ಸ್ಟ್ರೈಕಿಂಗ್ ಬಲ ಹೆಚ್ಚಿಸಿಕೊಂಡು ಯುವ ಪ್ರತಿಭಾವಂತ ಆಟಗಾರರನ್ನು ಕೂಡಿದಂತೆ ಮೂಲತಂಡದಲ್ಲಿ ಯಾವುದೇ ಬದಲಾವಣೆ ಇಲ್ಲದ ಸ್ಪರ್ಧಾತ್ಮಕ ಬೆಂಗಳೂರು ಎಫ್‌ಸಿ ತಂಡ ಈ ಆವೃತ್ತಿಯಲ್ಲಿ ಗೆಲುವುಗಳ ರಣಕಹಳೆ ಮೊಳಗಿಸಲು ಸಿದ್ಧವಾಗಿದೆ.
ಪಣಜಿ, ಗೋವಾ: ಇಂಡಿಯನ್ ಸೂಪರ್ ಲೀಗ್ ನ ಈ ಆವೃತ್ತಿಯಲ್ಲಿ 32 ಜನರ ತಂಡವನ್ನು ಬೆಂಗಳೂರು ಎಫ್‌ಸಿ ಭಾನುವಾರದಂದು ಪ್ರಕಟಿಸಿದ್ದು, ಐದು ಅಂಡರ್ 21 ತಂಡದ ಆಟಗಾರರಿಗೂ ಅವಕಾಶ ದೊರೆತಿದೆ. ನಾಯಕ ಸುನಿಲ್ ಛೇತ್ರಿ ಸತತ ಎಂಟನೇ ಬಾರಿಗೆ ತಂಡವನ್ನು ಮುನ್ನಡೆಸಲಿದ್ದು, ನವೆಂಬರ್ 22 ರಂದು ಎಫ್‌ಸಿ ಗೋವಾ ವಿರುದ್ಧ ಐಎಸ್ಎಲ್ ಅಭಿಯಾನವನ್ನು ಬ್ಲೂಸ್ ಪ್ರಾರಂಭಿಸಲಿದ್ದಾರೆ.
ಕಳೆದ ಆವೃತ್ತಿಯಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದ 17 ಆಟಗಾರರು ಮತ್ತೆ ಈ ಆವೃತ್ತಿಯಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಇಂಡಿಯನ್ ಸೂಪರ್ ಲೀಗ್‌ನಲ್ಲಿ ತಮ್ಮ ನಾಲ್ಕು ಆವೃತ್ತಿಗಳನ್ನು ಆಡಿ ತಂಡಕ್ಕೆ ಆಸರೆಯಾಗಿದ್ದ ಮೂಲ ತಂಡದ ಈ ಆಟಗಾರರು ಬ್ಲೂಸ್ ನ ತಿರುಳಾಗಿದ್ದಾರೆ.
“ಕ್ಲಬ್ ಆಗಿ, ಕಳೆದ ಆವೃತ್ತಿಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳಲು ನಾವು ಕಾರ್ಯನಿರ್ವಹಿಸಿದ್ದೇವೆ. ತಂಡದ ನಿರೀಕ್ಷೆಗೆ ತಕ್ಕಂತೆ ಕಲಿತು ತಂಡದ ಗೆಲುವಿಗೆ ಸಹಕರಿಸಬಹುದಾದ ಆಟಗಾರರನ್ನು ಸಹ ನಾವು ಸೇರಿಸಿಕೊಂಡಿದ್ದೇವೆ. ಅವರು ಹೇಗೆ ಒಟ್ಟಿಗೆ ಕೆಲಸ ಮಾಡುತ್ತಾರೆ ಮತ್ತು ಈಗಾಗಲೇ ಇರುವ ಕ್ಷಮತೆಗೆ ಯಾವ ಕೊಡುಗೆ ನೀಡಲಿದ್ದಾರೆ ಎಂಬುದನ್ನು ನೋಡಲು ರೋಮಾಂಚನಕಾರಿಯಾಗಿರಲಿದೆ ”ಎಂದು ಬ್ಲೂಸ್‌ನ ಮುಖ್ಯ ತರಬೇತುದಾರ ಕಾರ್ಲೆಸ್ ಕ್ವಾಡ್ರಾತ್ ಹೇಳಿದರು.
