ಗೋವಾ ಸೋಲಿಸಿ ಅಗ್ರಸ್ಥಾನಕ್ಕೇರಿದ ಬೆಂಗಳೂರು ಎಫ್‌ಸಿ

ಎಫ್‌ಸಿ ಗೋವಾ ವಿರುದ್ಧ 3-0 ಅಂತರದ ಭರ್ಜರಿ ಗೋಲು, ಮಿಂಚಿದ ಜುವಾನಾನ್, ಮಿಕು, ಉದಾಂತ

ಬೆಂಗಳೂರು: ಜುವಾನಾನ್, ಉದಾಂತ ಸಿಂಗ್ ಮತ್ತು ಮಿಕು ಅವರು ದಾಖಲಿಸಿದ ಗೋಲ್‌ಗಳಿಂದ ಗಮನಾರ್ಹ ಪ್ರದರ್ಶನ ತೋರಿದ ಬೆಂಗಳೂರು ಎಫ್ ಸಿ ಪ್ರಸಕ್ತ ಐಎಸ್ಎಲ್‌ನ ತನ್ನ 17ನೇ ಪಂದ್ಯದಲ್ಲಿ ಬಲಿಷ್ಠ ಎಫ್‌ಸಿ ಗೋವಾ ವಿರುದ್ಧ ಏಕಪಕ್ಷೀಯ ಗೆಲುವು ದಾಖಲಿಸಿ, ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ.

ತವರಿನಂಗಳ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮಿಂಚಿದ ಕೋಚ್ ಕಾರ್ಲೊಸ್ ಪಡೆ 3-0 ಗೋಲ್‌ಗಳಿಂದ ಪ್ರವಾಸಿ ಎಫ್ ಸಿ ಗೋವಾ ತಂಡವನ್ನು ಸೋಲಿಸಿ ಸತತ ಎರಡು ಸೋಲುಗಳ ನಂತರ ಗೆಲುವಿನ ಹಾದಿಗೆ ಮರಳಿತು. ಈ ಜಯದೊಂದಿಗೆ 3 ಅಂಕ ಸಂಪಾದಿಸಿದ ಬೆಂಗಳೂರು ತಂಡ ಒಟ್ಟು 34 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯಿತು.

ಬೆಂಗಳೂರು ಎಫ್ ಸಿ ಪರ ಜುವಾನಾನ್ (50ನೇ ನಿಮಿಷ), ಉದಾಂತ ಸಿಂಗ್ (58ನೇ ನಿಮಿಷ) ಮತ್ತು ಮಿಕು (69ನೇ ನಿ.) ತಲಾ ಒಂದು ಗೋಲ್ ಗಳಿಸಿ ಜಯದ ರೂವಾರಿಯೆನಿಸಿದರು. ಪಂದ್ಯದ ಮೊದಲಾರ್ಧ ಗೋಲ್ ರಹಿತವಾದರೂ ದ್ವಿತೀಯಾರ್ಧದಲ್ಲಿ ಬಿಎಫ್ಸಿ ಆಟಗಾರರು ಅಕ್ಷರಶಃ ಪಾರಮ್ಯ ಮೆರೆದರು. ಕೇವಲ 19 ನಿಮಿಷಗಳ ಅಂತರದಲ್ಲಿ ಮೂರು ಗೋಲ್ ದಾಖಲಿಸಿದ್ದು , ಬ್ಲೂಸ್ ಪ್ರಭುತ್ವಕ್ಕೆ ಸಾಕ್ಷಿಕರಿಸಿತು. 2-0 ಅಂತರದ ಮುನ್ನಡೆಯೊಂದಿಗೆ ಗೆಲುವಿನತ್ತ ದಾಪುಗಾಲಿಟ್ಟಿದ್ದ ಬಿಎಫ್‌ಸಿ ಪರ ಮಿಕು ಇನ್ನೊಂದು ಗೋಲ್ ತಂದಿಟ್ಟರು. ಪ್ರವಾಸಿ ಗೋವಾ ತಂಡದ ರಕ್ಷಣಾ ಕೋಟೆಯನ್ನು ಛಿದ್ರಗೊಳಿಸಿದ ಬೆಂಗಳೂರು ಆಟಗಾರರು ಹಿಂದಿನ ಎರಡು ಸೋಲುಗಳಿಂದ ಹೊರಬಂದಿದ್ದು, ಈ ಪಂದ್ಯದಲ್ಲಿ ಅನಾವರಣಗೊಂಡಿತು.

