ಚೆನ್ನೈಯಿನ್‌ಗೆ ಮಣಿದ ಬಿಎಫ್‌ಸಿ

ಪ್ರಸಕ್ತ ಲೀಗ್‌ನಲ್ಲಿ 2ನೇ ಸೋಲನುಭವಿಸಿದ ಬೆಂಗಳೂರು ಎಫ್ ಸಿ, ಚೆನ್ನೈಯಿನ್‌ಗೆ 2-1ಅಂತರದ ಗೆಲುವು

ಚೆನ್ನೈ: ಆರಂಭಿಕ ರಕ್ಷಣಾ ವೈಫಲ್ಯಗಳಿಗೆ ಸೂಕ್ತ ದಂಡ ತೆತ್ತ ಬೆಂಗಳೂರು ಎಫ್ ಸಿ ಪ್ರಸಕ್ತ ಐಎಸ್ಎಲ್‌ನ ತನ್ನ 15ನೇ ಪಂದ್ಯದಲ್ಲಿ ಚೆನ್ನೈಯಿನ್ ಎಫ್ಸಿ ವಿರುದ್ಧ ಪರಾಭವಗೊಂಡಿದೆ. ಹೀಗಾಗಿ ಚೆನ್ನೈಯಿನ್ ವಿರುದ್ಧ ಗೆದ್ದು ಪ್ಲೇ ಆಫ್ ಪ್ರವೇಶಿಸುವ ಕೋಚ್ ಕಾರ್ಲೊಸ್ ಕ್ವಾಡ್ರಡ್ ಬಳಗದ ಆಸೆ ಸ್ವಲ್ಪ ಹಿನ್ನಡೆಯಾಗಿದೆ.

ಇಲ್ಲಿನ ಜವಾಹರ್ ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ದಕ್ಷಿಣ ಡರ್ಬಿ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ 1-2ರಲ್ಲಿ ಚೆನ್ನೈಯಿನ್ ಎಫ್ಸಿ ವಿರುದ್ಧ ಸೋಲು ಅನುಭವಿಸಿತು. ಸೋತರೂ ಒಟ್ಟು 31 ಅಂಕ ಹೊಂದಿರುವ ಸುನಿಲ್ ಛತ್ರಿ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು , ಮುಂದಿನ ಪಂದ್ಯದಲ್ಲಿ ಪ್ಲೇ ಆಫ್ ಪ್ರವೇಶಿಸುವ ಗುರಿ ಹೊಂದಿದೆ. ಅತ್ತ ಪ್ರಸಕ್ತ ಲೀಗ್‌ನಲ್ಲಿ ಈಗಾಗಲೇ ಪ್ರಶಸ್ತಿ ಹಾದಿಯಿಂದ ಹೊರ ಬಿದ್ದಿರುವ ಚೆನ್ನೈಯಿನ್ ಪ್ರಸಕ್ತ ಲೀಗ್‌ನಲ್ಲಿ ಎರಡನೇ ಜಯ ದಾಖಲಿಸಿತಲ್ಲದೆ ಬಿಎಫ್ಸಿ ಎದುರಿನ ಮುಖಾಮುಖಿ ದಾಖಲೆಯಲ್ಲಿ 3-2ರಲ್ಲಿ ಮುನ್ನಡೆ ಗಳಿಸಿದೆ.

ಚೆನ್ನೈಯಿನ್ ಎಫ್ಸಿ ಪರ ಜೆಜೆ ಲಾಲ್‌ಪೆಬ್ದವಾ (32ನೇ ನಿಮಿಷ) ಮತ್ತು ಗ್ರೆಗೋರಿ ನೆಲ್ಸನ್ (43ನೇ ನಿಮಿಷ) ತಲಾ ಒಂದು ಗೋಲ್ ಗಳಿಸಿದರೆ, ಬೆಂಗಳೂರು ಎಫ್ ಸಿ ಪರ ನಾಯಕ ಸುನಿಲ್ ಛತ್ರಿ (57ನೇ ನಿಮಿಷ) ಏಕೈಕ ಗೋಲ್ ದಾಖಲಿಸಿ ತಂಡದ ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತಗೊಂಡರು.

ದ್ವಿತೀಯಾರ್ಧದಲ್ಲಿ ಪ್ರವಾಸಿ ಬಿಎಫ್‌ಸಿ ತಂಡ ಆಕ್ರಮಣಕಾರಿ ಆಟವಾಡಿ 1-2ರಲ್ಲಿ ಮರು ಹೋರಾಟ ಸಂಘಟಿಸಿದರೂ ಕೊನೆಯ ಹಂತದಲ್ಲಿ ಆತಿಥೇಯ ತಂಡದ ದಿಟ್ಟ ರಕ್ಷಣಾತ್ಮಕ ಆಟವಾಡಿದ ಕಾರಣ ಹಿನ್ನಡೆ ತಗ್ಗಿಸಲು ವಿಫಲಗೊಂಡು ಎರಡನೇ ಸೋಲಿಗೆ ಒಳಗಾಯಿತು. ಇದಕ್ಕೂ ಮುನ್ನ ಪ್ರವಾಸಿ ತಂಡದ ಆಕ್ರಮಣಕಾರಿ ಆಟದಿಂದ ಎಚ್ಚೆತ್ತ ಚೆನ್ನೈಯಿನ್ ಸಹ ಬಿಗುವಿನ ದಾಳಿಗೆ ಮುಂದಾಯಿತು. ಈ ಹಂತದಲ್ಲಿ ಗ್ರಿಗೋರಿ ನೆಲ್ಸನ್ ಹಳದಿ ಕಾರ್ಡ್‌ಗೆ ಗುರಿಯಾದರು. ಗೋಲ್ ಗಳಿಸುವ ಯತ್ನದಲ್ಲಿ ಉಭಯ ತಂಡಗಳು ಹಲವು ಬಾರಿ ತಪ್ಪೆಸಗಿದವು. ಅದರಲ್ಲೂ ಕಳೆದ ಬಾರಿಯ ರನ್ನರ್ ಅಪ್ ಬಿಎಫ್ಸಿಯ ಎರಿಕ್ ಪಾರ್ತಾಲು 73ನೇ ನಿಮಿಷದಲ್ಲಿ ಹಳದಿ ಕಾರ್ಡ್ ಎಚ್ಚರಿಕೆ ಪಡೆದರು.

