ಎಫ್ಸಿ ಪುಣೆ ಸಿಟಿ ಎದುರಿನ ಕದನದೊಂದಿಗೆ ಬೆಂಗಳೂರು ಪ್ರವಾಸ ಆರಂಭ

ಪುಣೆಯ ಆಕ್ರಮಣಕಾರಿ ದಾಳಿ ಕುರಿತು ಎಚ್ಚರಿಸಿದ ಕ್ವಾಡ್ರಟ್, ತವರಿನಾಚೆ ಅಭಿಯಾನ ಆರಂಭಿಸುತ್ತಿರುವ ಬ್ಲೂಸ್‌ಗೆ ಕಠಿಣ ಸವಾಲು ಎದುರಾಗುವ ನಿರೀಕ್ಷೆ

ಪುಣೆ: ಇಲ್ಲಿನ ಬಾಳೆವಾಡಿ ಕ್ರೀಡಾ ಸಂಕೀರ್ಣದಲ್ಲಿ ಸೋಮವಾರ ಎಫ್ ಸಿ ಪುಣೆ ಸಿಟಿ ವಿರುದ್ದ ಕಣಕ್ಕಿಳಿಯುತ್ತಿರುವ ಬೆಂಗಳೂರು ಎಫ್ ಸಿ ಇಂಡಿಯನ್ ಸೂಪರ್ ಲೀಗ್ 5ನೇ ಆವೃತ್ತಿಯಲ್ಲಿ ಮನೆಯಂಗಳದಾಚೆ ಉತ್ತಮ ಆರಂಭ ಕಾಣಲು ಎದುರು ನೋಡುತ್ತಿದೆ.

ತವರಿನಂಗಳದಲ್ಲಿ ಆಡಿದ ಮೊದಲೆರಡು ಪಂದ್ಯಗಳಲ್ಲಿ ಗೆಲುವು-ಡ್ರಾದ ಫಲ ಅನುಭವಿಸಿರುವ ಕೋಚ್ ಕಾರ್ಲಸ್ ಕ್ವಾಡ್ರಟ್ ನೇತೃತ್ವದ ಬ್ಲೂಸ್, ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ನಾರ್ತ್ ಈಸ್ಟ್ ಯುನೈಟೆಡ್ ಎಫ್ ಸಿಯನ್ನು ಹಿಂದಿಕ್ಕಲು ಹಾತೊರೆಯುತ್ತಿದೆ. ಅತ್ತ ಆಡಿದ ಮೂರು ಪಂದ್ಯಗಳಲ್ಲಿ 2 ಜಯ ಮತ್ತು ಒಂದು ಡ್ರಾ ಮಾಡಿಕೊಂಡಿರುವ ನಾರ್ತ್‌ಈಸ್ಟ್ 7 ಅಂಕದೊಂದಿಗೆ ಅಗ್ರಸ್ಥಾನ ಹೊಂದಿದೆ.

ಪ್ರಸಕ್ತ ಋತುವಿನಲ್ಲಿ ಪುಣೆ ಉತ್ತಮ ಆರಂಭ ಕಂಡಿಲ್ಲ. ಆಡಿದ ಎರಡು ಪಂದ್ಯಗಳಲ್ಲಿ ಕೇವಲ ಒಂದು ಅಂಕ ಸಂಪಾದಿಸಿದೆ. ಆರಂಭಿಕ ಪಂದ್ಯದಲ್ಲಿ ಡೆಲ್ಲಿ ಡೈನಮೋಸ್‌ ವಿರುದ್ಧ ಡಿಯಾಗೊ ಕಾರ್ಲೊಸ್ ಅಂತಿಮ ಕ್ಷಣದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಡ್ರಾ ಮಾಡಿಕೊಳ್ಳಲು ಶಕ್ತಗೊಂಡಿತ್ತು .ಆದರೆ ಶುಕ್ರವಾರ ಮುಂಬಯಿ ಸಿಟಿ ಎಫ್ಸಿ ವಿರುದ್ಧ ನಡೆದ ದ್ವಿತೀಯ ಪಂದ್ಯದಲ್ಲಿ ಮಿಗುಯೆಲ್ ಪೋರ್ಚುಗಲ್ ಬಳಗ 0-2 ಗೋಲ್‌ಗಳ ಅಂತರದಲ್ಲಿ ಸೋಲನುಭವಿಸಿದೆ.

