ಕ್ಲಬ್ ಪರ 150ನೇ ಪಂದ್ಯವಾಡಿದ ಛತ್ರಿಗೆ ಗೆಲುವಿನ ಉಡುಗೊರೆ, 19ಅಂಕದೊಂದಿಗೆ ಮತ್ತೆ ಅಗ್ರಸ್ಥಾನಕ್ಕೇರಿದ ಬ್ಲೂಸ್
ಬೆಂಗಳೂರು: ಪಂದ್ಯದ ಕೊನೆಯ ಕ್ಷಣದಲ್ಲಿ ಸ್ಟಾರ್ ಫಾರ್ವಡ್್ರ ಉದಾಂತ ಸಿಂಗ್ ದಾಖಲಿಸಿದ ಏಕೈಕ ಗೋಲಿನ ನೆರವಿನಿಂದ ಬೆಂಗಳೂರು ಎಫ್ ಸಿ ಐಎಸ್ಎಲ್ 5ನೇ ಆವೃತ್ತಿಯ ತನ್ನ 7ನೇ ಪಂದ್ಯದಲ್ಲಿ ಡೆಲ್ಲಿ ಡೈನಮೋಸ್ ವಿರುದ್ಧ ರೋಚಕ ಜಯ ಗಳಿಸಿತು. ಇದರೊಂದಿಗೆ ಒಟ್ಟು 19 ಅಂಕದೊಂದಿಗೆ ಬ್ಲೂಸ್ ಅಂಕಪಟ್ಟಿಯಲ್ಲಿ ಎಫ್‌ಸಿ ಗೋವಾ (16 ಅಂಕ) ತಂಡವನ್ನು ಹಿಂದಿಕ್ಕಿ ಮತ್ತೆ ಮೊದಲ ಸ್ಥಾನಕ್ಕೇರಿದೆ.
ಇಲ್ಲಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ತವರು ಅಭಿಮಾನಿಗಳ ಸಮ್ಮುಖದಲ್ಲಿ ಕಣಕ್ಕಿಳಿದ ಬ್ಲೂ ಬಳಗ 1-0 ಗೋಲಿನ ಅಂತರದಿಂದ ಪ್ರವಾಸಿ ಡೆಲ್ಲಿಗೆ ಸೋಲುಣಿಸಿ ಲೀಗ್‌ನಲ್ಲಿ ತನ್ನ ಅಜಯ ದಾಖಲೆಯನ್ನು ಮುಂದುವರಿಸಿತು. ಆದರೆ ಸೋಲಿನಿಂದ ಹೊರಬರುವ ನಿಟ್ಟಿನಲ್ಲಿ ಕಣಕ್ಕಿಳಿದಿದ್ದ ಅಂಕಪಟ್ಟಿಯ ಕೆಳಸ್ಥಾನಿ ಡೆಲ್ಲಿ , ಮತ್ತೊಂದು ಸೋಲಿಗೆ ತುತ್ತಾಯಿತು.
ಬಿಎಫ್ಸಿ ಪರ ಉದಾಂತ ಸಿಂಗ್ (87ನೇ ನಿಮಿಷ) ಏಕೈಕ ಗೋಲು ಬಾರಿಸಿ ಜಯದ ರೂವಾರಿ ಎನಿಸಿದರಲ್ಲದೆ, ಕ್ಲಬ್ ಪರ 150ನೇ ಪಂದ್ಯವಾಡಿ ಹೊಸ ಮೈಲುಗಲ್ಲು ನೆಟ್ಟ ನಾಯಕ ಸುನಿಲ್‌ಛತ್ರಿಗೆ ಸ್ಮರಣೀಯ ಉಡುಗೊರೆ ನೀಡಿದರು.
