ಅಂಕ ಹಂಚಿಕೊಂಡ ಬೆಂಗಳೂರು ಎಫ್ಸಿ

ನಾರ್ತ್‌ಈಸ್ಟ್ ಯುನೈಟೆಡ್ ಎಫ್ ಸಿ ವಿರುದ್ದ ಗೋಲ್ ರಹಿತ ಡ್ರಾ ಸಾಸಿದ ಕಾರ್ಲ್ಸ್ ಕ್ವಾಡ್ರಟ್ ಬಳಗ

ಬೆಂಗಳೂರು: ಉಭಯ ಅವಗಳಲ್ಲಿ ದೊರೆತ ಗೋಲ್ ಗಳಿಕೆಯ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಎಡವಿದ ಹಾಲಿ ಚಾಂಪಿಯನ್ ಬೆಂಗಳೂರು ಎಫ್ಸಿ ಪ್ರಸಕ್ತ ಸಾಲಿನ ಇಂಡಿಯನ್ ಸೂಪರ್ ಲೀಗ್‌ನ ತನ್ನ ಮೊದಲ ಪಂದ್ಯದಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ವಿರುದ್ಧ ಗೋಲ್ ರಹಿತ ಡ್ರಾದೊಂದಿಗೆ ಅಭಿಯಾನ ಆರಂಭಿಸಿದೆ.

ಇಲ್ಲಿನ ಶ್ರೀಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಋತುವಿನ ಮೊದಲ ಪಂದ್ಯದಲ್ಲಿ ಸಮಬಲದ ಹೋರಾಟ ನೀಡಿದ ನಾರ್ತ್‌ಈಸ್ಟ್ ಮತ್ತು ಬಿಎಫ್‌ಸಿ ತಂಡಗಳು (0-0) ಡ್ರಾ ಸಾಸಿ ತಲಾ ಒಂದು ಅಂಕ ಹಂಚಿಕೊಂಡವು. ಪಂದ್ಯದ ಕೊನೆಯ ಕ್ಷಣದಲ್ಲಿ ಎರಡೂ ತಂಡಗಳು ಗೋಲಿಗಾಗಿ ಹರಸಾಹಸ ನಡೆಸಿದವಾದರೂ ಇತ್ತಂಡಗಳ ರಕ್ಷಣಾ ಆಟಗಾರರು ಇದಕ್ಕೆ ಆಸ್ಪದ ನೀಡದ ಪರಿಣಾಮ ಗೋಲಿನ ಖಾತೆ ತೆರೆಯಲು ಎರಡೂ ತಂಡಗಳಿಗೆ ಸಾಧ್ಯವಾಗಿಲ್ಲ. 15 ಸಾವಿರಕ್ಕೂ ಹೆಚ್ಚಿನ ಅಭಿಮಾನಿಗಳು ಉಭಯ ತಂಡಗಳ ಆಟವನ್ನು ನಿರಂತರವಾಗಿ ಸುರಿದ ಮಳೆಯನ್ನು ಲೆಕ್ಕಿಸದೇ ಕಲ್ತುಂಬಿಸಿಕೊಂಡರಾದರೂ ಫಲಿತಾಂಶ ಕಾಣದೆ ನಿರಾಸೆಯಿಂದಲೇ ಮನೆಯತ್ತ ಕಾಲ್ಕಿತ್ತರು.

80 ನಿಮಿಷಗಳಾದರೂ ಗೋಲ್ ಗಳಿಸಲು ಸಾಧ್ಯವಾಗದ ಕಾರಣ ಬಿಎಫ್ಸಿ ಕೋಚ್ ಕ್ವಾಡ್ರಟ್, ಆಟಗಾರರ ಬದಲಾವಣೆಗೆ ಒತ್ತು ನೀಡಿದರು. ಹೀಗಾಗಿ ನಿಖಿಲ್ ಮೈದಾನದಿಂದ ಹೊರಬಂದರೆ, ಲಿಂಗೊ ಮೈದಾನಕ್ಕಿಳಿದರು. ಇದಕ್ಕೂ ಮುನ್ನ 73ನೇ ನಿಮಿಷದಲ್ಲಿ ನಾರ್ತ್‌ಈಸ್ಟ್ ಸಹ ಆಟಗಾರರಲ್ಲಿ ಬದಲಾವಣೆ ಮಾಡಿದರು. ಆದರೆ ಇದು ತಂಡದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.

