ಬೆಂಗಳೂರು ತಂಡಕ್ಕೆ ಜಮ್ಶೆಡ್‌ಪುರ ತಾಂತ್ರಿಕ ಸವಾಲು

ಸ್ಪಾನೀಸ್ ಕೋಚ್‌ಗಳ ತರಬೇತಿ ತಂಡಗಳ ಹೋರಾಟಕ್ಕೆ ಭಾನುವಾರ ವೇದಿಕೆ ಸಜ್ಜು; ಆತಿಥೇಯರಿಗೆ ಕಠಿಣ ಸವಾಲು ನಿರೀಕ್ಷೆ ಕ್ವಾಡ್ರಟ್

ಬೆಂಗಳೂರು: ಕಾರ್ಲಸ್ ಕ್ವಾಡ್ರಟ್ ಗರಡಿಯಲ್ಲಿ ಪಳಗಿರುವ ಬೆಂಗಳೂರು ಎಫ್ ಸಿ ಮತ್ತು ಸೀಸರ್ ಫರ್ನಾಂಡೊ ಸಾರಥ್ಯದಲ್ಲಿ ತರಬೇತಿ ಪಡೆಯುತ್ತಿರುವ ಜಮ್ಶೆಡ್‌ಪುರ ಎಫ್ಸಿ ಇಂಡಿಯನ್ ಸೂಪರ್ ಲೀಗ್ 5ನೇ ಆವೃತ್ತಿಯ ತಮ್ಮ ದ್ವಿತೀಯ ಪಂದ್ಯದಲ್ಲಿ ಭಾನುವಾರ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ. ಈ ಮಧ್ಯೆ ಇತ್ತಂಡಗಳು ಲೀಗ್ ಆರಂಭದಲ್ಲೇ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸುವ ಅವಕಾಶ ಗಿಟ್ಟಿಸಿವೆ.

ಕಳೆದ ಭಾನುವಾರ ಶ್ರೀಕಂಠೀರವ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈಯಿನ್ ಎಫ್ ಸಿ ವಿರುದ್ಧ 1-0 ಗೋಲಿನ ಅಂತರಿಂದ ಗೆದ್ದಿರುವ ಬಿಎಫ್ಸಿ ಲೀಗ್‌ನಲ್ಲಿ ಶುಭಾರಂಭ ಮಾಡಿದೆ. ಹೀಗಾಗಿ ಬೆಂಗಳೂರು ಎಫ್ಸಿ ಮ್ಯಾನೇಜರ್ ಕ್ವಾಡ್ರಟ್ ಐಎಸ್ಎಲ್‌ನಲ್ಲಿ ಜಯದ ಆರಂಭ ಕಂಡಿದ್ದಾರೆ. ಈ ಮಧ್ಯೆ, ಜಮ್ಶೆಡ್ ಪುರ ಎಫ್ ಸಿ ಸಹ ಪ್ರಬಲ ಮುಂಬಯಿ ಸಿಟಿ ಎಫ್ಸಿ ವಿರುದ್ಧ 2-0 ಅಂತರದಲ್ಲಿ ಗೆದ್ದು ಶುಭಾರಂಭ ಮಾಡಿದೆ. ಚೊಚ್ಚಲ ಬಾರಿಗೆ ಲೀಗ್ ಪ್ರವೇಶಿಸಿರುವ ಮಾರಿಯೋ ಆರ್ಕಸ್ ಮತ್ತು ಪ್ಯಾಬ್ಲೊ ಮಾರ್ಗಾಡೊ ತಲಾ ಒಂದು ಗೋಲ್ ಗಳಿಸಿ ಜಮ್ಶೆಡ್‌ಪುರ ತಂಡಕ್ಕೆ ಜಯ ಒದಗಿಸಿದ್ದಾರೆ. ಮುಂಬಯಿ ಎಫ್ ಸಿ ವಿರುದ್ದ ಪಂದ್ಯದುದ್ದಕ್ಕೂ ರಕ್ಷಣಾತ್ಮಕ ಆಟವಾಡುವಲ್ಲಿ ಫರ್ನಾಂಡೊ ಬಳಗ ಯಶಸ್ವಿಯಾಗಿದೆ. ಉಭಯ ತಂಡಗಳು ಎರಡು ಮುಖಾಮುಖಿಯಲ್ಲಿ ಸೋಲು ಗೆಲುವಿನ ದಾಖಲೆ ಹೊಂದಿವೆ.