ಇದಕ್ಕೂ ಮುನ್ನ 83ನೇ ನಿಮಿಷದಲ್ಲಿ ಫ್ರಿ ಕಿಕ್ ಮೂಲಕ ಸಿಕ್ಕ ಗೋಲಿನ ಅವಕಾಶವನ್ನು ಉದಾಂತ ಕೈಚೆಲ್ಲಿದ ಕಾರಣ ಉಭಯ ತಂಡಗಳ ಹೋರಾಟ 0-0ಯಲ್ಲಿ ಮುಂದುವರಿಯಿತು. 55ನೇ ನಿಮಿಷದಲ್ಲೂ ಆಟಗಾರರ ಬದಲಾವಣೆಗೆ ಒತ್ತು ನೀಡಿದ ಬಿಎಫ್‌ಸಿ ಕೋಚ್ ಕಾರ್ಲೊಸ್ ಕ್ವಾಡ್ರಟ್, ಚೆಂಚ್ ಬದಲಿಗೆ ಸೆಂಬೊಯಿ ಹಾಕಿಪ್‌ಗೆ 11ರ ಬಳಗದಲ್ಲಿ ಅವಕಾಶ ನೀಡಿದರು. ಆದರೆ ಇದು ತಂಡದ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಲಿಲ್ಲ.
ವಿರಾಮದ ಬಳಿಕ ದ್ವಿತೀಯಾರ್ಧ ಮುಂದುವರಿಸಿದ ಉಭಯ ತಂಡಗಳು ದಾಳಿಯನ್ನು ಇನ್ನಷ್ಟು ಬಿಗಿಗೊಳಿಸಿದವು. ಅದರಲ್ಲೂ ಆತಿಥೇಯ ತಂಡ ಪರಿಣಾಮಕಾರಿಯಾಗಿಸಿತು. ಆದರೆ ಎದುರಾಳಿಯ ರಕ್ಷಣಾ ಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. ಈ ಮಧ್ಯೆ 49ನೇ ನಿಮಿಷದಲ್ಲಿ ಬೆಂಗಳೂರು ತಂಡ ರಿನೊ ಆ್ಯಂಟೊ ಬದಲಿಗೆ ಎರಿಕ್ ಪಾರ್ತಾಲುಗೆ ಸ್ಥಾನ ಕಲ್ಪಿಸಿತು. ಇದಕ್ಕೂ ಮುನ್ನ ಮುನ್ನಡೆಗಾಗಿ ಇತ್ತಂಡಗಳ ಆಕ್ರಮಣಕಾರಿ ಆಟ ಮುಂದುವರಿಯಿತು. 3ನೇ ನಿಮಿಷದಲ್ಲಿ ಡೆಲ್ಲಿ ಅದ್ಭುತ ಗೋಲಿನ ಯತ್ನ ಮಾಡಿತು. ಆದರೆ ಬ್ಲೂಸ್ ತಂಡದ ಗೋಲ್‌ಕೀಪರ್ ಗುರ್‌ಪ್ರೀತ್ ಸಿಂಗ್ ಸಂಧು ಪ್ರಬಲ ರಕ್ಷಣಾಗೋಡೆಯಾಗಿ ನಿಂತರು ಹೀಗಾಗಿ ಪ್ರವಾಸಿ ತಂಡ ಮುನ್ನಡೆ ಗಳಿಸುವ ಅವಕಾಶ ವಿಫಲವಾಯಿತು.
