ಜಮ್ಶೆಡ್ಪುರಕ್ಕೆ ಮಣಿದ ಬಿಎಫ್‌ಸಿ

ಬೆಂಗಳೂರು ಎಫ್ಸಿಗೆ 1-5 ಗೋಲ್‌ಗಳ ಅಂತರದ ಸೋಲು, ಬಿಎಫ್ಸಿಗೆ ಕಾಡಿದ ಹಿರಿಯ ಆಟಗಾರರ ಅನುಪಸ್ಥಿತಿ

ಜಮ್ಶೆಡ್ಡುರ: ಆರಂಭಿಕ ಮುನ್ನಡೆ ಗಳಿಸಿದರೂ ದ್ವಿತೀಯಾರ್ಧದಲ್ಲಿ ಸಂಪೂರ್ಣ ರಕ್ಷಣಾವೈಫಲ್ಯ ಅನುಭವಿಸಿದ ಬೆಂಗಳೂರು ಎಫ್ ಸಿ ಐಎಸ್ ಎಲ್ ನ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಆತಿಥೇಯ ಜಮ್ಶೆಡ್‌ಪುರ ಎಫ್ ಸಿ ವಿರುದ್ಧ ಪರಾಭವಗೊಂಡು ನಿರಾಸೆ ಅನುಭವಿಸಿತು. ಹೀಗಾಗಿ ಸೋಲಿನೊಂದಿಗೆ ಮಾರ್ಚ್ 2ನೇ ವಾರದಲ್ಲಿ ಆರಂಭವಾಗಲಿರುವ ಪ್ಲೇಆಫ್‌ಗೆ ಸಜ್ಜುಗೊಳ್ಳುವಂತಾಯಿತು. ಇಲ್ಲಿನ ಜೆ.ಆರ್.ಡಿ.

ಟಾಟಾ ಸ್ಪೋರ್ಟ್ಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ 1-5 ಗೋಲ್‌ಗಳಿಂದ ಜಮ್ಶೆಡ್‌ಪುರ ಎಫ್ಸಿಗೆ ಮಂಡಿಯೂರಿತು. ಬ್ಲೂಸ್ ಪರ ಸಂಬೊಯ್ ಹಾಕಿಷ್ (16ನೇ ನಿಮಿಷ) ಏಕೈಕ ಗೋಲ್ ದಾಖಲಿಸಿದರು. ಆತಿಥೇಯ ಜಮ್ಶೆಡ್‌ಪುರ ಪರ ಅಗಸ್ಟಿನ್ ಫರ್ನಾಂಡೊ (45ನೇ ನಿ.), ಮೈಕಲ್ ಸೂಸೈರಾಜ್ (54ನೇ ನಿ.), ಕಾರ್ಲೊಸ್ (61ನೇ ನಿ.) ತಲಾ ಒಂದು ಗೋಲ್ ಗಳಿಸಿದರೆ, ಪ್ಯಾಬ್ಲೊ ಮರ್ಗಾಡೋ (56, 57ನೇ ನಿ.) ಎರಡು ಗೋಲ್ ದಾಖಲಿಸಿ ಆತಿಥೇಯ ತಂಡದ ಗೆಲುವಿನ ರೂವಾರಿಯೆನಿಸಿದರು.

ಸದ್ಯ 18 ಪಂದ್ಯಗಳಿಂದ 10 ಗೆಲುವು, ತಲಾ 4 ಸೋಲು ಮತ್ತು ಡ್ರಾ ಸಾಸಿದ ಬೆಂಗಳೂರು ಎಫ್ ಸಿ, ಒಟ್ಟು 34 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಆದರೆ ಗುರುವಾರ ನಡೆಯಲಿರುವ ಎಫ್‌ಸಿ ಗೋವಾ ಮತ್ತು ಚೆನ್ನೈಯಿನ್ ಎಫ್ ಸಿ ನಡುವಿನ ಪಂದ್ಯದಲ್ಲಿ ಒಂದು ವೇಳೆ ಗೋವಾ ಸೋಲನುಭವಿಸಿದರೆ, ಬಿಎಫ್ಸಿಯೇ ಅಗ್ರಸ್ಥಾನಿಯಾಗಿ ಲೀಗ್ ಹಂತ ಪೂರ್ಣಗೊಳಿಸಲಿದೆ.

