ಬೆಂಗಳೂರು ಎಫ್‌ಸಿ ಮನೆಯಂಗಳದ ಪಂದ್ಯಗಳು ಫತೋರ್ಡಾದ ನೆಹರು ಕ್ರೀಡಾಂಗಣಕ್ಕೆ ಸ್ಥಳಾಂತರ

ಇಂಡಿಯನ್ ಸೂಪರ್ ಲೀಗ್ ನವೆಂಬರ್‌ನಲ್ಲಿ ಚಾಲನೆ ಪಡೆಯಲಿರುವ ಹಿನ್ನೆಲೆಯಲ್ಲಿ ಎಟಿಕೆ ಮೋಹನ್ ಬಗಾನ್ ಮತ್ತು ಎಫ್‌ಸಿ ಗೋವಾ ತಂಡಗಳ ಗುಂಪಿನಲ್ಲಿ ಬ್ಲೂಸ್ ಆಡಲಿದ್ದಾರೆ.

ಬೆಂಗಳೂರು: 2020-21 ಸಾಲಿನ ಇಂಡಿಯನ್ ಸೂಪರ್ ಲೀಗ್ ಪಂದ್ಯಾವಳಿಯನ್ನು ಸಂಪೂರ್ಣವಾಗಿ ಗೋವಾದಲ್ಲಿ ಆಯೋಜಿಸುವ ನಿರ್ಧಾರದ ಹಿನ್ನೆಲೆಯಲ್ಲಿ, ಬೆಂಗಳೂರು ಎಫ್‌ಸಿ ತಂಡ ತನ್ನ ಮುಂಬರುವ ಆವೃತ್ತಿಯ ಎಲ್ಲ ಮನೆಯಂಗಳದ ಪಂದ್ಯಗಳನ್ನು ಫತೋರ್ಡಾದ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಆಡಲಿರುವುದಾಗಿ ತಿಳಿಸಲಾಗಿದೆ. ಕಳೆದ ಆವೃತ್ತಿಯ ಅಂತಿಮ ಲೀಗ್ ಅಂಕಗಳ ಮಾನ್ಯತೆಯನ್ನು ಆಧರಿಸಿ, ಬ್ಲೂಸ್ ಪ್ರಸ್ತುತ ಚಾಂಪಿಯನ್‌ಗಳಾದ ಎಟಿಕೆ (ಈಗ ಎಟಿಕೆ ಮೋಹನ್ ಬಗಾನ್) ಮತ್ತು 2019-20ರ ಲೀಗ್ ವಿಜೇತರಾದ ಎಫ್‌ಸಿ ಗೋವಾ ತಂಡಗಳೊಂದಿಗೆ ಅಂಗಳವನ್ನು ಹಂಚಿಕೊಳ್ಳಲಿದೆ.

ನೆಹರು ಕ್ರೀಡಾಂಗಣವನ್ನೇ ‘ಹೋಮ್ ಗ್ರೌಂಡ್’ ಆಗಿಸಿಕೊಂಡಿರುವ ಬೆಂಗಳೂರು ಎಫ್‌ಸಿಯ ಕಾರ್ಲೆಸ್ ಕ್ವಾಡ್ರಾತ್ ಹುಡುಗರು.

ಮನೆಯಂಗಳದಲ್ಲಿ ಆಡಬೇಕಿದ್ದ ಇತರೆ ತಂಡಗಳ ವಿರುಧ್ದದ ಒಂಬತ್ತು ಪಂದ್ಯಗಳು, ಎಟಿಕೆ ಮೋಹನ್ ಬಗಾನ್ ಮತ್ತು ಎಫ್‌ಸಿ ಗೋವಾ ವಿರುದ್ಧದ ಪ್ರವಾಸಿ ಪಂದ್ಯಗಳನ್ನೂ ಸೇರಿದಂತೆ ಒಟ್ಟು 11 ಪಂದ್ಯಗಳನ್ನು ಆಡಲು ಸಜ್ಜಾಗಿದ್ದಾರೆ.

ಏತನ್ಮಧ್ಯೆ, ಬ್ಲೂಸ್ ತಂಡಕ್ಕೆ ಈ ಅಂಗಳವೇನು ಹೊಸತಲ್ಲ ಎಂಬುದಕ್ಕೆ, ಈ ಹಿಂದೆ 2014 ರಲ್ಲಿ ತಮ್ಮ ಚೊಚ್ಚಲ ಐ-ಲೀಗ್ ಪ್ರಶಸ್ತಿಯನ್ನು ಡೆಂಪೊ ಎಸ್ಸಿ ವಿರುದ್ಧ 2-4 ಅಂತರದ ಜಯ ಸಾಧಿಸಿ ಮುಡಿಗೇರಿಸಿಕೊಂಡಿದ್ದರೊಂದಿಗೆ ನಂತರದ ವರ್ಷದಲ್ಲೇ ಫೆಡರೇಶನ್ ಕಪ್ ಪ್ರಶಸ್ತಿಯನ್ನು ಅದೇ ಫತೋರ್ಡಾ ಅಂಗಳದಲ್ಲಿ ಸಾಧಿಸಿರುವುದು ಸಾಕ್ಷಿಯಾಗಿದೆ.

ಚೆನ್ನೈಯಿನ್ ಎಫ್‌ಸಿ, ಮುಂಬೈ ಸಿಟಿ ಎಫ್‌ಸಿ, ಒಡಿಶಾ ಎಫ್‌ಸಿ ಮತ್ತು ಕೇರಳ ಬ್ಲಾಸ್ಟರ್ಸ್ ಎಫ್‌ಸಿ ತಂಡಗಳೊಡನೆ, ನಾಲ್ಕರಿಂದ ಏಳನೇ ಸ್ಥಾನದ ನಡುವೆ ಅಂಕಗಳಿಸುವ ತಂಡಗಳು ಗ್ರೂಪ್ ಬಿ ಯಲ್ಲಿ ಆಡಲಿದ್ದು, ಬಂಬೋಲಿಮ್‌ನ ಜಿಎಂಸಿ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ಈ ಪಂದ್ಯಗಳ ಆಯೋಜನೆ ಆಗುವುದಾಗಿ ಮಾಹಿತಿ ನೀಡಲಾಯಿತು.

ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ, ಜಮ್‌ಶೆಡ್ಪುರ್ ಎಫ್‌ಸಿ ಮತ್ತು ಹೈದರಾಬಾದ್ ಎಫ್‌ಸಿ ತಂಡಗಳು ಗ್ರೂಪ್ ಸಿ ಯಲ್ಲಿ ಆಡಲಿದ್ದು ವಾಸ್ಕೊದ ತಿಲಕ್ ಮೈದಾನ್ ಅಂಗಳದಲ್ಲಿ ಈ ಪಂದ್ಯಗಳ ಆಯೋಜನೆ ಆಗಲಿರುವುದಾಗಿ ತಿಳಿಸಲಾಗಿದೆ.