ಬಿ.ಎಫ್.ಸಿ. ಯುವ ಆಟಗಾರರಿಗೆ ಎ.ಟಿ.ಕೆ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶ

ಮಹತ್ವದ ಮೂರು ಪಂದ್ಯಗಳ ದೃಷ್ಠಿಯಲ್ಲಿ, ತಂಡದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡುವ ಬಗ್ಗೆ ಕ್ವಾಡ್ರತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಇಂಡಿಯನ್ ಸೂಪರ್ ಲೀಗ್ ಅಲ್ಲಿ ತಮ್ಮ ತಂಡ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿದ್ದು , ಮುಂಬರುವ ಮಹತ್ವದ 3 ಪಂದ್ಯಗಳ ಮೇಲೆ ನಿರೀಕ್ಷೆ ಹೆಚ್ಚಾಗಿರುವ ಸಂಧರ್ಭದಲ್ಲಿ ಬೆಂಗಳೂರು ಎಫ್ ಸಿ ತಂಡದ ಮುಖ್ಯ ಕೋಚ್ ಕಾರ್ಲೆಸ್ ಕ್ವಾಡ್ರತ್, ಅನುಭವಿ ಯುವ ಆಟಗಾರರನ್ನು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಏ. ಟಿ.ಕೆ. ಎಫ್.ಸಿ ವಿರುದ್ಧದ ಪಂದ್ಯದಲ್ಲಿ ಶನಿವಾರ ಕಣಕ್ಕಿಳಿಸುವ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ನಾನು ಈ ಅವಕಾಶದ ಸದುಪಯೋಗ ಪಡೆದು ಕೆಲ ಯುವ ಆಟಗಾರರಿಗೆ ಮುಂದಿನ ಮಹತ್ವದ ಪಂದ್ಯದಲ್ಲಿ ಆಡುವ ಸದವಕಾಶ ಕಲ್ಪಿಸಲು ಬಯಸುತ್ತೇನೆ. ಏಕೆಂದರೆ, ಆವೃತ್ತಿಯ ಉದ್ದಕ್ಕೂ ಕಠಿಣ ಪರಿಶ್ರಮ ತೋರಿದ್ದಾರೆ. ಆಡುವ ಅನುಭವ ಅವರಿಗೆ ಸಂತಸ ತರುತ್ತದೆ. ಎ.ಟಿ.ಕೆ. ತಂಡದಲ್ಲಿ ಹಲವು ಅನುಭವಿ ಆಟಗಾರರಿದ್ದಾರೆ ಮತ್ತು ಆಟದ ಗತಿಯನ್ನು ಬದಲಿಸುವ ಚಾಣಾಕ್ಷರಿದ್ದಾರೆ. ಈ ಪಂದ್ಯವನ್ನ ಯಾವ ರಣತಂತ್ರದೊಂದಿಗೆ ಆಡಲಿದ್ದಾರೆ ಎಂಬುದು ತಿಳಿದಿಲ್ಲ, ಆದರೆ ಆವೃತ್ತಿಯುದ್ದಕ್ಕೂ ಸಹಕರಿಸಿದ ನಮ್ಮ ಆಟಗಾರರಿಗೆ ನಾವು ಆಡುವ ಅವಕಾಶ ಕಲ್ಪಿಸಲು ಉತ್ಸುಕರಾಗಿದ್ದೇವೆ,” ಎಂದು ಕ್ವಾಡ್ರತ್ ವಿವರಿಸಿದ್ದಾರೆ.

“ಅಲ್ಲದೆ, ಮುಂದಿನ ಎರಡು ವಾರಗಳಲ್ಲಿ ನಾವು ಆಡಲಿರುವ ಮೂರು ‘ಫೈನಲ್‌’ ಪಂದ್ಯಗಳನ್ನ ಅವಲೋಕನ ಮಾಡಲಿದ್ದೇವೆ. ಮೊದಲನೆಯದು ಫೆಬ್ರವರಿ 26 ರಂದು ಎ.ಎಫ್‌.ಸಿ ಕಪ್‌ನಲ್ಲಿ ಮಜಿಯಾ ವಿರುದ್ಧದ ಪಂದ್ಯ ಮತ್ತು ಮುಂದಿನದು ಐಎಸ್‌ಎಲ್ ಸೆಮಿಫೈನಲ್‌ನ ಎರಡು ಸವಾಲುಗಳು. ಆ ಸವಾಲುಗಳಿಗೆ ಹೋಲಿಸಿದರೆ, ಶನಿವಾರದ ಪಂದ್ಯ ಅಷ್ಟು ಪರಿಣಾಮ ಬೀರುವುದಿಲ್ಲ. ಖಂಡಿತವಾಗಿಯೂ, ನಾನು ಆಡುವ ಪ್ರತಿಯೊಂದು ಪಂದ್ಯವನ್ನು ಗೆಲ್ಲಲು ಬಯಸುತ್ತೇನೆ, ಆದರೆ ಈ ಸಂದರ್ಭಗಳನ್ನು ನಿರ್ವಹಿಸುವಲ್ಲಿ ನಾವು ಚುರುಕಾಗಿರಬೇಕಾಗುತ್ತದೆ” ಎಂದು ಕ್ವಾಡ್ರತ್ ಹೇಳಿದರು.