66ನೇ ನಿಮಿಷದಲ್ಲಿ ರಕ್ಷಣಾ ವೇಳೆ ಅಡಚಣೆ ಉಂಟು ಮಾಡಿದ ಕಾರಣಕ್ಕಾಗಿ ನಾರ್ತ್‌ಈಸ್ಟ್ ತಂಡದ ಗೋಲ್ಕೀಪರ್ ಸುಭಾನಿಶ್ ರಾಯ್ ಹಳದಿ ಕಾರ್ಡ್‌ಗೆ ಗುರಿಯಾದರು. ಇದು ಪಂದ್ಯದಲ್ಲಿ ನೀಡಲಾದ ಮೊದಲ ಹಳದಿ ಕಾರ್ಡ್.ಇದಕ್ಕೂ ಮುನ್ನ 65 ನೇ ನಿಮಿಷದಲ್ಲಿ ಡಿಮಾಸ್ ಡೆಲ್ಲಾಡೊ ಅವರ ಗೋಲಿನ ಯತ್ನವನ್ನು ಎದುರಾಳಿ ಗೋಲ್‌ಕೀಪರ್‌ ವಿಫಲಗೊಳಿಸಿದರು. 52ನೇ ನಿಮಿಷದಲ್ಲಿ ಅಸಮೊಹ್ ಗ್ಯಾನ್ ನಾರ್ತ್‌ಈಸ್ಟ್‌ ಪರ ಗೋಲಿನ ಖಾತೆ ತೆರೆಯುವ ಅದ್ಭುತ ಯತ್ನ ಮಾಡಿದರು. ಆದರೆ ಅವರ ಹೊಡೆದ ಚೆಂಡು ಗೋಲ್ ಪೆಟ್ಟಿಗೆಯ ಮೇಲ್ಬಾಗದ ಅಂಚಿಗೆ ತಾಗಿ ಹೊರಹೊಯಿತು. ಹೀಗಾಗಿ ಆತಿಥೇಯರು ನಿಟ್ಟುಸಿರು ಬಿಟ್ಟರು.

ಮೊದಲಾರ್ಧ ಗೋಲ್ ರಹಿತಗೊಂಡ ಪರಿಣಾಮ ದ್ವಿತೀಯಾರ್ಧದ ಆರಂಭವಾಗುತ್ತಿದ್ದಂತೆಯೇ ಇತ್ತಂಡಗಳು ಆಕ್ರಣಕಾರಿ ಆಟಕ್ಕೆ ಮುಂದಾದವು. ಅದರಲ್ಲೂ ಬಿಎಫ್ಸಿ ದಾಳಿಯನ್ನು ಇನ್ನಷ್ಟು ಚುರುಗೊಳಿಸಿತು. ಇದರ ಫಲವಾಗಿ ರಫೀಲ್ ಆಗಸ್ಟೋ ಚೆಂಡನ್ನು ಉದಾಂತ ಬಳಿ ಯಶಸ್ವಿಯಾಗಿ ದೂಡಿದರು. ಉದಾಂತ ಕೂಡ ಗೋಲಿನ ಯತ್ನ ಮಾಡಿದರಾದರೂ ಚೆಂಡನ್ನು ಕಸ್ಟೋಡಿಯನ್ ಸುಭಾಶಿಸ್‌ ತಮ್ಮ ತೆಕ್ಕೆಗೆ ಪಡೆಯುವಲ್ಲಿ ಯಾವುದೇ ತಪ್ಪೆಸಗಲಿಲ್ಲ. ಇದಕ್ಕೂ ಮುನ್ನ ಹಲವು ಬಾರಿ ಗೋಲಿನ ಅವಕಾಶಗಳನ್ನು ಕೈಚೆಲ್ಲಿದ ಬಿಎಫ್ಸಿ ಎದುರಾಳಿ ನಾರ್ತ್‌ಈಸ್ಟ್ ಆಟಗಾರರ ದಿಟ್ಟ ರಕ್ಷಣೆಯಿಂದಾಗಿ ಮೊದಲಾರ್ಧಕ್ಕೆ ಮುನ್ನಡೆ ಗಳಿಸುವ ಅವಕಾಶವನ್ನು ಕಳೆದುಕೊಂಡಿತು.