ಆದರೆ ಕ್ವಾಡ್ರಟ್ ಪುಣೆ ಹಿಂದಿನ ಎರಡು ಪಂದ್ಯಗಳಿಗಿಂತ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ನಿರೀಕ್ಷೆಯಿದ್ದು, ನಾವು ಎಚ್ಚರಿಕೆಯಿಂದ ಆಡಬೇಕಿದೆ ಎಂದಿದ್ದಾರೆ. ಈ ಪುಣೆ ಸಿಟಿ ವಿರುದ್ಧದ ಪಂದ್ಯ ಯಾವಾಗಲೂ ಕಠಿಣವಾಗಿರುತ್ತದೆ. ಹಿಂದಿನ ಪಂದ್ಯಗಳಿಗಿಂತ ಈ ಪಂದ್ಯ ಯಾವುದೇ ರೀತಿಯ ಭಿನ್ನವಿಲ್ಲ ಎಂದು ನಾನು ನಿರೀಕ್ಷಿಸಿದ್ದೇನೆ. ಎರಡು ವಾರಗಳ ಹಿಂದೆ ಮ್ಯಾಡ್ರಿಡ್‌ನಲ್ಲಿ ನಮ್ಮ ಯುಇಎಫ್‌ಇ ಪರವಾನಗಿಯನ್ನು ನವೀಕರಿಸಲು ಹೋದಾಗ ನಾನು ಮಿಗುಯೆಲ್ ಅವರನ್ನು ಭೇಟಿಯಾಗಿದ್ದೇನೆ. ಈ ವೇಳೆ ಅವರು ಆಕ್ರಮಣಕಾರಿ ಆಯ್ಕೆಯೊಂದಿಗೆ ಸಾಕಷ್ಟು ಸಂತೋಷದಿಂದದ್ದರು. ಹೀಗಾಗಿ ನಾವು ಕಾರ್ನರ್ ಸೇರಿ ಎಲ್ಲಡೆ ಎಚ್ಚರಿಕೆ ವಹಿಸಬೇಕಿದೆ,” ಎಂದು ಬ್ಲೂಸ್‌ ಕೋಚ್ ಕ್ವಾಡ್ರಟ್ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಂಠೀರವದಲ್ಲಿ ಕಳೆದ ಸಾಲಿನಲ್ಲಿ ಸೆಮಿಫೈನಲ್‌ನ ದ್ವಿತೀಯ ಲೆಗ್‌ನಲ್ಲಿ ಉಭಯ ತಂಡಗಳು ಕೊನೆಯದಾಗಿ ಎದುರಾಗಿದ್ದವು. ಈ ವೇಳೆ ಸುನಿಲ್ ಛತ್ರಿ ಗಳಿಸಿದ ಹ್ಯಾಟ್ರಿಕ್ ಗೋಲ್ ಬಾರಿಸಿ ತಂಡಕ್ಕೆ 3-1ರ ಜಯ ತರುವ ಮೂಲಕ ಪುಣೆ ಸಿಟಿ ಎಫ್ ಸಿ ಹೋರಾಟವನ್ನು ಕೊನೆಗೊಳಿಸಿದ್ದರು. ಅಂದಿನಿಂದ ಪುಣೆ ಸಿಟಿ ತಂಡದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆ ಪೈಕಿ ಪೋರ್ಚಗಲ್ ಕೋಚ್ ನೇಮಕವಾಗಿದ್ದಾರೆ. ಈ ಮೊದಲು ಅವರು ಡೆಲ್ಲಿ ಡೈನಮೋಸ್ ತಂಡದಲ್ಲಿದ್ದರು. ಅವರ ಬ್ರಾಂಡ್ ಆದ ಆಕ್ರಮಣಕಾರಿ ಆಟವನ್ನು ಪುಣೆಯಲ್ಲಿ ತರಲು ಯತ್ನಿಸಲಿದ್ದಾರೆ. ಉಭಯ ತಂಡಗಳು ಒಟ್ಟು ನಾಲ್ಕು ಬಾರಿ ಮುಖಾಮುಖಿಯಾಗಿದ್ದು, ಎರಡು ಬಾರಿ ಬಿಎಫ್ಸಿ ಜಯ ಗಳಿಸಿದ್ದರೆ, ಉಳಿದೆರಡು ಪಂದ್ಯಗಳು ಡ್ರಾದಲ್ಲಿ ಅಂತ್ಯ ಕಂಡಿವೆ.