ಇದಕ್ಕೂ ಮುನ್ನ ಮೊದಲ ಗೋಲಿನ ಸಂಭ್ರಮದಿಂದ ಹೊರಬರುವ ಮುನ್ನವೇ ಸ್ಟಾರ್ ಫಾರ್ವಡ್್ರ ಆಟಗಾರ ಉದಾಂತ ಸಿಂಗ್ ತಂಡದ ಎರಡನೇ ಗೋಲ್ ಗಳಿಸಿ ಆತಿಥೇಯರ ಮುನ್ನಡೆಯನ್ನು 2-0ಗೆ ಹಿಗ್ಗಿಸಿದರು. ಪ್ರವಾಸಿ ಆಟಗಾರರಿಂದ ಕಸಿದ ಚೆಂಡನ್ನು ಉದಾಂತರತ್ತ ತಳ್ಳುವಲ್ಲಿ ಡಿಮಾಸ್ ಡೆಲ್ಲಾಡೊ ಯಾವುದೇ ತಪ್ಪೆಸಗಲಿಲ್ಲ. ಮುನ್ನಡೆ ಹೊರತಾಗಿಯೂ ಎಚ್ಚರಿಕೆ ಆಟದ ವೈಫಲ್ಯದಿಂದಾಗಿ ಬಿಎಫ್ ಸಿಯ ಹರ್ಮನ್‌ಜೋತ್ ಖಾಬ್ರಾ 61ನೇ ನಿಮಿಷದಲ್ಲಿ ಹಳದಿ ಕಾರ್ಡ್ ಪಡೆದರು.ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟಕ್ಕೆ ಹೆಸರಾಗಿರುವ ಬೆಂಗಳೂರು ಎಫ್ಸಿ ನಿರೀಕ್ಷೆಯಂತೆ ತನ್ನ ವೈಭವ ಅನಾವರಣಗೊಳಿಸಿತು. ಮಿಕು ಅವರಿಂದ ನೆರವು ಪಡೆದ ಜುವಾನಾನ್ 50ನೇ ನಿಮಿಷದಲ್ಲಿ ಎದುರಾಳಿ ಗೋಲ್ಕೀಪರ್ ಕಣ್ಣಪ್ಪಿಸಿ ಬ್ಲೂಸ್ ಪರ ಖಾತೆ ತೆರೆದರು.

ಇದಕ್ಕೂ ಮುನ್ನ ಉಭಯ ತಂಡಗಳ ದಿಟ್ಟ ರಕ್ಷಣಾತ್ಮಕ ಆಟದಿಂದಾಗಿ ಪಂದ್ಯದ ಪ್ರಥಮಾರ್ಧ 0-0 ಗೋಲ್ ರಹಿತಗೊಂಡಿತು. ಪ್ರಮಾದವೆಸಗಿದ ಕಾರಣ ಎರಡು ಬಾರಿ ಹಳದಿ ಕಾರ್ಡ್‌ಗೆ ಗುರಿಯಾದ ಬೆಂಗಳೂರು ತಂಡದ ನಿಶು ಕುಮಾರ್‌ 42ನೇ ನಿಮಿಷದಲ್ಲಿ ರೆಫರಿಯಿಂದ ರೆಡ್ ಕಾರ್ಡ್‌ಗೆ ಗುರಿಯಾದರು. ಇದು ಆತಿಥೇಯ ನ್ಯೂಸ್‌ಗೆ ಭಾರಿ ಹಿನ್ನಡೆ ತಂದಿತು. ಪಂದ್ಯ ಸಾಗಿದಂತೆ ಬಿಎಫ್‌ಸಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿತು. ಗೋಲಿನ ಮೇಲಿನ ನಿಯಂತ್ರಣದ ಯತ್ನದಲ್ಲಿದದ್ ನಿಶು ಕುಮಾರ್ 25ನೇ ನಿಮಿಷದಲ್ಲಿ ಹಳದಿ ಕಾರ್ಡ್‌ಗೆ ಗುರಿಯಾದರು. ಇದಾದ ಆರು ನಿಮಿಷಗಳ ಅಂತರದಲ್ಲಿ ಬೆಂಗಳೂರು ತಂಡದ ರಿನೋ ಆ್ಯಂಟೊ ಸಹ ರೆಫರಿಯಿಂದ ಎಚ್ಚರಿಕೆ ಪಡೆದರು.