ಈ ಆವೃತ್ತಿಯ ಆರಂಭದಲ್ಲಿ, ಕೋಲ್ಕತ್ತಾದ ವೈಬಿಕೆ ಕ್ರೀಡಾಂಗಣದಲ್ಲಿ ನಡೆದ ಎ. ಟಿ.ಕೆ ವಿರುದ್ಧದ ಪಂದ್ಯದಲ್ಲಿ ಡೇವಿಡ್ ವಿಲಿಯಮ್ಸ್ ಸಿಡಿಸಿದ ಗೋಲ್ ಕಾರಣದಿಂದ ಬೆಂಗಳೂರು ಎಫ್‌.ಸಿ 1-0 ಅಂತರದಲ್ಲಿ ಎಟಿಕೆ ವಿರುದ್ಧ ಸೋಲು ಅನುಭವಿಸಿತು. ಆದರೆ ಕ್ವಾಡ್ರತ್ ಆ ಸೋಲನ್ನ ತಮ್ಮ ಜವಾಬ್ದಾರಿಗೆ ತೆಗೆದುಕೊಂಡರೂ, ಆಂಟೋನಿಯೊ ಹಬಾಸ್- ವಿರುದ್ಧದ ಗೆಲುವು ಮುಖ್ಯ ಉದ್ದೇಶವಲ್ಲ ಎಂದು ಸ್ಪಷ್ಟಪಡಿಸಿದರು.

“ನನಗೆ ನೆನಪಿದೆ, ಕಳೆದ ಆವೃತ್ತಿಯಲ್ಲಿ ನಾವು ಚಾಂಪಿಯನ್ ಆಗುವ ಮುನ್ನ, ಕೊನೆಯ ಆರು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಗೆದ್ದಿದ್ದೆವು. ನಾವು ನಮ್ಮ ಶ್ರಮವಹಿಸಿ ಅಭ್ಯಾಸ ಮಾಡಿ ಸೆಮಿಫೈನಲ್ ಪ್ರವೇಶಿಸಿದೆವು ಮತ್ತು ನಮ್ಮ ಆಟಗಾರರು ಅವಶ್ಯ ಸಿದ್ಧತೆ ಹಾಗೂ ವಿಶ್ರಾಂತಿ ಪಡೆದಿದ್ದರು. ಲೀಗ್‌ನ ಈ ಹಂತ ಸ್ವಲ್ಪ ವಿಶ್ರಾಂತಿ ಪಡೆಯಲು ಮತ್ತು ಮಹತ್ವದ ಪಂದ್ಯಗಳಿಗೆ ತಯಾರಾಗಲು ನಮಗೆ ಸಹಾಯ ಮಾಡುತ್ತವೆ. ತಂಡವನ್ನು ಬೆಂಬಲಿಸಲು ಅಭಿಮಾನಿಗಳು ಬಹುಸಂಖ್ಯೆಯಲ್ಲಿ ಬರುತ್ತಾರೆ ಎಂದು ನನಗೆ ನಂಬಿಕೆಯಿದೆ ಮತ್ತು ಯುವ ಆಟಗಾರರೊಂದಿಗಿನ ತಂಡದ ಫಲಿತಾಂಶವನ್ನು ನೀವು ಎಂದಿಗೂ ಊಹಿಸಲು ಸಾಧ್ಯವಿಲ್ಲ. ಆದರೆ ಆವೃತ್ತಿಯ ಪ್ರಮುಖ ಕ್ಷಣಗಳಿಗಾಗಿ ಎದುರುನೋಡಬೇಕಿದೆ” ಎಂದು ಕ್ವಾಡ್ರತ್ ವಿವರಿಸಿದರು.

ಬೆಂಗಳೂರು ತಂಡ ಪ್ರಸ್ತುತ 17 ಪಂದ್ಯಗಳಲ್ಲಿ 29 ಪಾಯಿಂಟ್ಸ್ ಗಳಿಸಿ ಅಂತಿಮ ನಾಲ್ಕು ತಂಡಗಳಲ್ಲಿ ಸ್ಥಾನ ಪಡೆದು ಆಡುವ ಅರ್ಹತೆ ಗಳಿಸಿದೆ.  ಎಟಿಕೆ ಅಥವಾ ಎಫ್‌ಸಿ ಗೋವಾ ವಿರುದ್ಧದ ಹಣಾಹಣಿ ಖಚಿತವಾಗಿಸಿಕೊಂಡಿದೆ. ಈ ಆವೃತ್ತಿಯಲ್ಲಿ ಹಬಾಸ್ ಹುಡುಗರನ್ನು ಮತ್ತೆರಡು ಬಾರಿ ಎದುರಿಸುವ ಸಾಧ್ಯತೆಯೊಂದಿಗೆ, ನಾಳೆಯ ಸಂಘರ್ಷ ಒಂದು ರೀತಿಯ ಅಂತಿಮ ಪಂದ್ಯದ ಪೂರ್ವಾಭ್ಯಾಸವಾಗಲಿದೆ.

ಪಂದ್ಯವು ನಾಳೆ ಸಂಜೆ 7.30 ಕ್ಕೆ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರವಾಗಲಿದೆ.