ಗೆಲುವಿನೊಂದಿಗೆ ಬಿಎಫ್ಸಿ ವರ್ಷಾರಂಭ

ಎಫ್‌ಸಿ ಗೋವಾ ವಿರುದ್ದ ನಾಯಕ ಸುನಿಲ್ ಛತ್ರಿ ಕಾಲ್ಬಳಕ, ಆತಿಥೇಯ ಬ್ಲೂಸ್‌ಗೆ 2-1 ಅಂತರದ ಭರ್ಜರಿ ಗೆಲುವು

ಬೆಂಗಳೂರು: ನಾಯಕ ಸುನಿಲ್ ಛಟ್ಟಿ ಅವರ ಅವಳಿ ಗೋಲ್‌ಗಳ ಕಾಲ್ಗಳಕದ ಬಲದಿಂದ ಮಿಂಚಿದ ಬೆಂಗಳೂರು ಎಫ್ ಸಿ ಪ್ರಸಕ್ತ ಋತುವಿನ ಇಂಡಿಯನ್ ಸೂಪರ್ ಲೀಗ್‌ನ ತನ್ನ 11ನೇ ಪಂದ್ಯದಲ್ಲಿ ಬಲಿಷ್ಠ ಎಫ್‌ಸಿ ಗೋವಾ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ವರ್ಷಾರಂಭ ಮಾಡಿ, ಪ್ಲೇ ಆಫ್ ಹಂತವನ್ನು ಇನ್ನಷ್ಟು ಸನಿಹ ಮಾಡಿಕೊಂಡಿದೆ.

ಇಲ್ಲಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಅತ್ಯಂತ ಹೈವೋಲ್ವೇಜ್ ಹಣಾಹಣಿಯಲ್ಲಿ ಕಳೆದ ಬಾರಿಯ ಚಾಂಪಿಯನ್ ಬೆಂಗಳೂರು ಎಫ್ ಸಿ 2-1 ಗೋಲ್‌ಗಳಿಂದ ಲೀಗ್ ಲೀಡರ್ ಗೋವಾಗೆ ಸೋಲುಣಿಸಿ ಪೂರ್ಣ ಮೂರು ಅಂಕ ತನ್ನದಾಗಿಸಿಕೊಂಡಿತು. ಈ ಜಯದೊಂದಿಗೆ ಒಟ್ಟು 19 ಅಂಕ ಕಲೆಹಾಕಿರುವ ಕೋಚ್ ಕಾರ್ಲೊಸ್ ಕ್ವಾಡ್ರಟ್ ಬಳಗ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದರೆ, 21 ಅಂಕ ಹೊಂದಿರುವ ಗೋವಾ ಮೊದಲದಲ್ಲಿಯೇ ಮುಂದುವರಿದಿದೆ.

ಪಂದ್ಯದ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ನಾಯಕ ಛತ್ರಿ ಬಿಎಫ್ಸಿ ಪರ (59, 84ನೇ ನಿಮಿಷ) ಎರಡು ಗೋಲ್ ಬಾರಿಸಿ ಜಯದ ರೂವಾರಿಯೆನಿಸಿದರೆ, ಎಫ್‌ಸಿ ಗೋವಾ ಪರ ಹುಗೊ ಬೌಮೌಸ್ (61ನೇ ನಿಮಿಷ) ಒಂದು ಗೋಲ್ ದಾಖಲಿಸಿ ಸೋಲಿನ ಅಂತರ ತಗ್ಗಿಸಿದರು.

ಸಮಬಲದ ಹೋರಾಟ ಮುಂದುವರಿಸಿದ ಕಾರಣ 78ನೇ ನಿಮಿಷದಲ್ಲಿ ಆಟಗಾರರ ಬದಲಾವಣೆಗೆ ಬೆಂಗಳೂರು ಕೋಚ್ ಕಾರ್ಲೊಸ್ ಕ್ವಾಡ್ರಟ್ ಆದ್ಯತೆ ನೀಡಿದರು. ಒನ್ನು ಬದಲಿಗೆ ಸೆಂಬೊಯಿ, ಖಾಬ್ರಾ ಬದಲಿಗೆ ಸುರೇಶ್ ಮೈದಾನ ಪ್ರವೇಶಿಸಿದರೂ ತಂಡದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಗೋವಾ ಸಹ ಬ್ಲೂಸ್ ತಂಡದ ನೀತಿಯನ್ನು ಅನುಸರಿಸಿತು.

ಪ್ರಥಮಾರ್ಧ ಗೋಲ್ ರಹಿತಗೊಂಡ ಪರಿಣಾಮ ಮುನ್ನಡೆಗಾಗಿ ಇತ್ತಂಡಗಳು ಒತ್ತು ನೀಡಿದವು. ಇದರ ಭಾಗವಾಗಿ ಬಿಎಫ್ಸಿ ಪರ ಉದಾಂತ ಬದಲಿಗೆ ಹಲವು ಪಂದ್ಯಗಳ ಬಳಿಕ ಒನ್ನು ಹನ್ನೊಂದರ ಬಳಗದಲ್ಲಿ ಸ್ಥಾನ ಗಿಟ್ಟಿಸಿದರು. ಹುಗೊ ಅವರನ್ನು ತಡೆಯಲು ಯತ್ನಿದ ಜವಾನಾನ್ 54ನೇ ನಿಮಿಷದಲ್ಲಿ ರೆಫರಿಯಿಂದ ಎಚ್ಚರಿಕೆ ಪಡೆದರು. ಆದರೆ ಬಿಎಫ್‌ಸಿಯ ಆಕ್ರಮಣಕಾರ ಆಟ ಮಾತ್ರ ಮುಂದುವರಿಯಿತು. ಇದರ ಫಲವಾಗಿ 59ನೇ ನಿಮಿಷದಲ್ಲಿ ನಾಯಕ ಸುನಿಲ್ ಛತ್ರಿ ಗೋಲ್ ಬಾರಿಸಿ ಆತಿಥೇಯರಿಗೆ 1-0 ಅಂತರದ ಮುನ್ನಡೆ ಒದಗಿಸಿ ಸಂಭ್ರಮಕ್ಕೆ ಕಾರಣರಾದರು. ಆದರೆ ಈ ಸಂಭ್ರಮ ಕೆಲವೇ ಕ್ಷಣಗಳಲ್ಲಿ ಮಾಯಗೊಂಡಿತು. ಏಕೆಂದರೆ ಕೊರೊಮಿನಾಸ್ ಅವರಿಂದ ನೆರವು ಪಡೆದ ಬೌಮೌಸ್ 61ನೇ ನಿಮಿಷದಲ್ಲಿ ಗೋಲ್ ಸಿಡಿಸಿ ತಂಡದ ಹೋರಾಟವನ್ನು 1-1ರಲ್ಲಿ ಸಮಬಲಗೊಳಿಸಿದರು.

ಲೀಗ್ ಲೀಡರ್ ಎಫ್ ಸಿ ಗೋವಾ ತಂಡದಿಂದ ಜಿದ್ದಾಜಿದ್ದಿನ ಹೋರಾಟ ಎದುರಿಸಿದ ಹೊರತಾಗಿಯೂ ಸಿಕ್ಕ ಗೋಲಿನ ಅವಕಾಶವನ್ನು ಕೈಚೆಲ್ಲಿದ ಪರಿಣಾಮ ಬೆಂಗಳೂರು ಎಫ್ ಸಿ ಪ್ರಥಮಾರ್ಧಕ್ಕೆ ಮುನ್ನಡೆ ಪಡೆಯಲು ವಿಫಲಗೊಂಡಿತು. ಹೀಗಾಗಿ ಉಭಯ ತಂಡಗಳು ಗೋಲ್ ರಹಿತವಾಗಿ ವಿರಾಮಕ್ಕೆ ತೆರಳಿದವು. 32ನೇ ನಿಮಿಷದಲ್ಲಿ ಮಿಡಲ್‌ನಿಂದ ಹುಗೊ ಹೊಡೆದ – ಚೆಂಡನ್ನು ತಡೆಯುವಲ್ಲಿ ಯಶಸ್ವಿಯಾದ ಜುವಾನಾನ್ ಆತಿಥೇಯರ ಆಪದ್ಭಾಂದರೆನಿಸಿದರು. ಬಿಎಫ್ಸಿ ಆಕ್ರಮಣಕಾರಿ ಆಟಕ್ಕೆ ದಿಟ್ಟ ಪ್ರತ್ಯುತ್ತರ ನೀಡಿದ ಗೋವಾ ಆಟಗಾರರು ಪದೇ ಪದೇ ಬ್ಲೂಸ್ ತಂಡದ ರಕ್ಷಣಾ ಬಳಗಕ್ಕೆ ಆತಂಕತಂದೊಡ್ಡಿದರೂ ಮುನ್ನಡೆ ಸಾಸಲು ವಿಫಲರಾದರು. 22ನೇ ನಿಮಿಷದಲ್ಲಿ ಫೆರಾನ್ ಕೊರೊಮಿನಾಸ್ ಅಮೋಘ ದಾಳಿ ನಡೆಸಿ ಇನ್ನೇನು ಗೋಲ್ ಗಳಿಸಬೇಕು ಎಂಬಷ್ಟರಲ್ಲಿ ಆತಿಥೇಯ ಆಟಗಾರರು ಚೆಂಡನ್ನು ಹಿಮ್ಮೆಟ್ಟಿಸಿ ನಿಟ್ಟುಸಿರು ಬಿಟ್ಟರು. 29ನೇ ಮಿಷದಲ್ಲಿ ಹುಗೊ ಬೌಮೌಸ್ ಮತ್ತು ಜಾಕಿ ಚಂದ್ ಗೋವಾ ಪರ ಮುನ್ನಡೆಗೆ ಹರಸಾಹಸ ನಡೆಸಿದರೂ ಆತಿಥೇಯರು ಆಸ್ಪದ ನೀಡಲಿಲ್ಲ.

ಪಂದ್ಯ ಆರಂಭವಾಗುತ್ತಿದ್ದಂತೆಯೇ ಆಕ್ರಮಣಕಾರಿ ಆಟಕ್ಕೆ ಇತ್ತಂಡಗಳು ಮುಂದಾದವು. ಅದರಲ್ಲೂ ಆತಿಥೇಯ ಬೆಂಗಳೂರು ಎಫ್ಸಿ 11ನೇ ನಿಮಿಷದಲ್ಲಿ ನಿಶು ಕುಮಾರ್ ಅದ್ಭುತ ಗೋಲಿನ ಯತ್ನ ಮಾಡಿದರು. ಆದರೆ ಎದುರಾಳಿ ತಂಡದ ಗೋಲ್ ಕೀಪರ್ ಮೊಹಮ್ಮದ್ ನವಾಜ್ ಚೆಂಡನ್ನು ಹಿಮ್ಮೆಟ್ಟಿಸಿ ಆತಿಥೇಯ ತಂಡದ ಮುನ್ನಡೆಗೆ ತಡೆಯಾದರು. ಆದರೆ ಇದಾದ ಮರು ನಿಮಿಷದಲ್ಲಿಯೇ ಎರಿಕ್ ಪಾರ್ತಾಲು ರೆಫರಿಯಿಂದ ಹಳದಿ ಕಾರ್ಡ್‌ಗೆ ಗುರಿಯಾದರು. ಬೆಂಗಳೂರು ಎಫ್ ಸಿ ತನ್ನ ಮುಂದಿನ ಪಂದ್ಯದಲ್ಲಿ ತವರಿನಂಗಳದಲ್ಲಿ ಇದೇ ತಿಂಗಳ 9ರಂದು ಜಮ್ಶೆಡ್ಡುರ ತಂಡವನ್ನು ಎದುರಿಸಲಿದೆ.

Malcare WordPress Security