ಎಫ್‌ಸಿ ಗೋವಾದ ಜೊರ್ಗೆ ಒರ್ಟಿಜ್, ಬೆಂಗಳೂರಿನ ಸುರೇಶ್ ವಾಂಗ್ಜಾಮ್‌ಗೆ ರೆಡ್ ಕಾರ್ಡ್| ಮುಂದುವರಿದ ಬ್ಲೂಸ್ ಸೋಲಿನ ಕೊಂಡಿ
ಪ್ರಥಮಾರ್ಧಕ್ಕೆ ಸಮಬಲದ ಹೋರಾಟ ನೀಡಿದ ಹೊರತಾಗಿಯೂ ದ್ವಿತೀಯಾರ್ಧದಲ್ಲಿ10 ಆಟಗಾರರಿಗೆ ಕುಸಿದ ಎಫ್‌ಸಿ ಗೋವಾ ತಂಡವನ್ನು ಕಟ್ಟಿಹಾಕುವಲ್ಲಿಎಡವಿದ ಬೆಂಗಳೂರು ಎಫ್‌ಸಿ ಇಂಡಿಯನ್ ಸೂಪರ್ ಲೀಗ್‌ನ ತನ್ನ ಆರನೇ ಪಂದ್ಯದಲ್ಲಿನಾಲ್ಕನೇ ಸೋಲಿಗೆ ಒಳಗಾಯಿತು.
ಇಲ್ಲಿನ ಜಿಎಂಸಿ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿಶನಿವಾರ ನಡೆದ ಜಿದ್ದಾಜಿದ್ದಿನ ಹಣಾಹಣಿಯಲ್ಲಿಕೋಚ್ ಮಾರ್ಕೊ ಪೆಜ್ಜೈಯಲಿ ಬಳಗ 1-2 ಗೋಲ್‌ಗಳ ಅಂತರದಿಂದ ಎಫ್‌ಸಿ ಗೋವಾ ತಂಡಕ್ಕೆ ಶರಣಾಯಿತು. ಬಿಎಫ್‌ಸಿ ಪರ ಕ್ಲೀಟನ್ ಸಿಲ್ವಾ (45ನೇ ನಿಮಿಷ) ಒಂದು ಗೋಲ್ ಬಾರಿಸಿದರೆ, ಎಫ್‌ಸಿ ಗೋವಾ ಪರ (ಆಶಿಕ್ 16ನೇ ನಿಮಿಷ – ಸ್ವಯಂ ಗೋಲ್) ಮತ್ತು ದೇವೇಂದ್ರ (70ನೇ ನಿಮಿಷ) ತಲಾ ಒಂದು ಗೋಲ್ ದಾಖಲಿಸಿದರು.
83ನೇ ನಿಮಿಷದಲ್ಲಿಎಡು ಬೆಡಿಯಾಗೆ ಅಡ್ಡಿಪಡಿಸಿದ ಕಾರಣಕ್ಕಾಗಿ ಮೊದಲೇ ಹಳದಿ ಕಾರ್ಡ್‌ಗೆ ಗುರಿಯಾಗಿದ್ದ ಬ್ಲೂಸ್‌ನ ಸುರೇಶ್ ವಾಂಗ್ಜಾಮ್ ರೆಡ್‌ಕಾರ್ಡ್‌ಗೆ ಒಳಗಾದರು. ಹೀಗಾಗಿ ಬಿಎಫ್‌ಸಿ ಸಹ ಹತ್ತು ಮಂದಿಗೆ ಕುಸಿಯಿತು. ತಂಡದ ಸೋಲು ತಪ್ಪಿಸಲು ಬಿಎಫ್‌ಸಿ ಆಟಗಾರರು ಪಂದ್ಯದ ಕೊನೆಯವರೆಗೂ ಹೋರಾಟ ನಡೆಸಿದರು. ಆದರೆ 100ನೇ ಐಎಸ್‌ಎಲ್ ಪಂದ್ಯ ಆಡಿದ ಛೆಟ್ರಿಗೆ ಗೆಲುವಿನ ಉಡುಗೊರೆ ನೀಡಲು ಬಿಎಫ್‌ಸಿಗೆ ಸಾಧ್ಯವಾಗಲಿಲ್ಲ.
10 ಮಂದಿಗೆ ಕುಸಿದ ಗೋವಾ ತಂಡವನ್ನು ಕಟ್ಟಿಹಾಕುವಲ್ಲಿಬಿಎಫ್‌ಸಿ ಎಡವಿತು. 70ನೇ ನಿಮಿಷದಲ್ಲಿಬ್ಲೂಸ್‌ನ ರಕ್ಷ ಣಾ ವಿಭಾಗದ ವೈಫಲ್ಯವನ್ನು ಸಮರ್ಥವಾಗಿ ಬಳಸಿಕೊಂಡ ಗೋವಾ ತಂಡ, ದೇವೇಂದ್ರ ಮೂಲಕ ತಂಡದ ಎರಡನೇ ಗೋಲ್ ಬಾರಿಸಿ 2-1ರ ಮುನ್ನಡೆ ಗಳಿಸಿತು.
