ಬೆಂಗಳೂರು ಎಫ್ಸಿಗೆ ಚೊಚ್ಚಲ ಐಎಸ್ಎಲ್ ಕಿರೀಟ

ಫೈನಲ್‌ನಲ್ಲಿ ಎಫ್‌ಸಿ ಗೋವಾ ವಿರುದ್ಧ 1-0 ಅಂತರದ ಗೆಲುವು, ಕ್ವಾಡ್ರಟ್ ಬಳಗಕ್ಕೆ ಗೆಲುವು ತಂದುಕೊಟ್ಟ ರಾಹುಲ್ ಭೆಕೆ

ಮುಂಬಯಿ: ಪಂದ್ಯದ ಹೆಚ್ಚುವರಿ ಸಮಯದಲ್ಲಿ ರಾಹುಲ್ ಭೆಕೆ (116ನೇ ನಿಮಿಷ) ದಾಖಲಿಸಿದ ಏಕೈಕ ಗೋಲಿನ ಬಲದಿಂದ ಕಂಗೊಳಿಸಿದ ಬೆಂಗಳೂರು ಎಫ್ ಸಿ ಐಎಸ್ಎಲ್ 5ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಎಫ್‌ಸಿ ಗೋವಾ ತಂಡವನ್ನು ಮಣಿಸಿ ಚೊಚ್ಚಲ ಕಿರೀಟಕ್ಕೆ ಮುತ್ತಿಟ್ಟಿತು. ಇದಕ್ಕೂ ಮುನ್ನ ಪಂದ್ಯದ ಪೂರ್ಣಾವಧಿಯಲ್ಲಿ ಇತ್ತಂಡಗಳು (0-0 ) ಗೋಲ್ ಗಳಿಸಲು ವಿಫಲಗೊಂಡವು.

ಮುಂಬಯಿ ಫುಟ್ಬಾಲ್ ಅರೇನಾದಲ್ಲಿ ಭಾನುವಾರ ನಡೆದ ಹೈವೋಲ್ವೇಜ್ ಪಂದ್ಯದಲ್ಲಿ ಸುನಿಲ್ ಛತ್ರಿ ಸಾರಥ್ಯದ ಬೆಂಗಳೂರು ತಂಡ 1-0 ಗೋಲಿನ ಅಂತರದಲ್ಲಿ 2015ರ ರನ್ನರ್ ಅಪ್ ಗೋವಾ ತಂಡವನ್ನು ಪರಾಭವಗೊಳಿಸಿತು. ಕಳೆದ ಬಾರಿ ರನ್ನರ್ ಅಪ್ ಸ್ಥಾನ ಗಳಿಸಿದ್ದ ಬಿಎಫ್ಸಿ ಸತತ ಎರಡನೇ ಬಾರಿ ಫೈನಲ್ ತಲುಪಿತ್ತು. ನಿಗದಿತ ಅವಧಿಯಲ್ಲಿ ಇತಂಡಗಳಿಂದ ಗೋಲ್ ದಾಖಲಾಗದ ಕಾರಣ ಹೆಚ್ಚುವರಿಯಾಗಿ ಅರ್ಧಗಂಟೆ ನೀಡಲಾಯಿತು. ಹೆಚ್ಚುವರಿ ಸಮಯದಲ್ಲಿ ಬಿಎಫ್ಸಿ ಗೋಲಿಗಾಗಿ ಇನ್ನಿಲ್ಲದ ಹರಸಾಹಸ ನಡೆಸಿತು. ಅಂತಿಮವಾಗಿ 16ನೇ ನಿಮಿಷದಲ್ಲಿ ರಾಹುಲ್ ಭೆಕೆ ಹೆಡರ್ ಮೂಲಕ ಗೋಲ್ ಗೆಲುವಿನ ಗೋಲ್ ದಾಖಲಿಸಿ ಸಂಭ್ರಮಿಸಿದರು.

