ಡೆಲ್ಲಿಗೆ ಬೆಂಗಳೂರು ಎಫ್ಸಿ ಶರಣು

ಡೈನಮೋಸ್‌ ವಿರುದ್ದ ಬಿಎಫ್ಸಿಗೆ 2-3 ಅಂತರದ ಸೋಲು, ಸೋತರೂ ಪ್ಲೇ ಆಫ್ ಖಾತ್ರಿಪಡಿಸಿಕೊಂಡ ಕಾರ್ಲೊಸ್ ಬಳಗ

ಹೊಸದಿಲ್ಲಿ: ಅಂತಿಮ ಕ್ಷಣದ ರಕ್ಷಣಾ ವೈಫಲ್ಯಗಳಿಂದಾಗಿ ಬೆಂಗಳೂರು ಎಫ್ ಸಿ ಪ್ರಸಕ್ತ ಐಎಸ್ಎಲ್‌ನ ತನ್ನ 16ನೇ ಪಂದ್ಯದಲ್ಲಿ ಡೆಲ್ಲಿ ಡೈನಮೋಸ್‌ ವಿರುದ್ಧ ಸೋಲನುಭವಿಸಿದೆ.ಆದಾಗ್ಯೂ ಒಟ್ಟು 31ಅಂಕಗಳೊಂದಿಗೆ ಲೀಗ್‌ನಲ್ಲಿ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡ ಎನಿಸಿದೆ.

ಇಲ್ಲಿನ ಜವಾಹರ್ ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬಿಎಫ್ಸಿ 2-3 ಗೋಲ್‌ಗಳಿಂದ ಡೆಲ್ಲಿ ಎದುರು ಪರಾಭವಗೊಂಡಿದೆ. ಡೆಲ್ಲಿ ಪರ ಡೇನಿಯಲ್ ಲಾಲ್‌ಂಪುಯಾ (77, 88ನೇ ನಿ.) ಎರಡು ಹಾಗೂ ಉಲಿಸೆಸ್ ಡೇವಿಲಾ (9ನೇ ನಿ.) ಒಂದು ಗೋಲ್ ದಾಖಲಿಸಿ ಜಯದ ರೂವಾರಿಯೆನಿಸಿದರು. ಬೆಂಗಳೂರು ಪರ ಬೈಥಾಂಗ್ ಹಾಕಿಷ್ (19ನೇ ನಿ.) ಮತ್ತು ಸುನಿಲ್ ಛತ್ರಿ (72ನೇ ನಿ.) ತಲಾ ಒಂದು ಗೋಲ್ ಗಳಿಸಿದರೂ ತಂಡವನ್ನು ಸತತ ಎರಡನೇ ಸೋಲಿನಿಂದ ಪಾರು ಮಾಡಲು ವಿಫಲಗೊಂಡರು. ಡೆಲ್ಲಿ ಎದುರು ಸೋತರೂ 16 ಪಂದ್ಯಗಳಿಂದ ಒಟ್ಟು 31 ಅಂಕ ಕಲೆಹಾಕಿರುವ ಬಿಎಫ್‌ಸಿ, ಪ್ಲೇ ಆಫ್ ಸ್ಥಾನ ಖಾತ್ರಿಪಡಿಸಿಕೊಂಡಿದೆ. ಸುನಿಲ್ ಛತ್ರಿ ದಾಖಲಿಸಿದ ಗೋಲಿನಿಂದ 72ನೇ ನಿಮಿಷದಲ್ಲಿ ಬೆಂಗಳೂರು ಎಫ್ ಸಿ 2-1ರಲ್ಲಿ ಮೇಲುಗೈ ಸಾಧಿಸಿದರೂ ಡೇನಿಯಲ್ ಲಾಲ್ ಪುಯಾ ಮೂರು ನಿಮಿಷಗಳ ಅಂತರದಲ್ಲಿ ಎರಡು ಗೋಲ್ ದಾಖಲಿಸಿ ಪ್ರವಾಸಿ ತಂಡದ ಗೆಲುವನ್ನು ಕಸಿದುಕೊಂಡರು.

ಕ್ಸಿಸ್ಕೊ ಹೆರ್ನಾಂಡೆಜ್ ನೆರವಿನಿಂದ 72ನೇ ನಿಮಿಷದಲ್ಲಿ ಗೋಲ್ ದಾಖಲಿಸಿದ ಎಂದಿನ ನಾಯಕ ಸುನಿಲ್ ಛತ್ರಿ ಬೆಂಗಳೂರು ತಂಡಕ್ಕೆ 2-1ರ ಮುನ್ನಡೆ ಒದಗಿಸಿದರು. ಇದರೊಂದಿಗೆ ಪ್ರಸಕ್ತ ಲೀಗ್‌ನಲ್ಲಿ ತಂಡದ ಪರ 8ನೇ ಗೋಲ್ ಗಳಿಸಿದರು. ಪ್ರವಾಸಿ ತಂಡದ ಸಂಭ್ರಮ ಹಸಿರಾಗಿರುವಾಗಲೇ ಡೆಲ್ಲಿ ತಂಡದ ಡೇನಿಯಲ್‌ ಲಾಲ್‌ ಪುಯಾ (77ನೇ ನಿ) ಗೋಲ್ ಗಳಿಸಿ ತಂಡದ 2-2 ಸಮಬಲದ ಹೋರಾಟಕ್ಕೆ ಸಾಕ್ಷಿಯಾದರು.

