ಪ್ಲೇ ಆಫ್ ಹಾದಿಯಲ್ಲಿರುವ ಬೆಂಗಳೂರು ತಂಡಕ್ಕೆ

ಚೆನ್ನೈ ಚಾಲೆಂಜ್ ಚೆನ್ನೈಯಿನ್ ಪುಟಿದೇಳುವ ಕುರಿತು ಕಾರ್ಲೊಸ್ ಕ್ವಾಡ್ರಟ್ ಎಚ್ಚರಿಕೆ, ಅಗ್ರ ನಾಲ್ಕರ ಸ್ಥಾನ ಖಾತ್ರಿಪಡಿಸಿಕೊಳ್ಳುವತ್ತ ಬ್ಲೂಸ್

ಚೆನ್ನೈ: ಇಲ್ಲಿನ ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ಚೆನ್ನೈಯಿನ್ ಎಫ್ಸಿ ತಂಡವನ್ನು ಎದುರಿಸಲಿರುವ ಬೆಂಗಳೂರು ಎಫ್ ಸಿ, 2018/19ನೇ ಋತುವಿನ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಪ್ಲೇ ಆಫ್‌ನಲ್ಲಿ ಪಾಲ್ಗೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳಲು ಎದುರು ನೋಡುತ್ತಿದೆ.

ಪ್ಲೇ ಆಫ್‌ಗೆ 2 ಅಂಕಗಳ ಅಗತ್ಯದಲ್ಲಿರುವ ಬ್ಲೂಸ್, ಒಂದು ವೇಳೆ ಜಯ ಗಳಿಸಿದರೆ ಸುಲಭವಾಗಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಳ್ಳಲಿದೆ. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಆರಂಭಿಕ ಹಿನ್ನಡೆ ಅನುಭವಿಸಿದ್ದ ಬೆಂಗಳೂರು ಎಫ್ ಸಿ ಅಂತಿಮವಾಗಿ 2-2ರಲ್ಲಿ ಡ್ರಾ ಮಾಡಿಕೊಂಡು ನಾಕೌಟ್ ಪ್ರವೇಶಿಸುವ ಅವಕಾಶಕ್ಕೆ ಹಿನ್ನಡೆ ತಂದುಕೊಂಡಿತ್ತು.

ಇದೀಗ ಕಳೆದ ಬಾರಿಯ ಫೈನಲ್ ಪಂದ್ಯ ಪನರಾವರ್ತನೆಯಾಗಿದ್ದು , ಲೀಗ್ ಅಂಕಪಟ್ಟಿಯ ಅಗ್ರಸ್ಥಾನಿಯಾಗಿ ಬೆಂಗಳೂರು ಕಣಕ್ಕಿಳಿಯಲಿದ್ದರೆ, ಆತಿಥೇಯ ತಂಡ ಕೆಳ ಸ್ಥಾನಿಯಾಗಿ ಅಖಾಡಕ್ಕೆ ಧುಮುಕಲಿದೆ. ಆದಾಗ್ಯೂ ಮುಖ್ಯ ಕೋಚ್ ಕಾರ್ಲೊಸ್ ಕ್ವಾಡ್ರಟ್, ಆತಿಥೇಯರು ಕಠಿಣ ಸವಾಲೊಡ್ಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ರಿವರ್ಸ್ ವೇಳಾಪಟ್ಟಿಯಲ್ಲಿ ಬೆಂಗಳೂರು ತಂಡ 1-0 ಅಂತರದಲ್ಲಿ ಚೆನ್ನೈಯಿನ್ ವಿರುದ್ಧ ಜಯ ಗಳಿಸಿದೆ.

“ ನಮ್ಮ ಆರಂಭಿಕ ಪಂದ್ಯದಲ್ಲಿ ಚೆನ್ನೈಯಿನ್ ವಿರುದ್ಧ ನಾವು ಆಡಿದ್ದೇವೆ. ಇದು ನಿಜವಾಗಿಯೂ ಅತ್ಯಂತ ಕಠಿಣದಿಂದ ಕೂಡಿತ್ತು. ಈ ಋತುವಿನಲ್ಲಿ ಆತಿಥೇಯ ತಂಡ ಸಾಕಷ್ಟು ಬಲಹೀನವಾಗಿದೆ ಎಂಬುದು ನಿಜ. ಆದರೆ ಅವರು ಸಂಪೂರ್ಣ ಭಿನ್ನತೆಯನ್ನು ಹೊಂದಿರುವ ತಂಡವಾಗಿದೆ. ಕೆಲವು ಹೊಸ ಆಟಗಾರರನ್ನು ಒಳಗೊಂಡಿರುವ ಚೆನ್ನೈಯಿನ್ ಗೆಲುವಿಗಾಗಿ ಹಾತೊರೆಯುತ್ತಿದ್ದು , ಅತಿ ದೊಡ್ಡ ಪೈಪೋಟಿಯೊಡ್ಡುವ ಸಾಧ್ಯತೆಯಿದೆ. ಏಕೆಂದರೆ ಕಳೆದ ವರ್ಷ ಫೈನಲ್‌ನಲ್ಲಿ ನಾವು ಅವರ ವಿರುದ್ಧ ಹೋರಾಡಿದ್ದೇವೆ. ಖಂಡಿತಾವಾಗಿಯೂ ಈ ಪಂದ್ಯ ರೋಮಾಂಚನದಿಂದ ಕೂಡಿರುತ್ತದೆ,” ಎಂದು ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಕ್ವಾಡ್ರಟ್ ಹೇಳಿದ್ದಾರೆ.

