ಬೆಂಗಳೂರು ತಂಡಕ್ಕೆ ಸತತ ಎರಡನೇ ಜಯ, ಕ್ವಾಡ್ರಟ್ ಬಳಗಕ್ಕೆ 3 ಅಂಕ ತಂದುಕೊಟ್ಟ ಮಿಕು, ಪಾರ್ಟಾಲು
ಕೊಲ್ಕತ್ತಾ: ವಿದೇಶಿ ಆಟಗಾರರಾದ ಮಿಕು ಮತ್ತು ಎರಿಕ್ ಪಾರ್ಟಾಲು ಅವರ ಅದ್ಭುತ ಗೋಲ್‌ಗಳ ನೆರವಿನಿಂದ ಮಿಂಚಿದ ಬೆಂಗಳೂರು ಎಫ್ ಸಿ ಐಎಸ್ಎಲ್ 5ನೇ ಆವೃತ್ತಿಯ ತನ್ನ 4ನೇ ಪಂದ್ಯದಲ್ಲಿ ಅಥ್ಲೆಟಿಕೊ ಡಿ ಕೋಲ್ಕಿತಾ ತಂಡದ ವಿರುದ್ಧ ಗೆಲುವು ದಾಖಲಿಸಿ ಅಜೇಯ ದಾಖಲೆಯನ್ನು ಮುಂದುವರಿಸಿದೆ.
ಇಲ್ಲಿನ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಖ್ಯಾತಿಗೆ ತಕ್ಕ ಆಟವಾಡಿದ ಕಳೆದ ಬಾರಿಯ ರನ್ನರ್ ಅಪ್ ಬಿಎಫ್ ಸಿ 2-1 ಗೋಲುಗಳ ಅಂತರದಿಂದ ಆತಿಥೇಯ ಎಟಿಕೆ ತಂಡವನ್ನು ಪರಾಭವಗೊಳಿಸಿತು. ಇದರೊಂದಿಗೆ ಆಡಿದ ನಾಲ್ಕು ಪಂದ್ಯಗಳಿಂದ 10 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿಯೇ ಮುಂದುವರಿದರೆ, ಎಟಿಕೆ ಸಹ ತಾನಾಡಿದ ಆರು ಪಂದ್ಯಗಳಿಂದ ಒಟ್ಟು 7 ಅಂಕದೊಂದಿಗೆ 5ನೇ ಸ್ಥಾನ ಕಾಯ್ದುಕೊಂಡಿದೆ. ಬೆಂಗಳೂರು ತಂಡದ ಪರ ಮಿಕು (45ನೇ ನಿಮಿಷ) ಮತ್ತು ಎರಿಕ್ ಪಾರ್ಟಾಲು (47ನೇ ನಿಮಿಷ) ತಲಾ ಒಂದು ಗೋಲು ಗಳಿಸಿ ಜಯದ ರೂವಾರಿಯೆನಿಸಿದರೆ, ಎಟಿಕೆ ಪರ ಕೋಮಲ್ ಥಾಟಲ್ (15ನೇ ನಿ.) ಏಕೈಕ ಗೋಲು ಬಾರಿಸಿದರು.
74ನೇ ನಿಮಿಷದಲ್ಲಿ ಎರಡೂ ತಂಡಗಳು ಆಟಗಾರರ ಬದಲಾವಣೆ ಮಾಡಿದರೂ ಯಾವುದೇ ಪರಿಣಾಮ ಬೀರಲಿಲ್ಲ .ಈ ಮಧ್ಯೆ ಆತಿಥೇಯ ತಂಡ ಹಿನ್ನಡೆ ತಗ್ಗಿಸಲು ಯತ್ನಿಸಿದ ಎಲ್ಲಾ ಗೋಲುಗಳ ಯತ್ನಗಳನ್ನು ಗೋಲ್ಕೀಪರ್ ಗುರ್‌ಪ್ರೀತ್ ಸಿಂಗ್ ಸಮರ್ಥವಾಗಿ ಹಿಮ್ಮೆಟ್ಟಿಸಿದರು.
