ಚೆನ್ನೈ ಸಿಟಿಗೆ ಮಣಿದ ಬೆಂಗಳೂರು ಎಫ್ ಸಿ

ಸೂಪರ್ ಕಪ್ ಕ್ವಾರ್ಟ‌್ರಫೈನಲ್‌ನಲ್ಲಿ ಚೆನ್ನೈಗೆ 2-1 ಅಂತರದ ಗೆಲುವು, ಪ್ರಶಸ್ತಿ ಸ್ಪರ್ಧೆಯಿಂದ ಹೊರಬಿದ್ದ ಛತ್ರಿ ಪಡೆ

ಭುವನೇಶ್ವರ: ಪ್ರಥಮಾರ್ಧದಲ್ಲಿ ರಕ್ಷಣಾ ವಿಭಾಗದಲ್ಲಿ ಎಡವಿದ ಇಂಡಿಯನ್ ಸೂಪರ್ ಲೀಗ್ ಚಾಂಪಿಯನ್ಸ್ ಬೆಂಗಳೂರು ಎಫ್ ಸಿ ಸೂಪರ್‌ ಕಪ್ ಫುಟ್ಬಾಲ್ ಟೂರ್ನಿಯ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಚೆನ್ನೈ ಸಿಟಿ ಎಫ್ಸಿ ವಿರುದ್ಧ ಸೋತು ಪ್ರಶಸ್ತಿ ಹಾದಿಯಿಂದ ಹೊರಬಿದ್ದಿದೆ.

ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಮೊದಲ ಕ್ವಾರ್ಟ‌್ರಫೈನಲ್ ಪಂದ್ಯದಲ್ಲಿ ಸುನಿಲ್ ಛತ್ರಿ ಸಾರಥ್ಯದ ಬೆಂಗಳೂರು ಎಫ್ಸಿ 1-2 ಗೋಲ್‌ಗಳಿಂದ ಚೆನ್ನೈ ಸಿಟಿ ಎಫ್ಸಿ ತಂಡದಿಂದ ಆಘಾತ ಅನುಭವಿಸಿತು. ಬಿಎಫ್ಸಿ ಪರ ಸುನಿಲ್ ಛತ್ರಿ (65ನೇ ನಿ.) ಒಂದು ಗೋಲ್ ದಾಖಲಿಸಿದರೆ, ಚೆನ್ನೈ ತಂಡದ ಪರ ಪೆಟ್ರೊ ಮಾನ್ವಿ (55ನೇ ನಿ.) ಮತ್ತು ನೆಸ್ಟರ್ ಜೀಸಸ್ (14ನೇ ನಿ.) ತಲಾ ಒಂದು ಗೋಲ್ ಗಳಿಸಿ ಜಯದ ರುವಾರಿಯೆನಿಸಿದರು. ಕಳದೆ ಬಾರಿ ಆರಂಭಗೊಂಡ ಚೊಚ್ಚಲ ಆವೃತ್ತಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಬೆಂಗಳೂರು ಎಫ್ಸಿ ಸತತ ಎರಡನೇ ಬಾರಿ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ವಿಫಲಗೊಂಡಿತು.

ಕೊನೆಯ ಹಂತದಲ್ಲಿ ಹಲವು ಬಾರಿ ಗೋಲ್ ಗಳಿಕೆಯ ಅವಕಾಶಗಳನ್ನು ಸೃಷ್ಟಿಸಿದರೂ ಸಮನ್ವಯತೆ ಕೊರತೆಯಿಂದಾಗಿ ಬೆಂಗಳೂರು ತಂಡ ಹಿನ್ನಡೆ ಕಂಡಿತು. ಇದಕ್ಕೂ ಮುನ್ನ ಎದುರಾಳಿ ಮೇಲುಗೈ ಸಾಧಿಸಿದ ಪರಿಣಾಮ ಒತ್ತಡಕ್ಕೆ ಒಳಗಾದ ಬಿಎಫ್ಸಿ, ಆಟಗಾರರ ಬದಲಾವಣೆಗೆ ಒತ್ತು ನೀಡಿತು. ಆದರೂ ಯಾವುದೇ ಪ್ರಯೋಜನವಾಗಲಿಲ್ಲ . 63ನೇ ನಿಮಿಷದಲ್ಲಿ ಗೋಲ್ ಗಳಿಕೆಯನ್ನು ಅವಕಾಶವನ್ನು ಮಿಕು ವಿಫಲಗೊಳಿಸಿದರು.ಆದರೆ 65ನೇ ನಿಮಿಷದಲ್ಲಿ ನಾಯಕ ಸುನಿಲ್ ಛತ್ರಿ ಹೆಡರ್ ಮೂಲಕ ಗೋಲ್ ಗಳಿಸಿ ತಂಡದ ಹಿನ್ನಡೆಯನ್ನು 1-2ಕ್ಕೆ ಕುಗ್ಗಿಸಿದರು.

