ಈಸ್ಟ್ ಬೆಂಗಾಲ್ ವಿರುದ್ಧದ ಪಂದ್ಯಕ್ಕಾಗಿ ತಿಲಕ್ ಮೈದಾನಕ್ಕೆ ತೆರಳಿದ ಬ್ಲೂಸ್

ಯುವ ತಂಡವನ್ನು ಅಂಗಳಕ್ಕೆ ಇಳಿಸುವ ಯೋಜನೆ – ಪಾರ್ತಲು, ಜುವನಾನ್ ಸ್ಥಾನ ಕಳೆದುಕೊಳ್ಳುವುದಾಗಿ ಮೂಸಾ ಸುಳಿವು.

ಮಧ್ಯಂತರ ಮುಖ್ಯ ಕೋಚ್ ನೌಶಾದ್ ಮೂಸಾ ನೇತೃತ್ವದ ತಂಡ ಮಂಗಳವಾರ ಗೋವಾದ ತಿಲಕ್ ಮೈದಾನದಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ವಿರುದ್ಧ ಕಠಿಣ ಪಂದ್ಯದ ನಿರೀಕ್ಷೆಯಲ್ಲಿದೆ. ಈ ಕ್ಯಾಲೆಂಡರ್ ವರ್ಷದಲ್ಲಿ ಬ್ಲೂಸ್ ಗೆಲುವು ಸಾಧಿಸದಿದ್ದರೂ, ಇದರ ರಿವರ್ಸ್ ಫಿಕ್ಸ್ಚರ್‌ ಪಂದ್ಯದಲ್ಲಿ ಮ್ಯಾಟಿ ಸ್ಟೇನ್‌ಮನ್ ಗಳಿಸಿದ ಗೋಲ್ ಇಂದ ಗೆಲುವು ಸಾಧಿಸಿದ್ದ ರಾಬಿ ಫೌಲರ್-ನೇತೃತ್ವದ ತಂಡದ ವಿರುದ್ಧದ ಜಿದ್ದಿನ ಆಟ ಇದಾಗಿರಲಿದೆ.

“ನೀವು ಅವರ ಕಳೆದ ಪಂದ್ಯವನ್ನು ನೋಡಿದರೆ, ದ್ವಿತೀಯಾರ್ಧದಲ್ಲಿ ಈಸ್ಟ್ ಬೆಂಗಾಲ್ ತಂಡವು ಎಫ್‌ಸಿ ಗೋವಾ ವಿರುದ್ಧ ಪ್ರಾಬಲ್ಯ ಸಾಧಿಸಿತ್ತು. ಪಂದ್ಯದಿಂದ ಪಂದ್ಯಕ್ಕೆ ಆಟದಲ್ಲಿ ಅವರು ಸುಧಾರಿಸುತ್ತಿದ್ದಾರೆ. ಅವರು ಸೃಷ್ಟಿಸುತ್ತಿರುವ ಅವಕಾಶಗಳನ್ನು ಅವರು ಪರಿವರ್ತಿಸುತ್ತಿಲ್ಲ ಎಂಬುದು ನಿಜ, ಆದರೆ ಇದರರ್ಥ ನಾವು ನಿರಾಳವಾಗಿರಲು ಸಾಧ್ಯವಿಲ್ಲ. ಬ್ರೈಟ್ [ಎನೋಬಖಾರೆ] ಮತ್ತು [ಜಾಕ್ವೆಸ್] ಮಾಘೋಮಾ ಇತ್ತೀಚೆಗೆ ಆಡುತ್ತಿರುವ ರೀತಿ ಗಮನಿಸಿದರೆ, ಪಂದ್ಯ ಸುಲಭವಾಗಿರುವುದಿಲ್ಲ. ಗೆಲುವು ಪಡೆಯಲು ನಾವು ಅತ್ಯುತ್ತಮ ಪ್ರದರ್ಶನ ನೀಡುವುದರಿಂದ ಮಾತ್ರ ಫಲ ಸಿಗಲಿದೆ ಎಂದು ನಮಗೆ ತಿಳಿದಿದೆ.”

