ಇಂಡಿಯನ್ ಸೂಪರ್ ಲೀಗ್ನ ಆರಂಭಿಕ ಪಂದ್ಯದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ತಂಡವನ್ನ ಎದುರಿಸಲಿರುವ ಬ್ಲೂಸ್

ಬೆಂಗಳೂರು ಎಫ್‌ಸಿ ತಂಡವು ಹೈಲ್ಯಾಂಡರ್ಸ್‌ ಅನ್ನು ಬಾಂಬೋಲಿಮ್‌ನಲ್ಲಿ ಮುಖಾಮುಖಿಯಾಗಲಿದ್ದು ಮಾರ್ಕೊ ಪೆಜೈಯುಲಿ ಅವರಿಗೆ ಇದು ಚೊಚ್ಚಲ ISL ಪಂದ್ಯಾವಳಿಯಾಗಿರಲಿದೆ

ಬೆಂಗಳೂರು: ಗೋವಾದ ಬಾಂಬೋಲಿಮ್‌ನಲ್ಲಿರುವ ಜಿಎಂಸಿ ಅಥ್ಲೆಟಿಕ್ ಸ್ಟೇಡಿಯಂನಲ್ಲಿ ಶನಿವಾರದಂದು ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ವಿರುದ್ಧದ ತಮ್ಮ ಇಂಡಿಯನ್ ಸೂಪರ್ ಲೀಗ್ ಅಭಿಯಾನವನ್ನು ಪ್ರಾರಂಭಿಸಲು ತಂಡವು ಉತ್ಸುಕವಾಗಿದೆ ಎಂದು ಮಾರ್ಕೊ ಪೆಜ್ಜೈಯುಲಿ ಹೇಳಿದರು. ಆವೃತ್ತಿಪೂರ್ವ ಅಭ್ಯಾಸದಲ್ಲಿ ಉತ್ಸಾಹದೊಂದಿಗೆ ತೊಡಗಿದ್ದ ಬ್ಲೂಸ್ ಕಳೆದ ಆವೃತ್ತಿಯ ಸೆಮಿಫೈನಲಿಸ್ಟ್‌ ವಿರುದ್ಧ ಅಂಗಳದಲ್ಲಿ ಎದುರಾಗಲು ಕಾಯುತ್ತಿರುವುದಾಗಿ ಬ್ಲೂಸ್ ನ ಮುಖ್ಯಸ್ಥ ಹೇಳಿದರು.

“ನಾರ್ತ್ ಈಸ್ಟ್ ಯುನೈಟೆಡ್ ಬಲವಾದ ಆಟಗಾರರ ಉತ್ತಮ ತಂಡವಾಗಿದ್ದು ಉತ್ತೇಜಿಸುವ ಮನೋಭಾವದ ತರಬೇತುದಾರ ತಂಡಕ್ಕೆ ಜೊತೆಯಾಗಿದ್ದಾರೆ. ಅವರು ಕಳೆದ ವರ್ಷ ಸೆಮಿಫೈನಲ್ ತಲುಪಿದ್ದರು ಮತ್ತು ನಾವು ಹಿಂದಿನ ಫಲಿತಾಂಶಗಳನ್ನು ನೋಡಲು ಬಯಸುವುದಿಲ್ಲ, ನಾವು ಅವರನ್ನು ಎದುರಾಳಿಯಾಗಿ ಗೌರವಿಸುತ್ತೇವೆ. ಅವರು ಗುಣಮಟ್ಟದ ಆಟಗಾರರನ್ನು ಹೊಂದಿದ್ದಾರೆ ಮತ್ತು ನಾವು ಅವರ ವಿರುದ್ಧ ಉತ್ತಮ ಪ್ರದರ್ಶನ ನೀಡಬೇಕಾಗಿದೆ ”ಎಂದು ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಪೆಜೈಯುಲಿ ಹೇಳಿದರು.