ಪಂದ್ಯದ 54ನೇ ನಿಮಿಷವು ನಾಟಕೀಯ ಬೆಳವಣಿಗೆಗೆ ಕಾರಣವಾಯಿತು. ತಮಗೆ ಅಡ್ಡ ಬಂದ ಎಂಬ ಕಾರಣಕ್ಕಾಗಿ ಬಿಎಫ್‌ಸಿಯ ಸುರೇಶ್ ವಾಂಗ್ಜಾಮ್ ಮೇಲೆ ಒರ್ಟಿಜ್‌ಗೆ ತಮ್ಮ ಎರಡು ಕೈಗಳಿಂದ ದೂಡಿದರಲ್ಲದೆ ಹಲ್ಲೆಗೆ ಮುಂದಾದರು. ಕೂಡಲೇ ಸಹ ಆಟಗಾರರು ಮಧ್ಯೆ ಪ್ರವೇಶಿಸಿ ಸಂಧಾನಕ್ಕೆ ಮುಂದಾದರು. ಕೂಡಲೇ ರೆಫರಿ, ಜೊರ್ಗೆ ಒರ್ಟಿಜ್‌ಗೆ ರೆಡ್ ಕಾರ್ಡ್ ನೀಡುವ ಮುನ್ನ ವಾಂಗ್ಜಾಮ್‌ಗೂ ಹಳದಿ ಕಾರ್ಡ್ ನೀಡಿದರು.
ಇದಕ್ಕೂ ಮುನ್ನ ದ್ವಿತೀಯಾರ್ಧ ಆರಂಭವಾಗುತ್ತಿದ್ದಂತೆಯೇ ಬಿಎಫ್‌ಸಿ ರೋಶನ್ ಮತ್ತು ಜಯೇಶ್ ರಾಣೆ ಬದಲಿಗೆ ಪರಾಗ್ ಶ್ರೀನಿವಾಸ್ ಮತ್ತು ಪ್ರಿನ್ಸ್ ಇಬಾರ ಅವರನ್ನು ಹನ್ನೊಂದರೊಳಗೆ ಕರೆ ತಂದಿತು. ಇದಾದೇ ಕೆಲವೇ ನಿಮಿಷದಲ್ಲಿಬ್ಲೂಸ್‌ನ ದಾನಿಶ್ ಫಾರೂಖ್ ಸಹ ಎದುರಾಳಿ ತಂಡದ ಗೋಲ್ ಕೀಪರ್ ಧೀರಜ್‌ಗೆ ನಿಂದಿಸಿದ ಕಾರಣ ಹಳದಿ ಕಾರ್ಡ್ ಎಚ್ಚರಿಕೆ ಪಡೆದರು.
ವಿರಾಮದ ಅಂತ್ಯದವರೆಗೂ ಬಿಎಫ್‌ಸಿ ಹಿನ್ನಡೆ ತಪ್ಪಿಸಲು ಸಾಕಷ್ಟು ಬಾರಿ ಯತ್ನ ನಡೆಸಿದರೂ ಫಲ ದೊರೆಯಲಿಲ್ಲವಾದರೂ ಪ್ರಥಮಾರ್ಧ ಮುಕ್ತಾಯದ ಕೊನೆಯ ನಿಮಿಷದಲ್ಲಿಕ್ಲೀಟನ್ ಸಿಲ್ವಾ ಗೋಲ್ ಬಾರಿಸುವುದರೊಂದಿಗೆ 1-1ರ ಸಮಬಲದ ಹೋರಾಟಕ್ಕೆ ಸಾಕ್ಷಿಯಾದರು.
ಇದಕ್ಕೂ ಮುನ್ನ ಬೆಂಗಳೂರು ತಂಡದ ರಕ್ಷ ಣಾ ಆಟಗಾರರು ಎಸಗಿದ ಪ್ರಮಾದದಿಂದಾಗಿ 16ನೇ ನಿಮಿಷದಲ್ಲಿಉಡುಗೊರೆ ಗೋಲ್ ಪಡೆದ ಗೋವಾ ಕೊನೆಗೂ ಪಂದ್ಯದಲ್ಲಿ1-0 ಅಂತರದ ಮುನ್ನಡೆ ಗಳಿಸಿತು. ಎದುರಾಳಿ ತಂಡದ ಮಾರ್ಟಿನ್ಸ್ ಚೆಂಡನ್ನು ಗೋಲ್ ಪೆಟ್ಟಿಗೆಯತ್ತ ಹೊದ್ದರು. ಆದರೆ ಬ್ಲೂಸ್‌ನ ಕಸ್ಟೋಡಿಯನ್ ಗುರ್‌ಪ್ರೀತ್ ಸಿಂಗ್ ಅವರು ತಡೆದ ಚೆಂಡು ಅಲ್ಲೇ ಇದ್ದ ಆ್ಯಶಿಕ್ ಕುರುನಿಯನ್ ಕಾಲಿಗೆ ಬಡಿದು ಮತ್ತೆ ಗೋಲ್ ಪೆಟ್ಟಿಗೆ ಸೇರಿಕೊಂಡಿತು. ಹೀಗಾಗಿ ಬ್ಲೂಸ್ ಹಿನ್ನಡೆಗೆ ಒಳಗಾಯಿತು.