ಹಿನ್ನಡೆ ತಗ್ಗಿಸುವ ನಿಟ್ಟಿನಲ್ಲಿ ದ್ವಿತೀಯಾರ್ಧ ಆರಂಭಿಸಿದ ಬೆಂಗಳೂರು ಎಫ್ಸಿ ಚೆಂಡಿನ ಮೇಲಿನ ನಿಯಂತ್ರಣಕ್ಕೆ ಸತತವಾಗಿ ಹೋರಾಡಿತು. ಚೆನ್ನೈ ತಂಡ ಸಹ ಮುನ್ನಡೆ ವಿಸ್ತರಿಸಲು ಇನ್ನಿಲ್ಲದ ಹರಸಾಹಸ ನಡೆಸಿತು. 55ನೇ ನಿಮಿಷದಲ್ಲಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಪೆಡೊ ಮಾನ್ವಿ ಚೆನ್ನೈ ಸಿಟಿ ತಂಡದ ಮುನ್ನಡೆನಯು 2-0ಗೆ ಹಿಗ್ಗಿಸಿದರು. ವಿರಾಮಕ್ಕೂ ಮುನ್ನ ಸಮಬಲ ಸಾಧಿಸಲು ಬೆಂಗಳೂರು ಎಫ್ಸಿ 44ನೇ ನಿಮಿಷದಲ್ಲಿ ಸಿಕ್ಕ ಗೋಲ್ ಗಳಿಕೆ ಅವಾಕಶವನ್ನು ಮತ್ತೊಮ್ಮೆ ಕೈಚೆಲ್ಲಿತು. ಹೀಗಾಗಿ ಚೆನ್ನೈ ತಂಡದ ರಕ್ಷಣಾ ಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ವಿರಾಮಕ್ಕೆ 0-1ರಲ್ಲಿ ಹಿನ್ನಡೆ ಕಾಣಬೇಕಾಯಿತು.

ಹಿನ್ನಡೆ ತಗ್ಗಿಸುವ ಒತ್ತಡದಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದ ಐಎಸ್ಎಲ್ ಚಾಂಪಿಯನ್ಸ್ ಬಿಎಫ್ಸಿ ಪರ 25ನೇ ವೆನೆಜುವೆಲಾ ಆಟಗಾರ ಮಿಕು ಅದ್ಭುತ ಗೋಲಿನ ಯತ್ನ ನಡೆಸಿದರು. ಆದರೆ ಅಷ್ಟೇ ಅದ್ಭುತವಾಗಿ ಚೆನ್ನೈ ಗೋಲ್ ಕೀಪರ್ ಮೌರೋ ಹಿಮ್ಮೆಟ್ಟಿಸಿದರು. ಹೀಗಾಗಿ ಬಿಎಫ್ಸಿ ಹೋರಾಟ 0-1ರಲ್ಲಿ ಮುಂದುವರಿಯಿತು. 20ನೇ ನಿಮಿಷದಲ್ಲಿ ಸಮಬಲ ಸಾಧಿಸುವ ಉತ್ತಮ ಅವಕಾಶವನ್ನು ಬೆಂಗಳೂರು ಎಫ್ ಸಿ ಕಳೆದುಕೊಂಡಿತು. ಮಿಕು ಚೆಂಡನ್ನು ಗೋಲ್‌ಪೆಟ್ಟಿಗೆಯತ್ತ ಪಾಸು ಮಾಡಿದರು ಆದರೆ ಈ ಸ್ಥಳದಲ್ಲಿದ್ದ ಕ್ಸಿಸ್ಕೊ ಹೆರ್ನಾಂಡೇಜ್ ಚೆಂಡನ್ನು ಗೋಲಾಗಿಸುವಲ್ಲಿ ಎಡವಿದರು.

ಇದಕ್ಕೂ ಮುನ್ನ ಪಂದ್ಯದ ಮೊದಲ ಸಿಕ್ಕ ಗೋಲ್ ಗಳಿಕೆ ಅವಕಾಶವನ್ನು ಬಿಎಫ್ಸಿ ಕೈಚೆಲ್ಲುವ ಜತೆಗೆ ರಕ್ಷಣಾ ವಿಭಾಗದಲ್ಲಿ ಹೊಂದಾಣಿಕೆ ಕೊರತೆಯಿಂದಾಗಿ ಚೆನ್ನೈ ಸಿಟಿ ಎಫ್ಸಿ 1-0ರಲ್ಲಿ ಮುನ್ನಡೆ ಸಾಧಿಸಿತು. ಪ್ರಶಸ್ತಿ ಉಳಿಸಿಕೊಳ್ಳುವ ಇರಾದೆಯೊಂದಿಗೆ ಕ್ವಾರ್ಟರ್ ಫೈನಲ್ ಅಭಿಯಾನ ಆರಂಭಿಸಿದ ಬೆಂಗಳೂರು ತಂಡ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಎದುರಾಳಿ ತಂಡ ಸಹ ದಿಟ್ಟ ರಕ್ಷಣೆ ಜತೆಗೆ ದಾಳಿ ನಡೆಸಿತು. ಆದರೆ 14ನೇ ನಿಮಿಷದಲ್ಲಿ ಬಿಎಫ್‌ಸಿ ಆಟಗಾರರ ಎಸಗಿದ ರಕ್ಷಣಾ ಪ್ರಮಾದವನ್ನು ಸಮರ್ಥವಾಗಿ ಬಳಸಿಕೊಂಡ ನೆಸ್ಟರ್ ಜೀಸಸ್ ಚೆನ್ನೈ ಪರ ಗೋಲ್ ದಾಖಲಿಸಿ ಸಂಭ್ರಮಿಸಿದರು.

Malcare WordPress Security