ಹೈದರಾಬಾದ್ ಎಫ್ಸಿ ವಿರುದ್ಧ 1-1ರಲ್ಲಿ ಡ್ರಾಗೆ ತೃಪ್ತಿಪಟ್ಟ ಸುನಿಲ್ ಛಟ್ರಿ ಬಳಗ, ರಕ್ಷಣಾ ವೈಫಲ್ಯಕ್ಕೆ ಬೆಲೆತೆತ್ತ ಹಾಲಿ ಚಾಂಪಿಯನ್
ಹೈದರಾಬಾದ್: ಪಂದ್ಯದ ಕೊನೆಯ ಕ್ಷಣದಲ್ಲಿ ರಾಬಿನ್ (90ನೇ ನಿಮಿಷ) ದಾಖಲಿಸಿದ ಗೋಲಿನಿಂದಾಗಿ ಬೆಂಗಳೂರು ಎಫ್ ಸಿ ಪ್ರಸಕ್ತ ಸಾಲಿನ ಐಎಸ್ಎಲ್‌ನ ತನ್ನ ಆರನೇ ಪಂದ್ಯದಲ್ಲಿ ಹೈದರಾಬಾದ್ ಎಫ್ ಸಿ ವಿರುದ್ದ ಪೂರ್ಣ ಅಂಕ ಸಂಪಾದಿಸುವ ಅದ್ಭುತ ಅವಕಾಶವನ್ನು ಕಳೆದುಕೊಂಡು ನಾಲ್ಕನೇ ಡ್ರಾಗೆ ತೃಪ್ತಿಪಟ್ಟಿತು.
ಇಲ್ಲಿನ ಜಿಎಂಸಿ ಬಾಲಯೋಗಿ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಹಣಾಹಣಿಯಲ್ಲಿ ಸಂಪೂರ್ಣ ಮೇಲುಗೈ ಸಾಸಿದ ಹಾಲಿ ಚಾಂಪಿಯನ್ ಬಿಎಫ್ಸಿ ಕೊನೆಯ ಹಂತದಲ್ಲಿ ಎದುರಾಳಿಗೆ ಗೋಲ್ ಬಿಟ್ಟುಕೊಟ್ಟು 1-1ರಲ್ಲಿ ಡ್ರಾ ಮಾಡಿಕೊಳ್ಳಲಷ್ಟೇ ಶಕ್ತಗೊಂಡಿತು. ಹೀಗಾಗಿ ಉಭಯ ತಂಡಗಳು ತಲಾ ಒಂದು ಅಂಕ ಗಳಿಸಿದವು. ಇದರೊಂದಿಗೆ 10 ಅಂಕ ಸಂಪಾದಿಸಿದ ಬಿಎಫ್‌ಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿ ಎಟಿಕೆ (10 ಅಂಕ) ನಂತರ ಸ್ಥಾನಕ್ಕೇರಿತು. ಈ ಮೂಲಕ ಟೂರ್ನಿಯಲ್ಲಿ ಅಜೇಯ ದಾಖಲೆ ಕಾಯ್ದುಕೊಂಡ ಬಿಎಫ್ಸಿ ಪರ ಸುನಿಲ್ (2ನೇ ನಿಮಿಷ) ಏಕೈಕ ಗೋಲ್ ಗಳಿಸಿದರು. ದ್ವಿತೀಯಾರ್ಧದಲ್ಲಿ ಪ್ರವಾಸಿ ಆಟಗಾರನಿಗೆ ನಿಯಮ ಬಾಹಿರವಾಗಿ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಸಾಹಿಲ್ ರೆಡ್ ಕಾರ್ಡ್‌ಗೆ ಗುರಿಯಾದರು. ಇದರ ಪರಿಣಾಮ 10 ಆಟಗಾರರಿಗೆ ಕುಸಿದ ಆತಿಥೇಯ ತಂಡದ ಮೇಲೆ ಇನ್ನಷ್ಟು ಹಿಡಿತ ಸಾಸಿದ ಬಿಎಫ್ಸಿ ಗೆಲ್ಲುವ ಹೊಸ್ತಿಲಲ್ಲಿತ್ತು . ಆದರೆ ಎಲ್ಲ ಊಹೆಗಳು ಅಂತಿಮ ಹಂತದಲ್ಲಿ ಬುಡ ಮೇಲಾದವು.