ಇನ್ನೊಂದೆಡೆ ಜಮ್ಶೆಡ್‌ಪುರ ಎಫ್ಸಿ ಜಯದೊಂದಿಗೆ 18 ಪಂದ್ಯಗಳಲ್ಲಿ 6 ಗೆಲುವು, 9 ಡ್ರಾ ಮತ್ತು 3 ಸೋಲಿನೊಂದಿಗೆ 27 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಿಯಾಗಿ ಹೋರಾಟ ಕೊನೆಗೊಳಿಸಿತು. ದ್ವಿತೀಯಾರ್ಧದಲ್ಲಿ ಸೋಲಿನ ಹಿನ್ನೆಡೆ ತಗ್ಗಿಸುವ ಲೀಗ್ ಲೀಡರ್ ಬ್ಲೂಸ್ ತಂಡದ ಯಾವುದೇ ಪ್ರಯತ್ನ ಕೈಗೂಡಲಿಲ್ಲ. ಹೀಗಾಗಿ ಲೀಗ್‌ನಲ್ಲಿ ಇದೇ ಮೊದಲ ಬಾರಿ ದೊಡ್ಡ ಅಂತರದ ಹಾಗೂ 4ನೇ ಸೋಲಿಗೆ ತುತ್ತಾಗಬೇಕಾಯಿತು. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದ ಕಾರಣ ತಂಡದಲ್ಲಿ ಸ್ಥಾನ ಪಡೆದ ಬಿಎಫ್ಸಿ ಯುವ ಪಡೆ, ಎದುರಾಳಿಯ ಆಕ್ರಮಣಕಾರಿ ಆಟವನ್ನು ಹಿಮ್ಮೆಟ್ಟಿಸುವಲ್ಲಿ ಸಂಪೂರ್ಣ ಹಿನ್ನಡೆ ಅನುಭವಿಸಿತು.

ತಂಡದ ಹಿನ್ನಡೆ ತಗ್ಗಿಸುವ ಯತ್ನದಲ್ಲಿ ಹಲವು ಬಾರಿ ಪ್ರಮಾದವೆಸಗಿದ ಪ್ರವಾಸಿ ಬಿಎಫ್ಸಿ ಯುವ ಆಟಗಾರರು ರೆಫರಿಯಿಂದ ಪದೇ ಪದೇ ಎಚ್ಚರಿಕೆ ಪಡೆದರು. ಅದರಲ್ಲೂ ಎರಡು ಬಾರಿ ಹಳದಿ ಕಾರ್ಡ್‌ಗೆ ಗುರಿಯಾದ ಗುರ್‌ಸಿಮ್ರತ್ ಗಿಲ್, 68ನೇ ನಿಮಿಷದಲ್ಲಿ ರೆಡ್ ಕಾರ್ಡ್ ಪಡೆದು ಮೈದಾನ ತೊರೆದರು.ಹೀಗಾಗಿ ಹತ್ತು ಆಟಗಾರರಿಂದ ಉಳಿದ ಆಟವಾಡಬೇಕಾಯಿತು. ಇದು ಬಿಎಫ್ಸಿಗೆ ಭಾರಿ ಹಿನ್ನೆಡೆಯನ್ನುಂಟು ಮಾಡಿತು.

ಇದಕ್ಕೂ ಮೊದಲು 16ನೇ ನಿಮಿಷದಲ್ಲಿ ಸೆಂಬೊಯ್ ಹಾಕಿಷ್ ಆಕರ್ಷಕ ಗೋಲ್ ಗಳಿಸಿ ಬಿಎಫ್ಸಿ ಪರ ಖಾತೆ ತೆರೆದು 1-0 ಅಂತರದ ಮುನ್ನೆಡೆಗೆ ಕಾರಣರಾದರು. ಈಗಾಗಲೇ ಪ್ಲೇಆಫ್ ಹಂತದಿಂದ ಹೊರಬಿದ್ದಿರುವ ಜಮ್ಶೆಡ್‌ಪುರದ ರಕ್ಷಣಾ ವೈಫಲ್ಯವನ್ನು ಸಮರ್ಥವಾಗಿ ಬಳಸಿಕೊಂಡ ಬೆಂಗಳೂರು ಆಟಗಾರರು ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು.

ಈಗಾಗಲೇ ಪ್ಲೇಆಫ್‌ಗೆ ಅರ್ಹತೆ ಹೊಂದಿರುವ ಕಾರಣ ಬೆಂಗಳೂರು ಎಫ್ ಸಿ ತಂಡದ ಪ್ರಮುಖ * ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಆಟಗಾರರಿಗೆ ಅವಕಾಶ ಕಲ್ಪಿಸಿತು. ಕಾಯಂ ನಾಯಕ ಸುನಿಲ್ ಛತ್ರಿ, ಗೋಲ್ಕೀಪರ್ ಗುರ್‌ಪ್ರೀತ್ ಸಿಂಗ್, ಉದಾಂತ ಸಿಂಗ್ ಸೇರಿದಂತೆ ತಂಡದ ಪ್ರಮುಖ ಆಟಗಾರಿಗೆ ಕೋಚ್ ಕಾರ್ಲೊಸ್ ವಿಶ್ರಾಂತಿ ನೀಡಿದರು.