ಇದಕ್ಕೂ ಮುನ್ನ ಪಂದ್ಯದ ಅಂತಿಮ ಹಂತದಲ್ಲಿ ಬಿಎಫ್ಸಿ ಎರಡು ಬಾರಿ ಗೋಲ್ ಗಳಿಕೆ ಅವಕಾಶಗಳನ್ನು ಸೃಷ್ಟಿಸಿದರೂ ಇದರ ಸಂಪೂರ್ಣ ಲಾಭ ಪಡೆಯುವಲ್ಲಿ ವಿಫಲಗೊಂಡಿತು. ಪಂದ್ಯದ ಹೆಚ್ಚುವರಿ ಸಮಯದಲ್ಲಿ ಉದಾಂತ ಸಿಂಗ್ ನೀಡಿದ ಅದ್ಭುತ ಪಾಸನ್ನು ಮಿಕು ಗೋಲ್ಗಳಿಕೆಗೆ ಯತ್ನಿಸಿದರು. ಆದರೆ ಎದುರಾಳಿ ತಂಡದ ಆಟಗಾರ ಹೆಡರ್‌ ಮೂಲಕ ತಡೆದು ನಿರಾಸೆ ಮೂಡಿಸಿದರು. ಇದಕ್ಕೂ ಮುನ್ನ 81ನೇ ನಿಮಿಷದಲ್ಲಿ ಮಿಕು ಅದ್ಭುತ ಗೋಲಿನ ಯತ್ನ ನಡೆಸಿದರು. ದುರದೃಷ್ಟವಶಾತ್ ಚೆಂಡು ಗೋಲ್ ಪೆಟ್ಟಿಗೆಯ ಅಂಚಿಗೆ ತಾಗಿ ಹಿಂದಕ್ಕೆ ಚಿಮ್ಮಿತು.

76 ಮತ್ತು 77ನೇ ನಿಮಿಷದಲ್ಲಿ ಬಿಎಫ್ ಸಿ ಮತ್ತು ಗೋವಾ ಎರಡು ತಂಡಗಳು ಗೋಲ್ ಗಳಿಕೆಯ ಅವಕಾಶ ಪಡೆದವಾದರೂ ಖಾತೆ ತೆರೆಯಲು ವಿಫಲಗೊಂಡವು. ಮೊದಲಾರ್ಧ ಗೋಲ್ ರಹಿತವಾದ ಹಿನ್ನೆಲೆಯಲ್ಲಿ ಕಳೆದ ಬಾರಿಯ ರನ್ನರ್ ಅಪ್ ಬೆಂಗಳೂರು ಮತ್ತು 2015ರ ದ್ವಿತೀಯ ಸ್ಥಾನಿ ಗೋವಾ ಮುನ್ನಡೆಗಾಗಿ ಹೆಚ್ಚಿನ ಆದ್ಯತೆ ನೀಡಿದವು. ಈ ಹಂತದಲ್ಲಿ ಗೋವಾ ತಂಡದ ಅಹ್ಮದ್ ಜಹೌಸ್ ರೆಫರಿಯಿಂದ ಹಳದಿ ಕಾರ್ಡ್‌ಗೆ ತುತ್ತಾದರು. ಇದಾದ ಕೆಲವೇ ನಿಮಿಷದಲ್ಲಿ ಬ್ಲೂಸ್ ತಂಡದ ಅಲೆಜಾಂಡೋ ಸಹ ರೆಫರಿಯಿಂದ ಎಚ್ಚರಿಕೆ ಪಡೆದರು.

ಪ್ರಥಮಾರ್ಧಲ್ಲಿ ಉಭಯ ತಂಡಗಳು ರಕ್ಷಣಾತ್ಮಕ ಆಟ ಪ್ರದರ್ಶಿಸಿದ ಕಾರಣ ಮೊದಲಾರ್ಧ 0-0 ಗೋಲ್ ರಹಿತಗೊಂಡಿತು. ಎರಡೂ ತಂಡಗಳ ದಾಳಿಯನ್ನು ಇತ್ತಂಡಗಳ ಗೋಲ್ ಕೀಪರ್‌ಗಳನ್ನು ಸಮರ್ಥವಾಗಿ ನಿರ್ವಹಿಸಿದ ಪರಿಣಾಮ ಎರಡೂ ತಂಡಗಳ ಮುನ್ನಡೆ ಯತ್ನ ಕೈಗೂಡಲಿಲ್ಲ. ವಿರಾಮಕ್ಕೆ ಕೆಲವೇ ನಿಮಿಷಗಳು ಬಾಕಿ ಇರುವಾಗ ಗೋವಾ ತಂಡದ ನಾಯಕ ಮಂದಾರ್ ರಾವ್ ದೇಸಾಯಿ ಸ್ನಾಯು ಸೆಳೆತಕ್ಕೆ ಒಳಗಾದರು. ಗಾಯದಿಂದ ಚೇತರಿಸಿಕೊಳ್ಳದ ಮಂದಾರ್ 45ನೇ ನಿಮಿಷದಲ್ಲಿ ನಾಯಕತ್ವ ಹಸ್ತಾಂತರಿಸಿ ಮೈದಾನ ತೊರೆದರು.