ಕಳೆದ ಪಂದ್ಯದಲ್ಲಿ ಬ್ಲೂಸ್ ಕ್ಲೀನ್ ಶೀಟ್‌ ಗಳಿಸಲು ಕೇವಲ ಐದು ನಿಮಿಷಗಳ ಆಟ ಬಾಕಿ ಇತ್ತು ಮತ್ತು ಹೈದರಾಬಾದ್ ಎಫ್‌ಸಿ ವಿರುದ್ಧ ಮೂಸಾ ನೇತೃತ್ವದ ಮೊದಲ ಗೆಲುವು ಸಾಧಿಸಲು ಅವಕಾಶವಿತ್ತು. ಇದಕ್ಕೆ ಬದಲಾಗಿ, ಕೊನೆಯ ನಿಮಿಷಗಳಲ್ಲಿ ಎದುರಾಳಿಗೆ ಎರಡು ಗೋಲುಗಳನ್ನು ಬಿಟ್ಟುಕೊಡಲಾಗಿ ಅಂಕ ಸಮಾನವಾಗಿ ಹಂಚಿಕೊಳ್ಳಬೇಕಾಯ್ತು. ಈ ಹಿನ್ನಡೆಯ ಹೊರತಾಗಿಯೂ, ಹಲವಾರು ತಂಡಗಳು ಇನ್ನೂ ಪ್ಲೇಆಫ್ ಸ್ಥಾನ ಗಳಿಸುವ ಓಟದಲ್ಲಿ ತೊಡಗಿರುವುದರಿಂದ ಪಂದ್ಯಾವಳಿಯಲ್ಲಿ ಅವಕಾಶಗಳು ಹಿರಿದಾಗಿದ್ದು, ತಂಡದಲ್ಲಿನ ಆಟಗಾರರಲ್ಲಿ ವಿಶ್ವಾಸ ಮತ್ತು ಶಿಬಿರದ ಮನಸ್ಥಿತಿ ಸಕಾರಾತ್ಮಕವಾಗಿಯೇ ಉಳಿದಿದೆ.

“ಹೈದರಾಬಾದ್ ಎಫ್‌ಸಿ ವಿರುದ್ಧ ಮುನ್ನಡೆ ಕಳೆದುಕೊಂಡಿದ್ದು ಅಷ್ಟು ಸುಲಭವಾಗಿರಲಿಲ್ಲ. ಲೀಗ್ ಹಂತದಲ್ಲಿ ಆರು ಪಂದ್ಯಗಳು ಇನ್ನು ಬಾಕಿ ಉಳಿದಿವೆ ಮತ್ತು ಶಿಬಿರದಲ್ಲಿ ಸಕಾರಾತ್ಮಕ ಮನಸ್ಥಿತಿ ಇದೆ. ಅನೇಕ ತಂಡಗಳು ನಿಕಟವಾಗಿ ಅಂಕಪಟ್ಟಿಯಲ್ಲಿ ಹತ್ತಿರದಲ್ಲಿರುವುದರಿಂದ, ಪ್ಲೇಆಫ್‌ಗಾಗಿ ಸೆಣೆಸುತ್ತಿವೆ ಮತ್ತು ಒಂದು ಗೆಲುವು ನಮ್ಮನ್ನು ಅಂಕಪಟ್ಟಿಯಲ್ಲಿ ಮೇಲೇರಿಸುತ್ತದೆ. ಅದು ಉತ್ತಮ ಫಲಿತಾಂಶಗಳನ್ನು ಪಡೆಯುವತ್ತ ನಮ್ಮನ್ನು ಪ್ರೇರೇಪಿಸಲಿದೆ ಮತ್ತು ಆಟಗಾರರು ಪ್ರೇರೇಪಿಸಲ್ಪಡುತ್ತಾರೆ ಮತ್ತು ಮುಂದಿನ ಆಟಗಳತ್ತ ಗಮನ ಹರಿಸಲು ಸುಲಭವಾಗುತ್ತದೆ.”