ಮೊದಲಾರ್ಧದಲ್ಲಿ ಆಡುವ 11ರ ಬಳಗಿಂದ ಹೊರಗಿದ್ದ ಸುನಿಲ್ ಛತ್ರಿ 59ನೇ ನಿಮಿಷದಲ್ಲಿ ಬೈಥಾಂಗ್ ಹಾಕಿಷ್ ಬದಲಿಗೆ ಮೈದಾನ ಪ್ರವೇಶಿಸಿದರು. ನಂತರ ಆಟಗಾರರ ಸಮನ್ವಯತೆ ಹಾಗೂ ಸಂಘಟಿತ ಆಟಕ್ಕೆ ಕರೆ ನೀಡಿದ ಛತ್ರಿ ಸಹ ಆಟಗಾರರಲ್ಲಿ ಉತ್ಸಾಹ ತುಂಬಿದರು.

ವಿರಾಮಕ್ಕೂ ಮುನ್ನ 1-1ರ ಹೋರಾಟ ಕಂಡು ಬಂದ ಕಾರಣ ಮೇಲುಗೈ ಸಾಧಿಸುವ ನಿಟ್ಟಿನಲ್ಲಿ ದ್ವಿತೀಯಾರ್ಧ ಆರಂಭಿಸಿದವು. ಈ ಹಂತದಲ್ಲಿ ಬೆಂಗಳೂರು ತಂಡದ ಹರ್ಮನ್‌ಜ್ಯೋತ್ ಖಾಬ್ರಾ ಹಳದಿ ಕಾರ್ಡ್ ಎಚ್ಚರಿಕೆ ಪಡೆದರು.54ನೇ ನಿಮಿಷದಲ್ಲಿ ಕಾರ್ನರ್ ಮೂಲಕ ಡಿಮಾಸ್ ಡೆಲ್ಲಾಡೊ ಗೋಲ್ ಗಳಿಸುವ ಅಮೋಘ ಯತ್ನವನ್ನು ಡೈನಮೋಸ್ ತಂಡದ ರಕ್ಷಣಾ ಪಡೆ ಸಮರ್ಥವಾಗಿ ತಡೆಯಿತು.

ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ ಬೈಥಾಂಗ್ ಹಾಕಿಷ್ ದಾಖಲಿಸಿದ ಗೋಲಿನಿಂದ ಬೆಂಗಳೂರು ಎಫ್ ಸಿ ಪ್ರಥಮಾರ್ಧಕ್ಕೆ 1-1ರಲ್ಲಿ ಸಮಬಲದ ಹೋರಾಟ ಪ್ರದರ್ಶಿಸಿತು. ಚೆನ್ನೈಯಿನ್ ಎದುರಿನ ಸೋಲಿನಿಂದ ಹೊರಬರುವ ಹುಮ್ಮಸ್ಸಿನಲ್ಲಿ ಕಣಕ್ಕಿಳಿದ ತಾತ್ಕಾಲಿಕ ನಾಯಕ ಡಿಮಾಸ್ ಡೆಲ್ದಾಡೊ ಬಳಗ ನಿರೀಕ್ಷೆ ಆರಂಭ ಕಾಣುವಲ್ಲಿ ಎಡವಿತು. ಪಂದ್ಯ ಆರಂಭವಾದ ಕೇವಲ 9 ನಿಮಿಷದಲ್ಲಿ ಆತಿಥೇಯ ತಂಡಕ್ಕೆ ಗೋಲ್ ಬಿಟ್ಟುಕೊಟ್ಟು ಒತ್ತಡಕ್ಕೆ ಸಿಲುಕಿತು. ಆತಿಥೇಯರ

