ಮತ್ತೆ ಡ್ರಾಗೆ ತೃಪ್ತಿಪಟ್ಟ ಬೆಂಗಳೂರು ಎಫ್ ಸಿ

ಬಿಎಫ್ಸಿ- ಮುಂಬಯಿ ಎಫ್ ಸಿ ಪಂದ್ಯ 1-1ರಲ್ಲಿ ಡ್ರಾ, ಉಭಯ ತಂಡಗಳಿಗೆ ತಲಾ 1 ಅಂಕ

ಬೆಂಗಳೂರು: ಉಭಯ ತಂಡಗಳ ರಕ್ಷಣಾತ್ಮಕ ಆಟದಿಂದಾಗಿ ಬೆಂಗಳೂರು ಎಫ್ ಸಿ ಮತ್ತು ಮುಂಬಯಿ ಸಿಟಿ ಎಫ್ಸಿ ನಡುವಿನ ಪಂದ್ಯ ಡ್ರಾನಲ್ಲಿ ಕೊನೆಗೊಂಡ ಪರಿಣಾಮ ಎರಡೂ ತಂಡಗಳು ತಲಾ ಒಂದು ಅಂಕ ಹಂಚಿಕೊಂಡವು.

ಇಲ್ಲಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಲೀಗ್‌ನ 53ನೇ ಹೈವೋಲ್ವೇಜ್ ಪಂದ್ಯದಲ್ಲಿ ಬಿಎಫ್ಸಿ 1-1ರಲ್ಲಿ ಮುಂಬಯಿ ವಿರುದ್ದ ಸಮಬಲ ಸಾಸಿತು. ಇದರೊಂದಿಗೆ ಒಟ್ಟು 24 ಅಂಕ ಕಲೆಹಾಕಿದ ಸುನಿಲ್ ಛತ್ರಿ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿಯುವ ಜತೆಗೆ ತನ್ನ ಅಜೇಯ ಓಟವನ್ನು ಕಾಯ್ದುಕೊಂಡಿತು. ಮತ್ತೊಂದೆಡೆ ಈ ಡ್ರಾದೊಂದಿಗೆ ಮುಂಬಯಿ ಒಟ್ಟು 21 ಅಂಕ ಸಂಪಾದಿಸಿದೆ.

ಬಿಎಫ್ಸಿ ಪರ ಉದಾಂತ ಸಿಂಗ್ (23ನೇ ನಿಮಿಷ) ಒಂದು ಗೋಲು ಗಳಿಸಿದರೆ, ಮುಂಬಯಿ ಸಿಟಿ ಎಫ್ಸಿ ಪರ ಮೊದ್ ಸೌಗೌ(31ನೇ ನಿಮಿಷ) ಒಂದು ಗೋಲು ದಾಖಲಿಸಲಷ್ಟೇ ಶಕ್ತರಾದರು. ಪ್ರವಾಸಿ ತಂಡ ಹತ್ತು ಸದಸ್ಯರಿಗೆ ತಗ್ಗಿದರೂ ಬಿಎಫ್ಸಿ ಇದರ ಲಾಭ ಪಡೆಯುವಲ್ಲಿ ಅಲ್ಪ ಎಡವಿತು.

ಮುನ್ನಡೆ ಗಳಿಸುವ ಒತ್ತಡದಲ್ಲಿ ಹಲವು ತಪ್ಪುಗಳನ್ನೆಸಗಿದ ಬಿಎಫ್ಸಿ ಕೇವಲ 2 ನಿಮಿಷಗಳ ಅಂತರದಲ್ಲಿ ಹಳದಿ ಕಾರ್ಡ್‌ಗೆ ಬಲಿಯಾಯಿತು. ರಾಹುಲ್ ಬೆಕ ಮತ್ತು ಹರ್ಮನ್‌ಜ್ಯೋತ್ ಖಾದ್ರಿ ರೆಫರಿಯಿಂದ ಎಚ್ಚರಿಕೆ ಪಡೆದರು.

