ಬೆಂಗಳೂರು ಎಫ್ ಸಿ ಮತ್ತು ಗೋವಾ ನಡುವೆ ಫೈನಲ್

ಫೈಟ್ ಬ್ಲೂಸ್ ಮತ್ತು ಇಂಡಿಯನ್ ಸೂಪರ್ ಲೀಗ್ ಕಿರೀಟ ನಡುವಿನ ಮುಕ್ತಿಗೆ ಕ್ವಾಡ್ರಟ್ ಸಾರಥ್ಯದ ಬ್ಲೂಸ್ ಚಿತ್ತ

ಮುಂಬಯಿ: ಬೆಂಗಳೂರು ಎಫ್ ಸಿ ಮತ್ತು ಎಫ್ ಸಿ ಗೋವಾ ತಂಡಗಳು ಇಂಡಿಯನ್ ಸೂಪರ್ ಲೀಗ್ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಭಾನುವಾರ ಮುಖಾಮುಖಿಯಾಗಲಿವೆ. ಈ ಮೂಲಕ ಅಭಿಮಾನಿಗಳ ಪರಿಪೂರ್ಣ ಆಯ್ಕೆಗೆ ಈ ಪಂದ್ಯ ಸಾಕ್ಷಿಯಾಗಲಿದೆ.

ಭಾನುವಾರ ಮುಂಬಯಿ ಫುಟ್ಬಾಲ್ ಅರೇನಾದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಹೊಸ ಚಾಂಪಿಯನ್ಸ್ ಮೂಡಿಬರುವುದು ಸ್ಪಷ್ಟವಾಗಿದೆ. ಹೋರಾಟದ ಹೀರೋಗಳು ಎಂದು ಹಣೆಪಟ್ಟಿ ಹೊಂದಿರುವ ಬ್ಲೂಸ್ ಪಡೆ ಪ್ರಶಸ್ತಿ ಜಯಿಸಲಿದೆ ಎಂದು ಬ್ಲೂಸ್ ತಂಡದ ಕೋಚ್ ಕಾರ್ಲೊಸ್ ಕ್ವಾಡ್ರಟ್ ಬಯಕೆ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಫೈನಲ್‌ನಲ್ಲಿ ಸೋಲನುಭವಿಸಿದ್ದ ಬೆಂಗಳೂರು ಎಫ್ ಸಿ ಮತ್ತು ಎಫ್ಸಿ ಗೋವಾ ತಂಡಗಳು ಈ ಬಾರಿ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ಅದರಿಂದ ಮುಕ್ತಿ ಹೊಂದುವ ಅವಕಾಶ ಹೊಂದಿವೆ. 2015ರಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಎಫ್‌ಸಿ ಗೋವಾ ತಂಡ 2-3ರಲ್ಲಿ ಚೆನ್ನೈಯಿನ್ ಎಫ್ ಸಿ ವಿರುದ್ಧ ಸೋಲನುಭವಿಸಿದ್ದರೆ, ಬೆಂಗಳೂರು ಎಫ್ ಸಿ ಸಹ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಳೆದ ಆವೃತ್ತಿಯ ಫೈನಲ್‌ನಲ್ಲಿ ಚೆನ್ನೈಯಿನ್ ಎಫ್ಸಿ ವಿರುದ್ಧ ಇಷ್ಟೇ ಅಂತರದಲ್ಲಿ ಸೋಲುಂಡಿದೆ.