ಆಕ್ರಮಣಕಾರಿ ದಾಳಿ ತಡೆಯುವಲ್ಲಿ ಗೋಲ್ ಕೀಪರ್ ಗುರ್‌ಪ್ರೀತ್ ಸಿಂಗ್ ವಿಫಲಗೊಂಡರು. – ಪ್ರವಾಸಿ ಬಿಎಫ್ಸಿ ಆಟಗಾರರಿಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಡೆಲ್ಲಿ ತಂಡದ ಮಾರ್ಟಿ ಗೆಸಿ 41ನೇ ನಿಮಿಷದಲ್ಲಿ ಹಳದಿ ಕಾರ್ಡ್‌ಗೆ ಗುರಿಯಾದರು.ವಿರಾಮಕ್ಕೂ ಮುನ್ನ ಮುನ್ನಡೆ ಗಳಿಸುವ ಹಲವು ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಬೆಂಗಳೂರು ತಂಡ ಯಶ ಕಾಣಲಿಲ್ಲ. 23ನೇ ನಿಮಿಷದಲ್ಲಿ ಉಭಯ ತಂಡಗಳು ಮುನ್ನಡೆಗಾಗಿ ಇನ್ನಿಲ್ಲದ ಹರಸಾಹಸ ನಡೆಸಿದವು. ಆದರೆ ಉಭಯ ತಂಡಗಳ ರಕ್ಷಣಾ ಬಳಗ ಇದಕ್ಕೆ ಅವಕಾಶ ಕಲ್ಪಿಸಲಿಲ್ಲ. ಇದಕ್ಕೂ ಮುನ್ನ 19ನೇ ನಿಮಿಷದಲ್ಲಿ ಬೈಥಾಂಗ್ ಗೋಲ್ ದಾಖಲಿಸಿ ತಂಡದ 1-1ರ ಪ್ರತಿ ಹೋರಾಟಕ್ಕೆ ಸಾಕ್ಷಿಯಾದರು. ಲೀಗ್‌ನಲ್ಲಿ ಬ್ಲೂಸ್ ಪರ ಬೈಥಾಂಗ್ ಹಾಕಿಷ್ ದಾಖಲಿಸಿದ ಎರಡನೇ ಗೋಲ್ ಇದಾಗಿದೆ. ಆರಂಭದಲ್ಲೇ ಪ್ರವಾಸಿ ತಂಡದ ಆಕ್ರಮಣಕಾರಿ ಆಟವನ್ನರಿತ ಡೆಲ್ಲಿ ತನ್ನ ರಕ್ಷಣೆಯನ್ನು ಬಿಗಿಗೊಳಿಸಿ, ದಾಳಿಗೂ ಒತ್ತು ನೀಡಿತು. ಇದರ ಫಲವಾಗಿ 9ನೇ ನಿಮಿಷದಲ್ಲಿ ಬ್ಲೂಸ್ ಬಳಗದ ರಕ್ಷಣಾ ಕೋಟೆಯನ್ನು ಭೇದಿಸಿದ ಉಲೆಸೆಸ್ ಡೇವಿಲಾ ಗೋಲ್ ದಾಖಲಿಸಿ ಡೆಲ್ಲಿಗೆ 1-0 ಅಂತರದ ಮುನ್ನಡೆ ಒದಗಿಸಿದರು.ಆತಿಥೇಯರ ಮುನ್ನಡೆಯಿಂದ ಒತ್ತಡಕ್ಕೆ ಒಳಗಾದ ಲೀಗ್ ಅಗ್ರಸ್ಥಾನಿ ಬೆಂಗಳೂರು ಪ್ರತಿ ಹೋರಾಟ ಸಂಘಟಿಸುವ ಯತ್ನ ನಡೆಸಿತು. ಈ ಹಂತದಲ್ಲಿ ಕ್ರಿಸ್ಟೋ ಹೆರ್ನಾಂಡೆಜ್ ಪ್ರಮಾದವೆಸಗಿ ರೆಫರಿಯಿಂದ ಹಳದಿ ಕಾರ್ಡ್ ಎಚ್ಚರಿಕೆ ಪಡೆದರು.

ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿ ಅಖಾಡಕ್ಕಿಳಿದ ಬೆಂಗಳೂರು ಎಫ್ ಸಿ ಪಂದ್ಯ ಆರಂಭಗೊಂಡ ಮೊದಲ ನಿಮಿಷದಲ್ಲೇ ಉದಾಂತ ಸಿಂಗ್ ಮತ್ತು ಮಿಕು ನೆರವಿನಿಂದ ಖಾತೆ ತೆರೆಯುವ ಅವಕಾಶ ಗಿಟ್ಟಿಸಿತಾದರೂ ಕೂದಲೆಳೆಯ ಅಂತರದಲ್ಲಿ ಕೈತಪ್ಪಿತು.

ಬೆಂಗಳೂರು ಎಫ್ ಸಿ ತನ್ನ ಮುಂದಿನ ಪಂದ್ಯದಲ್ಲಿ ಇದೇ 21ರಂದು ಮನೆಯಂಗಳದಲ್ಲಿ ಎಫ್‌ಸಿ ಗೋವಾ ತಂಡವನ್ನು ಎದುರಿಸಲಿದೆ.

Malcare WordPress Security