39ನೇ ನಿಮಿಷದಲ್ಲಿ ಚೆಂಡಿನ ಮೇಲಿನ ನಿಯಂತ್ರಣಕ್ಕೆ ಯತ್ನಿಸಿದ ಮಿಕು ಅವರನ್ನು ಕೆಳಗೆ ಬೀಳಿಸಿದ ಮೌರ್ತಡಾ ಫಾಲ್ ರೆಫರಿಯಿಂದ ಹಳದಿ ಕಾರ್ಡ್ ಎಚ್ಚರಿಕೆ ಪಡೆದರು. ಇದಕ್ಕೂ 24ನೇ ನಿಮಿಷದಲ್ಲಿ ಎರಡನೇ ಬಾರಿ ಗೋಲ್ ಗಳಿಕೆಯ ಅವಕಾಶವನ್ನು ಕೈಚೆಲ್ಲಿದ ಬೆಂಗಳೂರು ತಂಡ ಮತ್ತೊಮ್ಮೆ ಮುನ್ನಡೆ ಗಳಿಸುವ ಉತ್ತಮ ಅವಕಾಶವನ್ನು ಕಳೆದುಕೊಂಡಿತು.

ಬಿಎಫ್ಸಿಯ ಆಕ್ರಮಣಕಾರಿ ಆಟವನ್ನು ಪ್ರಬಲವಾಗಿ ಹಿಮ್ಮೆಟ್ಟಿಸುವ ಜತೆಗೆ ರಕ್ಷಣಾತ್ಮಕ ಆಟದೊಂದಿಗೆ ಮಿಂಚಿದ ಎಫ್ ಸಿ ಗೋವಾ ಆಟಗಾರರು ಎದುರಾಳಿ ತಂಡದ ರಕ್ಷಣಾ ಕೋಟೆಗೆ ಹಲವು ಬಾರಿ ಆತಂಕವೊಡ್ಡಿದರು. ಪಂದ್ಯ ಆರಂಭವಾದ 6ನೇ ನಿಮಿಷದಲ್ಲಿ ಗೋಲಿನ ಮೇಲಿ ನಿಯಂತ್ರಣ ಸಾಧಿಸಿದ ಬೆಂಗಳೂರು ತಂಡದ ನಿಶು ಕುಮಾರ್, ನಾಯಕ ಸುನಿಲ್ ಛತ್ರಿ ಮತ್ತು ಮಿಕು ತಂಡಕ್ಕೆ ಆರಂಭಕ್ಕೆ ಮುನ್ನಡೆ ತಂದುಕೊಡುವ ಅವಕಾಶ ಗಿಟ್ಟಿಸಿದರಾದರೂ ಸಫಲತೆ ಕಾಣುವಲ್ಲಿ ಎಡವಿದರು.ಇದಕ್ಕೂ ಮುನ್ನ ಟಾಸ್ ಗೆದ್ದ ಎಫ್ ಸಿ ಗೋವಾ ತಂಡದ ನಾಯಕ ಮಂದಾರ್ ರಾವ್ ದೇಸಾಯಿ ದಾಳಿ ದಾಳಿಗೆ ಮುಂದಾದರು.

ಲೀಗ್ ಹಂತದಿಂದಲೂ ಪ್ರಶಸ್ತಿ ಫೇವರಿಟ್ ತಂಡಗಳಾಗಿ ಗುರುತಿಸಿಕೊಂಡ ಬೆಂಗಳೂರು ಎಫ್ ಸಿ ಮತ್ತು ಎಫ್‌ಸಿ ಗೋವಾ ಅಂತಿಮವಾಗಿ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ವಿಶ್ವಾಸದೊಂದಿಗೆ ಫೈನಲ್ ಅಖಾಡಕ್ಕೆ ಧುಮುಕಿದವು.