ಫೈನಲ್ ಲೀಗ್ ವೇಳಾಪಟ್ಟಿಗೂ ಮುನ್ನ ಜಮ್ಶೆಡ್‌ಪುರ ಎಫ್ ಸಿ ವಿರುದ್ಧದ ಪಂದ್ಯದಿಂದ ಪ್ರಮುಖ ಆಟಗಾರರ ವಿಶ್ರಾಂತಿಗೆ ಕ್ವಾಡ್ರಟ್ ನಿರ್ಧಾರ
ಜಮ್ಶೆಡ್‌ಪುರ: ಇಲ್ಲಿನ ಜೆಆರ್‌ಡಿ ಟಾಟಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಬುಧವಾರ ನಡೆಯಲಿರುವ ಜಮ್ಶೆಡ್‌ಪುರ ಎಫ್ ಸಿ ವಿರುದ್ಧದ ಪಂದ್ಯದಲ್ಲಿ ಕೆಲವು ಯುವ ಆಟಗಾರರಿಗೆ ಸ್ಥಾನ ಕಲ್ಪಿಸುವ ಕುರಿತು ಬೆಂಗಳೂರು ಎಫ್ಸಿ ಕೋಚ್ ಕಾರ್ಲೊಸ್ ಕ್ವಾಡ್ರಟ್ ಸುಳಿವು ನೀಡಿದ್ದಾರೆ.
ಕಳೆದವಾರ ಎಫ್ ಸಿ ಗೋವಾ ವಿರುದ್ಧ 3-0 ಅಂತರದಲ್ಲಿ ಜಯಗಳಿಸುವುದರೊಂದಿಗೆ ಬ್ಲೂಸ್ ಈಗಾಗಲೇ ಪ್ಲೇ ಆಫ್‌ಗೆ ಅರ್ಹತೆ ಗಳಿಸಿದೆ. ಮಾರ್ಚ್ ಎರಡನೇ ವಾರದಲ್ಲಿ ಪ್ಲೇ ಆಫ್ ಹಂತ ಆರಂಭವಾಗಲಿರುವ ಹಿನ್ನೆಲೆಯಲ್ಲಿ ತಂಡದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲು ಎದುರು ನೋಡುತ್ತಿದೆ.“ನಾವು ಸದ್ಯ ಉತ್ತಮ ಸ್ಥಿತಿಯಲ್ಲಿದ್ದೇವೆ. ಏಕೆಂದರೆ ಈಗಾಗಲೇ ಪ್ಲೇ ಆಫ್‌ಗೆ ಅರ್ಹತೆ ಹೊಂದಿದ್ದೇವೆ. ಈಗಾಗಲೇ ನನ್ನ ಸಿಬ್ಬಂದಿಗೆ ಹೇಳಿದ್ದೆ. ಋತುವಿನುದ್ದಕ್ಕೂ ಕಠಿಣ ಶ್ರಮ ವಹಿಸಿರುವ ಕೆಲ ಯುವ ಆಟಗಾರರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲು ನಿರ್ಧರಿಸಿದ್ದೇನೆ, ಹಲವು ತಿಂಗಳಿಂದ ನಮ್ಮೊಂದಿಗಿರುವ ಬಿಎಫ್‌ಸಿ ‘ಬಿ’ ತಂಡದ ಕೆಲುವು ಆಟಗಾರರಿಗೆ ಈಗ ಸ್ಪರ್ಧಾತ್ಮಕ ಪಂದ್ಯದಲ್ಲಿ ಮೊದಲ ಬಾರಿಗೆ ಕಣಕ್ಕಿಳಿಯಲು ಅವಕಾಶ ಕಲ್ಪಿಸಲಾಗುವುದು,” ಎಂದು ಬ್ಲೂಸ್ ತಂಡದ ಕೋಚ್ ಕ್ವಾಡ್ರಟ್ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ನುಡಿದಿದ್ದಾರೆ.
