ಗೆಲುವಿನ ಲಯ ಮುಂದುವರಿಸಲು ಬಿಎಫ್ಸಿಗೆ ಕ್ವಾಡ್ರಟ್ ಕಿವಿಮಾತು

ಪುಣೆ ವಿರುದ್ಧ ಕಣಕ್ಕಿಳಿಯುತ್ತಿರುವ ಬಿಎಫ್ಸಿಗೆ ಅಗ್ರಸ್ಥಾನ ಕಾಯ್ದುಕೊಳ್ಳುವ ಗುರಿ, ಡಿಸೆಂಬರ್ ಅಂತ್ಯದವರೆಗೂ ಮಿಕು ಔಟ್

ಬೆಂಗಳೂರು: ಬೆಂಗಳೂರು ಎಫ್ಸಿಗೆ ಇದು ಋತುವಿನ ರಿವರ್ಸ್ ವೇಳಾಪಟ್ಟಿಯಾಗಿದ್ದು , ಕೋಚ್ ಕ್ವಾಡ್ರಟ್ ಕಾರ್ಲೊಸ್ ಬಳಗ ಶುಕ್ರವಾರ ಇಲ್ಲಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಎಫ್‌ಸಿ ಪುಣೆ ತಂಡವನ್ನು ಎದುರಿಸಲಿದೆ.

ಇಂಡಿಯನ್ ಸೂಪರ್ ಲೀಗ್‌ನ ಐದನೇ ಆವೃತ್ತಿಯಲ್ಲಿ ಅಜೇಯ ದಾಖಲೆ ಹೊಂದಿರುವ ಬಿಎಫ್‌ಸಿ, ಅಂಕಪಟ್ಟಿಯಲ್ಲಿ ಸದ್ಯ 7 ಪಂದ್ಯಗಳಿಂದ 19 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದು ಮೊದಲ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳಲು ಹಾತೊರೆಯುತ್ತಿದೆ. 9 ಪಂದ್ಯಗಳನ್ನಾಡಿರುವ ಸೆರ್ಗಿಯೊ ಲೊಬೆರಾ ಸಾರಥ್ಯದ ಗೋವಾ ತಂಡ 17 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ.

ಸದ್ಯದ ಸ್ಥಿತಿಯಲ್ಲಿ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ. ಹಾಗೆಯೇ ಇದನ್ನು ಮುಂದುವರಿಸಿಕೊಂಡು ಹೋಗುವುದು ಬಹಳ ಮುಖ್ಯವಾಗಿದೆ. ಪ್ಲೇ ಆಫ್ ಹಂತಕ್ಕೇರುವುದು ಮೊದಲ ಹಂತದ ಗುರಿಯಾಗಿದೆ. ಆದ್ದರಿಂದ ಅಲ್ಲಿಯವರೆಗೂ ನಾನು ಯಾವುದನ್ನು ಹಗುರವಾಗಿ ಪರಿಗಣಿಸುವುದಿಲ್ಲ , ಎಂದು ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಕಾರ್ಲೊಸ್ ಹೇಳಿದ್ದಾರೆ.

ಕಳೆದ ಸೋಮವಾರ ಮನೆಯಂಗಳ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉದಾಂತ ಸಿಂಗ್, 87ನೇ ನಿಮಿಷದಲ್ಲಿ ದಾಖಲಿಸಿದ ಗೋಲಿನಿಂದ ಬೆಂಗಳೂರು ಎಫ್ ಸಿ 1-0 ಅಂತರದಲ್ಲಿ ಡೆಲ್ಲಿ ಡೈನಮೋಸ್‌ ವಿರುದ್ಧ ಜಯ ಗಳಿಸಿದೆ. ಇದೀಗ ಶುಕ್ರವಾರದ ಪಂದ್ಯದಲ್ಲೂ ಸುಧಾರಿತ ಪ್ರದರ್ಶನ ನೀಡುವ ಮೂಲಕ ತಂಡ ಅಗ್ರಸ್ಥಾನದಲ್ಲಿ ಅಂತರ ಕಾಯ್ದುಕೊಳ್ಳಲಿದೆ ಎಂದು ಕ್ವಾಡ್ರಟ್ ವಿಶ್ವಾಸ ಹೊಂದಿದ್ದಾರೆ. ಆದರೆ ಗಾಯದ ಸಮಸ್ಯೆ ಹಾಗೂ ಅಮಾನತು ಶಿಕ್ಷೆ ಬ್ಲೂಸ್ ತಂಡವನ್ನು
ಬಿಟ್ಟಿಲ್ಲ .