58ನೇ ನಿಮಿಷದಲ್ಲಿ ಬೆಂಗಳೂರು ತಂಡ ಕೋಚ್ ಕಾರ್ಲೋಸ್ ಕ್ವಾಡ್ರಟ್ ನಿಶು ಕುಮಾರ್ ಬದಲಿಗೆ ಸೆಂಬೊಯ್ ಹಾಕಿಪ್ಗೆ ಆಡುವ ಬಳಗದಲ್ಲಿ ಸ್ಥಾನ ಕಲ್ಪಿಸಿತು. ಇದಕ್ಕೂ ಮುನ್ನ 46ನೇ ನಿಮಿಷದಲ್ಲಿ ಆಟಗಾರರ ಬದಲಾವಣೆಗೆ ಬಿಎಫ್ಸಿ ಒತ್ತು ನೀಡಿತು. ಮುನ್ನಡೆ ವಿಸ್ತರಿಸುವ ನಿಟ್ಟಿನಲ್ಲಿ ದ್ವಿತೀಯಾರ್ಧ ಆರಂಭಿಸಿದ ಕೆಲವೇ ನಿಮಿಷದಲ್ಲಿ ಎರಡನೇ ಬಾರಿ ಹಳದಿ ಕಾರ್ಡ್‌ಗೆ ಗುರಿಯಾದ ಸೆಹ್ವಾಜ್ ರೆಡ್ ಕಾರ್ಡ್ ಪಡೆದು ಪಂದ್ಯದಿಂದ ಹೊರನಡೆದರು. ಹೀಗಾಗಿ ಪ್ರವಾಸಿ ಆಟಗಾರರ ಸಂಖ್ಯೆ ಹತ್ತಕ್ಕೆ ಕುಸಿದ ಕಾರಣ ಮುಂಬಯಿ ಸಂಕಷ್ಟಕ್ಕೆ ಸಿಲುಕಿತು.

ಇದಕ್ಕೂ ಮುನ್ನ ಸಮಬಲದ ಹೋರಾಟದ ಫಲವಾಗಿ ಪ್ರಥಮಾರ್ಧಕ್ಕೆ ಇತ್ತಂಡಗಳು 1-1ರಲ್ಲಿ ಹೋರಾಟ ನೀಡಿ ವಿರಾಮಕ್ಕೆ ತೆರಳಿದವು. 35ನೇ ನಿಮಿಷದಲ್ಲೂ ಮುಂಬಯಿಗೆ ಸಿಕ್ಕ ಮತ್ತೊಂದು ಗೋಲಿನ ಅವಕಾಶವನ್ನು ಗುರ್‌ಪ್ರೀತ್ ಪ್ರಬಲವಾಗಿ ಹಿಮ್ಮೆಟ್ಟಿಸಿ ತಂಡಕ್ಕೆ ಎದುರಾಗುತ್ತಿದ್ದ ಹಿನ್ನಡೆ ತಗ್ಗಿಸಿದರು. 33ನೇ ನಿಮಿಷದಲ್ಲಿ ಮುಂಬಯಿ 2ನೇ ಗೋಲ್ ದಾಖಲಿಸಿ ಮುನ್ನಡೆ ವಿಸ್ತರಿಸುವ ಅವಕಾಶ ಹೊಂದಿತ್ತಾದರೂ ಗೋಲ್ ಕೀಪರ್ ಗುರ್‌ಪ್ರೀತ್ ಸಿಂಗ್ ಮತ್ತು ಆತಿಥೇಯ ರಕ್ಷಣಾ ಬಳಗ ಇದಕ್ಕೆ ಅವಕಾಶ ಕಲ್ಪಿಸಲಿಲ್ಲ.

ಇದಕ್ಕೂ ಮುನ್ನ ಆತಿಥೇಯರ ಸಂಭ್ರಮ ಕೇವಲ 8 ನಿಮಿಷಗಳ ಅಂತರದಲ್ಲಿ ಕಣ್ಮರೆಯಾಯಿತು. 31ನೇ ನಿಮಿಷದಲ್ಲಿ ಮುಂಬಯಿ ತಂಡದ ಮೊತೌ ಸೌಗ್, ಅರ್ನಾಲ್ಡ್ ಐಸ್ತಾಕೊ ಸಹಾಯದಿಂದ ಗೋಲ್ ಗಳಿಸಿ 1-1ರ ಹೋರಾಟಕ್ಕೆ ಸಾಕ್ಷಿಯಾಗಿದ್ದು ಆತಿಥೇಯರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು. ಆತಿಥೇಯ ತಂಡದ ಬಿಗುವಿನ ದಾಳಿ ಫಲವಾಗಿ ಸ್ಟಾರ್‌ ಸೈಕರ್‌ ಉದಾಂತ್ ಸಿಂಗ್ 23ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ 1-0 ಅಂತರದ ಮುನ್ನಡೆ ಒದಗಿಸುವಲ್ಲಿ ಸಫಲರಾದರು. ರಾಹುಲ್ ಭೆಕೆ ಮತ್ತು ಚೆಂಡೊ ಅವರ ನೆರವಿನಿಂದ ಮುನ್ನಡೆ ತಂದ ಉದಾಂತ, ತನ್ನ ಮಾಜಿ ತಂಡದ ವಿರುದ್ಧ ಮೇಲುಗೈ ಸಾಸಲು ನೆರವಾದರು.