ಮರು ಕ್ಷ ಣವೇ ಬ್ಲೂಸ್ ಸಮಬಲದ ಹೋರಾಟ ತೋರುವ ಅವಕಾಶ ಪಡೆಯಿತ್ತಾದರೂ ಇದರ ಸಂಪೂರ್ಣ ಲಾಭ ಎತ್ತುವಲ್ಲಿವಿಫಲಗೊಂಡಿತು. ಚೆಂಡಿನ ಮೇಲೆ ಹಿಡಿತ ಸಾಧಿಸಿದ ರೋಶನ್ ನೋರೆಮ್, ಗೋಲ್ ಗಳಿಸಲು ಸುನೀಲ್ ಛೆಟ್ರಿಗೆ ವೇದಿಕೆ ಮಾಡಿಕೊಟ್ಟರು. ಆದರೆ ಛೆಟ್ರಿ ಹೊಡೆದ ಚೆಂಡು ಕೂದಲೆಳೆಯ ಅಂತರದಲ್ಲಿಪೆಟ್ಟಿಗೆ ಮೇಲ್ಭಾಗದಿಂದ ಹೊರಕ್ಕೆ ಚಿಮ್ಮಿತು. ಹೀಗಾಗಿ ಛೆಟ್ರಿ ನಿರಾಸೆ ಭಾವ ತೋರಿದರು. ಇದಕ್ಕೂ ಮುನ್ನ 13ನೇ ನಿಮಿಷದಲ್ಲಿಮುನ್ಪಡೆ ಆಟಗಾರರು ನೀಡಿದ ಚೆಂಡಿನ ಪಾಸ್ ಸ್ವೀಕರಿಸಲು ಮೈದಾನದ ಮಧ್ಯ ಭಾಗದಿಂದ ಓಡಿ ಬಂದ ನಾಯಕ ಸುನೀಲ್ ಛೆಟ್ರಿಗೆ ಅಡ್ಡಿಪಡಿಸಿದ ಕಾರಣ ಗೋವಾ ತಂಡದ ಗ್ಲೇನ್ ಮಾರ್ಟಿನ್ಸ್ ರೆಫರಿಯಿಂದ ಹಳದಿ ಕಾರ್ಡ್ ಪಡೆದರು.
ಉಭಯ ತಂಡಗಳು ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಕಾರಣ 8ನೇ ನಿಮಿಷದಲ್ಲಿಎಫ್‌ಸಿ ಗೋವಾ ಗೋಲ್ ಗಳಿಕೆಯ ದೊಡ್ಡ ಅವಕಾಶ ಪಡೆಯಿತು. ತಂಡದ ಡಿಫೆಂಡರ್‌ನಿಂದ ಸುಂದರ ಪಾಸ್ ಪಡೆದ ಜೊರ್ಗೆ ಒರ್ಟಿಜ್ ಚೆಂಡನ್ನು ಗೋಲಿನತ್ತ ಕೊಂಡೊಯ್ದರು. ಆದರೆ ಬ್ಲೂಸ್ ಆಟಗಾರರು ಪ್ರಬಲವಾಗಿ ಹಿಮ್ಮೆಟ್ಟಿಸುವ ಮೂಲಕ ತಂಡಕ್ಕೆ ಆಗುತ್ತಿದ್ದ ಹಿನ್ನಡೆಯನ್ನು ತಪ್ಪಿದರು. ಸತತ ಎರಡನೇ ಜಯದ ನಿರೀಕ್ಷೆಯಲ್ಲಿಅಖಾಡಕ್ಕಿಲಿದ ಎಫ್‌ಸಿ ಗೋವಾ 3-4-1-2 ರಚನೆಯೊಂದಿಗೆ ಟಾಸ್ ಗೆದ್ದು ಪಂದ್ಯ ಆರಂಭಿಸಿದರೆ, ಬ್ಲೂಸ್ ಎಂದಿನಂತೆ 4-3-3 ಸ್ವರೂಪದಲ್ಲಿಆಟ ಆರಂಭಿಸಿತು.
ಬೆಂಗಳೂರು ಎಫ್‌ಸಿ ಡಿಸೆಂಬರ್ 16ರಂದು ಬಂಬೋಲಿಮ್‌ನ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿಎಟಿಕೆ ಮೋಹನ್ ಬಗಾನ್ ತಂಡದ ಸವಾಲು ಎದುರಿಸಲಿದೆ.