ಬೆಂಗಳೂರು ಎಫ್ ಸಿಗೆ ಹ್ಯಾಟ್ರಿಕ್ ಗೆಲುವು

ಕೇರಳ ಬ್ಲಾಸ್ಟರ್ಸ್ ವಿರುದ್ಧ 2-1ಅಂತರದಲ್ಲಿ ಗೆದ್ದು ಮತ್ತೆ ಅಗ್ರಸ್ಥಾನಕ್ಕೇರಿದ ಕ್ವಾಡ್ರಟ್ ಬಳಗ

ಕೊಚ್ಚಿ: ನಾಯಕ ಸುನಿಲ್ ಛತ್ರಿ ದಾಖಲಿಸಿದ ಗೋಲಿನ ಜತೆಗೆ ಎದುರಾಳಿ ತಂಡದ ನೀಡಿದ ಉಡುಗೊರೆ ಗೋಲಿನ ನೆರವಿನಿಂದ ಬೆಂಗಳೂರು ಎಫ್ ಸಿ ಐಎಸ್ ಎಲ್ 5ನೇ ಆವೃತ್ತಿಯ ತನ್ನ ಐದನೇ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಎಫ್ ಸಿ ವಿರುದ್ಧ ರೋಚಕ ಜಯ ದಾಖಲಿಸಿ, ಹ್ಯಾಟ್ರಿಕ್ ಜಯದ ಸಂಭ್ರಮ ಆಚರಿಸಿತು.

ಇಲ್ಲಿನ ಜವಾಹರ್ ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹಣಾಹಣಿಯಲ್ಲಿ ಛತ್ರಿ ಪಡೆ 2-1 ಗೋಲುಗಳಿಂದ ಆತಿಥೇಯ ಕೇರಳ ತಂಡವನ್ನು ಸೋಲಿಸಿ, ಪೂರ್ಣ ಮೂರು ಅಂಕ ಸಂಪಾದಿಸಿತು. ಇದರೊಂದಿಗೆ ಒಟ್ಟು 13 ಅಂಕ ಕಲೆಹಾಕಿದ ಬಿಎಫ್ ಸಿ, ಅಂಕಪಟ್ಟಿಯಲ್ಲಿ ಜಮ್ಶೆಡ್‌ಪುರ ಎಫ್ಸಿ (11 ಅಂಕ) ತಂಡವನ್ನು ದ್ವಿತೀಯ ಸ್ಥಾನಕ್ಕೆ ತಳ್ಳಿ ಮತ್ತೆ ಅಗ್ರಸ್ಥಾನ ಅಲಂಕರಿಸಿತು.

ಬೆಂಗಳೂರು ತಂಡದ ಪರ ನಾಯಕ ಸುನಿಲ್ ಛತ್ರಿ (17ನೇ ನಿಮಿಷ) ಮತ್ತು ನಿಕೋಲಾ ಕೆ.(81ನೇ ನಿ. ಉಡುಗೊರೆ ಗೋಲು) ತಲಾ ಒಂದು ಗೋಲು ದಾಖಲಿಸಿದರೆ, ಆತಿಥೇಯ ಕೇರಳ ಬ್ಲಾಸ್ಟರ್ಸ್ ಪರ ಸ್ಥಾವಿಸ್ಸಾ ಸ್ತೋಜಾನೊವಿಕ್ (30ನೇ ನಿ. ಪೆನಾಲ್ಟಿ) ಒಂದು ಗೋಲು ಗಳಿಸಿದರು. ಈ ಸೋಲಿನೊಂದಿಗೆ ಕೇರಳ ಲೀಗ್‌ನಲ್ಲಿ ಮೊದಲ ಸೋಲಿಗೆ ಒಳಗಾಯಿತು. ಪಂದ್ಯ ಮುಕ್ತಾಯಕ್ಕೆ ಹತ್ತು ನಿಮಿಷಗಳು ಬಾಕಿ ಇರುವಾಗ ಎರಡೂ ತಂಡಗಳ ಹೋರಾಟ ತಾರಕ್ಕೇರಿತು. 81ನೇ ನಿಮಿಷದಲ್ಲಿ ಮಿಕು ಯತ್ನಿಸಿದ ಗೋಲಿನ ಯತ್ನವನ್ನು ಎದುರಾಳಿ ತಂಡದ ಗೋಲ್ ಕೀಪರ್ ಅದ್ಭುತವಾಗಿ ತಡೆದರಾದರೂ ಕೇರಳ ತಂಡದ ನಿಕೋಲಾ ಕಾಲಿಗೆ ತಾಗಿ ತೆಂಡು ಗೋಲ್ ಪೆಟ್ಟಿಗೆ ಸೇರಿತು. ಹೀಗಾಗಿ ಉಡುಗೊರೆ ಗೋಲಿನ ಲಾಭ ಪಡೆದ ಬ್ಲೂ ಬಳಗ ಮುನ್ನಡೆಯನ್ನು 2-1ಕ್ಕೆ ವಿಸ್ತರಿಸಿ ಆತಿಥೇಯರ ಮೇಲೆ ಒತ್ತಡ ಹೇರಿತು.

