ಬೆಂಗಳೂರು ಎಫ್ ಸಿಗೆ ಮೊದಲ ಸೋಲು

ಮುಂಬೈ ನಗರವು ಬೆಂಗಳೂರಿನ ವಿರುದ್ಧ ಕಿರಿದಾದ ಜಯ ಸಾಧಿಸಿದೆ

ಮುಂಬೈ: ನಿರೀಕ್ಷಿತ ಪ್ರದರ್ಶನ ಹೊರಹಾಕುವಲ್ಲಿ ಎಡವಿದ ಬೆಂಗಳೂರು ಎಫ್ ಸಿ ,ಪ್ರಸಕ್ತ ಐಎಸ್ ಎಲ್ ಲೀಗ್‌ನ ತನ್ನ 12ನೇ ಪಂದ್ಯದಲ್ಲಿ ಮುಂಬೈ ಸಿಟಿ ಎಫ್ ಸಿ ವಿರುದ್ಧ ಆಘಾತಕಾರಿ ಸೋಲನುಭವಿಸಿದೆ. ಈ ಮೂಲಕ ಲೀಗ್‌ನಲ್ಲಿ ಮೊತ್ತ ಮೊದಲ ಬಾರಿ ಸೋಲನುಭವಿಸಿದ ಬಿಎಫ್ಸಿ ಅಜೇಯ ದಾಖಲೆ ಕಾಯ್ದುಕೊಳ್ಳುವಲ್ಲಿ ಎಡವಿತು.

ಇಲ್ಲಿನ ಮುಂಬೈ ಫುಟ್ಬಾಲ್ ಅರೆನಾದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ 0-1 ಗೋಲ್‌ನಿಂದ ಮುಂಬೈ ಸಿಟಿ ಎಫ್ ಸಿ ವಿರುದ್ಧ ಶರಣಾಯಿತು. ಲೀಗ್ ಮೊದಲ ಹಂತದ ಪಂದ್ಯಗಳಲ್ಲಿ ಡ್ರಾ ಮತ್ತು ಗೆಲುವಿನ ಮಿಶ್ರ ಫಲ ಕಂಡಿದ್ದ ಛತ್ರಿ ಪಡೆ ಎರಡನೇ ಹಂತದಲ್ಲಿ ಮೊದಲ ಸೋಲಿನ ರುಚಿ ಅನುಭವಿಸಿದರೂ ಅಂಕಪಟ್ಟಿಯಲ್ಲಿ 27 ಅಂಕದೊಂದಿಗೆ 13ನೇ ಪಂದ್ಯವಾಡಿದ ಮುಂಬೈ ಸಿಟಿ ಎಫ್ಸಿ (27ಅಂಕ) ಜತೆ ಜಂಟಿ ಸ್ಥಾನ ಅಗ್ರಸ್ಥಾನ ಹೊಂದಿದೆ.

ಮುಂಬೈ ತಂಡದ ಪರ ಪಾಲೊ ಮಚಾದೊ 29ನೇ ನಿಮಿಷದಲ್ಲಿ ಗೋಲ್ ಗಳಿಸುವ ಮೂಲಕ ಜಯದ ರೂವಾರಿಯೆನಿಸಿದರು. ಪಂದ್ಯ ಮುಕ್ತಾಯಕ್ಕೆ ಕೊನೆಯ ಹತ್ತು ನಿಮಿಷಗಳು ಬಾಕಿ ಇದ್ದಾಗ ಬಿಎಫ್ಸಿ ಕೋಚ್ ಕಾರ್ಲೊಸ್ ಕ್ವಾಡ್ರಟ್ ಬಳಗ ಗೋಲಿಗಾಗಿ ಇನ್ನಿಲ್ಲದ ಕಸರತ್ತು ನಡೆಸಿದರೂ ಸೋಲು ತಪ್ಪಿಸಿಕೊಳ್ಳಲು ವಿಫಲಗೊಂಡಿತು. ಸ್ಟಾರ್ ಆಟಗಾರರಾದ ಉದಾಂತ ಸಿಂಗ್, ಎರಿಕ್ ಪಾರ್ತಾಲು, ನಾಯಕ ಛತ್ರಿ ಸೇರಿದಂತೆ ತಂಡದ ಅಗ್ರಮಾನ್ಯ ಆಟಗಾರರು ನಡೆಸಿ ಹೋರಾಟ ಕೈಗೂಡಲಿಲ್ಲ.