ಆಕ್ರಮಣಕಾರಿ ಆಟಕ್ಕೆ ಹೆಚ್ಚಿನ ಆದ್ಯತೆ ನೀಡಿದ ಪರಿಣಾಮ ಕೋಚ್ ಕಾರ್ಲೊಸ್ ಕ್ವಾಡ್ರಡ್ ಬಳಗ ಮುನ್ನಡೆ ಗಳಿಸಿದ ಬೆನ್ನಲ್ಲೇ ಪಾರ್ಟಾಲು 49ನೇ ನಿಮಿಷದಲ್ಲಿ ಹಳದಿ ಕಾರ್ಡ್‌ಗೆ ಗುರಿಯಾದರು. 58ನೇ ನಿಮಿಷದಲ್ಲಿ ನಿಶುಕುಮಾರ್ ಸಹ ರೆಫರಯಿಂದ ಇದೇ ಎಚ್ಚರಿಕೆ ಪಡೆದರು. ಹೀಗಾಗಿ ನಾಯಕ ಛೇಟಿ ಬಳಗ ಎಚ್ಚರಿಕೆ ಆಟಕ್ಕೆ ಆದ್ಯತೆ ನೀಡಿತು.
ದ್ವಿತೀಯಾರ್ಧದ ಆರಂಭದಿಂದಲೇ ಮುನ್ನಡೆಗಾಗಿ ಯತ್ನಿಸಿದ ಬಿಎಫ್ಸಿ ಆತಿಥೇಯರನ್ನು ಒತ್ತಡಕ್ಕೆ ಸಿಲುಕಿಸುವಲ್ಲಿ ಸಫಲವಾಯಿತು. 47ನೇ ನಿಮಿಷದಲ್ಲಿ ಸುಂದರ ಗೋಲು ಸಿಡಿಸಿದ ಎರಿಕ್ ಪಾರ್ಟಾಲು ಬೆಂಗಳೂರು ತಂಡದ ಮುನ್ನಡೆಯನ್ನು 2-1ಕ್ಕೆ ವಿಸ್ತರಿಸಿದರು. ಜತೆಗೆ ಪ್ರಸಕ್ತ ಲೀಗ್‌ನಲ್ಲಿ ಪಾರ್ಟಾಲು ದಾಖಲಿಸಿದ ಮೊದಲ ಗೋಲ್ ಇದಾಗಿದೆ.
ಪ್ರಥಮಾರ್ಧದ ಕೊನೆಯಲ್ಲಿ ಮಿಕು ಗಳಿಸಿದ ಗೋಲಿನ ನೆರವಿನಿಂದ ಬೆಂಗಳೂರು ಎಫ್ ಸಿ ವಿರಾಮಕ್ಕೆ 1-1ರಲ್ಲಿ ಡ್ರಾ ಸಮಬಲದ ಹೋರಾಟ ನೀಡುವಲ್ಲಿ ಯಶಸ್ವಿಯಾಯಿತು. ಇದಕ್ಕೂ ಮುನ್ನ ಕೋಮಲ್ ಥಾಟಲ್ ದಾಖಲಿಸಿದ ಗೋಲಿನಿಂದಾಗಿ ಆತಿಥೇಯ ಅಥ್ಲೆಟಿಕೊ ಡಿ ಕೋಡ್ಕೊತಾ ತಂಡ 1-0ಅಂತರದಲ್ಲಿ ಮೇಲುಗೈ ಸಾಸಿತು.
ಆರಂಭದಲ್ಲಿ ರಕ್ಷಣಾತ್ಮಕ ಆಟದ ಬಳಿಕ ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ದಾಳಿಗೆ ಇಳಿಯುವ ಬಿಎಫ್ಸಿ ಎಟಿಕೆ ವಿರುದ್ಧವು ಅದೇ ತನ್ನ ಕಾರ್ಯತಂತ್ರವನ್ನು ಕಾರ್ಯರೂಪಕ್ಕೆ ತಂದಿತು. ಮೊದಲಾರ್ಧದ ಕೊನೆಯಲ್ಲಿ ನಿರಾಸೆಯೊಂದಿಗೆ ವಿರಾಮಕ್ಕೆ ಹೋಗುವ ಸನಿಹದಲ್ಲಿದ್ದ ಬಿಎಫ್ಸಿ ಪರ ಮಿಕು ಅದ್ಭುತ ಗೋಲ್ ದಾಖಲಿಸಿ, ತಂಡದ ಆತಂಕವನ್ನು ದೂರ ಮಾಡಿದರು. ಪ್ರಥಮಾರ್ಧದ ಹೆಚ್ಚುವರಿ ನಾಲ್ಕು ನಿಮಿಷಗಳ ಸಮಯವನ್ನು ಪ್ರವಾಸಿ ಬಿಎಫ್‌ಸಿ ತಂಡ ಸಮರ್ಥವಾಗಿ ಬಳಸಿಕೊಂಡಿಕೊಂಡಿತು.