ಈ ಮಧ್ಯೆ, ಹಿಂದಿನ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಮೊದಲಾರ್ಧದಲ್ಲಿ ಹಿನ್ನಡೆ ಕಂಡಿದ್ದ ಬೆಂಗಳೂರು ಎಫ್ ಸಿ ನಂತರ ಎರಡು ಗೋಲ್ ಗಳಿಸಿ 2-2ರಲ್ಲಿ ಸಮಬಲದ ಹೋರಾಟ ನೀಡಿತ್ತು. ಅತ್ತ ಚೆನ್ನೈ ತಂಡ ತನ್ನ ಹಿಂದಿನ ಪಂದ್ಯದಲ್ಲಿ ಎಫ್ ಸಿ ಪುಣೆ ವಿರುದ್ದ ಮೊದಲಾರ್ಧದಲ್ಲಿ ಮುನ್ನಡೆ ಗಳಿಸಿದ್ದ ಹೊರತಾಗಿಯೂ ಸತತ ಐದನೇ ಸೋಲಿಗೆ ಒಳಗಾಗಿದೆ. ಜೆಜೆ ಲಾಲ್‌ಪೆಬ್ದವಾ ಬೆಂಚ್ ಕಾಯುತ್ತಿರುವ ಕಾರಣ ಏಕೈಕ ಸ್ಪೆಕರ್ ಸಿ.ವಿ. ವಿನೀತ್ ಮೇಲೆ ಕೋಚ್ ಜಾನ್ ಗ್ರೆಗೋರಿ ಗಮನ ಕೇಂದ್ರೀಕರಿಸಿದ್ದಾರೆ.

ತಂಡದ ಸುದ್ದಿಯಲ್ಲಿ ವಿನೀತ್ ಮತ್ತು ಹಲಿಚರಣ್ ನರ್ಜರಿ ಕೇರಳ ಬ್ಲಾಸ್ಟರ್ಸ್ ಎಫ್ ಸಿಯಿಂದ ಲೋನ್ ಮೂಲಕ ಚೆನ್ನೈಯಿನ್ ತಂಡಕ್ಕೆ ಆಗಮಿಸಿದ್ದಾರೆ. ಈ ವೇಳೆ ಆಸ್ಟ್ರೇಲಿಯನ್ ಮಿಡ್ ಫೀಲ್ಡರ್ ಕ್ರಿಸ್ಟೋಫರ್ ಹೆರ್ಡ್ ಸ್ಪೇನ್ ಡಿಫೆಂಡರ್ ಇನಿಗೊ ಕಾಲೆರೊನ್ ಬದಲಿಗೆ ಸ್ಥಾನ ಪಡೆದಿದ್ದಾರೆ. ಬ್ಲೂಸ್ ಪಾಳಯದಲ್ಲಿ ಲೂಯಿಸ್ಕಾ ವಿಲ್ಲಾ ನ್ಯೂಸ್ ತಂಡದೊಂದಿಗೆ ಪ್ರಯಾಣ ಬೆಳೆಸಿದ್ದು , ಸಣ್ಣ ಬೆನ್ನು ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಸ್ಪೇನ್ ಆಟಗಾರ ಕೇರಳ ಎದುರಿನ ಪಂದ್ಯಕ್ಕೆ ಅಲಭ್ಯರಾಗಿದ್ದರು. ಕಳೆದ ನವೆಂಬರ್ ಬಳಿಕ ಮೊದಲ ಬಾರಿ ವೆನೆಜುವೆಲಾ ಸ್ಪೆಕರ್ ಮಿಕು ತಂಡಕ್ಕೆ ಲಭ್ಯ ಇದ್ದಾರೆ.

“ತಂಡಕ್ಕೆ ಮಿಕು ಮರಳಿರುವುದಕ್ಕೆ ನಮ್ಮೆಲ್ಲರಿಗೂ ಸಂತೋಷವಾಗುತ್ತಿದೆ. ಋತುವಿನ ಬಹುತೇಕ ಭಾಗ ನ.9 ಅನುಪಸ್ಥಿತಿಯನ್ನು ಅನುಭವಿಸಿದ್ದೇವೆ. ಆತ ನಮ್ಮ ತಂಡದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಮಿಕು ಶನಿವಾರದ ಪಂದ್ಯದಲ್ಲಿ ಆಡಲಿದ್ದಾರೆ. ಆದರೆ ತಂಡದ ಅನುಕೂಲವನ್ನು ನೋಡಿಕೊಂಡು ಕಣಕ್ಕಿಳಿಸಲಿದ್ದೇವೆ,” ಎಂದು ಕಾರ್ಲೊಸ್ ಹೇಳಿದ್ದಾರೆ. ಉಭಯ ತಂಡಗಳು ಒಟ್ಟು ನಾಲ್ಕು ಬಾರಿ ಮುಖಾಮುಖಿಯಾಗಿದ್ದು, ಇತ್ತಂಡಗಳು ತಲಾ 2 ಬಾರಿ ಜಯ ಸಾಧಿಸಿವೆ. ಚೆನ್ನೈನಲ್ಲಿ ನಡೆದ ಹಿಂದಿನ ಪಂದ್ಯದಲ್ಲಿ ಬ್ಲೂಸ್ ತಂಡ 3-1ರಲ್ಲಿ ಪ್ರಾಬಲ್ಯದೊಂದಿಗೆ ಜಯಿಸಿದೆ.

ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ ಸ್ಟಾರ್‌, ಜಿಯೋ ಟಿವಿ ಮತ್ತು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.

Malcare WordPress Security