ಹಿನ್ನಡೆ ತಗ್ಗಿಸುವ ಒತ್ತಡದಲ್ಲಿ ದ್ವಿತೀಯಾರ್ಧ ಆರಂಭಿಸಿದ ಬೆಂಗಳೂರು ಎಫ್ಸಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿತು. ಈ ನಡುವೆ ಪ್ರಮಾದ ವೆಸಗಿದ ಬಿಎಫ್ಸಿ ಆಟಗಾರ ಲೂಯಿಸ್‌ ಲೋಪೆಸ್ 48ನೇ ನಿಮಿಷದಲ್ಲಿ ರೆಫರಿಯಿಂದ ಹಳದಿ ಕಾರ್ಡ್‌ಗೆ ಗುರಿಯಾದರು. ಹೀಗಾಗಿ ಕೋಚ್ ಕಾರ್ಲೊಸ್ ಆಟಗಾರರ ಬದಲಾವಣೆಗೆ ಒತ್ತು ನೀಡಿದರು. ನಿರೀಕ್ಷೆಯಂತೆ ನಾಯಕ ಛತ್ರಿ 57ನೇ ನಿಮಿಷದಲ್ಲಿ ಕ್ರಿಸ್ಕೊ ಹೆರ್ನಾಂಡೆಜ್ ನೆರವಿನಿಂದ ಗೋಲ್ ದಾಖಲಿಸಿ ತಂಡದ ಹಿನ್ನಡೆಯನ್ನು 1-2ಕ್ಕೆ ಇಳಿಸಿದರು.

ಪ್ರಥಮಾರ್ಧಕ್ಕೆ ಲೀಗ್ ಅಗ್ರಸ್ಥಾನಿ ಬೆಂಗಳೂರು ಎಫ್ ಸಿಯ ರಕ್ಷಣಾ ಕೋಟೆಯನ್ನು ಯಶಸ್ವಿಯಾಗಿ ಬೇಧಿಸಿದ ಹಾಲಿ ಚಾಂಪಿಯನ್ ಚೆನ್ನೈಯಿನ್ ಎಫ್ ಸಿ, ವಿರಾಮಕ್ಕೆ 2-0 ಅಂತರದಲ್ಲಿ ಮುನ್ನಡೆ ಕಂಡುಕೊಳ್ಳುವಲ್ಲಿ ಸಫಲವಾಯಿತು. ಪ್ರವಾಸಿ ತಂಡ ರಕ್ಷಣೆಯಲ್ಲಿ ಎಸಗಿದ ಪ್ರಮಾದವನ್ನು ಸಮರ್ಪಕವಾಗಿ ಬಳಸಿಕೊಂಡ ಚೆನ್ನೈಯಿನ್ ಪರ 32ನೇ ನಿಮಿಷದಲ್ಲಿ ಜೆಜೆ ಗೋಲಿನ ಖಾತೆ ತೆರೆದು ತಂಡಕ್ಕೆ 1-0 ಅಂತರದ ಮುನ್ನಡೆ ಒದಗಿಸಿದರು. ಮುನ್ನಡೆಯಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಚೆನ್ನೈಯಿನ್ ಇದಾದ ಕೆಲವೇ ಹೊತ್ತಿನಲ್ಲಿ ಗ್ರೆಗೋರಿ ಮೂಲಕ ಎರಡನೇ ಗೋಲ್ ದಾಖಲಿಸಿ ಮುನ್ನಡೆಯನ್ನು 2-0ಗೆ ವಿಸ್ತರಿಸಿಕೊಂಡಿತು. ರೆಂಡ್ಲಿ ನೀಡಿದ ಸುಂದರ ಪಾಸನ್ನು ಗ್ರಿಗೋರ್ ಗೋಲಾಗಿ ಪರಿವರ್ತಿಸುವ ಮೂಲಕ ತಂಡದ ಪ್ರಭುತ್ವಕ್ಕೆ ಕಾರಣರಾದರು. ಈ ವೇಳೆ ಹಿನ್ನಡೆ ತಗ್ಗಿಸಲು ಸ್ಟಾರ್ ಆಟಗಾರ ಮಿಕು ಸೇರಿದಂತೆ ಪ್ರವಾಸಿ ಬ್ಲೂಸ್ ತಂಡದ ಆಟಗಾರರ ಯತ್ನಗಳು ಒಮ್ಮೆಯೂ ಕೈಗೂಡದ ಕಾರಣ ನೀರಾಸೆಯಿಂದ ಕೋಚ್ ಕ್ವಾಡ್ರಟ್ ಬಳಗ ವಿರಾಮಕ್ಕೆ ತೆರಳಿತು.

ಬೆಂಗಳೂರು ಎಫ್ ಸಿ ತನ್ನ ಇದೇ 17ರಂದು ಹೊಸದಿಲ್ಲಿಯ ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಡೆಲ್ಲಿ ಡೈನಮೋಸ್ ತಂಡವನ್ನು ಎದುರಿಸಲಿದೆ.