62 ಮತ್ತು 66ರಲ್ಲಿ ಕ್ರಮವಾಗಿ ಬ್ಲೂಸ್ ಮತ್ತು ಬ್ಲಾಸ್ಟರ್ಸ್ ಆಟಗಾರರಲ್ಲಿ ಬದಲಾವಣೆ ಮಾಡಿದವಾದರೂ ತಂಡಗಳ ಮೇಲೆ ಹೆಚ್ಚೇನು ಪರಿಣಾಮ ಬೀರಲಿಲ್ಲ . ಈ ಮಧ್ಯೆ ಮಿಕು ಆಟಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಆತಿಥೇಯ ತಂಡದ ಲಾಲ್‌ರೌಥರ್ 49ನೇ ನಿಮಿಷದಲ್ಲಿ ರೆಫರಿಯಿಂದ ಮೊದಲ ಬಾರಿ ಹಳದಿ ಕಾರ್ಡ್ ಎಚ್ಚರಿಕೆ ಪಡೆದರು. ಇದಕ್ಕೂ ಮುನ್ನ ಮೇಲುಗೈ ಸಾಧಿಸುವ ನಿಟ್ಟಿನಲ್ಲಿ ದ್ವಿತೀಯಾರ್ಧ ಆರಂಭಿಸಿದ ಉಭಯ ತಂಡಗಳ ಪೈಕಿ ಆತಿಥೇಯ ತಂಡ ಅದ್ಭುತವಾಗಿ ಗೋಲಿನ ಯತ್ನ ನಡೆಸಿದ್ದನ್ನು ಬಿಎಫ್ಸಿ ಕಸ್ಟೋಡಿಯನ್ ಗುರ್‌ಪ್ರೀತ್ ಸಿಂಗ್ ಪ್ರಬಲವಾಗಿ ಹಿಮ್ಮೆಟ್ಟಿಸಿದರು.

ಪ್ರಥಮಾರ್ಧದ ಆರಂಭದಲ್ಲಿ ಮುನ್ನಡೆ ಗಳಿಸಿದ ಬೆಂಗಳೂರು ಎಫ್ ಸಿ 13 ನಿಮಿಷಗಳ ನಂತರ ಕೇರಳ ಬ್ಲಾಸ್ಟರ್ಸ್‌ಗೆ ಗೋಲು ಬಿಟ್ಟುಕೊಟ್ಟ ಪರಿಣಾಮ ವಿರಾಮಕ್ಕೆ 1-1ರಲ್ಲಿ ತೆರಳಬೇಕಾಯಿತು. ಇದಕ್ಕೂ ಮುನ್ನ ಎರಡೂ ತಂಡಗಳು ಮುನ್ನಡೆಗಾಗಿ ಇನ್ನಿಲ್ಲದ ಹರಸಾಹಸ ನಡೆಸಿದ ಪರಿಣಾಮ ಯಾವು ತಂಡವು ಮುನ್ನಡೆಗೆ ಅವಕಾಶ ಕಲ್ಪಿಸಲಿಲ್ಲ. 1-0 ಅಂತರದ ಮುನ್ನಡೆಯಿಂದ ಬೀಗುತ್ತಿದ್ದ ಕೋಚ್ ಕ್ವಾಡ್ರಟ್ ಬಳಗ ಕೇವಲ 13 ನಿಮಿಷಗಳ ಅಂತರದಲ್ಲಿ ಮಂಕಾದರು. ಸ್ಥಾವಿಸ್ಲಾ ಸೋಜಾನೊವಿಕ್ ಪೆನಾಲ್ಟಿ ಮೂಲಕ ಸಿಕ್ಕ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ತಂಡದ ಹೋರಾಟವನ್ನು 1-1ರಲ್ಲಿ ಸಮಬಲಗೊಳಿಸಿದರು.