ಬೆಂಗಳೂರಿನ ಪರ ಆಡಲಿರುವ ಈ ಆವೃತ್ತಿಯ ವಿದೇಶಿ ಆಟಗಾರರಲ್ಲಿ ಬ್ರೆಜಿಲಿಯನ್ನರಾದ ಅಲನ್ ಕೋಸ್ಟಾ, ಬ್ರೂನೋ ರಾಮಿರೆಸ್ ಮತ್ತು ಕ್ಲೀಟನ್ ಸಿಲ್ವಾ ಇದ್ದಾರೆ. ಅವರೊಂದಿಗೆ, ಇರಾನ್ ನ ಮಿಡ್‌ಫೀಲ್ಡರ್ ಇಮಾನ್ ಬಸಾಫಾ, ಕಾಂಗೋ ದ ಸ್ಟ್ರೈಕರ್ ಪ್ರಿನ್ಸ್ ಇಬಾರಾ ಮತ್ತು ಗಬೊನ್ ನ ಸೆಂಟರ್-ಬ್ಯಾಕ್ ಯರೊಂಡು ಮುಸಾವು-ಕಿಂಗ್ ತಂಡದ ಭಾಗವಾಗಿದ್ದಾರೆ.

“ಈ ಆವೃತ್ತಿಯಲ್ಲಿ ನಮ್ಮ ತಂಡ ಅನುಭವಿಗಳ ಮತ್ತು ಯುವ ಆಟಗಾರರ ಉತ್ತಮ ಮಿಶ್ರಣವಾಗಿರಲಿದೆ ಮತ್ತು ತಂಡವು ಕಳೆದ ಕೆಲವು ತಿಂಗಳುಗಳಲ್ಲಿ ಉತ್ತಮವಾಗಿ ಹೊಂದಿಕೊಂಡಿದ್ದಾರೆ. ನಾವು ಅವರಿಂದ ಏನನ್ನು ನಿರೀಕ್ಷಿಸುತ್ತೇವೆ ಎಂಬುದು ಅರ್ಥಮಾಡಿಕೊಂಡಿದ್ದಾರೆ ಮತ್ತು ಆವೃತ್ತಿಪೂರ್ವ ಅವಧಿಯಲ್ಲಿ ಅವರು ಹೇಗೆ ಆಟದಲ್ಲಿ ಸುಧಾರಿಸಿದ್ದಾರೆ ಎಂಬುದನ್ನು ನೋಡಲು ಅದ್ಭುತವೆನಿಸುತ್ತದೆ. ನಮ್ಮ ಯುವ ಆಟಗಾರರು ಸಹ ಉತ್ತಮವಾಗಿ ಅಭಿವೃದ್ಧಿ ಹೊಂದುತ್ತಿದ್ದಾರೆ ಮತ್ತು ಅವರು ISL ನಲ್ಲಿ ಪಾಲ್ಗೊಳ್ಳುವುದನ್ನು ನೋಡಲು ನಾವು ಎದುರು ನೋಡುತ್ತಿದ್ದೇವೆ”. ಎಂದು ಪೆಜೈಯುಲಿ ತಿಳಿಸಿದರು.

ಕಳೆದ ಆವೃತ್ತಿಯ ಅಂತ್ಯದಲ್ಲಿ ಮುಖ್ಯ ತರಬೇತುದಾರನಾಗಿ ಬ್ಲೂಸ್‌ಗೆ ಸೇರ್ಪಡೆಯಾದ ಜರ್ಮನ್ ಮೂಲದ ಮಾಜಿ ಇಟಾಲಿಯನ್ ಆಟಗಾರ ತಮ್ಮ ತಂಡದಲ್ಲಿ ಆಯ್ಕೆಗೆ ವಿದೇಶಿ ಆಟಗಾರರು ಪರಿಪೂರ್ಣವಾಗಿ ಲಭ್ಯವಿದ್ದು, ಆರಂಭಿಕ ಮುಖಾಮುಖಿಯಲ್ಲಿ ಆಯ್ಕೆಗೆ ಕೆಲ ಭಾರತೀಯ ಆಟಗಾರರ ಗಾಯದ ಸಮಸ್ಯೆ ತೊಡಕಾಗಲಿದೆ ಎಂದು ಹೇಳಿದರು.

