ಗುವಾಹಾಟಿಯಲ್ಲಿ ಬೆಂಗಳೂರು ಎಫ್ಸಿ ಸೋಲು ಅನುಭವಿಸಿದೆ

ಐಎಸ್‌ಎಲ್ ಸೆಮಿಫೈನಲ್ ಗೆಲ್-1: ಮನೆಯಂಗಣದಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿಗೆ 2-1 ಗೋಲ್‌ಗಳ ರೋಚಕ ಜಯ

ಗುವಾಹಟಿ: ಪಂದ್ಯ ಮುಕ್ತಾಯಕ್ಕೆ ಇನ್ನು ಕೆಲವೇ ನಿಮಿಷಗಳು ಬಾಕಿ ಇರುವಾಗ ಆಕ್ರಮಣಕಾರಿ ಆಟವಾಡುವ ಭರದಲ್ಲಿ ಎದುರಾಳಿ ತಂಡಕ್ಕೆ ಪೆನಾಲ್ಟಿ ಸ್ಪಾಟ್‌ಕಿಕ್ ಅವಕಾಶ ಬಿಟ್ಟುಕೊಟ್ಟ ಬೆಂಗಳೂರು ಎಫ್‌ಸಿ ತಂಡ, ಇಂಡಿಯನ್ ಸೂಪರ್ ಲೀಗ್‌ನ ಸೆಮಿಫೈನಲ್ ಲೆಗ್-1 ಪಂದ್ಯದಲ್ಲಿ ಆತಿಥೇಯ ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ಎದುರು ಸೋಲನುಭವಿಸಿದೆ.

ಇಲ್ಲಿನ ಇಂದಿರಾ ಗಾಂಧಿ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಹೈವೋಲ್ಟೇಜ್ ಸೆಮಿಫೈನಲ್ ಸೆಣೆಸಾಟದಲ್ಲಿ ಬೆಂಗಳೂರು ಎಫ್‌ಸಿ ಆರಂಭಿಕ ಹಿನ್ನಡೆ ಮೆಟ್ಟಿನಿಂತು ಪಂದ್ಯವನ್ನು 1-1ರ ಡ್ರಾ ಫಲಿತಾಂಶದ ಕಡೆಗೆ ಕೊಂಡೊಯ್ಯುವಲ್ಲಿ ಬಹುತೇಕ ಯಶಸ್ವಿಯಾಗಿತ್ತಾದರೂ, ಅಂತಿಮವಾಗಿ 1-2 ಗೋಲ್‌ಗಳ ಅಂತರದಲ್ಲಿ ನಿರಾಸೆ ಅನುಭವಿಸಿತು.
ಇದರೊಂದಿಗೆ ಸೆಮಿಫೈನಲ್ ಹಣಾಹಣಿಯ ಲೆಗ್-2 ಪಂದ್ಯ ಬಿಎಫ್‌ಸಿ ಪಡೆಗೆ ಮಾಡು ಇಲ್ಲವೆ ಮಡಿಯಂತಾಗಿದ್ದು, ಮಾರ್ಚ್ 11ರಂದು (ಸೋಮವಾರ) ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ನಾರ್ತ್ ಈಸ್ಟ್ ವಿರುದ್ಧ ಕನಿಷ್ಠ 2 ಗೋಲ್‌ಗಳ ಅಂತರದಲ್ಲಿ ಜಯ ದಾಖಲಿಸಿದರಷ್ಟೇ ಫೈನಲ್‌ಗೆ ಮುನ್ನಡೆಯಲಿದೆ.