ಸುರೇಶ್ ವಾಂಗ್ಜಮ್, ಅಮಯ್ ಮೊರಾಜ್ಕರ್, ದೀಪೇಶ್ ಚೌಹಾನ್, ಥೋಯ್ ಸಿಂಗ್ ಮತ್ತು ಇಮ್ಯಾನ್ಯುಯೆಲ್ ಲಾಲ್ಚಾಂಚುವಾ, ತಂಡದಲ್ಲಿ ಉತ್ತಮವಾಗಿ ಆಡುತ್ತಿರುವ ಆಟಗಾರರೊಂದಿಗೆ , ಕ್ಲಬ್‌ನ ರೆಸಿಡೆನ್ಶಿಯಲ್ ಅಕಾಡೆಮಿ ಮತ್ತು ಬಿಎಫ್‌ಸಿ ಬಿ ತಂಡದಿಂದ ಹಲವಾರು ಆಟಗಾರರನ್ನು ಒಳಗೊಂಡು ಅಗತ್ಯ ಮಾನದಂಡಗಳನ್ನು ಪೂರೈಸಿಕೊಂಡಿದೆ.
ಹುವಾನಾನ್ ಗೊನ್ಜಾಲೆಜ್, ಡಿಮಾಸ್ ಡೆಲ್ಗಾಡೊ, ಎರಿಕ್ ಪಾರ್ತಲು ಮತ್ತು ದೇಶೋರ್ನ್ ಬ್ರೌನ್ ಈ ಆವೃತ್ತಿಯಲ್ಲಿ ಬ್ಲೂಸ್‌ನಿಂದ ಉಳಿಸಿಕೊಳ್ಳಲಾದ ವಿದೇಶಿ ಆಟಗಾರರರಾದರೆ, ಈ ತಂಡವು ಕ್ರಿಸ್ಟಿಯನ್ ಒಪ್ಸೆತ್, ಕ್ಲೈಟಾನ್ ಸಿಲ್ವಾ ಮತ್ತು ಫ್ರಾನ್ ಗೊನ್ಜಾಲೆಜ್ ಅವರ ಆಗಮನದೊಂದಿಗೆ ತಮ್ಮ ದಾಳಿ ಮತ್ತು ಡಿಫೆನ್ಸ್ ಬಲ ಹೆಚ್ಚಿಸಿದೆ.
“ತರಬೇತುದಾರನಾಗಿ, ಸರಿಯಾದ ತಂಡ ಆಯ್ಕೆಮಾಡುವಲ್ಲಿ ಸಮಸ್ಯೆಗಳನ್ನು ಹೊಂದಿರುವುದು ಯಾವಾಗಲೂ ಒಳ್ಳೆಯದು. ನಾವು ಸುಧಾರಿಸಬಹುದಾದ ವಿಷಯಗಳ ಕುರಿತು ಕಳೆದ ಆವೃತ್ತಿಯಲ್ಲಿ ವಿಶ್ಲೇಷಿಸಿದ್ದೇವೆ ಮತ್ತು ದಾಳಿಯಲ್ಲಿ ಹಲವಾರು ಸ್ಥಾನಗಳಲ್ಲಿ ಆಡಬಲ್ಲ ಆಟಗಾರರನ್ನು ಸೇರಿಸಿದ್ದೇವೆ. ಕಳೆದ ವರ್ಷ ಪ್ರತಿ ಪಂದ್ಯದಲ್ಲೂ ಅನೇಕ ಅವಕಾಶಗಳು ಲಭಿಸುವಂತೆ ನೋಡಿಕೊಂಡಿದ್ದೇವೆ ಎಂಬುದು ತಿಳಿದಿದೆ, ಆದರೆ ನಾವು ಆ ಹೆಚ್ಚಿನ ಅವಕಾಶಗಳನ್ನು ಬಳಸಿಕೊಳ್ಳಬೇಕಾದ ಕೆಲಸ ಮಾಡಬೇಕಾಗಿದೆ. ಇದು ಒಂದು ಉತ್ತೇಜಕ ಸೀಸನ್ ಆಗಿದ್ದು, ನಾವು ಮತ್ತೆ ಸ್ಪರ್ಧಾತ್ಮಕ ಆಟವಾಡುವತ್ತ ಮರಳಲಿದ್ದೇವೆ ಎಂಬುದು ನನ್ನ ನಂಬಿಕೆ “ಎಂದು ಕ್ವಾಡ್ರಾತ್ ಹೇಳಿದರು.