ಜೆಮ್‌ಶೆಡ್‌ಪುರ ಎಫ್ಸಿ ವಿರುದ್ಧದ ಪಂದ್ಯದಲ್ಲಿ ಕೊನೆಯ ಸಬ್ಸ್ಟಿಟ್ಯೂಟ್ ಆಗಿದ್ದ ಡಿಮಾಸ್ ಡೆಲ್ಲಾಡೊ ಪುಣೆ ವಿರುದ್ದ ಕಣಕ್ಕಿಳಿಯಲಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಚೆನ್ನೈಯಿನ್ ಎಫ್‌ಸಿ ವಿರುದ್ಧದ ಪಂದ್ಯಕ್ಕೆ ಡಿಮಾಸ್ ಅಲಭ್ಯರಾಗಿದ್ದರು.

ಸೈಕರ್‌ ಮಾಲಿನ್ನೂ ಪುಣೆ ತಂಡದ 11ರ ಬಳಗದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದ ಬ್ರೆಜಿಲ್ ಆಟಗಾರ, ಮುಂಬಯಿ ಸಿಟಿ ಎದುರಿನ ಪಂದ್ಯದ ದ್ವಿತೀಯಾರ್ಧದಲ್ಲಿ ಸಬ್ಸ್ಟಿಟ್ಯೂಟ್ ಆಗಿ ಕಾಣಿಸಿಕೊಂಡಿದ್ದರು. ಇವರಲ್ಲದೆ ಉರುಗ್ವಯ ಎಮಿಲಿಯಾನೊ ಅಲ್ವಾರೋ ಪುಣೆ ತಂಡದ ಬಲವಾಗಿದ್ದಾರೆ.

ಜೆಮ್‌ಶೆಡ್‌ಪುರ ಎಫ್ ಸಿ ವಿರುದ್ಧದ ಪಂದ್ಯದಲ್ಲಿ ಗೆಲುವಿನ ಅವಕಾಶವನ್ನು ಕಳೆದುಕೊಂಡು ಕೇವಲ ಡ್ರಾಗೆ ತೃಪ್ತಿಪಟ್ಟ ಬೆಂಗಳೂರು ಎಫ್ ಸಿ, ಆರಂಭದಲ್ಲೇ ಎರಡು ಗೆಲುವು ದಾಖಲಿಸುವ ಅವಕಾಶವನ್ನು ಕಳೆದುಕೊಂಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೋಚ್ ಕ್ವಾಡ್ರಟ್ ಅಂತಿಮ ಕ್ಷಣದ ಒತ್ತಡ ನಿರ್ವಹಣೆಗೆ ತಂಡ ಸಾಕಷ್ಟು ಕಠಿಣ ಅಭ್ಯಾಸ ನಡೆಸಿದೆ ಎಂದಿದ್ದಾರೆ. “ ದಾಳಿ ಮಾಡುವುದನ್ನು ನಾವು ಇಷ್ಟಪಡುತ್ತೇವೆ ಮತ್ತು ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪಂದ್ಯದ ಕೊನೆಯವರೆಗೂ ಹೋರಾಡಲು ಕಠಿಣ ಶ್ರಮಹಾಕಲಿದ್ದೇವೆ. ಮುಂದಿನ ನಾಲ್ಕು ಪಂದ್ಯಗಳು ತವರಿನಾಚೆ ನಡೆಯುತ್ತಿರುವುದರಿಂದ ಸಾಧ್ಯವಾದಷ್ಟು ಅಂಕ ಕಲೆಹಾಕಲು ಯತ್ನಿಸಲಿದ್ದೇವೆ,” ಎಂದು ಬ್ಲೂಸ್‌ ಕೋಚ್ ಹೇಳಿದ್ದಾರೆ.

ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಹಾಟ್‌ಸ್ಟಾರ್ ಹಾಗೂ ಜಿಯೋ ಟಿವಿಯಲ್ಲಿ ನೇರ ಪ್ರಸಾರವಾಗಲಿದೆ.

Malcare WordPress Security