ಇಡೀ ಪಂದ್ಯದಲ್ಲಿ ಉಭಯ ಆಟಗಾರರು ಹಲವು ಬಾರಿ ಪ್ರಮಾದವೆಸಗಿದರು. ಹೀಗಾಗಿ ಇತ್ತಂಡಗಳು ಆಟಗಾರರು ನಾಲೈದು ಬಾರಿ ರೆಫರಿಯಿಂದ ಎಚ್ಚರಿಕೆಗೆ ಗುರಿಯಾದರು. ಅದರಲ್ಲೂ 56ನೇ ನಿಮಿಷದಲ್ಲಿ ಉದಾಂತ ಇನ್ನೇನು ಗೋಲ್ ಬಾರಿಸುವ ಯತ್ನದಲ್ಲಿದ್ದರು. ಆದರೆ ನಿಯಮ ಬಾಹಿರವಾಗಿ ಅವರಿಗೆ ಅಡ್ಡಿಪಡಿಸಿದ ಹೈದರಾಬಾದ್ ಆಟಗಾರ ಸಾಹಿಲ್ ಏಕಾಏಕಿ ರೆಫರಿಯಿಂದ ರೆಡ್ ಕಾರ್ಡ್‌ಗೆ ಗುರಿಯಾದರು. ಹೀಗಾಗಿ ಆತಿಥೇಯ ತಂಡದ ಸಂಖ್ಯೆ 10ಕ್ಕೆ ಕುಸಿಯಿತು. ಇದಕ್ಕೂ ಮುನ್ನ ಅಂದರೆ 47ನೇ ನಿಮಿಷದಲ್ಲಿ ಎರಿಕ್ ಪಾರ್ತಾಲು ಹಳದಿ ಕಾರ್ಡ್‌ಗೆ ಗುರಿಯಾದರು.
ನಾಯಕ ಸುನಿಲ್ ಛತ್ರಿ 2ನೇ ನಿಮಿಷದಲ್ಲಿ ದಾಖಲಿಸಿದ ಗೋಲಿನ ನೆರವಿನಿಂದ ಪ್ರವಾಸಿ ಹಾಗೂ ಹಾಲಿ ಚಾಂಪಿಯನ್ ಬೆಂಗಳೂರು ಎಫ್ಸಿ ಪಂದ್ಯದ ಆರಂಭದಲ್ಲೇ 1-0 ಅಂತರದ ಮುನ್ನಡೆ ಗಳಿಸಿತು. ಇದರಿಂದ ಸೂರ್ತಿಗೊಂಡ ಬಿಎಫ್ಸಿ ನಂತರವೂ ತನ್ನ ಆಕ್ರಮಣಕಾರಿ ದಾಳಿಯನ್ನು ಸಂಘಟಿಸಿತು. ಇದರ ಫಲವಾಗಿ ವಿರಾಮಕ್ಕೂ ಮುನ್ನ ಮುನ್ನಡೆಯನ್ನು 2-0ಗೆ ವಿಸ್ತರಿಸುವ ಅವಕಾಶ ಹೊಂದಿತ್ತು. ಆದರೆ ಹಲವು ಬಾರಿ ಸಿಕ್ಕ ಗೋಲಿನ ಯತ್ನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಕೋಚ್ ಕಾರ್ಲೊಸ್ ಕ್ವಾಡ್ರಟ್ ಬಳಗಕ್ಕೆ ಸಾಧ್ಯವಾಗಲಿಲ್ಲ.
