ಬೆಂಗಳೂರು ಎಫ್ಸಿ ಮುಡಿಗೆ ಪುಟ್ಟಯ್ಯ ಸ್ಮಾರಕ ಕಪ್

ಬ್ಲೂ ಬಳಗ ಪರ ಮಿಂಚಿದ ಲಾಲೆಂಗ್ತಮಾ, ಮೈರಾನ್ ಎಂಇಜಿ ವಿರುದ್ಧ 2-1 ಗೋಲ್‌ಗಳ ಅಂತರದ ಜಯ

ಬೆಂಗಳೂರು: ಬೆಂಗಳೂರು ಎಫ್ ಸಿ ಪ್ರಸಕ್ತ ಸಾಲಿನ ಪುಟ್ಟಯ್ಯ ಸ್ಮಾರಕ ಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್‌ (ಎಂಇಜಿ) ತಂಡವನ್ನು ಸೋಲಿಸಿ ದ್ವಿತೀಯ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿದೆ.

ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಬಿಎಫ್ಸಿ 2-1 ಗೋಲ್‌ಗಳ ಅಂತರದಿಂದ ಎಂಇಜಿ ವಿರುದ್ಧ ಜಯ ಗಳಿಸಿ ಪ್ರಶಸ್ತಿಗೆ ಭಾಜನವಾಯಿತು. ಈ ಹೈವೋಲ್ವೇಜ್ ಪಂದ್ಯದಲ್ಲಿ ಮೈರಾನ್ ಮೆಂಡಿಸ್ (86ನೇ ನಿಮಿಷ) ಗೆಲುವಿನ ಗೋಲ್ ಗಳಿಸಿ ಬ್ಲೂ ಬಳಗಕ್ಕೆ ಪ್ರಶಸ್ತಿ ತಂದುಕೊಟ್ಟರು. ಇದಕ್ಕೂ ಮುನ್ನ ಎಂಇಜಿ ಪರ ರಾಹುಲ್ (56ನೇ ನಿಮಿಷ) ಮತ್ತು ಬಿಎಫ್ಸಿ ಪರ ಲಾಲೆಂಗ್ಟಮಾ ವಂಗ್ ಚಿಯಾ (41ನೇ ನಿಮಿಷ) ಒಂದೊಂದು ಗೋಲ್ ದಾಖಲಿಸಿದರು.

ಕೋಚ್ ನೌಶದ್ ಮೂಸಾ ಪಂದ್ಯದ ಆರಂಭಿಕ ಲೈನ್ ಅಪ್‌ನಲ್ಲಿ ಅಜಯ್ ಛತ್ರಿ ಬದಲು ಅಲ್ಲಾಮಶ್ ಸಯದ್‌ಗೆ ಸ್ಥಾನ ಕಲ್ಪಿಸುವ ಮೂಲಕ ಬದಲಾವಣೆ ತಂದರು. ಇದರ ಫಲವಾಗಿ ಪಂದ್ಯ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ಬೆಂಗಳೂರು ಗೋಲ್ ಗಳಿಸುವ ಅವಕಾಶ ಸೃಷ್ಟಿಸಿತು. ಡಿಫೆಂಡರ್ ಪರಾಗ್ ಶ್ರೀವಾಸ್ ನೀಡಿದ ಚೆಂಡಿನ ಪಾಸನ್ನು ಎಡ್ಕಂಡ್ ಲಾಲ್‌ರಿಂಡಿಕಾ ಎದುರಾಳಿ ವಲಯದತ್ತ ಹೊಡೆದರು.

ಆದರೆ ಚೆಂಡು ಗೋಲ್ಪೆಟ್ಟಿಗೆಯ ಸಮೀಪವೇ ಹಾದು ಹೋಗುವುದರೊಂದಿಗೆ ಬಿಎಫ್ಸಿ ಆರಂಭಿಕ ಮುನ್ನಡೆಯ ಯತ್ನ ಕೈಗೂಡಲಿಲ್ಲ. ಈ ಮಧ್ಯೆ, ಪಂದ್ಯದ ಪ್ರಥಮಾರ್ಧದವರೆಗೂ ಎಂಇಜಿ ತಂಡದ ಕೆಲವೇ ಡಿಫೆಂಡರ್‌ಗಳು ಪ್ರತಿದಾಳಿಯನ್ನು ನಿಯಂತ್ರಿಸಿದರು. ನಮ್ಮಾಯಲ್ ಭುಟಿಯಾ ಅದ್ಭುತವಾಗಿ ಗೋಲ್ ಗಳಿಕೆಯ ಯತ್ನ ನಡೆಸಿದರಾದರೂ ಎಂಇಜಿ ತಂಡದ ದಾಳಿಗಾರ ಲಿಯೋನ್ ಅಡ್ಡವಾಗಿ ಬಂದ ಚೆಂಡನ್ನು ತಡೆಯುವಲ್ಲಿ ಯಶಸ್ವಿಯಾದರು. ಪಂದ್ಯದ ಪ್ರಥಮಾರ್ಧಕ್ಕೆ ಇನ್ನೈದು ನಿಮಿಷಗಳಿರುವಾಗ ಬ್ಲೂ ಕೊನೆಗೂ ಗೋಲಿನ ಬರ ನೀಗಿಸಿತು. ಮಿಡ್‌ಫೀಲ್ಡರ್ ಮೈರಾನ್ ಮೆಂಡಿಸ್ ಬಲಭಾಗದಿಂದ | ಚೆಂಡನ್ನು ಫಾರ್ವಡ್್ರನತ್ತ ಹೊಡೆದರು. ನಂತರ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಲಾಲೆಂಗ್ತಮಾ, ಗೋಲಾಗಿ ಪರಿವರ್ತಿಸಿ ಬಿಎಫ್ಸಿ ಪಾಳಯದಲ್ಲಿ ಮೊದಲ ಗೋಲಿನ ಸಂಭ್ರಮ ತಂದರು. ಜತೆಗೆ ಟೂರ್ನಿಯಲ್ಲಿ ತಮ್ಮ ಮೊದಲ ಗೋಲ್ ಗಳಿಸಿ ಸಂಭ್ರಮಿಸಿದರು.

