯನ್ನು ನಾವು ಕಂಡಿಲ್ಲ ಮತ್ತು ನಮಗೆ ಅಭ್ಯಾಸವೂ ಇಲ್ಲ ಹಾಗೂ ಅದು ನಮ್ಮಲ್ಲಿ ಯಾರಿಗೂ ಸುಲಭವಲ್ಲ. ತರಬೇತಿಯಲ್ಲಿ ಐದರಿಂದ ಆರು ದಿನಗಳವರೆಗೆ ಉತ್ತಮ ಅಭ್ಯಾಸವನ್ನು ಪಡೆದುಕೊಂಡಿದ್ದೇವೆ, ಕಳೆದ ಎರಡು ಪಂದ್ಯಗಳಲ್ಲಿ ಅಭ್ಯಾಸಕ್ಕೆ ಅವಕಾಶ ಹೆಚ್ಚು ಇರಲಿಲ್ಲ. ನಾವು ಸಾಧ್ಯವಾದಷ್ಟು ಎಲ್ಲದರಲ್ಲೂ ಕೆಲಸ ಮಾಡಿದ್ದೇವೆ ಮತ್ತು ನಾಳೆ ನಾವು ಉತ್ತಮ ಪ್ರದರ್ಶನ ನೀಡುತ್ತೇವೆ ಎಂದು ಆಶಿಸುತ್ತೇವೆ.”

ವೈಯಕ್ತಿಕ ತುರ್ತು ಪರಿಸ್ಥಿತಿಯ ಕಾರಣ ಸ್ಪೇನ್‌ಗೆ ಮರಳಿರುವ ಪ್ರಭಾವಿ ಮಿಡ್‌ಫೀಲ್ಡರ್ ಡಿಮಾಸ್ ಡೆಲ್ಗಾಡೊ ಇಲ್ಲದೆ ಬ್ಲೂಸ್ ಆಡಲಿದ್ದಾರೆ. “ಡಿಮಾಸ್ ನಮ್ಮ ತಂಡದ ಪ್ರಮುಖ ಭಾಗವಾಗಿದ್ದಾರೆ. ಆದರೆ ಇದು ಫುಟ್ಬಾಲ್. ಹುಡುಗರು ಸಕಾರಾತ್ಮಕವಾಗಿದ್ದಾರೆ, ಮತ್ತು ಡಿಮಾಸ್ ಯಾವಾಗ ಹಿಂತಿರುಗಬಹುದೆಂದು ನಾವು ಕಾದು ನೋಡಬೇಕು. ಕೋವಿಡ್ ನಿಯಮಗಳ ನಡುವೆ, ನಿಗದಿಯಾಗಿರುವ ಪಂದ್ಯಗಳ ಈ ಸಂದರ್ಭದಲ್ಲಿ ಇದು ಕಷ್ಟಕರವಾಗಿ ಕಾಣುತ್ತದೆ. ನಾವು ಈಗ ಅದರ ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ. ಅವರ ಸ್ಥಾನಕ್ಕೆ ಯಾರು ಹೊಂದಿಕೊಳ್ಳಬಹುದು ಮತ್ತು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನೋಡುವತ್ತ ನಾವು ಗಮನಹರಿಸಿದ್ದೇವೆ.”

ಕಳೆದ ಎರಡು ಪಂದ್ಯಗಳಲ್ಲಿ ಯುವ ಆಟಗಾರರು ಸಮರ್ಥವಾಗಿ ಆಡಿದ್ದಾರೆ. ಹಲವಾರು ಯುವಕರಿಗೆ ಇದರಿಂದ ಮತ್ತಷ್ಟು ಅವಕಾಶ ನೀಡಲಾಗಿದೆ. ಮೂಸಾ ಅವರ ಪ್ರಕಾರ ಡಿಮಾಸ್‌ ಬದಲಾಗಿ ಮತ್ತಷ್ಟು ಯುವ ಆಟಗಾರರು ತಂಡದಲ್ಲಿ ಸ್ಥಾನಪಡೆಯಲಿದ್ದಾರೆ. “ಯುವ ಆಟಗಾರರನ್ನು ಪರಿಚಯಿಸುವುದೇ ನಮ್ಮ ಗುರಿ. ಡಿಮಾಸ್‌ಗೆ ಬದಲಾಗಿ, ಒಬ್ಬರು ಅಥವಾ ಇಬ್ಬರು ಯುವಕರು ಸ್ಥಾನ ಪಡೆಯಬಹುದು. ಎಲ್ಲವೂ ಸರಿಯಾಗಿ ನಡೆದರೆ ನಾವು ದ್ವಿತೀಯಾರ್ಧದಲ್ಲಿ ಹೆಚ್ಚಿನ ಆಟಗಾರರನ್ನು ತಂಡಕ್ಕೆ ತರಬಹುದು. ನಮ್ಮ ಯುವ ಆಟಗಾರರಿಗೆ ಅವಕಾಶ ನೀಡಲು ನಾವು ಬಯಸುತ್ತೇವೆ, ಇದರಿಂದ ಅವರು ಉತ್ತಮವಾಗುತ್ತಾರೆ ಎಂಬ ವಿಶ್ವಾಸವಿದೆ.”

ಈ ಮಧ್ಯೆ, ಮಿಡ್ ಫೀಲ್ಡರ್ ಕ್ಸಿಸ್ಕೊ ಹೆರ್ನಾಂಡೆಜ್ ಗೋವಾಕ್ಕೆ ಆಗಮಿಸಿದ್ದಾರೆ ಎಂದು ಮೂಸಾ ದೃಢಪಡಿಸಿದರು, ಆದರೆ ಕಡ್ಡಾಯವಾದ ಕ್ವಾರೆಂಟೈನ್ ನಿಯಮಗಳ ಅನುಸಾರ ಸ್ಪೇನಿಯಾರ್ಡ್ ಪಂದ್ಯಕ್ಕೆ ಲಭ್ಯವಿರುವುದಿಲ್ಲ.

ಬ್ಲೂಸ್ ಮತ್ತು ಕೇರಳ ಬ್ಲಾಸ್ಟರ್ಸ್ ಎಫ್‌ಸಿ ನಡುವಿನ ಪಂದ್ಯ ಬುಧವಾರ ಸಂಜೆ 7.30 ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ಸ್ಟಾರ್ ಮತ್ತು ಜಿಯೋ ಟಿವಿಯಲ್ಲಿ ನೇರ ಪ್ರಸಾರವಾಗಲಿದೆ.

Malcare WordPress Security