ಜಮ್ಶೆಡ್‌ಪುರ ಎಫ್ಸಿ ಕುರಿತು ತಂಡಕ್ಕೆ ಎಚ್ಚರಿಕೆ ರವಾನಿಸಿರುವ ಬಿಎಫ್ಸಿ ಕೋಚ್ ಕ್ವಾಡ್ರಟ್, “ಸಾಕಷ್ಟು ಅನುಭವದ ಸ್ಪೇನ್ ಕೋಚ್ ಮತ್ತು ನಾಲ್ವರು ಸ್ಪೇನ್ ಆಟಗಾರರನ್ನು ಒಳಗೊಂಡಿರುವ ಜಮ್ಶೆಡ್‌ಪುರ ಎಫ್ಸಿ ಸಾಕಷ್ಟು ಬದಲಾಗಿದೆ. ಮುಂಬಯಿ ವಿರುದ್ದ ಅವರು ಆಡಿದ ಆಟವನ್ನು ನಾವು ವೀಕ್ಷಿಸಿದ್ದೇವೆ. ಇಡೀ ಪಂದ್ಯದಲ್ಲಿ ಚೆಂಡಿನ ಮೇಲಿನ ಅವರ ನಿಯಂತ್ರಣ ಅದ್ಭುತವಾಗಿತ್ತು .ಹಾಗೆಯೇ ಅವರ ತಾಂತ್ರಿಕ ದೃಷ್ಟಿಕೋನವು ತುಂಬಾ ಆಸಕ್ತಿದಾಯಕವಾಗಿತ್ತು,” ಎಂದು ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಬೆಂಗಳೂರು ವಿರುದ್ಧ ಭಾನುವಾರದ ಪಂದ್ಯ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಟಿಮ್ ಕಾಹಿಲ್ ಪದಾರ್ಪಣೆಗೆ ವೇದಿಕೆ ಕಲ್ಪಿಸಲಿದೆ. ಇಂಗ್ಲೆಂಡ್ ವಿರುದ್ದ ಪಂದ್ಯದಲ್ಲಿ ಅಮಾನತುಗೊಂಡಿದ್ದ ಕಾಹಿಲ್ ಇದೀಗ ಬಿಎಫ್ಸಿ ವಿರುದ್ದ ಆಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಹೀಗಾಗಿ ಸುನಿಲ್ ಛತ್ರಿ ಮತ್ತು ಇತರರು ಆಕ್ರಮಣಕಾರಿ ದಾಳಿಯತ್ತ ಎದುರು ನೋಡುತ್ತಿದ್ದಾರೆ.

ಎದುರಾಳಿ ತಂಡದ ಆಕ್ರಮಣಕಾರಿ ದಾಳಿ ಕುರಿತು ಪ್ರತಿಕ್ರಿಯಿಸಿರುವ ಕ್ವಾಡ್ರಟ್, “ಕಾಹಿಲ್ ಮತ್ತು ಟಿರಿ ಗಾಳಿಯಲ್ಲಿ ಚೆಂಡು ತೇಲಿಸುವಲ್ಲಿ ನಿಪುಣರಾಗಿದ್ದಾರೆ. ಆದ್ದರಿಂದ ಇಂತಹ ಪರಿಸ್ಥಿತಿಯನ್ನು ಬಹಳ ಎಚ್ಚರಿಕೆಯಿಂದ ನಿಭಾಯಿಸಬೇಕಿದೆ. ಅಲ್ಬರ್ಟ್(ಸೆರಾನ್) ಮತ್ತು ಜುವಾನಾನ್ (ಗೋಸ್ವಲೆಜ್) ಇಂತಹ ಪರಿಸ್ಥಿತಿಯನ್ನು ನಿರ್ವಹಿಸುವ ಸಾಮರ್ಥ್ಯ ಮತ್ತು ಲಯ ಅವರಲ್ಲಿದೆ. ಕಳೆದ ಭಾನುವಾರ ನಡೆದ ಪಂದ್ಯದಲ್ಲಿ ಕೆಲ ಹಂತಗಳಲ್ಲಿ ನಾವು ಎದುರಿಸಿದ ತಪ್ಪುಗಳನ್ನು ನಮ್ಮನ್ನು ಕಠಿಣಗೊಳಿಸುತ್ತದೆ ಎಂಬುದು ಖಚಿತವಾಗಿದೆ, ” ಎಂದು ಬಿಎಫ್ಸಿ ಕೋಚ್ ಹೇಳಿದ್ದಾರೆ.

ಮೂರು ಪಂದ್ಯಗಳ ಅಮಾನತಿನಲ್ಲಿರುವ ಸುಬ್ರಾತಾ ಪಾಲ್ ಬೆಂಗಳೂರು ವಿರುದ್ಧದ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಈ ಮಧ್ಯೆ ಗಾಯದ ಸಮಸ್ಯೆಯಿಂದಾಗಿ ಚೆನ್ನೈಯಿನ್ ಎಫ್ಸಿ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದ ಬ್ಲೂಸ್ ಮಿಡ್‌ಫೀಲ್ಡರ್‌ ಡಿಮಾಸ್ ಡೆಲ್ಲಾಡೊ ಭಾನುವಾರದ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಿದೆ. ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದ್ದು, ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ ಸ್ಟಾರ್‌ ಮತ್ತು ಜಿಯೋ ಟಿವಿಯಲ್ಲಿ ನೇರ ಪ್ರಸಾರವಾಗಲಿದೆ.

 

Malcare WordPress Security