ಗೋಲ್ಕೀಪರ್ಸ್: ಗುರ್‌ಪ್ರೀತ್ ಸಿಂಗ್ ಸಂಧು, ಲಾಲ್ತುಮ್ಮಾವಿಯಾ ರಾಲ್ಟೆ, ಲಾರಾ ಶರ್ಮಾ, ದೀಪೇಶ್ ಚೌಹಾನ್
ಡಿಫೆಂಡರ್ಸ್: ರಾಹುಲ್ ಭೆಕೆ, ಪ್ರತೀಕ್ ಚೌಧರಿ, ಹರ್ಮನ್‌ಜೋತ್ ಖಾಬ್ರಾ, ಫ್ರಾನ್ ಗೊನ್ಜಾಲೆಜ್, ಹುವಾನಾನ್ ಗೊನ್ಜಾಲೆಜ್, ಅಜಿತ್ ಕುಮಾರ್, ವುಂಗ್ನ್ ಗಯಾಂ ಮ್ಯೂರಂಗ್, ಜೋ ಝೋಹರ್ಲಿಯಾಂಡ, ಪರಾಗ್ ಶ್ರೀವಾಸ್, ಬಿಸ್ವಾ ದರ್ಜಿ
ಮಿಡ್‌ಫೀಲ್ಡರ್ಸ್: ಡಿಮಾಸ್ ಡೆಲ್ಗಾಡೊ, ಎರಿಕ್ ಪಾರ್ತಲು, ಅಜಯ್ ಛೇತ್ರಿ, ನಮ್‌ಗ್ಯಾಲ್ ಭುಟಿಯಾ, ಸುರೇಶ್ ವಾಂಗ್ಜಮ್, ನೌರೆಮ್ ರೋಶನ್ ಸಿಂಗ್, ಅಮಯ್ ಮೊರಾಜ್ಕರ್, ಥೋಯ್ ಸಿಂಗ್, ಇಮ್ಯಾನುಯೆಲ್ ಲಾಲ್‌ಚಾಂಚುಹಾ.
ಅಟ್ಯಾಕರ್ಸ್: ಸುನಿಲ್ ಛೇತ್ರಿ, ಕ್ಲೀಟನ್ ಸಿಲ್ವಾ, ಕ್ರಿಸ್ಟಿಯನ್ ಒಪ್ಸೆತ್, ದೇಶಾರ್ನ್ ಬ್ರೌನ್, ಆಶಿಕ್ ಕುರುನಿಯನ್, ಉದಾಂತ ಸಿಂಗ್, ಎಡ್ಮಂಡ್ ಲಾಲ್ರಿಂಡಿಕಾ, ಲಿಯಾನ್ ಅಗಸ್ಟೀನ್, ಥೊಂಗ್‌ಕೋಸಿಯಮ್ ಹಾಕಿಪ್.