ಆತಿಥೇಯ ತಂಡಕ್ಕೆ ಉತ್ತಮ ಸುದ್ದಿಯೆಂದರೆ ಅಮಾನತು ಶಿಕ್ಷೆ ಪೂರೈಸಿರುವ ಡಿಮಾಸ್ ಡೆಲ್ಲಾಡೊ ತಂಡಕ್ಕೆ ಮರಳುತ್ತಿದ್ದಾರೆ. ಹಾಗೆಯೇ ಡೆಲ್ಲಿ ಡೈನಮೋಸ್‌ ವಿರುದ್ಧದ ದ್ವಿತೀಯಾರ್ಧದಲ್ಲಿ ಕಣಕ್ಕಿಳಿದಿದ್ದ ಎರಿಕ್ ಪಾರ್ತಾಲು ಸಹ ಶುಕ್ರವಾರದ ಪಂದ್ಯಕ್ಕೆ ಸಜ್ಜಾಗಿದ್ದಾರೆ. ವರ್ಷಾಂತ್ಯದವರೆಗೂ ಮಿಕು ಹೊರಗುಳಿಯುತ್ತಿರುವುದು ದಾಳಿ ವಿಭಾಗದಲ್ಲಿ ಬ್ಲೂ ಬಳಗ ಶ್ರಮಿಸಬೇಕಿದೆ. ಪಾದದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಮಿಕು ಹಿಂದಿನ ಎರಡು ಪಂದ್ಯಗಳಿಗೂ ಅಲಭ್ಯರಾಗಿದ್ದರು. ಸದ್ಯ ಮಿಕು ಬರುವ ಜನವರಿಗೆ ಲಭ್ಯವಾಗಲಿದ್ದಾರೆ. ಮತ್ತಷ್ಟು ಇಂಜೆಕ್ಷನ್ ಹಾಗೂ ಇನ್ನಷ್ಟು ಚಿಕಿತ್ಸೆ ಪಡೆಯಬೇಕಾದ ಅಗತ್ಯತೆ ಹಿನ್ನೆಲೆಯಲ್ಲಿ ಮಿಕು ಶುಕ್ರವಾರ ಸ್ಪೇನ್‌ಗೆ ಹಾರಲಿದ್ದಾರೆ. ಆತ ತಂಡದಲ್ಲಿ ಇಲ್ಲದಿರುವುದು ದುರಾದೃಷ್ಟದ ಸಂಗತಿಯಾಗಿದೆ. ಆದರಿದು ಇತರ ಆಟಗಾರರಿಗೆ ಸಾಮರ್ಥ್ಯ ತೋರಿಸಲು ವೇದಿಕೆಯಾಗಿದೆ, ಎಂದು ಕ್ವಾಡ್ರಟ್ ಹೇಳಿದ್ದಾರೆ.

ತಂಡದ ಋತುವಿನ ಬಹುತೇಕ ಸಮಯದಲ್ಲಿ ಮಿಡ್‌ಫೀಲ್ಡ್ ಮತ್ತು ಆಟ್ಯಾಕ್ ಪ್ರಮುಖ ಪಾತ್ರವಹಿಸಿದೆ. ಬೆಂಗಳೂರು ತಂಡದ ಡಿಫೆನ್ಸ್ ನಿಧಾನವಾಗಿ ಪ್ರಬಲಗೊಳ್ಳುತ್ತಿದೆ. ಆದರೆ ಖಂಡಿತಾ ಅತಿದೊಡ್ಡ ವ್ಯತ್ಯಾಸವಾಗಿದೆ. ಇದಕ್ಕೆ ನಿದರ್ಶನವೆಂಬಂತೆ ಬ್ಲೂಸ್ ಏಳು ಪಂದ್ಯಗಳಿಂದ ಕೇವಲ 5 ಗೋಲುಗಳನ್ನು ಬಿಟ್ಟುಕೊಟ್ಟಿದೆ. ಆದರೂ ಬ್ಲೂಸ್ ಶುಕ್ರವಾರ ರಾತ್ರಿ ಪುಣೆ ಎಫ್ ಸಿಯ ದಾಳಿಯನ್ನು ಎದುರಿಸಬೇಕಾಗಿದೆ.

ಆದರೆ ಪುಣೆ ತನ್ನ ಹಿಂದಿನ ಪಂದ್ಯದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ಎಫ್ ಸಿ ವಿರುದ್ಧ 0-2 ಗೋಲುಗಳಿಂದ ಸೋಲನುಭವಿಸಿದ್ದು , ಬಿಎಫ್ಸಿ ವಿರುದ್ದ ಪುಟಿದೇಳುವ ಇರಾದೆ ಹೊಂದಿದೆ. ಮೂರು ಆವೃತ್ತಿಗಳಿಗೆ ಬೆಂಗಳೂರು ತಂಡದ ಮಾಜಿ ಸಹಾಯಕ ಕೋಚ್ ಆಗಿದ್ದ ಕೋಚ್ ಪ್ರದ್ಯುಮ್ ರೆಡ್ಡಿ , ಬ್ರೆಜಿಲಿಯನ್ ಡಿಯಾಗೊ ಕಾರ್ಲೊಸ್ ಸ್ನಾಯು ಸೆಳೆತದ ಸಮಸ್ಯೆಯಿಂದಾಗಿ ಶುಕ್ರವಾರದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ, ಎಂದು ತಿಳಿಸಿದ್ದಾರೆ.

ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದ್ದು, ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್ ಸ್ಟಾರ್, ಜಿಯೋ ಟಿವಿ ಮತ್ತು ಕಲರ್ಸ್ ಕನ್ನಡ ಸಿನಿಮಾದಲ್ಲಿ ನೇರ ಪ್ರಸಾರವಾಗಲಿದೆ.

Malcare WordPress Security