16 ಮತ್ತು 19ನೇ ನಿಮಿಷದಲ್ಲಿ ಬೆಂಗಳೂರು ಪರ ಲೂಯಿಸ್ಕಾ ಮತ್ತು ಮಿಕು ಗೋಲ್ ಗಳಿಸುವ ಯತ್ನ ನಡೆಸಿದರೂ ಪ್ರವಾಸಿ ಗೋವಾ ಆಟಗಾರರ ದಿಟ್ಟ ರಕ್ಷಣೆ ಒಡ್ಡಿದರು. 22ನೇ ನಿಮಿಷದಲ್ಲಿ ರಿನೊ ಆ್ಯಂಟೊ, ಉದಾಂತ ಸಿಂಗ್ ಮತ್ತು ಕ್ರಿಸ್ಕೊ ಹೆರ್ನಾಂಡೆಜ್ ನಡೆಸಿ ಗೋಲಿನ ಯತ್ನಗಳು ಕೈಗೂಡಲಿಲ್ಲ. ಹೀಗಾಗಿ ಆರಂಭದಲ್ಲೇ ಮುನ್ನಡೆ ಪಡೆಯುವ ಕೋಚ್ ಕಾರ್ಲೊಸ್ ತಂಡದ ಬಯಕೆ ಈಡೇರಲಿಲ್ಲ.

ಉಭಯ ತಂಡಗಳು ಪ್ಲೇ ಆಫ್‌ಗೆ ಈಗಾಗಲೇ ಅರ್ಹತೆ ಹೊಂದಿದ್ದ ಕಾರಣ ಯಾವುದೇ ಒತ್ತಡವಿಲ್ಲದೆ ಆಟ ಆರಂಭಿಸಿದವು. ಆದರೆ ಲೀಗ್‌ನ ಆರಂಭದಿಂದಲೂ ಪ್ರಾಬಲ್ಯ ಸಾಧಿಸಿಕೊಂಡ ಬಂದಿರುವ ಕೋಚ್ ಕಾರ್ಲೊಸ್ ಕ್ವಾಡ್ರಟ್ ಬಳಗ, ಕೊನೆಯ ಹಂತದಲ್ಲಿ ಎದುರಾದ ಸತತ ಎರಡು ಸೋಲುಗಳಿಂದ ಹೊರಬರುವ ಹಾದಿಯಲ್ಲಿ ಅಖಾಡಕ್ಕೆ ಧುಮುಕಿತು. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ನಿಟ್ಟಿನಲ್ಲಿ ಲೀಗ್‌ನ ಪ್ರಬಲ ಹಾಗೂ ಪ್ರಶಸ್ತಿ ಫೇವರಿಟ್ ಎನಿಸಿರುವ ಬೆಂಗಳೂರು ಎಫ್ ಸಿ ಮತ್ತು ಎಫ್‌ಸಿ ಗೋವಾ ತಂಡಗಳು ಗೆಲುವಿನ ನಿರೀಕ್ಷಿಯಲ್ಲಿ ಮುಖಾಮುಖಿಯಾದವು.

ಬೆಂಗಳೂರು ಎಫ್ಸಿ ಇದೇ 27ರಂದು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಜಮ್ಶೆಡ್‌ಪುರ ಎಫ್ಸಿ ತಂಡವನ್ನು ಎದುರಿಸಲಿದೆ.