ಪ್ರವಾಸಿ ತಂಡದ ನಿರಂತರ ದಾಳಿಗೆ ತತ್ತರಿಸಿದ ಆತಿಥೇಯ ಹೈದರಾಬಾದ್ ತಂಡ ಯಾವುದೇ ಹಂತದಲ್ಲೂ ತಿರುಗೇಟು ನೀಡಲು ಸಾಧ್ಯವಾಗಲಿಲ್ಲ. ಬದಲಿಗೆ ಬ್ಯಾಕ್‌ಲೈನ್‌ನಲ್ಲೇ ರಕ್ಷಣೆಗೆ ಹೆಚ್ಚಿನ ಒತ್ತು ನೀಡಿದ ಪರಿಣಾಮ ಗೋಲಿನ ಅವಕಾಶ ಸೃಷ್ಟಿಸುವ ಪ್ರಮಯವೇ ಉದ್ಭವವಾಗಲಿಲ್ಲ. ಚೆಂಡಿನ ಟ್ಯಾಕಲ್ ಮಾಡುವ ವೇಳೆ ಅನಗತ್ಯವಾಗಿ ಎದುರಾಳಿ ಆಟಗಾರನಿಗೆ ತೊಂದರೆ ನೀಡಿದ ಬಿಎಫ್ಸಿಯ ಅಲ್ಬರ್ಟ್ ಸೆರೆನ್ 37ನೇ ನಿಮಿಷದಲ್ಲಿ ರೆಫರಿಯಿಂದ ಎಚ್ಚರಿಕೆ ಪಡೆದರು. ಇದಕ್ಕೂ ಮುನ್ನ ಬಿಎಫ್ಸಿ ಆಟಗಾರ ಉದಾಂತಗೆ ತೊಂದರೆ ನೀಡಿದ ಕಾರಣ 21ನೇ ನಿಮಿಷದಲ್ಲಿ ಹೈದರಾಬಾದ್ ಯಾಸೀರ್ ರೆಫರಿಯಿಂದ ಹಳದಿ ಕಾರ್ಡ್‌ಗೆ ಗುರಿಯಾದರು. ಈ ವೇಳೆ ಮುನ್ನಡೆಯನ್ನು ವಿಸ್ತರಿಸುವ ಅವಕಾಶ ಛತ್ರಿ ಬಳಗಕ್ಕೆ ಲಭಿಸಿತಾದರೂ ಗೋಲ್ ದಾಖಲಾಗಲಿಲ್ಲ.
ಹಲವು ವೈಫಲ್ಯದ ನಡುವೆಯೂ ಬಿಎಫ್ಸಿ ತಂಡದ ಚೆಂಡಿನ ಮೇಲಿನ ನಿಯಂತ್ರಣ ಮಾತ್ರ ತಪ್ಪಲಿಲ್ಲ. 19ನೇ ನಿಮಿಷದಲ್ಲಿ ಎರಿಕ್ ಅವರಿಂದ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಉದಾಂತ, ಛತ್ರಿಯತ್ತ ಪಾಸ್ ಮಾಡಿದರು. ಆದರೆ ನಾಯಕನ ಹೊಡೆತ ಗುರಿ ತಪ್ಪಿತು. ಹೀಗಾಗಿ ಪ್ರವಾಸಿ ತಂಡ 1-0 ಅಂತರದಲ್ಲಿ ಮುನ್ನಡೆಯಿತು. 6 ಮತ್ತು 8ನೇ ನಿಮಿಷದಲ್ಲಿ ಮತ್ತೆ ಗೋಲ್ ಬಾರಿಸಿ ಮುನ್ನಡೆ ವಿಸ್ತರಿಸುವ ಅವಕಾಶ ಸೃಷ್ಟಿಸಿದ ಬಿಎಫ್ಸಿ ಆಟಗಾರರು ಸಿಕ್ಕ ಅವಕಾಶಗಳನ್ನು ಕೈಚೆಲ್ಲಿದರು. ಇದಕ್ಕೂ ಮುನ್ನ ಎದುರಾಳಿ ಆಟಗಾರರ ಹೊಂದಾಣಿಕೆಯ ಕೊರತೆಯನ್ನು ಸಮರ್ಥವಾಗಿ ಬಳಸಿಕೊಂಡ ಸುನಿಲ್ ಛಟಿ 2ನೇ ನಿಮಿಷದಲ್ಲೇ ಗೋಲ್ ಬಾರಿಸಿ ಬಿಎಫ್ಸಿಗೆ ಮುನ್ನಡೆಗೆ ಕಾರಣರಾದರು.
ಬೆಂಗಳೂರು ಎಫ್ ಸಿ ತನ್ನ ಮುಂದಿನ ಪಂದ್ಯದಲ್ಲಿ ಡಿಸೆಂಬರ್ 4ರಂದು ಪುಣೆಯ ಶ್ರೀ ಶಿವ್ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಒಡಿಶಾ ಎಫ್‌ಸಿ ತಂಡವನ್ನು ಎದುರಿಸಲಿದೆ.