ಬಲ ಭಾಗದಲ್ಲಿ ನಿಶುಕುಮಾರ್ ಮತ್ತು ಎಡ ಭಾಗದಲ್ಲಿ ಆಶಿಕ್ ಕುರುನಿಯನ್ ನಿಯೋಜಿಸುವುದರೊಂದಿಗೆ ಬಿಎಫ್ಸಿ ಕೋಚ್ ಕಾರ್ಲ್ಸ್ ಕ್ವಾಡ್ರಟ್, 4-3-3ರ ಸಂಯೋಜನೆಯಲ್ಲಿ ತಂಡವನ್ನು ಕಣಕ್ಕಿಳಿಸಿದರು. ಆತಿಥೇಯರ ಆರ್ಭಟಕ್ಕೆ ಬೆಚ್ಚಿದ ಪ್ರವಾಸಿ ನಾರ್ತ್‌ಈಸ್ಟ್ ತನ್ನ ಚಿತ್ತವನ್ನೆಲ್ಲಾ ರಕ್ಷಣೆಯತ್ತವೇ ನೆಟ್ಟಿತು. 19ನೇ ನಿಮಿಷದಲ್ಲಿ ಸುನಿಲ್ ಛತ್ರಿ ಗೋಲ್ ಪೆಟ್ಟಿಗೆಯ ಅಂಚಿನಲ್ಲಿ ಅದ್ಭುತವಾಗಿ ಗೋಲಿನ ಯತ್ನ ಮಾಡಿದರು. ಆದರೆ ಚೆಂಡು ನಿಗದಿತ ಗುರಿ ಮುಟ್ಟಲಿಲ್ಲ. ಹೀಗಾಗಿ ಆತಿಥೇಯರ ಗೋಲಿನ ಬರ ಮುಂದುವರಿಯಿತು.

ಪಂದ್ಯ ಆರಂಭವಾದ ಎರಡೇ ನಿಮಿಷದಲ್ಲಿ ಚೆಂಡಿನ ಮೇಲೆ ನಿಯಂತ್ರಣ ಸಾಸಿದ ಬಿಎಫ್‌ಸಿ ನಾಯಕ ಛತ್ರಿ, ಸ್ಟಾರ್ ಮಿಡ್‌ಫೀಲ್ಡರ್ ಉದಾಂತ ಬಳಿ ತಳ್ಳಿದರು. ಆದರೆ ಇದನ್ನು ತಮ್ಮ ನಿಯಂತ್ರಣಕ್ಕೆ ಪಡೆಯುವುದರಲ್ಲಿ ಉದಾಂತ ವಿಫಲರಾದರು. ಇದಾದ ಮೂರೇ ನಿಮಿಷಗಳ ನಂತರವೂ ಬಿಎಫ್ಸಿ ಆಟಗಾರರು ಗೋಲಿನ ಯತ್ನ ಮಾಡಿದರಾದರೂ ಹೊಂದಾಣಿಕೆಯ ಕೊರತೆಯಿಂದಾಗಿ ಚೆಂಡು ಗೋಲ್ ಕೀಪರ್ ಸುಭಾಸಿಶ್ ಕೈಸೇರಿತು.

ಬೆಂಗಳೂರು ಎಫ್ ಸಿ ತನ್ನ ಮುಂದಿನ ಪಂದ್ಯದಲ್ಲಿ ಇದೇ ತಿಂಗಳ 28ರಂದು ಗೋವಾದ ಜವಾಹರ್‌ಲಾಲ್ ನೆಹರು ಕ್ರೀಡಾಂಗಣದಲ್ಲಿ ಕಳೆದ ಬಾರಿಯ ರನ್ನರ್ ಅಪ್ ಎಫ್‌ಸಿ ಗೋವಾ ತಂಡವನ್ನು ಎದುರಿಸಲಿದೆ.

Malcare WordPress Security