17ನೇ ನಿಮಿಷದಲ್ಲಿ ಮಿಕು ನೀಡಿದ ಸುಂದರ ಪಾಸನ್ನು ಯಶಸ್ವಿಯಾಗಿ ನಿಭಾಯಿಸಿದ ನಾಯಕ ಛತ್ರಿ ತಂಡದ ಪರ ಕೊನೆಗೂ ಖಾತೆ ತೆರೆದರು. ಈ ಮೂಲಕ ಪ್ರಸಕ್ತ ಲೀಗ್‌ನಲ್ಲಿ ತಮ್ಮ ವೈಯಕ್ತಿಕ ಗೋಲಿನ ಸಂಖ್ಯೆಯನ್ನು 4ಕ್ಕೆ ಏರಿಸಿದರು. 10ರಿಂದ 15 ನಿಮಿಷಗಳಲ್ಲಿ ಬಿಎಫ್ಸಿ ಆಟಗಾರರು ಮೂರು ಬಾರಿ ಗೋಲಿನ ಅವಕಾಶ ಸೃಷ್ಟಿಸಿದರೂ ಒಮ್ಮೆಯೂ ಸಫಲತೆ ಕಾಣಲಿಲ್ಲ. ಹೀಗಾಗಿ – ಉಭಯ ತಂಡಗಳ ಹೋರಾಟ ಗೋಲ್ ರಹಿತವಾಗಿ ಮುಂದುವರಿಯಿತು. 3ನೇ ನಿಮಿಷದಲ್ಲಿ
ಆತಿಥೇಯ ತಂಡ ಗೋಲಿನ ಅವಕಾಶ ಚೆಲ್ಲಿದರೆ, 7ನೇ ನಿಮಿಷದಲ್ಲಿ ಪ್ರವಾಸಿ ತಂಡ ನಿರಾಸೆ ಅನುಭವಿಸಿತು. ಆದರೂ ತಮ್ಮ ದಾಳಿ ಮುಂದುವರಿಸಿದ ಮಿಕು ಮತ್ತು ಡಿಮಾಸ್ ಡೆಲ್ಟಾಡೊ ಎದುರಾಳಿ ಪೆನಾಲ್ಟಿ ವಲಯದಲ್ಲಿ ಪದೇ ಪದೆ ಆತಂಕ ವೊಡುವಲ್ಲಿ ಯಶಸ್ವಿಯಾದರು. ಪ್ರಸಕ್ತ ಲೀಗ್‌ನಲ್ಲಿ ಸೋಲರಿಯದ ತಂಡಗಳಾಗಿರುವ ಸುನಿಲ್ ಛತ್ರಿ ಬಳಗ ಮತ್ತು ಆತಿಥೇಯ ಕೇರಳ ಬ್ಲಾಸ್ಟರ್ಸ್ ಗೆಲುವಿನ ವಿಶ್ವಾಸದಲ್ಲಿ ಆಟ ಆರಂಭಿಸಿದವು.

ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಬ್ಲೂಸ್‌ ಗೋಲ್ ಗಳಿಕೆಯ ಅವಕಾಶಗಳನ್ನು ಸೃಷ್ಟಿಸಿದರೂ ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಯಶ ಕಾಣಲಿಲ್ಲ. ಬೆಂಗಳೂರು ಎಫ್ಸಿ ತನ್ನ ಮುಂದಿನ ಪಂದ್ಯದಲ್ಲಿ ಇದೇ 22ರಂದು ಎಫ್ ಸಿ ಗೋವಾ ತಂಡವನ್ನು ಎದುರಿಸಲಿದೆ.

Malcare WordPress Security