ಬಿಎಫ್ಸಿ ಫೈನಲ್ ಕನಸು ಭಗ್ನ

ಸೆಮಿಫೈನಲ್‌ನ ದ್ವಿತೀಯ ಚರಣದಲ್ಲಿ ಎಟಿಕೆ ವಿರುದ್ಧ 1-3ರಲ್ಲಿ ಮಣಿದ ಕಾರ್ಲೊಸ್ ಬಳಗ

ಕೋಳ್ಕೊತಾ: ಆರಂಭಿಕ ಮುನ್ನಡೆಯ ಹೊರತಾಗಿಯೂ ಪಂದ್ಯದ ದ್ವಿತೀಯಾರ್ಧದಲ್ಲಿ ಸಂಪೂರ್ಣ ರಕ್ಷಣಾ ವೈಫಲ್ಯ ಅನುಭವಿಸಿದ ಬೆಂಗಳೂರು ಎಫ್ ಸಿ ಪ್ರಸಕ್ತ ಐಎಸ್ ಎಲ್ ಟೂರ್ನಿಯ ದ್ವಿತೀಯ ಸೆಮಿಫೈನಲ್‌ನ ದ್ವಿತೀಯ ಚರಣದಲ್ಲಿ ಎಟಿಕೆ ವಿರುದ್ಧ ಪರಾಭವಗೊಂಡಿತು. ಹೀಗಾಗಿ ಸತತ ಎರಡನೇ ಬಾರಿ ಪ್ರಶಸ್ತಿ ಗೆಲ್ಲುವ ಕೋಚ್ ಕಾರ್ಲೊಸ್ ಕ್ವಾಡ್ರಟ್ ಬಳಗದ ಕನಸು ಸೆಮಿಫೈನಲ್ ಹಂತದಲ್ಲೇ ಭಗ್ನಗೊಂಡಂತಾಗಿದೆ.

ಇಲ್ಲಿನ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಹೈವೋಲ್ವೇಜ್ ಹಣಾಹಣಿಯಲ್ಲಿ ಸುನಿಲ್ ಛತ್ರಿ ಸಾರಥ್ಯದ ಬೆಂಗಳೂರು ತಂಡ 1-3 ಗೋಲ್‌ಗಳ ಅಂತರದಲ್ಲಿ ಆತಿಥೇಯ ಎಟಿಕೆ ವಿರುದ್ಧ ಪರಾಭವಗೊಂಡಿತು. ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದ ಸೆಮಿಫೈನಲ್‌ನ ಮೊದಲ ಚರಣದಲ್ಲಿ 1-0 ಅಂತರದಲ್ಲಿ ಜಯ ಗಳಿಸಿದ್ದ ಬ್ಲೂಸ್, ಫೈನಲ್ ಪ್ರವೇಶಿಸಲು ಕನಿಷ್ಠ ಡ್ರಾ ಮಾಡಿಕೊಳ್ಳಬೇಕಿತ್ತು. ಆದರೆ 3-1ರಲ್ಲಿ ಸೋತ ಪರಿಣಾಮ ಗೋಲ್‌ಗಳ ಸರಾಸರಿಯಲ್ಲಿ 2-3ರಲ್ಲಿ ಹಿನ್ನಡೆ ಅನುಭವಿಸಿದ ಕಾರಣ ಬ್ಲೂಸ್ ಫೈನಲ್ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿತು.

ಬೆಂಗಳೂರು ಎಫ್ ಸಿ ಪರ ಆಶಿಶ್ ಕುರುನಿಯನ್ (5ನೇ ನಿಮಿಷ) ಏಕೈಕ ಗೋಲ್ ಗಳಿಸಿದರೆ ನಾಯಕ ಸುನಿಲ್ ಛಟ್ರಿ ಸೇರಿದಂತೆ ಪ್ರಮುಖ ಆಟಗಾರರು ತಂಡಕ್ಕೆ ನೆರವಾಗುವಲ್ಲಿ ವಿಫಲರಾದರು. ಆದರೆ ಎಟಿಕೆ ಪರ ರಾಯ್ ಕೃಷ್ಣ (30ನೇ ನಿ.), ಒಂದು ಗೋಲ್ ಸಿಡಿಸಿದರೆ, ಡೇವಿಡ್ ವಿಲಿಯಮ್ಸ್ (63ನೇ ನಿ.ಪೆನಾಲ್ಟಿ, 79ನೇ ನಿಮಿಷ) ಎರಡು ಗೋಲ್ ದಾಖಲಿಸಿ ತಂಡದ ಫೈನಲ್ ಪ್ರವೇಶವನ್ನು ಖಾತರಿಪಡಿಸಿದರು. ಎಟಿಕೆ ಮಾರ್ಚ್ 14ರಂದು ಗೋವಾದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಚೆನ್ನೈಯಿನ್ ಎಫ್ಸಿಯನ್ನು ಎದುರಿಸಲಿದೆ. ಚೆನ್ನೈಯಿನ್ ಎಫ್ಸಿ ಮೊದಲ ಸೆಮಿಫೈನಲ್ ಎರಡೂ ಚರಣದಲ್ಲೂ ಲೀಗ್ ಹಂತದ ಅಗ್ರಸ್ಥಾನಿ ಎಫ್‌ಸಿ ಗೋವಾ ತಂಡವನ್ನು ಬಗ್ಗು ಬಡಿದು ಫೈನಲ್‌ಗೆ ಮುನ್ನಡೆದಿದೆ.