ಇದಕ್ಕೂ ಮುನ್ನ 60ರಿಂದ 70 ನಿಮಿಷಗಳ ನಡುವೆ ಉಭಯ ತಂಡಗಳು ಆಟಗಾರರ ಬದಲಾವಣೆಗೆ ಒತ್ತು ನೀಡಿದವು. ಆದರೆ ಬದಲಾವಣೆ ಮಾತ್ರ ಕಂಡು ಬರಲಿಲ್ಲ.

46ನೇ ನಿಮಿಷದಲ್ಲಿ ಬ್ಲೂಸ್ ತಂಡದ ಸ್ಟಾರ್ ಆಟಗಾರ ಎರಿಕ್ ಪಾರ್ತಾಲು ಗಾಳಿಯಲ್ಲಿ ಚೆಂಡನ್ನು ಗೋಲ್ ಪೆಟ್ಟಿಗೆಯತ್ತ ಆಕರ್ಷಕವಾಗಿ ಹೊಡೆದರೂ ಯಾವುದೇ ಪ್ರಯೋಜನವಾಗಲಿಲ್ಲ. 53ನೇ ನಿಮಿಷದಲ್ಲಿ ಪಾರ್ತಾಲು ಗೋಲ್ ಗಳಿಸಿ ತಂಡದ ಹಿನ್ನಡೆಯನ್ನು ತಗ್ಗಿಸುವ ಅತ್ಯುತ್ತಮ ಅವಕಾಶ ಪಾರ್ತಾಲಾಗಿತ್ತಾದರೂ ಇದರ ಲಾಭ ಪಡೆಯುವಲ್ಲಿ ಬಿಎಫ್ಸಿ ಆಟಗಾರರು ಎಡವಿದರು. ವಿರಾಮದ ಬಳಿಕ ಆಟ ಮುಂದುವರಿಸಿದ ಬೆಂಗಳೂರು ಎಫ್ ಸಿಗೆ ಹಿನ್ನಡೆ ತಗ್ಗಿಸುವ ಒತ್ತಡವಾದರೆ, ಮುಂಬೈ ತಂಡಕ್ಕೆ ಮುನ್ನಡೆ ಕಾಯ್ದುಕೊಳ್ಳುವ ತುಡಿತ.

ಮುನ್ನಡೆಯಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಮುಂಬೈ ನಂತರ ತನ್ನ ದಾಳಿಯನ್ನು ಬಿಗಿಗೊಳಿಸಿತು. ಈ ಹಂತದಲ್ಲಿ ಹಲವು ಬಾರಿ ರೆಫರಿಯಿಂದ ಎಚ್ಚರಿಕೆ ಪಡೆದರಾದರೂ ಪ್ರವಾಸಿ ತಂಡದ ಮೇಲೆ ಮೇಲುಗೈ ಸಾಸಿದರು. 33ನೇ ನಿಮಿಷದಲ್ಲಿ ಛತ್ರಿ ಫ್ರೀ ಕಿಕ್ ಮೂಲಕ ಗೋಲಿನ ಯತ್ನ ಮಾಡಿದರೂ ಯಾವುದೇ ಫಲ ದೊರೆಯಲಿಲ್ಲ. ಹೀಗಾಗಿ ಹಿನ್ನಡೆ ತಗ್ಗಿಸುವ ಅಗ್ರಸ್ಥಾನಿ ಬಿಎಫ್ಸಿ ಕನಸು ಈಡೇರಲಿಲ್ಲ.