“ನಿಮಗೆ ತಿಳಿದಿರುವಂತೆ, ಹರ್ಮನ್‌ಪ್ರೀತ್ ಅವರ ಮೊಣಕಾಲು ಗಾಯದ ಕಾರಣದಿಂದಾಗಿ ಇನ್ನೂ ತಂಡವನ್ನು ಸೇರಿಕೊಂಡಿಲ್ಲ ಮತ್ತು ಪರಾಗ್ ಅವರ ಮೊಣಕೈಗೆ ಕೆಲವು ವಾರಗಳ ಹಿಂದೆಯಷ್ಟೇ ಗಾಯಮಾಡಿಕೊಂಡರು ಹಾಗಾಗಿ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆಕಾಶದೀಪ್ (ಸಿಂಗ್) ಮತ್ತು ರೋಹಿತ್ (ಕುಮಾರ್) ಕೂಡ ಗಾಯಗೊಂಡಿದ್ದಾರೆ ಮತ್ತು ಇವರೆಲ್ಲಾ ಮೊದಲ ಪಂದ್ಯಕ್ಕೆ ಲಭ್ಯವಿರೋದಿಲ್ಲ”. ಎಂದು ಪೆಜೈಯುಲಿ ಖಚಿತಪಡಿಸಿದರು.

ಕಳೆದ ಆವೃತ್ತಿಯಲ್ಲಿ ಪ್ಲೇಆಫ್ ಆಡಿದ್ದ ನಾರ್ತ್ ಈಸ್ಟ್ ಯುನೈಟೆಡ್ ತಂಡಕ್ಕೆ ಮುಖ್ಯ ತರಬೇತುದಾರ ಖಾಲಿದ್ ಜಮಿಲ್ ನೇತೃತ್ವ ಮುಂದುವರೆಸಲಿದ್ದು, ಜಮೈಕಾದ ಸ್ಟ್ರೈಕರ್ ಡೆಶೋರ್ನ್ ಬ್ರೌನ್ ಮತ್ತು ಮಾರ್ಟಿನಿಕ್ ಇಂಟರ್ನ್ಯಾಷನಲ್ ಮಥಿಯಾಸ್ ಕೊರಿಯರ್ ಅವರ ಉತ್ತಮ ಆಟದ ನಿರೀಕ್ಷೆಯಲ್ಲಿರುತ್ತಾರೆ. ಹೈಲ್ಯಾಂಡರ್ಸ್‌ ನ ಡಿಫೆನ್ಸ್ ಅಲ್ಲಿ ಹೊಸ ಒಪ್ಪಂದ ಮಾಡಿಕೊಂಡ ಆಸ್ಟ್ರೇಲಿಯಾದ ಪ್ಯಾಟ್ರಿಕ್ ಫ್ಲೋಟ್‌ಮ್ಯಾನ್ ಮತ್ತು ಮಾಜಿ ಮುಂಬೈ ಸಿಟಿ ಎಫ್‌ಸಿ ಮಿಡ್‌ಫೀಲ್ಡರ್ ಹೆರ್ನಾನ್ ಸಂತಾನಾ ಅಂಗಳದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ನಾರ್ತ್‌ಈಸ್ಟ್ ಯುನೈಟೆಡ್ ವಿರುದ್ಧ ಬ್ಲೂಸ್‌ ಮುಖಾಮುಖಿಯಾಗಲಿದ್ದು, ರಾತ್ರಿ 7.30ಕ್ಕೆ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಡಿಸ್ನಿ+ಹಾಟ್‌ಸ್ಟಾರ್ ಮತ್ತು JioTV ಯಲ್ಲಿ ನೇರ ಪ್ರಸಾರವಾಗಲಿದೆ.

Malcare WordPress Security