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಮೂರನೇ ಬಾರಿ ಫೈನಲ್ ಪ್ರವೇಶಿಸುವ ಇರಾದೆಯೊಂದಿಗೆ ಕಣಕ್ಕಿಳಿದ ಬೆಂಗಳೂರು ಎಫ್ಸಿ ಪ್ರಥಮಾರ್ಧಕ್ಕೆ 1-1ರಲ್ಲಿ ಸಮಬಲದ ಹೋರಾಟ ಎದುರಿಸಿದ ಹೊರತಾಗಿಯೂ ಆರಂಭದಲ್ಲೇ ಗೋಲ್ ಗಳಿಸುವ ಮೂಲಕ ಮೇಲುಗೈ ಸಾಸಿತು.

ಪಂದ್ಯದ 5ನೇ ನಿಮಿಷದಲ್ಲಿ ಆಶಿಕ್ ಕುರುನಿಯನ್ ಅವರಿಂದ ಗೋಲಿನ ಖಾತೆ ತೆರೆದ ಕಾರ್ಲೊಸ್ ಕ್ವಾಡ್ರಟ್ ಬಳಗ 1-0 ಅಂತರದಲ್ಲಿ ಮುನ್ನಡೆ ಕಂಡುಕೊಂಡಿತು. 17ನೇ ನಿಮಿಷದಲ್ಲಿ ಬಿಎಫ್‌ಸಿ ಡಿಫೆಂಡರ್ ಫ್ರಾನ್ಸಿಸ್ಕೋ ಬೊರ್ಗೊಸ್ ಅದ್ಭುತವಾಗಿ ಗೋಲಿನ ಯತ್ನ ಮಾಡಿದರು. ಆದರೆ ಚೆಂಡನ್ನು ಹಿಮ್ಮೆಟ್ಟಿಸುವಲ್ಲಿ ಎದುರಾಳಿ ತಂಡದ ಅರಿಂದಮ್ ಭಟ್ಟಚಾರ್ಜ ಯಾವುದೇ ತಪ್ಪೆಸಗದೆ ತಂಡಕ್ಕಾಗುತ್ತಿದ್ದ ಮತ್ತೊಂದು ಹಿನ್ನಡೆಯನ್ನು ತಗ್ಗಿಸಿದರು.

ಪ್ರವಾಸಿ ತಂಡಕ್ಕೆ ದಿಟ್ಟ ಹೋರಾಟ ನೀಡುವ ಯತ್ನದಲ್ಲಿ ಎಟಿಕೆ ಸಹ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಇದರ ಫಲವಾಗಿ ಎಟಿಕೆ ತಂಡದ ಸ್ಟಾರ್ ಆಟಗಾರ ಡೇವಿಡ್ ವಿಲಿಯಮ್ಸ್ 23ನೇ ನಿಮಿಷದಲ್ಲಿ ಸನಿಹದಿಂದ ಗೋಲ್ ಗಳಿಕೆಯ ಯತ್ನ ಮಾಡಿದರು. ಆದರೆ ಟೂರ್ನಿಯಲ್ಲಿ ಅತ್ಯುತ್ತಮ ಗೋಲ್‌ಕೀಪರ್ ಎನಿಸಿರುವ ಗುರ್‌ಪ್ರೀತ್ ಸಿಂಗ್ ಸಂಧು ಅಮೋಘವಾಗಿ ರಕ್ಷಣೆ ಮಾಡಿದರು.

ಆದಾಗ್ಯೂ 30ನೇ ನಿಮಿಷದಲ್ಲಿ ಸುನಿಲ್ ಛಟ್ರಿ ಪಡೆಯ ರಕ್ಷಣಾ ಕೋಟೆಯನ್ನು ಭೇದಿಸಿದ ರಾಯ್ ಕೃಷ್ಣ, 1-1ರ ಹೋರಾಟಕ್ಕೆ ಸಾಕ್ಷಿಯಾದರು. ಮೊದಲಾರ್ಧದ ಕೊನೆಯ ಹತ್ತು ನಿಮಿಷಗಳಲ್ಲಿ ಉಭಯ ತಂಡಗಳ ಆಟಗಾರರು ಮುನ್ನಡೆ ಯತ್ನಿಸಿದ ಪರಿಣಾಮ ಹಲವು ಸಲ ಪ್ರಮಾದ ಕಂಡು ಬಂದವು. ಹೀಗಾಗಿ ಇತ್ತಂಡಗಳ ಆಟಗಾರರು ರೆಫರಿಯಿಂದ ಹಳದಿ ಕಾರ್ಡ್‌ಗೆ ಗುರಿಯಾದರು. ಆದರೆ ಗೋಲ್ ಮಾತ್ರ ದಾಖಲಾಗಲಿಲ್ಲ. ಹೀಗಾಗಿ ತಲಾ ಒಂದು ಗೋಲಿನ ಸಮಬಲದ ಹೋರಾಟದೊಂದಿಗೆ ವಿರಾಮಕ್ಕೆ ತೆರಳಿದವು.

ಎಟಿಕೆ, ಗೋವಾದ ಜವಾಹರ್‌ಲಾಲ್ ನೆಹರು ಕ್ರೀಡಾಂಗಣದಲ್ಲಿ ಮಾರ್ಚ್ 14ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಚೆನ್ನೈಯಿನ್ ಎಫ್ಸಿ ತಂಡವನ್ನು ಎದುರಿಸಲಿದೆ.

Malcare WordPress Security