ಅಗ್ರಸ್ಥಾನಕ್ಕೇರಿದ ಬೆಂಗಳೂರು ಎಫ್

ಸಿ ಒಡಿಶಾ ಎಫ್ ಸಿ ವಿರುದ್ಧ ಪೂರ್ಣ 3 ಅಂಕ ಕಲೆಹಾಕಿದ ಕೋಚ್ ಕಾರ್ಲೊಸ್ ಕ್ವಾಡ್ರಟ್ ಬಳಗ

ಪುಣೆ: ಸ್ಪೇನ್ ಆಟಗಾರ ಜುವಾನಾನ್ ಗೋಸ್ವಲೆಜ್ (36ನೇ ನಿಮಿಷ) ದಾಖಲಿಸಿದ ಏಕೈಕ ಗೋಲಿನ ಬಲದಿಂದ ಬೆಂಗಳೂರು ಎಫ್ ಸಿ ಐಎಸ್ ಎಲ್ 7ನೇ ಸುತ್ತಿನಲ್ಲಿ ಒಡಿಶಾ ಎಫ್ಸಿ ವಿರುದ್ದ ಗೆದ್ದು ಪೂರ್ಣ ಮೂರು ಅಂಕ ಕಲೆಹಾಕುವಲ್ಲಿ ಯಶಸ್ವಿಯಾಗಿದೆ.

ಇಲ್ಲಿನ ಶಿವ್ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ 1-0 ಗೋಲಿನಿಂದ ಒಡಿಶಾ ತಂಡವನ್ನು ಸೋಲಿಸಿತು. ಇದರೊಂದಿಗೆ ಒಟ್ಟು 13 ಅಂಕ ಸಂಪಾದಿಸಿದ ಬ್ಲೂಸ್ ಋತುವಿನ ಅಂಕಪಟ್ಟಿಯಲ್ಲಿ ಇದೇ ಮೊದಲ ಬಾರಿ ಅಗ್ರಸ್ಥಾನಕ್ಕೇರಿದೆ. ತಲಾ 11 ಅಂಕ ಹೊಂದಿರುವ ಎಟಿಕೆ ಮತ್ತು ಜಮ್ಶೆಡ್ಡುರ ತಂಡಗಳು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನದಲ್ಲಿವೆ.

ಪಂದ್ಯ ಮುಕ್ತಾಯಕ್ಕೆ 15 ನಿಮಿಷಗಳು ಬಾಕಿ ಇರುವಾಗ ಉಭಯ ತಂಡಗಳು ಆಟಗಾರರ ಬದಲಾವಣೆಗೆ ಒತ್ತು ನೀಡಿದವು. ಅದರಲ್ಲೂ ಒಡಿಶಾ ಪದೇ ಪದೇ ಮೀಸಲು ಆಟಗಾರರನ್ನು ಅಂಗಣಕ್ಕೆ ಕರೆ ತಂದಿತು. ಆದರೆ ಇದರಿಂದ ಯಾವುದೇ ಫಲ ದೊರೆಯಲಿಲ್ಲ. ವಿರಾಮದ ಬಳಿಕ ಬಿಎಫ್‌ಸಿ ಗೋಲಿನ ಅಂತರ ವಿಸ್ತರಿಸಲು ಮುಂದಾದರೆ, ಆತಿಥೇಯ ತಂಡ ಹಿನ್ನಡೆ ತಗ್ಗಿಸಲು ಇನ್ನಿಲ್ಲದ ಹರಸಾಹಸ ನಡೆಸಿತು. ಆದರೆ ಅಗ್ರಮಾನ್ಯ ತಂಡದೆದುರು ಒಡಿಶಾ ಆಟಗಾರರ ಕಾರ್ಯತಂತ್ರಗಳು ಒಮ್ಮೆಯೂ ಫಲಿಸಲಿಲ್ಲ. ಇದಕ್ಕೂ ಮುನ್ನ ಹಲವು ಬಾರಿ ಗೋಲಿನ ಅವಕಾಶ ಸೃಷ್ಟಿಸಿದ ಸುನಿಲ್ ಛತ್ರಿ ಸಾರಥ್ಯದ ಬಿಎಫ್ಸಿ ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಎಡವಿತು. ಹೀಗಾಗಿ ಗೆಲುವಿನ ಅಂತರ ಕುಗ್ಗಿತು.