ದಕ್ಕೂ ಮೊದಲು ಪ್ರಥಮಾರ್ಧದಲ್ಲಿ ಬೆಂಗಳೂರು ಎಫ್ಸಿ 0-1ರಲ್ಲಿ ಆತಿಥೇಯ ಮುಂಬೈ ಸಿಟಿ ಎಫ್ ಸಿ ವಿರುದ್ದ ಹಿನ್ನಡೆಗೆ ಒಳಗಾಯಿತು. ಉಭಯ ತಂಡಗಳ ಆಕ್ರಮಣಕಾರಿ ಆಟದ ಮಧ್ಯೆ ಮಚಾಡೊ 29ನೇ ನಿಮಿಷದಲ್ಲಿ ಗೋಲ್ ಗಳಿಸಿ ಮುಂಬೈ ತಂಡಕ್ಕೆ 1-0 ಅಂತರದ ಮುನ್ನಡೆ ತರುವಲ್ಲಿ ಯಶಸ್ವಿಯಾದರು. ಬಿಎಫ್‌ಸಿ ತಂಡದ ಕಸ್ಟೋಡಿಯನ್ (ಗೋಲ್ ಕೀಪರ್) ಗುರ್‌ಪ್ರೀತ್ ಸಿಂಗ್ ಆರಂಭದಿಂದಲೂ ಉತ್ತಮ ರಕ್ಷಣೆ ಮಾಡಿದರೂ ಮಚಾದೊ ಅವರ ಗೋಲಿನ ಯತ್ನವನ್ನು ತಡೆಯುವಲ್ಲಿ ವೈಫಲ್ಯರಾದರು.

19ನೇ ನಿಮಿಷದಲ್ಲೂ ಡೆಲ್ಲಾಡೊ ಡಿಮಾಸ್ ಸಹ ಗೋಲ್ ಗಳಿಕೆಯ ಯತ್ನವನ್ನು ಕೈಚೆಲ್ಲಿದ್ದರಿಂದ ಆರಂಭದಲ್ಲೇ ಮುನ್ನಡೆ ಗಳಿಸುವ ಛತ್ರಿ ಬಳಗದ ಕನಸು ಈಡೇರಲಿಲ್ಲ.

ಇದಕ್ಕೂ ಮುನ್ನ ಮೊದಲ 15 ನಿಮಿಷಗಳ ಆಟದಲ್ಲಿ ಉಭಯ ತಂಡಗಳು ಹಲವು ಬಾರಿ ಗೋಲ್ ಗಳಿಕೆ ಅವಕಾಶಗಳನ್ನು ಸೃಷ್ಟಿಸಿದರೂ ಒಮ್ಮೆಯೂ ಯಶಸ್ವಿಯಾಗಲಿಲ್ಲ. ಇದಕ್ಕೆ ಇತ್ತಂಡಗಳ ರಕ್ಷಣಾ ಪಡೆಯ ದಿಟ್ಟ ಹೋರಾಟ ಸಾಕ್ಷಿಕರಿಸಿತು. ಅದರಲ್ಲೂ 16ನೇ ನಿಮಿಷದಲ್ಲಿ ರಾಹುಲ್ ಬೆಕೆ ಬಿಎಫ್ಸಿ ಪರ ಖಾತೆ ತೆರೆಯಲು ಅದ್ಭುತ ಯತ್ನ ನಡೆಸಿದರು. ಆದರೆ ಆತಿಥೇಯ ಡಿಫೆಂಡರ್‌ಗಳು ಪ್ರಬಲ ಹೋರಾಟ ನಡೆಸಿ ಪ್ರವಾಸಿ ತಂಡಕ್ಕೆ ನಿರಾಸೆ ಮೂಡಿಸಿದವು.

ಎಎಫ್ ಸಿ ಕಪ್‌ನಲ್ಲಿ ಭಾರತ ತಂಡ ಪಾಲ್ಗೊಂಡಿದ್ದರಿಂದ ಸುಮಾರು ಒಂದು ತಿಂಗಳು ವಿಶ್ರಾಂತಿ ಬಳಿಕ ಆರಂಭಗೊಂಡ ಇಂಡಿಯನ್ ಸೂಪರ್ ಲೀಗ್ ಎರಡನೇ ಹಂತದಲ್ಲಿ ಮತ್ತೆ ಆಪತ್ಯ ಮುಂದುವರಿಸುವ ತವಕದಲ್ಲಿ ಕಳೆದ ರನ್ನರ್ ಅಪ್ ಅಖಾಡಕ್ಕಿಳಿಯಿತು. ಬೆಂಗಳೂರು ಎಫ್ ಸಿ ಇದೇ ತಿಂಗಳ 30ರಂದು ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ಎಫ್ಸಿ ತಂಡವನ್ನು ಎದುರಿಸಲಿದೆ.

Malcare WordPress Security