ಗುರುವಾರ ನಡೆದ ಪಂದ್ಯದಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ಪರ ರಿದೀಮ್ ತಿಯಾಂಗ್ (20ನೇ ನಿ.) ಆರಂಭಿಕ ಮುನ್ನಡೆ ತಂದುಕೊಟ್ಟರೆ, 90+5ನೇ ನಿಮಿಷದಲ್ಲಿ ಲಭ್ಯವಾದ ಪೆನಾಲ್ಟಿ ಸ್ಪಾಟ್ ಕಿಕ್‌ನಲ್ಲಿ ಜುವಾನ್ ಕರ್ಜ್ ಮಸಿಯಾ ಚೆಂಡನ್ನು ಗೋಲ್ ಪೆಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾಗಿ ಆತಿಥೇಯ ತಂಡಕ್ಕೆ ಜಯದ ಮಾಲೆ ತೊಡಿಸಿದರು. ಇದಕ್ಕೂ ಮುನ್ನ ಪಂದ್ಯದ ದ್ವಿತೀಯಾರ್ಧದದಲ್ಲಿ ಪ್ರಭಾವಯುತ ಆಟವಾಡಿದ ಬೆಂಗಳೂರು ಎಫ್‌ಸಿ ತಂಡದ ಪರ ಮಿಡ್ ಫೀಲ್ಡರ್ ಇಸ್ಕೊ ಹೆರ್ನಾಂಡೆಸ್ (82ನೇ ನಿ.) ನಾಯಕ ಸುನಿಲ್ ಛೆತ್ರಿ ಅವರ ಸಹಾಯದಿಂದ ಗೋಲ್ ದಾಖಲಿಸಿ ತಂಡಕ್ಕೆ 1-1ರ ಸಮಬಲ ತಂದುಕೊಟ್ಟಿದ್ದರು.

ಕ್ರೀಡಾಂಗಣದಲ್ಲಿ 21 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಸೇರಿದ್ದ ತವರಿನ ಪ್ರೇಕ್ಷಕರ ಬೆಂಬಲದಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಆತಿಥೇಯ ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ತಂಡ ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಹೆಚ್ಚಿನ ಒತ್ತು ನೀಡಿತು. ಬೆಂಗಳೂರು ಎಫ್‌ಸಿ ತಂಡದ ಬಲಿಷ್ಠ ಡಿಫೆನ್ಸ್ ವಿಭಾಗದ ಮೇಳೆ ಪದೇ ಪದೇ ಒತ್ತಡ ಹೇರುತ್ತಿದ್ದ ಯುನೈಟೆಡ್ ಅಟಗಾರರು ಆರಂಭಿಕ ಗೋಲ್ ಗಳಿಕೆಗಾಗಿ ಶತಾಯ ಗತಾಯ ಪ್ರಯತ್ನ ನಡೆಸಿದರು. ಅಂತೆಯೇ 20ನೇ ನಿಮಿಷದಲ್ಲಿ ಒಬೆಷೆ ನೀಡಿದ ಅದ್ಭುತ ಪಾಸ್‌ನ ಸಂಪೂರ್ಣ ಲಾಭ ಪಡೆದ ಮಿಡ್‌ಫೀಲ್ಡರ್ ರಿದೀಮ್ ತಿಯಂಗ್ ಚೆಂಡನ್ನು ಗೋಲ್ ಪೆಟ್ಟಿಗೆ ಸೇರಿಸಿ ಆತಿಥೇಯರ ಸಂಭ್ರಮವನ್ನು ಮುಗಿಲು ಮುಟ್ಟುವಂತೆ ಮಾಡಿದರು. ಬಳಿಕ ಪ್ರಥಮಾರ್ಧದಲ್ಲೇ ಎದುರಾಳಿಗೆ ತಿರುಗೇಟು ನೀಡಲು ಬೆಂಗಳೂರು ಎಫ್‌ಸಿ ತಂಡ ಪ್ರಯತ್ನಿಸಿತು. ಈ ಪ್ರಯತ್ನದಲ್ಲಿ ಸ್ಟಾರ್ ಫಾವರ್ಡ್ ಆಟಗಾರ ಮಿಕು ಆಕ್ರಮಣಕಾರಿ ಆಟಕ್ಕೆ ಮುಂದಾಗಿ ಪ್ರಮಾದ ಎಸಗುವ ಮೂಲಕ 41ನೇ ನಿಮಿಷದಲ್ಲಿ ರೆಫ್ರಿಯಿಂದ ಹಳದಿ ಕಾರ್ಡ್ ಎಚ್ಚರಿಕೆ ಪಡೆದರು. ಇದರೊಂದಿಗೆ ಪಂದ್ಯದ ಮೊದಲಾರ್ಧ 1-0 ಅಂತರದಲ್ಲಿ ನಾರ್ತ್‌ಈಸ್ಟ್ ತಂಡದ ಮೇಲುಗೈನೊಂದಿಗೆ ಅಂತ್ಯಗೊಂಡಿತು.