ಬಿಎಫ್ಸಿ ಗೆಲುವು ಕಸಿದ ಕೊರೊಮಿನಾಸ್

ಎಫ್‌ಸಿ ಗೋವಾ ವಿರುದ್ಧ ಡ್ರಾಗೆ ತೃಪ್ತಿಪಟ್ಟ ಕಾರ್ಲ್ಸ್ ಕ್ವಾಡ್ರಟ್ ಬಳಗ, ತಲಾ ಒಂದು ಅಂಕ ಹಂಚಿಕೊಂಡ ಉಭಯ ತಂಡಗಳು

ಗೋವಾ: ಪಂದ್ಯದ ಕೊನೆ ಕ್ಷಣ (ಗಾಯದ ಸಮಯ)ದಲ್ಲಿ ಆಶಿಕ್ ಕುರುನಿಯನ್ ಮಾಡಿದ ಪ್ರಮಾದದಿಂದ ಪೆನಾಲ್ಟಿ ಮೂಲಕ ಗೋಲ್ ಬಿಟ್ಟುಕೊಟ್ಟ ಹಾಲಿ ಚಾಂಪಿಯನ್ ಬೆಂಗಳೂರು ಎಫ್ಸಿ ಪ್ರಸಕ್ತ ಐಎಸ್ ಎಲ್ ಟೂರ್ನಿಯ ತನ್ನ ದ್ವಿತೀಯ ಪಂದ್ಯದಲ್ಲಿ ಎಫ್‌ಸಿ ಗೋವಾ ವಿರುದ್ಧ ಗೆಲುವಿನ ಅವಕಾಶ ಕಳೆದುಕೊಂಡು ಕೇವಲ ಡ್ರಾ ಮಾಡಿಕೊಳ್ಳಲಷ್ಟೇ ಶಕ್ತಗೊಂಡು ಅಂಕ ಹಂಚಿಕೊಂಡಿದೆ.

ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹೈವೋಲ್ವೇಜ್ ಪಂದ್ಯದಲ್ಲಿ ಸಂಪೂರ್ಣ ಮೇಲುಗೈ ಸಾಸಿದ್ದ ಬೆಂಗಳೂರು ಕೊನೆ ಕ್ಷಣದಲ್ಲಿ ಎದುರಾಳಿ ತಂಡಕ್ಕೆ ಗೋಲ್ ಬಿಟ್ಟುಕೊಟ್ಟ ಕಾರಣ ಪಂದ್ಯ 1-1ರಲ್ಲಿ ಸಮಬಲದಲ್ಲಿ ಕೊನೆಗೊಂಡಿತು. ಹೀಗಾಗಿ ಪೂರ್ಣ ಮೂರು ಅಂಕ ಗಿಟ್ಟಿಸುವ ಅವಕಾಶದಿಂದ ಕೋಚ್ ಕಾರ್ಲ್ಸ್ ಕ್ವಾಡ್ರಟ್ ಪಡೆ ವಿಫಲಗೊಂಡು ಸತತ 2ನೇ ಡ್ರಾ ಸಾಸಿತು. ಇದರೊಂದಿಗೆ ಆಡಿದ ಎರಡು ಪಂದ್ಯಗಳಿಂದ 2 ಅಂಕ ಹೊಂದಿರುವ ಬಿಎಫ್ಸಿ ತನ್ನ ಮುಂದಿನ ಪಂದ್ಯದಲ್ಲಿ ಜೆಮ್‌ಶೆಡ್ಡುರ ತಂಡವನ್ನು ಎದುರಿಸಲಿದೆ. ಬಿಎಫ್ಸಿ ಪರ ಉದಾಂತ ಸಿಂಗ್ (62ನೇ ನಿಮಿಷ) ಮತ್ತು ಗೋವಾ ಪರ ಪೆರಾನ್ ಕೊರೊಮಿನಾಸ್ (90+ನೇ. – ಪೆನಾಲ್ಟಿ )ತಲಾ ಒಂದು ಗೋಲ್ ಬಾರಿಸಿದರು.
62ರಲ್ಲಿ ಬಿಎಫ್ಸಿ ಮುನ್ನಡೆ ಗಳಿಸಿದ್ದರಿಂದ ಒತ್ತಡಕ್ಕೆ ಸಿಲುಕಿದ ಗೋವಾ ಕೊನೆ 20 ನಿಮಿಷಗಳಲ್ಲಿ ಆಕ್ರಮಣಕಾರಿ ಆಟಕ್ಕೆ ಆದ್ಯತೆ ನೀಡಿತು. ಅದರಲ್ಲೂ 84 ಮತ್ತು 86ನೇ ನಿಮಿಷದಲ್ಲಿ ಗೋಲ್ ಗಳಿಕೆಯ ಯತ್ನಗಳನ್ನು ಮಾಡಿತಾದರೂ ಹಾಲಿ ಚಾಂಪಿಯನ್ ಬಿಎಫ್ಸಿ ಇದಕ್ಕೆ ಅವಕಾಶ ಕಲ್ಪಿಸಲಿಲ್ಲ. ಆದರೆ ಕೊನೆಯಲ್ಲಿ ಮಾಡಿದ ಎಡವಟ್ಟುಗಳಿಗೆ ತಂಡ ಭಾರಿ ದಂಡ ತೆತ್ತಿತು.