ಚೆನ್ನೈಯಿನ್ ಎಫ್ಸಿ ವಿರುದ್ದ ಗೋಲ್ ಗಳಿಸಿ ಎಟಿಕೆಗೆ ಜಯ ತಂದುಕೊಟ್ಟಿದ್ದ ಕಲು ಉಚೆ ಬೆಂಗಳೂರು ತಂಡದ ವಿರುದ್ದವು ಹಲವು ಬಾರಿ ಗೋಲ್ ಗಳಿಕೆಯ ಯತ್ನ ನಡೆಸಿದರು. ಬೆಂಗಳೂರು ತಂಡದ ಆಟಗಾರನಿಗೆ ತಡೆಯೊಡ್ಡಿದ ಪರಿಣಾಮ 33ನೇ ನಿಮಿಷದಲ್ಲಿ ಅರಿಂದಮ್ ಭಟ್ಟಚಾರ್ಜ ರೆಫರಿಯಿಂದ ಎಚ್ಚರಿಕೆ ಹಳದಿ ಕಾರ್ಡ್‌ಗೆ ಗುರಿಯಾದರು.
21ನೇ ನಿಮಿಷದಲ್ಲಿ ಗೋಲ್ ಗಳಿಕೆಯ ಅವಕಾಶವನ್ನು ಕೈಚೆಲ್ಲಿದ ಬೆಂಗಳೂರು ತಂಡ 0-1ರ ಹಿನ್ನಡೆ ತಗ್ಗಿಸುವಲ್ಲಿ ವಿಫಲಗೊಂಡಿತು. ಇದಕ್ಕೂ ಮುನ್ನ 15ನೇ ನಿಮಿಷದಲ್ಲಿ ಎವೆರ್ಟನ್ ಸ್ಯಾಂಟೋಸ್ ನೆರವಿನಿಂದ ಕೋಮಲ್ ಥಾಟಲ್ ಗೋಲ್ ಬಾರಿಸಿ ಆತಿಥೇಯ ಎಟಿಕೆ ಪರ ಗೋಲಿನ ಖಾತೆ ತೆರೆದು ತವರು ಅಭಿಮಾನಿಗಳ ಸಂಭ್ರಮಕ್ಕೆ ಕಾರಣರಾದರು.
ಸ್ಟಾರ್ ಸೈಕರ್‌ಗಳಾದ ವೆನೆಜುವಾಲೆ ಆಟಗಾರ ಮಿಕು, ನಾಯಕ ಸುನಿಲ್ ಛೇಟಿ ಮತ್ತು ಉದಾಂತ ಸಿಂಗ್ ಮತ್ತು ಡಿಮಾಸ್ ಡೆಲ್ಲಾಡೊ ಅವರ ಬಲಾಡ್ಯದೊಂದಿಗೆ ಸಾಲ್ಟ್ ಲೇಕ್ ಮೈದಾನದಲ್ಲಿ ಸತತ 2ನೇ ಜಯದ ನಿರೀಕ್ಷೆಯಲ್ಲಿ ಬಿಎಫ್ಸಿ ಕಣಕ್ಕಿಳಿಯಿತು. ಬೆಂಗಳೂರು ಎಫ್ ಸಿ ತನ್ನ ಮುಂದಿನ ಪಂದ್ಯದಲ್ಲಿ ನವೆಂಬರ್ 5ರಂದು ಕೇರಳ ಬ್ಲಾಸ್ಟರ್ಸ್ ತಂಡವನ್ನು ಎದುರಿಸಲಿದೆ.