ಅಭಿಯಾನದಲ್ಲಿ ಏಳನೇ ಹಳದಿ ಕಾರ್ಡ್ ಪಡೆದ ಆಸ್ಟ್ರೇಲಿಯಾ ಆಟಗಾರ ಎರಿಕ್ ಪಾರ್ತಲು ಅವರು ತಂಡದಲ್ಲಿ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ. ಏತನ್ಮಧ್ಯೆ, ಹಿಂದಿನ ಪಂದ್ಯದಲ್ಲಿ ಗಾಯದಿಂದ ಹೊರಬಂದ ಜುವನನ್ ಗೊನ್ಜಾಲೆಜ್ ಸಹ ಬ್ಲೂಸ್ ತಂಡದಿಂದ ಹೊರಗುಳಿಯಲಿದ್ದಾರೆ. “ನಾವು ಎರಿಕ್ ಮತ್ತು ಜುವನಾನ್ ಅವರನ್ನು ಕಳೆದುಕೊಳ್ಳುತ್ತಿದ್ದರೂ, ನಮ್ಮಲ್ಲಿರುವ ಎಲ್ಲ ಭಾರತೀಯ ಆಟಗಾರರೊಂದಿಗೆ ನಾವು ನಂಬಿಕೆಯಿಂದ ಇದ್ದೇವೆ ಮತ್ತು ನಾಳೆ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಲು ಅವರಿಗೆ ಅವಕಾಶವಿದೆ.”

ಡಿಮಾಸ್ ಡೆಲ್ಗಾಡೊ ಅವರ ಅನುಪಸ್ಥಿತಿಯೊಂದಿಗೆ, ಹಲವಾರು ಯುವಕರು ಸೇರಿದಂತೆ ಭಾರತೀಯರಿಂದ ತುಂಬಿದ ತಂಡದೊಂದಿಗೆ ಮಂಗಳವಾರ ಈಸ್ಟ್ ಬೆಂಗಾಲ್ ವಿರುದ್ಧ ಮೈದಾನಕ್ಕೆ ಇಳಿಯುವ ಸೂಚನೆ ನೀಡಿದ್ದಾರೆ. “ನಾವು ಯುವಕರಿಗೆ ಅವಕಾಶ ನೀಡುವ ಗುರಿಯನ್ನು ಹೊಂದಿದ್ದೇವೆ, ಆದರೆ ಪಿಚ್‌ನಲ್ಲಿ ಸಮತೋಲನ ಇರುವುದನ್ನು ಖಚಿತಪಡಿಸಿಕೊಂಡು ಮುಂದುವರೆಯುತ್ತೇವೆ. ಲಿಯಾನ್ [ಅಗಸ್ಟೀನ್] ಆಡಲಿದ್ದು, ಅವರೊಂದಿಗೆ ಇಬ್ಬರು ಅಥವಾ ಮೂವರು ಹೊಸ ಆಟಗಾರರು ಪಂದ್ಯದಲ್ಲಿ ಆಡುವ ಅವಕಾಶ ಪಡೆಯಲಿದ್ದಾರೆ. ಪರಾಗ್ [ಶ್ರೀವಾಸ್] ಸುಧಾರಿಸುತ್ತಿದ್ದು ತಂಡ ಉತ್ತಮಗೊಳ್ಳಲಿದೆ. ಮುಂದಿನ ಆವೃತ್ತಿಯಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಲು ಯುವ ಆಟಗಾರರಿಗೆ ಇದು ಸಹಾಯ ಮಾಡುವ ಅನುಭವವನ್ನು ನೀಡುತ್ತದೆ.”

ಎಸ್ ಸಿ ಈಸ್ಟ್ ಬೆಂಗಾಲ್ ಮತ್ತು ಬ್ಲೂಸ್‌ ನಡುವೆ ಪಂದ್ಯ ಮಂಗಳವಾರ ಸಂಜೆ 7.30 ಕ್ಕೆ ಆರಂಭವಾಗಲಿದ್ದು, ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ಸ್ಟಾರ್ ಮತ್ತು ಜಿಯೋ ಟಿವಿಯಲ್ಲಿ ನೇರ ಪ್ರಸಾರವಾಗಲಿದೆ.

Malcare WordPress Security