ಇದಕ್ಕೂ ಮುನ್ನ 62ನೇ ನಿಮಿಷದಲ್ಲಿ ಒನ್ನು ನೀಡಿದ ಉತ್ತಮ ಪಾಸನ್ನು ಎದುರಾಳಿ ಪಾಳಯಕ್ಕೆ ಕೊಂಡೊಯ್ದ ಸ್ಟಾರ್ ಮಿಡ್‌ಫೀಲ್ಡರ್ ಉದಾಂತ ಸಿಂಗ್ ಗೋಲ್ ಕೀಪರ್ ತಪ್ಪಿಸಿ ಬಿಎಫ್ ಸಿ ಪರ ಖಾತೆ ತೆರೆಯುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಸುನಿಲ್ ಛಟ್ರಿ ಸಾರಥ್ಯದ ಬಿಎಫ್‌ಸಿ – ಋತುವಿನಲ್ಲಿ ಮೊದಲ ಗೋಲ್ ದಾಖಲಿಸಿತು. ನಂತರ 66ನೇ ನಿಮಿಷದಲ್ಲಿ ಗೋವಾ ಸಮಬಲ ಹೋರಾಟ ನೀಡುವ ಅದ್ಭುತ ಅವಕಾಶಗಳನ್ನು ಗಳಿಸಿತಾದರೂ ಹೊಂದಾಣಿಕೆ ಕೊರತೆಯಿಂದ ಗೋಲ್ ಗಳಿಸಲು ವಿಫಲಗೊಂಡಿತು. 69ನೇ ನಿಮಿಷದಲ್ಲಿ ಉದಾಂತ ಮತ್ತೊಂದು ಗೋಲಿನ ಅವಕಾಶ ಗಳಿಸಿದರೂ ಎದುರಾಳಿ ಆಟಗಾರರು ಪ್ರಬಲವಾಗಿ ಹಿಮ್ಮೆಟ್ಟಿಸಿದರು. ಆದಾಗ್ಯೂ ಕೋಚ್ ಕಾರ್ಲ್ಸ್ ಕ್ವಾಡ್ರಟ್ ಪಡೆಯ ಪ್ರಾಬಲ್ಯ ಮುಂದುವರಿಯಿತು.

ಎದುರಾಳಿ ಆಟಗಾರರ ಪ್ರಮಾದದಿಂದ 68ನೇ ನಿಮಿಷದಲ್ಲಿ ದೊರೆತ ಫಿಕಿಕ್ ಅವಕಾಶವನ್ನು ಗೋವಾ ತಂಡದ ಸ್ಟಾರ್ ಆಟಗಾರ ಫೆರಾನ್ ಕೊರೊಮಿನಾಸ್ ಗೋಲಾಗಿ ಪರಿವರ್ತಿಸುವಲ್ಲಿ ವಿಫಲಗೊಂಡರು. ಹೀಗಾಗಿ ಇತ್ತಂಡಗಳ ಹೋರಾಟ 0-0 ಅಂತರದಲ್ಲಿ ಮುಂದುವರಿಯಿತು.

ಮೊದಲಾರ್ಧ ಗೋಲ್ ರಹಿತವಾದ ಕಾರಣ ದ್ವಿತೀಯಾರ್ಧದಲ್ಲಿ ಉಭಯ ತಂಡಗಳು ಇನ್ನಷ್ಟು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದವು. ಅದರಲ್ಲೂ ಉತ್ತಮ ಟ್ಯಾಕಲ್ ಮತ್ತು ದಾಳಿಯಲ್ಲಿ ಮಿಂಚಿದ ಬೆಂಗಳೂರು ಎಫ್ ಸಿ ಎಲ್ಲರ ಗಮನ ಸೆಳೆಯಿತು. 55ನೇ ನಿಮಿಷದಲ್ಲಿ ರಾಹುಲ್ ಬೇಕೆ ಮೈದಾನ ತೊರೆದರೆ, ಸೆರಾನ್ ಮೈದಾನ ಪ್ರವೇಶಿಸಿದರು.