ಲೀಗ್ ಹಂತದ ಫಲಿತಾಂಶಗಳು ನಿಮಗೆ ಬೇಕಾಗಿರುವ ಒಂದು ಸ್ವರೂಪದಲ್ಲಿ ಕಡಿಮೆಯಿರುತ್ತದೆ. ನೀವು ಯಶಸ್ವಿಯಾಗಿ ಹೋರಾಟ ಕೊನೆಗೊಳಿಸಬೇಕಾದರೆ ಒಂದು ಅತ್ಯುತ್ತಮ ಪ್ರದರ್ಶನ ತೋರಬೇಕಾದ ಅಗತ್ಯವಿದೆ. ಪ್ರಸಕ್ತ ಋತುವಿನಲ್ಲಿ ಗೋವಾ ವಿರುದ್ಧದ ತವರು ಮತ್ತು ತವರಿನಾಚೆಯ ಪಂದ್ಯಗಳಲ್ಲಿ ಬೆಂಗಳೂರು ಎಫ್ ಸಿ ಜಯ ಗಳಿಸಿದೆ. ಟೂರ್ನಿಯ ಆರಂಭದಲ್ಲಿ ಫಟೊರ್ಟಾದಲ್ಲಿ ನಡೆದ ಪಂದ್ಯದಲ್ಲಿ ಬ್ಲೂಸ್ 2-1ರಲ್ಲಿ ಗೆದ್ದರೆ, ನಂತರ ಕಳೆದ ತಿಂಗಳು 3-0 ಅಂತರದಲ್ಲಿ ಲೊಬೆರಾ ಬಳಗವನ್ನು ಮಣಿಸಿದೆ. ಆದಾಗ್ಯೂ, ಭಾನುವಾರ ನಡೆಯಲಿರುವ ಫೈನಲ್ ಪಂದ್ಯಕ್ಕೆ ಈ ಫಲಿತಾಂಶ ಬಿಎಫ್ಸಿ ಫೇವರಿಟ್ ಎಂದು ಕಾಣಿಸಿಕೊಳ್ಳಲು ನೆರವಾಗದು ಎಂದು ಕಾರ್ಲೊಸ್ ಹೇಳಿದ್ದಾರೆ.

“ನನ್ನ ಪ್ರಕಾರ ಎರಡೂ ತಂಡಗಳು ಫೇವರಿಟ್ ತಂಡಗಳಾಗಿವೆ. ಸಾಕಷ್ಟು ಶ್ರಮಿಸಿ ಫೈನಲ್ ಪ್ರವೇಶಿಸಿವೆ. ಈ ಹಂತಕ್ಕೇರಲು ಉಭಯ ತಂಡಗಳು ಒಂದೇ ತರದ ಸಂಖ್ಯೆಗಳನ್ನು ಎದುರಿಸಿವೆ. ಎಲ್ಲಾ ಪಿಚ್‌ಗಳಲ್ಲೂ ಇತ್ತಂಡಗಳು ಗುಣಮಟ್ಟದ ಪಾಸ್‌ಗಳನ್ನು ನೀಡಿವೆ.ಎರಡೂ ತಂಡಗಳ ಫುಟ್ಬಾಲ್ ಆಟ ಉತ್ತಮವಾಗಿದೆ,” ಎಂದು ಶನಿವಾರ ನಡೆದ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಕಾರ್ಲೊಸ್ ಹೇಳಿದ್ದಾರೆ.

ಕಳೆದ ಆವೃತ್ತಿಯ ಲೀಗ್ ಹಂತದಲ್ಲಿ ಪ್ರಾಬಲ್ಯ ಸಾಧಿಸಿದ ಬೆಂಗಳೂರು ಫೈನಲ್‌ನಲ್ಲಿ ಸೋಲನುಭವಿಸಿದ ಕುರಿತು ಪ್ರತಿಕ್ರಿಯಿಸಿದ ಕ್ವಾಡ್ರಟ್, ಯಾವುದೇ ಒತ್ತಡ ವಿಲ್ಲದೆ ಆಡಬೇಕೆಂಬುದು ನನ್ನ ಬಯಕೆಯಾಗಿದೆ ಎಂದಿದ್ದಾರೆ. “ನನ್ನ ಆಟಗಾರರ ಬಗ್ಗೆ ನನಗೆ ತಿಳಿದಿದ್ದು, ಅವರು ಪ್ರಶಸ್ತಿ ಗೆಲ್ಲಲು ಉತ್ಸುಕರಾಗಿದ್ದಾರೆ. ಆದರೆ ಅವರು ಅತ್ಯಂತ ತಾಳ್ಮೆಯಿಂದ ಆಡಬೇಕೆಂಬುದು ನನ್ನ ಬಯಕೆ. ನಮಗೆ ಉತ್ತಮವಾಗುವ ರೀತಿಯಲ್ಲಿ ಆಡಿದರೆ ಯಶಸ್ಸು ಸಹಜವಾಗಿಯೇ ದೊರೆಯುತ್ತದೆ,” ಎಂದು ಕ್ವಾಡ್ರಟ್ ಹೇಳಿದ್ದಾರೆ.