ಕಳೆದ ಶನಿವಾರ ಚೆನ್ನೈಯಿನ್ ಎಫ್ ಸಿ ವಿರುದ್ಧ ಕೇವಲ ಡ್ರಾಗೆ ತೃಪ್ತಿಪಟ್ಟ ಜಮ್ಶೆಡ್‌ಪುರ ಎಫ್ ಸಿ, ಪ್ಲೇ ಆಫ್ ಹಂತದಿಂದ ಹೊರಬಿದ್ದಿದೆ. ಈ ಮಧ್ಯೆ ಅಂತಿಮ ಸುತ್ತಿನ ಪಂದ್ಯ ಬಾಕಿ ಇರುವಾಗಲೇ ನಾರ್ತ್‌ಈಸ್ಟ್ ಯುನೈಟೆಡ್ ಎಫ್ ಸಿ ಪ್ರತಿಸ್ಪರ್ಧಿಗಿಂತ ನಾಲ್ಕು ಅಂಕ ಅಂತರ ಕಾಯ್ದುಕೊಂಡಿದ್ದು , ಪ್ಲೇ ಆಫ್ ಖಾತ್ರಿಪಡಿಸಿಕೊಂಡಿದೆ. ಆದರೆ ಕೋಚ್ ಸೀಸರ್ ಫೆರಾಂಡೊ ಅವರಗರಡಿಯಲ್ಲಿ ಪಳಗಿರುವ ಜಮ್ಶೆಡ್‌ಪುರ ಪುಟಿದೇಳಬಹುದು ಎಂದು ಕ್ವಾಡ್ರಟ್ ನಂಬಿದ್ದಾರೆ.
“ಪ್ರಸಕ್ತ ಸಾಲಿನಲ್ಲಿ ಅತ್ಯುತ್ತಮ ಫುಟ್ಬಾಲ್ ಆಡಿದ ತಂಡಗಳಲ್ಲಿ ಜಮ್ಶೆಡ್‌ಪುರ ಸಹ ಒಂದು ಎಂಬುದನ್ನು ನೀವು ನೋಡಿರಬಹುದು. ಅವರು ಬೆಂಗಳೂರಿಗೆ ಬಂದಾಗ ಪಂದ್ಯ ಎಷ್ಟು ಕಠಿಣದಿಂದ ಕೂಡಿತ್ತು ಎಂಬದೇ ಇದಕ್ಕೆ ಸಾಕ್ಷಿ. ನಾವು ಅಂತಿಮವಾಗಿ ಡ್ರಾಗೆ ತೃಪ್ತಿಪಟ್ಟವು. ಆದರೆ ಪಂದ್ಯದ ಕೆಲವು ಸಮಯದಲ್ಲಿ ಜಮ್ಶೆಡ್‌ಪುರ ಕಠಿಣ ಸ್ಪರ್ಧೆವೊಡ್ಡಿದನ್ನು ಇಲ್ಲಿ ಸ್ಮರಿಸಬಹುದಾಗಿದೆ,” ಎಂದು ಬ್ಲೂಸ್ ಕೋಚ್ ಕಾಲೊಸ್ ಹೇಳಿದ್ದಾರೆ.
ಈ ಮಧ್ಯೆ ಬೆಂಗಳೂರು ತಂಡ ಕಳೆದ ಗುರುವಾರ ಎಫ್‌ಸಿ ಗೋವಾ ಎದುರು 3-0 ಅಂತರದಲ್ಲಿ ಜಯಭೇರಿ ಬಾರಿಸುವುದರೊಂದಿಗೆ ಗೆಲುವಿನ ಲಯಕ್ಕೆ ಮರಳಿದೆ. ಆದರೆ ಫೆರಾಂಡೊ ತಂಡ ಕಳೆದ ಐದು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಜಯ ಗಳಿಸಿದೆ. ಅದು ಮುಂಬಯಿ ಸಿಟಿ ಎಫ್ ಸಿ ವಿರುದ್ದ 1-0 ಅಂತರದ ಗೆಲುವಾಗಿದೆ.
ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದ್ದು , ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್ ಸ್ಟಾರ್, ಜಿಯೋ ಟಿವಿ ಮತ್ತು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.