ಐದು ಬಾರಿ ಕಾರ್ನರ್ ಕಿಕ್ ಅವಕಾಶಗಳನ್ನು ಸೃಷ್ಟಿಸಿದ ಹೊರತಾಗಿಯೂ ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ಪ್ರಥಮಾರ್ಧಕ್ಕೆ ಗೋಲಿನ ಖಾತೆ ತೆರೆಯಲು ವಿಫಲಗೊಂಡಿತು. ಅತ್ತ ಕಳೆದ ಬಾರಿಯ ರನ್ನರ್ ಅಪ್ ಸಿಕ್ಕ ಅದ್ಭುತ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಪ್ರಥಮಾರ್ಧ 0-0 ಗೋಲ್ ರಹಿತಗೊಂಡಿತು.

ವಿರಾಮಕ್ಕೂ ಮುನ್ನ ದಿಮಾಸ್ ಡೆಲ್ಲೊಡೊ ಕಾರ್ನರ್ ಮೂಲಕ ಗೋಲ್ ಗಳಿಸುವ ಅದ್ಭುತ ಯತ್ನ ಮಾಡಿದರೂ ಎದುರಾಳಿ ಆಟಗಾರರ ರಕ್ಷಣೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ . 37ನೇ ನಿಮಿಷದಲ್ಲಿ ಬಿಎಫ್ಸಿ ಪಾಳಯದಿಂದ ಚೆಂಡು ಕಸಿದ ಗೋವಾ ಆಟಗಾರರು, ಎದುರಾಳಿ ಮುನ್ನಡೆ ಆಟಗಾರರನ್ನು ತಪ್ಪಿಸಿ ಗೋಲ್‌ಪೆಟ್ಟಿಗೆ ಸಮೀಪ ಚೆಂಡನ್ನು ಕೊಂಡೊಯ್ಯುವಲ್ಲಿ ಯಶಸ್ವಿಯಾದರು. ಆದರೆ ಗುರ್‌ಪ್ರೀತ್ ಸಿಂಗ್ ಸಂಧು ಸೇರಿದಂತೆ ಬಿಎಫ್ಸಿ ರಕ್ಷಣಾ ಪಡೆ ದಿಟ್ಟ ರಕ್ಷಣೆ ಮಾಡಿತು.

10ನೇ ನಿಮಿಷದಲ್ಲಿ ಉದಾಂತ ಸಿಂಗ್ ಚೆಂಡನ್ನು ನಾಯಕ ಸುನಿಲ್ ಛತ್ರಿಯತ್ತ ದೂಡಿದರು. ಆದರೆ ಚೆಂಡು ಗೋಲ್ಕೀಪರ್ ಮೊಹಮ್ಮದ್ ನವಾಜ್‌ ಕೈಸೇರಿತು. ಹೀಗಾಗಿ ಆರಂಭದಲ್ಲೇ ಮುನ್ನಡೆ ಗಳಿಸುವ ಬಿಎಫ್ಸಿ ಆಸೆಗೆ ಹಿನ್ನಡೆಯಾಯಿತು. ಪಂದ್ಯದ ಆರಂಭದಿಂದಲೇ ಚೆಂಡಿನ ಮೇಲಿನ ನಿಯಂತ್ರಣಕ್ಕೆ ಇನ್ನಿಲ್ಲದ ಸಾಹಸ ನಡೆಸಿದ ಬಿಎಫ್ಸಿ ಡಿಮಾಸ್ ಡೆಲ್ಲಾಡೊ ಮತ್ತು ನಿಶುಕುಮಾರ್ ಅವರ ನೆರವಿನಿಂದ ಹಲವು ಬಾರಿ ಕಾರ್ನರ್ ಅವಕಾಶ ಸೃಷ್ಟಿಸಿತಾದರೂ ಒಮ್ಮೆಯೂ ಇದರ ಲಾಭ ಪಡೆಯಲು ಎದುರಾಳಿಯ ರಕ್ಷಣಾ ಆಟಗಾರರು ಬಿಟ್ಟುಕೊಡಲಿಲ್ಲ.

ಬೆಂಗಳೂರು ಎಫ್ಸಿ ತನ್ನ ಮೂರನೇ ಪಂದ್ಯದಲ್ಲಿ ನವೆಂಬರ್ 3ರಂದು ಜೆಮ್‌ಶೆಡ್ಡುರದ ಜೆಆರ್‌ಡಿ ಟಾಟಾ ಕ್ರೀಡಾ ಸಂಕೀರ್ಣದಲ್ಲಿ ಜೆಮ್‌ಶೆಡ್ಡುರ ಎಫ್ಸಿ ತಂಡವನ್ನು ಎದುರಿಸಲಿದೆ.

Malcare WordPress Security