ಪಂದ್ಯದ ಆರಂಭದಿಂದಲೇ ತನ್ನ ಆಕ್ರಮಣಕಾರಿ ಆಟ ಮುಂದುವರಿಸಿದ ಪ್ರವಾಸಿ ಬೆಂಗಳೂರು ಎಫ್ಸಿ ಪ್ರಥಮಾರ್ಧಕ್ಕೆ 1-0 ಅಂತರದಲ್ಲಿ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಯಿತು. ಆತಿಥೇಯ ಒಡಿಶಾ ಎಫ್‌ಸಿ ಉತ್ತಮ ಆರಂಭ ಪಡೆಯಿತಾದರೂ ಒಮ್ಮೆ ಮಾತ್ರ ಗೋಲಿನ ಅವಕಾಶ ಸೃಷ್ಟಿಸಲು ಶಕ್ತಗೊಂಡಿತು. ಆದರೆ ಇದು ಸಂಪೂರ್ಣ ಗೋಲ್ ಗಳಿಸುವ ಯತ್ನವಾಗಿರಲಿಲ್ಲ. ಆದರೆ ನಿಧಾನಗತಿ ಆಟ ಆರಂಭಿಸಿದ ಕಳೆದ ಬಾರಿಯ ಚಾಂಪಿಯನ್ ಬಿಎಫ್ಸಿ ಸಹ ಉತ್ತಮ ಗೋಲ್‌ಗಳಿಕೆ ಅವಕಾಶ ಸೃಷ್ಟಿಸುವಲ್ಲಿ ವಿಫಲಗೊಂಡಿತಾದರೂ 36ನೇ ನಿಮಿಷದಲ್ಲಿ ಜುವಾನಾನ್ ನೆರವಿನಿಂದ ಗೋಲಿನ ಖಾತೆ ತೆರೆಯುವ ಮೂಲಕ ಎದುರಾಳಿಯ ರಕ್ಷಣಾ ಕೋಟೆಯನ್ನು ಬೇಸುವಲ್ಲಿ ಯಶಸ್ವಿಯಾಯಿತು.

ಬೆಂಗಳೂರು ಎಫ್ಸಿ ಉದಾಂತ ಸಿಂಗ್ ಅವರಿಂದ ಮತ್ತೊಂದು ಗೋಲ್ ದಾಖಲಿಸಿ ಮುನ್ನಡೆ ವಿಸ್ತರಿಸುವ ಅವಕಾಶ ಗಿಟ್ಟಿಸಿತಾದರೂ ಇದರ ಪೂರ್ಣ ಲಾಭ ಪಡೆಯುವಲ್ಲಿ ವಿಫಲಗೊಂಡಿತು. ಉಭಯ ತಂಡಗಳು ವಿರಾಮ ಮುನ್ನ ಉತ್ತಮ ಆಟ ತೋರಿದವಾದರೂ ಬೆಂಗಳೂರು ಪ್ರಾಬಲ್ಯ ಮೇಲುಗೈ ಸಾಸಿತು. ಆದರೆ 44ನೇ ನಿಮಿಷದಲ್ಲಿ ಬಿಎಫ್ಸಿ ಆಟಗಾರ ಆಶಿಕ್ ಹಳದಿ ಕಾರ್ಡ್‌ಗೆ ಗುರಿಯಾದರು.

36ನೇ ನಿಮಿಷದಲ್ಲಿ ಪಾರ್ತಾಲು ನೀಡಿದ ಆಕರ್ಷಕ ಪಾಸನ್ನು ಗೋಲಾಗಿ ಪರಿವರ್ತಿಸಿದ ಜುವನಾನ್, ಬ್ಲೂಸ್‌ಗೆ 1-0 ಅಂತರದ ಮುನ್ನಡೆ ಒದಗಿಸುವಲ್ಲಿ ತಪ್ಪೆಸಗಲಿಲ್ಲ. ಇದಕ್ಕೂ ಮುನ್ನ ಪೂರ್ಣ ಅಂಕದ ಗುರಿಯಲ್ಲಿ ಕಣಕ್ಕಿಳಿದ ಬೆಂಗಳೂರು ಎಫ್ಸಿ ಎಚ್ಚರಿಕೆ ಆಟ ಆರಂಭಿಸಿತು. ಆದರೆ ಎದುರಾಳಿ ತಂಡ ಇದಕ್ಕೆ ತದ್ವಿರುದ್ದವಾಗಿ ಆಟ ಪ್ರದರ್ಶಿಸಿತು. ಇದರ ಪರಿಣಾಮ 15ನೇ ನಿಮಿಷದಲ್ಲಿ ಒಡಿಶಾ ಮಾಡಿದ ಗೋಲಿನ ಯತ್ನವನ್ನು ಗೋಲ್ ಕೀಪರ್ ಗುರ್‌ಪ್ರೀತ್ ಸಿಂಗ್ ಸಂಧು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು.

ಬೆಂಗಳೂರು ಎಫ್ಸಿ ತನ್ನ ಮುಂದಿನ ಪಂದ್ಯದಲ್ಲಿ ಡಿಸೆಂಬರ್ 15ರಂದು ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಮುಂಬಯಿ ಸಿಟಿ ಎಫ್ ಸಿ ತಂಡವನ್ನು ಎದುರಿಸಲಿದೆ.