ಉಭಯ ತಂಡಗಳ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಪರಿಣಾಮ 18ನೇ ನಿಮಿಷದಲ್ಲಿ ನಿಶು ಕುಮಾರ್ ಉತ್ತಮ ಗೋಲಿನ ಯತ್ನ ನಡೆಸಿದರಾದರೂ ಗೋಲು ಮಾತ್ರ ದಾಖಲಾಗಲಿಲ್ಲ, ಹೀಗಾಗಿ ಎರಡೂ ತಂಡಗಳ ಹೋರಾಟ 0-0 ಗೋಲು ರಹಿತವಾಗಿ ಮುಂದುವರಿಯಿತು. 10ನೇ ನಿಮಿಷದಲ್ಲಿ ಎರಿಕ್ ಪಾರ್ತಾಲು ಹಿಂಬದಿಯಲ್ಲಿ ಚೆಂಡಿನ ಟ್ಯಾಕಲ್‌ಗೆ ಯತ್ನಿಸಿ ಪ್ರಮಾದವೆಸಗಿದ ಮುಂಬಯಿ ತಂಡದ ಸೆಹ್ವಾಜ್ ಸಿಂಗ್ ರೆಫರಿಯಿಂದ ಹಳದಿ ಕಾರ್ಡ್‌ಗೆ ಗುರಿಯಾದರು. ಇದು ಋತುವಿನಲ್ಲಿ ಸೆಹ್ವಾಜ್‌ಗೆ ಸಿಕ್ಕ ನಾಲ್ಕನೇ ಹಳದಿ ಕಾರ್ಡ್ ಆಗಿದೆ. ಆರನೇ ನಿಮಿಷದಲ್ಲಿ ಚೆಂಡಿನ ಮೇಲೆ ನಿಯಂತ್ರಣ ಸಾಸಿದ ಆತಿಥೇಯ ನಾಯಕ ಸುನಿಲ್ ಛತ್ರಿ, ಅಪ್ಸೈಡ್‌ನಲ್ಲಿದ್ದ ಗೆಲ್ಶೆನ್ ಚೆಂಬೊಗೆ ಚೆಂಡನ್ನು ಪಾಸು ಮಾಡಿದರು.

ಆದರೆ ಚೆಂಚೊ ಹೊಡೆದ ಚೆಂಡು ಗೋಲ್ ಪೆಟ್ಟಿಗೆ ಸಮೀಪದಲ್ಲಿ ಹಾದು ಹೋಗುವ ಮೂಲಕ ಆತಿಥೇಯರಲ್ಲಿ ನಿರಾಸೆ ಉಂಟು ಮಾಡಿತು. ಪ್ರಸಕ್ತ ಲೀಗ್‌ನಲ್ಲೇ ಸೋಲರಿಯದ ತಂಡವಾಗಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿರುವ ಕಳೆದ ಬಾರಿಯ ರನ್ನರ್ ಅಫ್ ಬೆಂಗಳೂರು ಎಫ್ ಸಿ , ಪ್ರವಾಸಿ ಮುಂಬಯಿ ಸಿಟಿ ಎಫ್ ಸಿ ವಿರುದ್ಧ ಗೆದ್ದು ಮುಂದಿನ ಹಂತವನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಣಕ್ಕಿಳಿಯಿತು.

ಅತ್ತ ಕಳೆದ ಆರು ಪಂದ್ಯಗಳಲ್ಲಿ ಒಂದು ಡ್ರಾ ಸೇರಿ ಜಯದ ನಾಗಲೋಟ ಕಾಯ್ದುಕೊಂಡಿರುವ ಮುಂಬೈ ಸಹ ಆತಿಥೇಯರನ್ನು ಅದರದ್ದೆ ನೆಲದಲ್ಲಿ ಮಣಿಸುವ ಇರಾದೆಯೊಂದಿಗೆ ಆಖಾಡಕ್ಕಿಳಿಯಿತು. ಬೆಂಗಳೂರು ತಂಡ 1-4-2-3-1ರ ಸಂಯೋಜನೆಯಲ್ಲಿ ಆಟ ಆರಂಭಿಸಿದರೆ, ಮುಂಬಯಿ 1-4-3-3ರ ಮಾದರಿಯಲ್ಲಿ ಆಟ ಆರಂಭಿಸಿತು.

ಬೆಂಗಳೂರು ಎಫ್ಸಿ ತನ್ನ ಮುಂದಿನ ಪಂದ್ಯದಲ್ಲಿ ತನ್ನ ತವರಿನಂಗಳ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಇದೇ ತಿಂಗಳ 13ರಂದು ಅಥ್ಲೆಟಿಕೊ ಡಿ ಕೋಲ್ಕಿತಾ ತಂಡವನ್ನು ಎದುರಿಸಲಿದೆ.

Malcare WordPress Security