ಎಫ್‌ಸಿ ಗೋವಾ ವಿರುದ್ಧ ಬ್ಲೂಸ್‌ಗೆ 2-1 ಅಂತರದ ಜಯ, ಕ್ವಾಡ್ರಟ್ ಬಳಗಕ್ಕೆ ಸತತ 4ನೇ ಗೆಲುವು
ಗೋವಾ: ನಾಯಕ ಸುನಿಲ್ ಛತ್ರಿ ಮತ್ತು ರಾಹುಲ್ ಭೆಕೆ ದಾಖಲಿಸಿದ ಗೋಲುಗಳಿಂದ ಬೆಂಗಳೂರು ಎಫ್ ಸಿ ಐಎಸ್ ಎಲ್ 5ನೇ ಆವೃತ್ತಿಯ ತನ್ನ 6ನೇ ಪಂದ್ಯದಲ್ಲಿ ಎಫ್‌ಸಿ ಗೋವಾ ವಿರುದ್ದ ಸುಲಭ ಜಯ ದಾಖಲಿಸಿ, ಅಜೇಯ ದಾಖಲೆ ಕಾಯ್ದುಕೊಂಡಿದೆ.
ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಬಿಎಫ್ಸಿ 2-1 ಗೋಲುಗಳಿಂದ ಗೋವಾ ತಂಡವನ್ನು ಮಣಿಸಿ ಪೂರ್ಣ 3 ಅಂಕ ಕಲೆಹಾಕಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಒಟ್ಟು 16 ಅಂಕ ಸಂಪಾದಿಸಿದ ಛತ್ರಿ ಪಡೆ ಗೋವಾದೊಂದಿಗೆ ಜಂಟಿಯಾಗಿ ಮೊದಲ ಸ್ಥಾನ ಹಂಚಿಕೊಂಡಿದೆ. ಬೆಂಗಳೂರು ಎಫ್ ಸಿ ಪರ ರಾಹುಲ್ ಭೆಕೆ (34ನೇ ನಿ.) ಮತ್ತು ಸುನಿಲ್ ಛತ್ರಿ (77ನೇ ನಿ.) ತಲಾ ಒಂದು ಗೋಲು ದಾಖಲಿಸಿ ಜಯದ ರೂವಾರಿಯೆನಿಸಿದರೆ, ಗೋವಾ ಪರ ಬ್ರೆಂಡನ್ ಫರ್ನಾಂಡಿಸ್ (72ನೇ ನಿ.) ಒಂದು ಗೋಲು ಗಳಿಸಿದರು.
ಇತ್ತಂಡಗಳ ಜಿದ್ದಾಜಿದ್ದಿನ ಹೋರಾಟದ ನಡುವೆಯೇ ಗೋವಾ ತಂಡದ ಬ್ರೆಂಡನ್ ಫರ್ನಾಂಡಿಸ್ (72ನೇ ನಿ.) ಗೋಲು ಗಳಿಸಿ 1-1ರಲ್ಲಿ ಸಮಬಲದ ಹೋರಾಟಕ್ಕೆ ಸಾಕ್ಷಿಯಾದರು. ಆದರೆ ಇದಾದ ಐದೇ ನಿಮಿಷಗಳ ಅಂತರದಲ್ಲಿ ಬಿಎಫ್ಸಿ ನಾಯಕ ಸುನಿಲ್ ಛತ್ರಿ ಗೋಲು ಗಳಿಸಿ ಮತ್ತೆ ತಂಡದ ಮುನ್ನಡೆಯನ್ನು 2-1ಕ್ಕೆ ಹಿಗ್ಗಿಸಿದರು. ಈ ಮೂಲಕ ತಮ್ಮ ನೂರನೇ ಲೀಗ್ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು.
ಹಿನ್ನಡೆ ತಗ್ಗಿಸುವ ನಿಟ್ಟಿನಲ್ಲಿ ದ್ವಿತೀಯಾರ್ಧ ಆರಂಭಿಸಿದ ಗೋವಾಗೆ ಮತ್ತಷ್ಟು ಹಿನ್ನಡೆ ಎದುರಾಯಿತು. 47ನೇ ನಿಮಿಷದಲ್ಲಿ 2ನೇ ಬಾರಿ ಹಳದಿ ಕಾರ್ಡ್‌ಗೆ ಗುರಿಯಾದ ಮೊಹಮ್ಮದ್ ಅಲಿ ರೆಡ್ ಕಾರ್ಡ್‌ಗೆ ತುತ್ತಾದರು. ಇದಾದ ಕೆಲವೇ ನಿಮಿಷಗಳಲ್ಲಿ ಬಿಎಫ್‌ಸಿ ತಂಡದ ಹೆರ್ನಾಂಡೆಜ್ ಸಹ ರೆಫರಿಯಿಂದ ಹಳದಿ ಕಾರ್ಡ್ ಎಚ್ಚರಿಕೆ ಪಡೆದರು. 59ನೇ ನಿಮಿಷದಲ್ಲಿ ಡಿಮಾಸ್ ಡೆಲ್ಲಾಡೊ ರೆಡ್ ಕಾರ್ಡ್‌ಗೆ ಒಳಗಾಗುವ ಮೂಲಕ ಪ್ರವಾಸಿ ಬಿಎಫ್ಸಿಗೆ ಭಾರಿ ಹಿನ್ನಡೆ ಉಂಟಾಯಿತು. ದ್ವಿತೀಯಾರ್ಧದ ಮೊದಲ 15 ನಿಮಿಷಗಳ ಆಟದಲ್ಲಿ ಇತ್ತಂಡಗಳು ಕ್ರೀಡಾ ಸ್ಫೂರ್ತಿಯನ್ನು ಉಲ್ಲಂಘಿಸಿದ್ದು ಗೋಚರಿಸಿತು.
ಇದಕ್ಕೂ ಮುನ್ನ ರಾಹುಲ್ ಭೆಕೆ ತಂದಿಟ್ಟ ಗೋಲಿನ ನೆರವಿನಿಂದ ಬೆಂಗಳೂರು ಎಫ್‌ಸಿ ಪ್ರಥಮಾರ್ಧಕ್ಕೆ 1-0 ಅಂತರದಲ್ಲಿ ಮೇಲುಗೈ ಸಾಧಿಸಿತು. 45ನೇ ನಿಮಿಷದಲ್ಲಿ ಭೆಕೆ ಮತ್ತೊಂದು ಗೋಲ್ ಗಳಿಸಲು ಯತ್ನಿಸಿದರಾದರೂ ಇದು ಸಾಕಾರಗೊಳ್ಳಲಿಲ್ಲ. 34ನೇ ನಿಮಿಷದಲ್ಲಿ ಕೊನೆಗೂ ಗೋವಾ ತಂಡದ ರಕ್ಷಣಾ ಕೋಟೆಯನ್ನು ಭೇದಿಸಿದ ಬೆಂಗಳೂರು ತಂಡ 1-0 ಅಂತರದಲ್ಲಿ ಮುನ್ನಡೆ ಗಳಿಸಿತು. ಇದಕ್ಕೆ ಕಾರಣವಾಗಿದ್ದು , ರಾಹುಲ್ ಬೆಕೆ. ಕ್ಸಿಸ್ಕೊ ಹೆರ್ನಾಂಡೆಜ್ ನೆರವಿನಿಂದ ಭೇಕೆ ಗೋಲು ಗಳಿಸಿ ತಂಡದ ಆರಂಭಿಕ ಮುನ್ನಡೆಗೆ ಕಾರಣರಾದರು.ಇದರಿಂದ ಒತ್ತಡಕ್ಕೊಳಗಾದ ಗೋವಾ ಆಟಗಾರರು ಸಮಬಲಕ್ಕೆ ಯತ್ನಿಸಿದರು.