ಎಲ್ಲ ಪಿಚ್‌ಗಳಲ್ಲೂ ಪಂದ್ಯ ಬದಲಾಯಿಸುವ ಆಟಗಾರರನ್ನು ಬೆಂಗಳೂರು ಮತ್ತು ಗೋವಾ ತಂಡಗಳು ಒಳಗೊಂಡಿವೆ. ಭಾನುವಾರ ರಾತ್ರಿ ಯಾವ ಹೆಸರು ಇದನ್ನು ಯಶಸ್ವಿಯಾಗಿ ಮಾಡಲಿದಿಯೋ ಎಂಬುದು ಕುತೂಹಲವಾಗಿದೆ. ಪ್ರಸಕ್ತ ಲೀಗ್‌ನಲ್ಲಿ 16 ಗೋಲ್ ದಾಖಲಿಸಿರುವ ಫೆರಾನ್ ಕೊರೊಮಿನಾಸ್ ಗೋವಾ ಪರ ಅತ್ಯಧಿಕ ಗೋಲ್ ಗಳಿಸಿದ ಆಟಗಾರನಾಗಿದ್ದಾರೆ. ಆದರೆ ಬಾಕ್ಸ್ ಸುತ್ತಮುತ್ತ ಸ್ಪೇನ್ ಆಟಗಾರರನ್ನು ಹೇಗೆ ಕಟ್ಟಿಹಾಕಬೇಕೆಂಬುದರ ಬಗ್ಗೆ ಬೆಂಗಳೂರು ತಂಡಕ್ಕೆ ಚೆನ್ನಾಗಿ ಅರಿವಿದೆ. ಎಡಭಾಗದಲ್ಲಿ ಬ್ರೆಂಡನ್ ಫರ್ನಾಡೆಸ್ ಮತ್ತು ಬಲ ಭಾಗದಲ್ಲಿ ಜಾಕಿಚಂದ್ ಸಿಂಗ್ ಅವರು, ಕೊರೊಮಿನಾಸ್ ಗೋಲ್‌ಗಳಿಸಲು ಉತ್ತಮವಾಗಿ ನೆರವಾಗುತ್ತಿದ್ದಾರೆ. ಇವರಿಬ್ಬರು ನಿಯಮಿತವಾಗಿ ನೆರವು ನೀಡುತ್ತಿದ್ದು, ಬೆಂಗಳೂರು ತಂಡದ ರಕ್ಷಣೆಗೆ ಕಠಿಣ ಸವಾಲಾಗಿದ್ದಾರೆ.

ಆದರೆ ಮಿಕು, ಉದಾಂತ ಸಿಂಗ್ ಮತ್ತು ಸುನಿಲ್ ಛತ್ರಿ ಒಳಗೊಂಡ ಮೂವರು ಸ್ಟಾರ್ ಆಟಗಾರರು ಎದುರಾಳಿ ತಂಡದ ವಿರುದ್ದ ಆಕ್ರಮಣಕಾರಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಬೆಂಗಳೂರು ತಂಡದ ನಾಯಕ ಛತ್ರಿ ತಂಡದ ದೊಡ್ಡ ಶಕ್ತಿಯಾದರೆ, ಹಲವು ದಿನಗಳ ವಿಶ್ರಾಂತಿ ಬಳಿಕ ತಂಡಕ್ಕೆ ಮರಳಿದ ಬಳಿಕ ಮಿಕು ಉತ್ತಮ ಫಾರ್ಮ್ ಕಾಯ್ದುಕೊಂಡಿದ್ದಾರೆ. ಈ ಮಧ್ಯೆ, ಉದಾಂತ ಸಿಂಗ್ ತಮ್ಮ ಅಮೋಘ ಆಟದೊಂದಿಗೆ ಯಶಸ್ವಿಯಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.