ಆದರೆ ದ್ವಿತೀಯಾರ್ಧ ಸಂಪೂರ್ಣ ಭಿನ್ನವಾಗಿತ್ತು. ದ್ವಿತೀಯಾರ್ಧ ಆರಂಭದಲ್ಲೇ ಎಂಇಜಿ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು, ಬಿಎಫ್‌ಸಿ ತಂಡದ ರಕ್ಷಣಾ ನ್ಯೂನತೆಗಳನ್ನು ಸದ್ಬಳಕೆ ಮಾಡಿಕೊಂಡ ಎದುರಾಳಿ ತಂಡ ಗೋಲ್‌ಗಳಿಸಿ ಸಮಬಲದ ಹೋರಾಟಕ್ಕೆ ಸಾಕ್ಷಿಯಾಯಿತು. 56ನೇ ನಿಮಿಷದಲ್ಲಿ ರಾಹುಲ್ ಗೋಲ್ ಗಳಿಸುವ ಮೂಲಕ 1-1ರ ಹೋರಾಟಕ್ಕೆ ವೇದಿಕೆ ನಿರ್ಮಿಸಿದರು. ನಂತರ ಉಭಯ ತಂಡಗಳು ಹಲವು ಗೋಲ್ ಗಳಿಕೆಯ ಅವಕಾಶ ಸೃಷ್ಟಿಸಿದವು.

ಈ ಮಧ್ಯೆ ಬ್ಲೂ ಬಳಗ ಹೆಚ್ಚಿನ ಅವಕಾಶ ಸೃಷ್ಟಿಸಿತು. 68ನೇ ನಿಮಿಷದಲ್ಲಿ ಸಬ್ಸ್ಟಿಟ್ಯೂಟ್ ಲಿಯೋನ್ ಆಗಸ್ಟೀನ್ ಮತುತ ನಯೋರೆಮ್ ರೋಶನ್ ಸಿಂಗ್ ಉತ್ತಮ ಯತ್ನ ಮಾಡಿದರೂ ಗೋಲ್ ಮಾತ್ರ ದಾಖಲಾಗಲಿಲ್ಲ. ಹೀಗಾಗಿ ಉಭಯ ತಂಡಗಳ ಹೋರಾಟ 1-1ರಲ್ಲಿ ಮುಂದುವರಿಯಿತು. ಬಿಸ್ವಾ ಡಾರ್ಜೀ ಹೆಡರ್ ಮೂಲಕ ಅದ್ಭುತ ಗೋಲಿನ ಯತ್ನವನ್ನು ಎಂಇಜಿ ಡಿಫೆಂಡರ್ ರೀಗನ್ ಪ್ರಬಲವಾಗಿ ಹಿಮ್ಮೆಟ್ಟಿಸಿದರು.

ಪಂದ್ಯ ಮುಕ್ತಾಯಕ್ಕೆ ಹತ್ತು ನಿಮಿಷಗಳು ಬಾರಿ ಇರುವಾಗ ಎಡ್ಕಂಡ್ ಅವರಿಂದ ಬೆಂಗಳೂರು ತಂಡ ಸತತವಾಗಿ ಗೋಲ್ ಗಳಿಕೆಯ ಅವಕಾಶಗಳನ್ನು ಪಡೆಯಿತಾದರೂ ಎದುರಾಳಿ ತಂಡ ಅಷ್ಟೇ ವೇಗವಾಗಿ ರಕ್ಷಣೆ ಒಡ್ಡುತ್ತಿತ್ತು. ಆದಾಗ್ಯೂ 83ನೇ ನಿಮಿಷದಲ್ಲಿ ಫ್ರೀಕ್ ಅವಕಾಶದಲ್ಲಿ ಬಿಎಫ್‌ಸಿ ನಡೆಸಿದ ಗೋಲಿನ ಯತ್ನ ಸಫಲತೆ ಕಾಣಲಿಲ್ಲ. ಅಂತಿಮ ಕ್ಷಣದಲ್ಲಿ ಬ್ಲೂ ಬಳಗ ಮತ್ತಷ್ಟು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಪರಿಣಾಮ 86ನೇ ನಿಮಿಷದಲ್ಲಿ ಮೈರಾನ್ ಮೆಂಡಿಸ್ ಪಂದ್ಯದ ಪೂರ್ಣಾವಧಿಗೆ ನಾಲ್ಕು ನಿಮಿಷಗಳಿರುವಾಗಲೇ ಗೋಲ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.

Malcare WordPress Security