ಆರಂಭ 20 ನಿಮಿಷಗಳಲ್ಲಿ ಉಭಯ ತಂಡಗಳು ಕೆಲವು ಬಾರಿ ಗೋಲಿನ ಅವಕಾಶ ಸೃಷ್ಟಿಸಿದರೂ ಮುನ್ನಡೆ ಗಳಿಸಲು ಎರಡೂ ತಂಡಗಳಿಗೆ ಸಾಧ್ಯವಾಗಲಿಲ್ಲ. ಈ ಮಧ್ಯೆ, 26ನೇ ನಿಮಿಷದಲ್ಲಿ ಡೆಲ್ಲಿ ತಂಡದ ಆ್ಯಡ್ರಿಯಾ ಕಾರ್ಮೊನಾ ರೆಫರಿಯಿಂದ ಹಳದಿ ಕಾರ್ಡ್‌ಗೆ ಗುರಿಯಾದರು. ಇದೇ ಸಂದರ್ಭದಲ್ಲಿ ಹರ್ಮನ್‌ಜೋತ್ ಖಾಬ್ರಾ ಎಸಗಿದ ಪ್ರಮಾದದಿಂದಾಗಿ ಡೆಲ್ಲಿ ಡೈನಮೋಸ್ ಫ್ರೀ ಕಿಕ್ ಅವಕಾಶ ಗಿಟ್ಟಿಸಿತಾದರೂ ಆತಿಥೇಯ ತಂಡದ ಪ್ರಬಲ ರಕ್ಷಣೆಯನ್ನು ಮುರಿಯಲು ಸಾಧ್ಯವಾಗಲಿಲ್ಲ . ಪ್ರಸಕ್ತ ಲೀಗ್‌ನಲ್ಲಿ ತವರು ಹಾಗೂ ತವರಿನಾಚೆ ಅಜೇಯ ದಾಖಲೆ ಹೊಂದಿರುವ ಬೆಂಗಳೂರು ತಂಡ, ಎಫ್ ಸಿ ಗೋವಾ ವಿರುದ್ಧದ ಪಂದ್ಯದಲ್ಲಿ ರೆಡ್ ಕಾರ್ಡ್‌ಗೆ ಗುರಿಯಾದ ಡಿಮಾಸ್ ಡೆಲ್ಲಾಡೊ ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಿತು.
೨ನೇ ನಿಮಿಷದಲ್ಲೇ ದೊರೆತ ಮುನ್ನಡೆ ಗಳಿಸುವ ಉತ್ತಮ ಅವಕಾಶವನ್ನು ಆತಿಥೇಯರು ಕಳೆದುಕೊಂಡರು. ಕ್ಸಿಸ್ಕೊ ಹೆರ್ನಾಂಡೆಜ್ ಚೆಂಡನ್ನು ನಾಯಕ ಛಟ್ರಿ ಅವರಿಂದ ಪಡೆದು ಗೋಲಿನ ಪೆಟ್ಟಿಗೆಯತ್ತ ಪಾಸ್ ಹೊಡೆದರಾದರೂ ಎದುರಾಳಿಯ ಅಲ್ಲಿನೊ ಉತ್ತಮ ರಕ್ಷಣೆ ಮಾಡಿದರು. ಇದಾದ ಮರು ನಿಮಿಷದಲ್ಲೇ ಮತ್ತೊಂದು ಗೋಲಿನ ಅವಕಾಶವನ್ನು ಆತಿಥೇಯ ತಂಡ ಗಿಟ್ಟಿಸಿದರೂ ಲಾಭ ಪಡೆಯಲು ಎಡವಿತು.
ಡೆಲ್ಲಿ ಡೈನಮೋಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಬ್ರೂಸ್ ಕ್ಲಬ್ ಪರ 150ನೇ ಪಂದ್ಯವಾಡಿದ ನಾಯಕ ಹಾಗೂ ಸ್ಟಾರ್ ಫಾರ್ವಡ್್ರ ಸುನಿಲ್ ಛಟ್ರಿಗೆ ಈ ಪಂದ್ಯವನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಆತಿಥೇಯ ಆಟಗಾರರು ಮನೆಯಂಗಳದಲ್ಲಿ ಮತ್ತೆ ಅಭಿಯಾನ ಆರಂಭಿಸಿದರು.
ಬೆಂಗಳೂರು ಎಫ್ ಸಿ ಇದೇ 30ರಂದು ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಎಫ್‌ಸಿ ಗೋವಾ ತಂಡವನ್ನು ಎದುರಿಸಲಿದೆ.