“ಫೈನಲ್ ಎಂದಾಗ ಅಲ್ಲೊಂದು ವಿಶೇಷ ಪ್ರದರ್ಶನ ನೀಡಬೇಕೆಂಬುದು ಎಲ್ಲರ ಗಮನದಲ್ಲಿರುತ್ತದೆ. ಫುಟ್ಬಾಲ್ ಇತಿಹಾಸದಲ್ಲಿ ಇದು ಎಲ್ಲಡೆ ನಡೆಯುತ್ತದೆ. ದೊಡ್ಡ ಆಟದಲ್ಲಿ ಕೆಲವು ಆಟಗಾರರು ಮಿಂಚುತ್ತಾರೆ. ನಮ್ಮ ತಂಡದಲ್ಲಿ ನಾಯಕ ಸುನಿಲ್ ಛತ್ರಿ, ಗುರ್‌ಪ್ರೀತ್ ಸಿಂಗ್ ಮತ್ತು ಉದಾಂತ ರಂತಹ ಆಟಗಾರರಿದ್ದಾರೆ. ಅಲ್ಲದೆ ಪಂದ್ಯದಲ್ಲಿ ಮಿಂಚಬಲ್ಲ ಇತರ ಆಟಗಾರರೂ ಇದ್ದಾರೆ. ಗೋವಾ ತಂಡದಲ್ಲೂ ಉತ್ತಮ ಆಟಗಾರರಿದ್ದಾರೆ. ಅವರು ಕೂಡ ಯಶಸ್ಸಿನ ಹಾದಿ ತಲುಪಬಲ್ಲ ಆಟಗಾರರು,” ಎಂದು ಬ್ಲೂಸ್ ತಂಡದ ಕೋಚ್ ಕ್ವಾಡ್ರಟ್ ನುಡಿದಿದ್ದಾರೆ.

ಉಭಯ ತಂಡಗಳು ಪ್ಲೇ ಆಫ್‌ನಲ್ಲಿ ಸೋಲು-ಗೆಲುವಿನ ಮಿಶ್ರ ಫಲ ಕಂಡರೂ ಸರಾಸರಿ ಗೋಲ್‌ಗಳ ಆಧಾರದ ಮೇರೆಗೆ ಫೈನಲ್ ಪ್ರವೇಶಿಸಿವೆ. ಗೋವಾ ತಂಡ 5-2 ಗೋಲ್‌ಗಳ ಸರಾಸರಿಯಲ್ಲಿ ಫೈನಲ್‌ಗೆ ಅವಕಾಶ ಗಿಟ್ಟಿಸಿದರೆ, ಬೆಂಗಳೂರು ತಂಡ 4-2 ಸರಾಸರಿ ಗೋಲ್‌ಗಳ ಆಧಾರದ ಮೇರೆಗೆ ಫೈನಲ್ ತಲುಪಿದೆ. ಇದೀಗ ಮುಂಬಯಿನಲ್ಲಿ ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಸ್ಫೂರ್ತಿಯುತ ಪ್ರದರ್ಶನ ತೋರಲು ಬೆಂಗಳೂರು ಎಫ್ ಸಿ ಎದುರು ನೋಡುತ್ತಿದೆ.

ಪಂದ್ಯ ಮುಂಬಯಿ ಫುಟ್ಬಾಲ್ ಅರೇನಾದಲ್ಲಿ ರಾತ್ರಿ 7.30ಕ್ಕೆ ಆರಂಭವಾಗಲಿದ್ದು , ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೋ ಟಿವಿ, ಹಾಟ್ ಸ್ಟಾರ್ ಮತ್ತು ಕಲರ್ಸ್ ಕನ್ನಡ ಟಿವಿಯಲ್ಲಿ ಪ್ರಸಾರವಾಗಲಿದೆ.

Malcare WordPress Security