ಈ ಸಂದರ್ಭದಲ್ಲಿ ಮೊಹಮ್ಮದ್ ಅಲಿ ರೆಫರಿಯಿಂದ ಹಳದಿ ಕಾರ್ಡ್‌ಗೆ ಗುರಿಯಾದರು. ಇದಕ್ಕೂ ಮುನ್ನ ಆಕ್ರಮಣಕಾರಿ ಆಟಕ್ಕೆ ಮತ್ತಷ್ಟು ಒತ್ತು ನೀಡಿದ ಬೌಮಸ್ ಪ್ರವಾಸಿ ತಂಡದ ರಕ್ಷಣೆಗೆ ಪದೇ ಪದೆ ಆತಂಕವೊಡ್ಡಿದರಾದರೂ ಕೋಚ್ ಕಾರ್ಲೊಸ್ ಕ್ವಾಡ್ರಟ್ ಬಳಗ ರಕ್ಷಣೆಯನ್ನು ಬಿಗಿಗೊಳಿಸಿತು. 28ನೇ ನಿಮಿಷದಲ್ಲಿ ನಾಯಕ ಛತ್ರಿ ಅವರ ಉತ್ತಮ ಗೋಲಿನ ಯತ್ನದಿಂದ ಬೆಂಗಳೂರು ತಂಡ ದಿಟ್ಟ ತಿರುಗೇಟು ನೀಡಿತಾದರೂ ಮುನ್ನಡೆ ಗಳಿಸಲು ಸಾಧ್ಯವಾಗಲಿಲ್ಲ .
ಆಕ್ರಮಣಕಾರಿ ಆಟಕ್ಕೆ ಹೆಸರಾಗಿರುವ ಉಭಯ ತಂಡಗಳು ಗೋಲಿಗಾಗಿ ಹರಸಾಹಸ ನಡೆಸಿದ ಹಿನ್ನೆಲೆಯಲ್ಲಿ 10ನೇ ನಿಮಿಷದಲ್ಲಿ ಹುಗೊ ಬೌಮಸ್ ಯತ್ನಿಸಿದ ಸುಂದರ ಗೋಲಿನ ಯತ್ನವನ್ನು ಜುವನಾನ್ ಅದ್ಭುತವಾಗಿ ತಡೆದು ಬಿಎಫ್ಸಿಗೆ ಎದುರಾಗುತ್ತಿದ್ದ ಹಿನ್ನೆಡೆಯನ್ನು ತಗ್ಗಿಸಿದರು. ಪಂದ್ಯದ 7ನೇ ನಿಮಿಷದಲ್ಲಿ ಚೆಂಡಿನ ಮೇಲಿ ನಿಯಂತ್ರಣ ಸಾಧಿಸಿದ ಸ್ಟಾರ್ ಫಾರ್ವಡ್್ರ ಆಟಗಾರ ಉದಾಂತ ಸಿಂಗ್ ಚೆಂಡನ್ನು ಗೋವಾ ಫೆನಾಲ್ಟಿ ವಲಯದತ್ತ ಕೊಂಡೊಯ್ದರಾದರೂ ಎದುರಾಳಿ ಆಟಗಾರರು ದಿಟ್ಟ ರಕ್ಷಣೆ ನಡೆಸಿದ ಕಾರಣ ಆರಂಭದಲ್ಲೇ ಮುನ್ನಡೆ ಗಳಿಸುವ ಬಿಎಫ್ಸಿ ಕನಸು ಈಡೇರಲಿಲ್ಲ.
ಸುಮಾರು ಒಂದು ತಿಂಗಳು ತವರಿನಾಚೆಯ ಪಂದ್ಯಗಳಲ್ಲಿ ಪಾಲ್ಗೊಂಡಿದ್ದ ಬೆಂಗಳೂರು ಎಫ್ ಸಿ, ಗೆಲುವಿನ ಲಯದೊಂದಿಗೆ ಮನೆಯಂಗಳಕ್ಕೆ ಮರಳುವ ಇರಾದೆಯೊಂದಿಗೆ ಲೀಗ್ ಲೀಡರ್ ಎಫ್ ಸಿ ಗೋವಾ ಎದುರು ಕಣಕ್ಕಿಳಿಯಿತು. ಅದರಲ್ಲೂ ನಾಯಕ ಸುನಿಲ್ ಛತ್ರಿ ಐ-ಲೀಗ್ ಮತ್ತು ಐಎಸ್ ಎಲ್ ಸೇರಿ ಬ್ಲೂಸ್ ಪರ ತಮ್ಮ ನೂರನೇ ಪಂದ್ಯದಲ್ಲಿ ಕಣಕ್ಕಿಳಿದರು.
ಬೆಂಗಳೂರು ಎಫ್ ಸಿ ಇದೇ 26ರಂದು ತವರಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಡೆಲ್ಲಿ ಡೈನಮೋಸ್ ತಂಡವನ್ನು ಎದುರಿಸಲಿದೆ.